ನಗುತ್ತಿರು

ಮೂಲ: ಜಾನ್ ಮೇಸ್ ಫೀಲ್ಡ್
ಕನ್ನಡಕ್ಕೆ: ಸಿ. ಪಿ. ರವಿಕುಮಾರ್


ನಗುತ್ತಿರು, ನಲಿಯುತ್ತಿರು, ಜಗವನ್ನು ಇನ್ನಷ್ಟು  ಹಸನಾಗಿಸಲಿ ನಿನ್ನ ಹಾಡು,
ತಪ್ಪಿನ ಹಲ್ಲಿನ ಮೇಲೆ ಹಾಕಿ ಒಂದೇಟು ಜಗವನ್ನು ಇನ್ನಷ್ಟು ಹಸನು ಮಾಡು,
ನಗುತ್ತಿರು, ಏಕೆಂದರೆ ಸಮಯ ಹೆಚ್ಚಿಲ್ಲ, ಅಳೆದರೆ ಇದ್ದೀತು ಒಂದು ಮಾರು,
ಹೊರಟಿದೆ ಮಾನವನ ಹೆಮ್ಮೆಯ  ಜಾತ್ರೆ, ನಗುನಗುತ್ತಾ ಈ ಪುರಾತನ ಜಾತ್ರೆಯನು ಸೇರು.

ಕೂದಲು ನೆರೆತಾಗಲೂ ನೆನಪಿಟ್ಟುಕೋ ನಗುನಗುತ್ತಾ ನಲಿಯುತ್ತಿರಲು,
ಸ್ವರ್ಗ ಸೃಷ್ಟಿಸಿದವನೇ ಸೃಜಿಸಿದನು ಭೂಮಿಯಲ್ಲದರ ನಕಲು,
ತುಂಬಿದನು ಅವುಗಳಲ್ಲಿ ತನ್ನ ಸಂತೋಷದ ಕೆಂಪು ದ್ರಾಕ್ಷಾರಸ,
ನಕ್ಷತ್ರಗಳಲ್ಲಿ ನಗೆಮಿನುಗನ್ನು, ಭೂಮಿಯಲ್ಲಿ 
ತುಂಬಿದನು ಸಂತಸ.

ಹೀಗಿರಲು ತುಂಬಿಕೋ ಬಟ್ಟಲಿಗೆ, ಹೀರು, ನೀಲನಭದಿಂದ ಸುರಿವ ರಸಧಾರೆ,
ಸೇರಿ ನೀನೂ ಹಾಡು, ಕೇಳಿಸಿಕೋ! ಸಮೂಹಗೀತೆ ಹಾಡುತ್ತಿವೆ ತಾರೆ,
ನಗುತ್ತಾ ಮಾಡು ದುಡಿಮೆಯ ಯುದ್ಧ, ಸುರಿಸು ಬೆವರು
ಹೀರು ದೇವನು ಭೂಮಿಯ ಮೇಲೆ ಚೆಲ್ಲಿರುವ ಹಸಿರು 

ಎಲ್ಲರೂ ನಿನ್ನ ಸೋದರರು, ಅವರೊಂದಿಗೆ ನಗುತ್ತಾ ಕಳೆದುಬಿಡು ಸಿಕ್ಕ ಪ್ರತಿಕ್ಷಣ,
ಕೆಲವೇ ದಿನಗಳ ಅತಿಥಿಗಳು ನಾವು, ಈ ಭೂಮಿ ನಮ್ಮ ತಂಗುದಾಣ,
ನರ್ತಿಸುತ್ತಿರು ನಿಲ್ಲುವವರೆಗೂ ವಾದ್ಯಗೋಷ್ಠಿ, ಸಂಗೀತ,
ನಗುತಿರು ಗೆಳೆಯಾ, ನಿಲ್ಲುವವರೆಗೂ ನೆಲದ ಆಟ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)