ಆಧುನಿಕ ಕವಿಯ ಆತ್ಮಸ್ವೀಕಾರ
ಸಂದರ್ಭಕ್ಕೆ ಸರಿಯಾಗಿ ಸೇರಿಸಿದೆ ನಾನು
ಯಾರೋ ಕಿತ್ತು ತಂದಿದ್ದರು ಜೇನುಗೂಡು
ನಾನು ಹಿಂಡಿಕೊಂಡೆ ಜೇನು
ಯಾರದೋ ಉಕ್ತಿಯಲ್ಲಿತ್ತು ಗರಿಮೆ
ನಾನು ಅದನ್ನು ಸ್ವಲ್ಪ ತಿದ್ದಿದೆ
ಯಾರದೋ ಸಂವೇದನೆಯಲ್ಲಿತ್ತು ಬೆಂಕಿಯ ತಾಪ
ದೂರದಿಂದಲೇ ನಾನದನ್ನು ಧಿಕ್ಕರಿಸಿದೆ.
ಯಾರಲ್ಲೋ ಕಂಡಾಗ ನೈಪುಣ್ಯ
ನಾನು ನೋಡಿ ಉದ್ಗರಿಸಿದೆ: ಹೀಗೆ!
ದಣಿದಿದ್ದ ಭಾರ ಹೊತ್ತವನನ್ನು ಕಂಡು
ಏಕೆ ಎಂದು ಬೊಗಳಿದೆ ರೇಗಿ.
ಯಾರದ್ದೋ ಸಸಿಗೆ ನಾನು ನೀರೆರೆದೆ
ಬೆಳೆದಾಗ ಅದನ್ನು ನನ್ನದೇ ಎಂದೆ.
ಯಾರೋ ಬೆಳೆಸಿದ್ದರು ಒಂದು ಬಳ್ಳಿ,
ಬೊಂಬು ನೆಟ್ಟು ಅದಕ್ಕೆ ಹಬ್ಬಿಸಿಕೊಂಡೆ.
ಬೇರೆ ಯಾರದ್ದೋ ಬಳ್ಳಿಯ ಮೊಗ್ಗು,
ನಾನು ನನ್ನದೇ ಎಂಬಂತೆ ಎತ್ತಿಕೊಂಡೆ.
ಯಾರದ್ದೋ ಆಗಿತ್ತು ಮಾತು,
ಅವರ ಬಾಯಿಂದ ಕಿತ್ತುಕೊಂಡೆ.
ಹೀಗೆ ನಾನು ಕವಿ, ಆದುನಿಕನು, ನವ್ಯನು,
ಕಾವ್ಯ ತತ್ತ್ವ ಶೋಧನೆಗೆ ಎಲ್ಲೆಲ್ಲೂ ಅಲೆವೆನು,
ಆಶಿಸುವೆ ನಾನು ಬರೆದ ಒಂದೊಂದೂ ಪದ
ಅಕ್ಕರೆಯಿಂದ ನೀವು ಓದಿ ತಿಳಿಯಬೇಕು ಹದ,
ಪ್ರತಿಮೆಯ ವಿಷಯವೇ, ಅಯ್ಯೋ, ಅದಕ್ಕೇನು,
ನಿಮಗೆ ಯಾವುದು ಇಷ್ಟವೋ ಸ್ಥಾಪಿಸಿಕೊಳ್ಳಿ ಅದನ್ನು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ