ಕಡಲಿನ ಕರೆ

ಮೂಲ: ಜಾನ್ ಮೇಸ್ ಫೀಲ್ಡ್
ಕನ್ನಡಕ್ಕೆ: ಸಿ. ಪಿ. ರವಿಕುಮಾರ್


ಹೋಗಬೇಕು ಸಾಗರಕ್ಕೆ ನಾ ಮತ್ತೊಮ್ಮೆ, ಒಂಟಿ ಸಾಗರದೆಡೆಗೆ, ಗಗನದೆಡೆಗೆ,
ಬೇಕಾಗಿಲ್ಲ ಬೇರೇನೂ, ಎತ್ತರದ ಜಹಜೊಂದು, ಮತ್ತು ದಿಗ್ದರ್ಶಿಸುವ ಒಂದು ತಾರೆ,
ಚಕಚಕ ಚಲಿಸುವ ಚಕ್ರ, ಹಾಡು ಹೇಳುವ ಗಾಳಿ, ಪಟಪಟ ಹಾರಾಡುವ ನೌಕಾಪಟ,
ಕಡಲ ಮುಖ ಆವರಿಸಿದ ಬೂದು ಮಂಜು, ಬೂದಿ ಆಗಸದಲ್ಲಿ ಮೆಲೇರುವ ಕೆಂಬಾವುಟ.

ಹೋಗಲೇ ಬೇಕು ಸಾಗರಕ್ಕೆ ನಾನೀಗ, ನನ್ನನ್ನು ಕೂಗುತ್ತಿದೆ ಕೈಬೀಸಿ ಕಡಲ ಕರೆ,
ಹೇಗೆ ಉಪೇಕ್ಷಿಸಲಿ ಈ ಕರೆಯನ್ನು, ಬಾ ಎಂದು ಭೋರ್ಗರೆಯುತ್ತಿದೆ ಬೀಳುತ್ತ ಬೆಳ್ದೆರೆ,
ಕೇಳೆನು ಬೇರೇನನ್ನೂ, ಸೂಸುವ ಗಾಳಿ, ಹಾರಾಡುವ ಮೋಡಗಳ ವಿನಾ,
ಬೀಳುವ ತೆರೆಗಳ ಬಿಳಿನೊರೆ, ಚಿಮ್ಮುವ ನೀರು, ಮತ್ತು ಕಡಲ್ವಕ್ಕಿಗಳ ಕಲರವ.

ಮರಳಬೇಕು ಕಡಲಿಗೆ ನಾನಿನ್ನು, ಕರೆಯುತ್ತಿದೆ ಜೀವನ ಅಲೆಮಾರಿ,
ಕಡಲ್ವಕ್ಕಿ, ತಿಮಿಂಗಿಲಗಳ ಹಾದಿ, ಗಾಳಿ ಎಲ್ಲಿ ಕೂರಲಗಿನ ಚೂರಿ,
ಕೇಳೆನು ನಾ ಬೇರೇನನ್ನೂ, ಸಹಪಯಣಿಗನ ನಲ್ಗತೆಗಳ ಹೊರತು,
ಪಯಣದ ನಂತರ ಸಕ್ಕರೆ ನಿದ್ದೆ, ನಿದ್ದೆಯಲ್ಲಿ ಸವಿಗನಸಿನ ಗುರುತು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)