ಸಾಕ್ರಟೀಸ್ ಹೇಳಿದ ಜಾಣ್ಮೆ
"ನಿನಗೆ ಏನೂ ತಿಳಿದಿಲ್ಲ ಎಂಬುದರಲ್ಲೇ ಎಲ್ಲಾ ತಿಳಿವಳಿಕೆಯೂ ಇದೆ"
ಹೀಗೆ ಯಾರು ಹೇಳಿರಬಹುದು?
ಅ. ತನ್ನ ಪಿಎಚ್. ಡಿ. ವಿದ್ಯಾರ್ಥಿಗೆ ಓರ್ವ ಸೂಪರ್ ವೈಸ್ ಆದ ಸೂಪರ್ವೈಸರ್
ಬ. ಹೊಸದಾಗಿ ಮದುವೆಯಾಗಿ ಮನೆಗೆ ಬಂದ ಸೊಸೆಗೆ ಓರ್ವ ಸಾಸ್ ಭೀ ಕಭೀ ಬಹೂ ಥೀ ಎಂಬುದನ್ನು ಮರೆತ ಅತ್ತೆ
ಕ. ತದ್ವಿರುದ್ಧವಾದವುಗಳನ್ನು ಒಂದೇ ವಾಕ್ಯದಲ್ಲಿ ಬಳಸಿ "ಯೂ ಕನ್ ಫ್ಯೂಸ್" ಅಸ್ ಎನ್ನಿಸಿಕೊಳ್ಳುತ್ತಿದ್ದ ಕನ್ಫ್ಯೂಷಿಯಸ್
ಡ. ಇಂಥ ಹೇಳಿಕೆಗಳನ್ನು ಕೊಟ್ಟು ಜನಪ್ರಿಯತೆ ಗಿಟ್ಟಿಸಿಕೊಳ್ಳುತ್ತಿದ್ದ ಸಾಕ್ರಟೀಸ್ ಮಹಾಶಯನಿಗೆ ಅವನ ಜಗಳಗಂಟಿ ಹೆಂಡತಿ
ಇದಕ್ಕೆ ಉತ್ತರ ಸಾಕ್ರಟೀಸ್ ಎಂದು ನನ್ನ ಮಿತ್ರ ರಾಜಾರಾಂ ಹೇಳಿದರು. ಅದು ಆದದ್ದು ಹೀಗೆ. ಶಿವರಾತ್ರಿಯ ಹಿಂದಿನ ಬೆಳಗ್ಗೆ ನಾವು ಮೂವರು ಅರ್ಥಾತ್ ಮರಿಗೌಡ, ರಾಜಾರಾಂ ಮತ್ತು ನಾನು ಶಿವಶಂಕರದರ್ಶಿನಿಗೆ ದರ್ಶನ ಪಡೆಯಲು ಬಂದಿದ್ದೆವು. ತಾಳಿ, ತಾಳಿ, ನೀವು ನಮ್ಮ ಬಗ್ಗೆ ತಾತ್ಸಾರ ಭಾವನೆ ತಳೆಯುವ ಮುನ್ನವೇ ಹೇಳಿಬಿಡುತ್ತೇನೆ. ನಾವು ಮೊದಲು ಭವಾನೀಶಂಕರನ ಗುಡಿಗೆ ಹೋಗಿ ಶಿವನಿಗೆ ಹಾಲು ನೀರನ್ನು ಅಥವಾ ನೀರು ಹಾಲನ್ನು ಎರೆದು ನಂತರವೇ ಶಿವಶಂಕರ ದರ್ಶಿನಿಗೆ ಬಂದಿದ್ದೆವು.
ಭವಾನೀಶಂಕರನ ಗುಡಿಯಿಂದ ಕೇವಲ ಹತ್ತು ಹೆಜ್ಜೆಗಳ ನಡೆಯ ದೂರದಲ್ಲಿ ಸ್ಥಿತವಾಗಿರುವ ಶಿವಶಂಕರ ದರ್ಶಿನಿಯಲ್ಲಿ ಅಂದು ಶಿವರಾತ್ರಿ ಸ್ಪೆಷಲ್ ಊಷ್ಟಾ ಇದ್ದಿತು. ಏನಿದು ಊಷ್ಟಾ ಎಂದು ಹುಬ್ಬೇರಿಸಿದವರಿಗೆ ಸಂದೇಹ ನಿವಾರಣೆ ಮಾಡಿಯೇ ಬಿಡುವುದು ಮೇಲು. ತಡವಾಗಿ ಏಳುವ ಅಭ್ಯಾಸ ಉಳ್ಳವರು ಬ್ರೇಕ್ ಫಾಸ್ಟ್ ಮತ್ತು ಲಂಚ್ ಎರಡನ್ನೂ ಪ್ರತ್ಯೇಕವಾಗಿ ಮಾಡಲು ಸಮಯ ಇಲ್ಲದ ಕಾರಣ ಎರಡನ್ನೂ ಸೇರಿಸಿ ಬ್ರoಚ್ ಮಾಡುವು ಯಾರಿಗೆ ತಿಳಿಯದು? ಇದನ್ನು ಕನ್ನಡದಲ್ಲಿ ಊಟ ಪ್ಲಸ್ ನಾಷ್ಟಾ ಈಕ್ವಲ್ಸ್ ಊಷ್ಟಾ ಎಂದು ಬರೆಯಬಹುದು ಎಂಬುದು ಕನ್ನಡಪ್ರೇಮಿಯಾದ ಮರಿಗೌಡರ ಮರಿಸಂಶೋಧನೆ.
ಇದನ್ನು ನಾನು ಮತ್ತು ರಾಜಾರಾಂ ಒಪ್ಪಿಕೊಂಡು ಅಂದಿನಿಂದ ಈ ಪದವನ್ನು ಬಳಸಿ ಅನೇಕ ರವಿವಾರಗಳಂದು ಊಷ್ಟಾ ಮಾಡಿದ್ದಿದೆ.
"ಅಲ್ಲ, ಈ ದರ್ಶಿನಿಗಳಿಗೆ ಬರೀ ದರ್ಶನಕ್ಕೆ ಅಂತ ಯಾರು ಬರ್ತಾರೆ ಹೇಳಿ? ದರ್ಶಿನಿ ಅನ್ನೋ ಹೆಸರು ತೀರಾ ಮಿಸ್ ಲೀಡಿಂಗ್" ಎಂದು ರಾಜಾರಾಂ ರವೆ ಇಡ್ಲಿಯನ್ನು ಸಾಗುವಿನ ಜೊತೆ ಚಮಚದಿಂದ ಬಾಯಿಗೆ ಹಾಕಿಕೊಂಡರು.
ನಾವು ಸಮ್ಮನಿದ್ದೆವು.
ಅವರು ಮುಂದುವರೆಸಿ "ಭವಾನೀಶಂಕರ ದರ್ಶಿನಿ ಅಂತ ದೇವಸ್ಥಾನಕ್ಕೆ ಹೆಸರು ಇಟ್ಟಿದ್ದರೆ ಸರಿಯಾಗಿರುತ್ತಿತ್ತು. ವಾಟ್ ಡು ಯು ಸೇ?" ಎಂದು ಕೇಳಿದರು.
"ಹೌದು, ಶಿವಶಂಕರನ ಗುಡಿ ಅಂತ ಈ ಬೋರ್ಡ್ ಕೂಡಾ ಬದಲಿಸಬಹುದು. ರವೆ ಇಡ್ಲಿ, ಮಿನಿ ಮಸಾಲ ದೋಸಾ, ಮಿಲೆಟ್ ವಾಂಗೀಭಾತ್, ರವಾಕೇಸರಿ, ವಾಟರ್ ಮೆಲನ್ ಜೂಸ್ ಇವೆಲ್ಲಾ goodyಗಳು ತಾನೇ?" ಎಂದು ನಾನು goody ಎನ್ನುವಾಗ ಗಾಳಿಯಲ್ಲೇ ಬೆರಳುಗಳಿಂದ ಕೊಟೇಶನ್ ಮಾರ್ಕ್ಸ್ ಚಿಹ್ನೆ ಮಾಡಿದೆ.
"ಇಲ್ಲ ಸಾರ್! " ಎಂದು ಮರಿಗೌಡ ಕೈ ಎತ್ತಿ ತಮ್ಮ ಪ್ರತಿಭಟನೆ ಸೂಚಿಸಿದರು. "ಇವತ್ತು ಭವಾನೀಶಂಕರ ಗುಡಿಯಲ್ಲೂ ಬರೀ ದರ್ಶನ ಎಲ್ಲಿ ಮಾಡಿದೆವು ಹೇಳಿ? ಎಲ್ಲರಿಗೂ ದೊನ್ನೆಯಲ್ಲಿ ಬಿಸಿಬಿಸಿ ಹೆಸರುಕಾಳಿನ ಉಸಲಿ ಪ್ರಸಾದ ಕೊಡುತ್ತಿದ್ದದ್ದು ನೋಡಿ ವಸೂಲಿ ಮಾಡಿಕೊಂಡೇ ತಾನೇ ಬಂದಿದ್ದು?"
"ನಿಜ ನಿಜ. ವೈಕುಂಠ ಏಕಾದಶಿ ದಿವಸ ಕೂಡಾ ಕ್ಯೂನಲ್ಲಿ ನಿಂತು ದರ್ಶನ ಪಡೆದು ವೆಂಕಟೇಶ್ವರನಿಗೆ ಪ್ರಿಯವಾದ ಲಡ್ಡೂ ಪ್ರಸಾದ ತಿಂದೇ ಬರೋದು" ಎಂದು ನಾನು ಅವರ ವಾದಕ್ಕೂ ಒಪ್ಪಿಗೆ ಸೂಚಿಸಿದೆ. ಹೀಗೆ ಇಬ್ಬರ ವಾದಕ್ಕೂ ಒಪ್ಪಿಗೆ ಸೂಚಿಸುವುದರಲ್ಲೇ ಕ್ಷೇಮ ಅಡಗಿದೆ ಎಂದು ನಾನು ಕಂಡುಕೊಂಡಿರುವೆನು.
ಅವರು ಬೇರೆ ಏನಾದರೂ ಹೇಳುವ ಮುನ್ನ ನಾನು ಮುಂದುವರೆದು "ಉಸಲಿ ತುಂಬಾ ರುಚಿಯಾಗಿತ್ತು ಕಣ್ರೀ. ಮೆಣಸಿನಕಾಯಿ ಖಾರ, ತೆಂಗಿನಕಾಯಿ ಎಲ್ಲಾ ಧಾರಾಳವಾಗಿ ಹಾಕಿದ್ದರು. ಶಿವನಿಗೆ ಉಸಲಿ ಪ್ರಿಯವಾದದ್ದು ಅಂತ ಎಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಶಿವರಾತ್ರಿಗೆ ಯಾವಾಗಲೂ ಉಸಲಿ ಅಥವಾ ಗೊಜ್ಜವಲಕ್ಕಿ ಎರಡೇ ಪ್ರಸಾದ ಕೊಡೋದು. ಇದು ಸ್ವಲ್ಪ ಅನ್ಯಾಯ ಅಂತ ನನಗೆ ಅನ್ನಿಸುತ್ತೆ. ವೆಂಕಟೇಶ್ವರನಿಗೆ ಲಡ್ಡು, ರಾಮನಿಗೆ ಕೋಸಂಬರಿ ಪಾನಕ ರವೆ ಉಂಡೆ, ಗಣೇಶನಿಗೆ ಕಡುಬು ಮೋದಕ ಚಕ್ಕುಲಿ, ಕೃಷ್ಣನಿಗಂತೂ ಹತ್ತಾರು ವಿಧದ ತಿಂಡಿಗಳು ... ಪಾಪ ಶಿವರಾತ್ರಿಗೆ ಉಪವಾಸ! ಹೆಚ್ಚು ಅಂದರೆ ಗೊಜ್ಜವಲಕ್ಕಿ, ಉಸಲಿ! ಇಷ್ಟಾಗಿ ಅವನ ಹೆಂಡತಿ ಅನ್ನಪೂರ್ಣೆ!" ಎಂದು ವಾದ ಮುಂದಿಟ್ಟೆ.
"ಅಲ್ಲೇ ಇರೋದು ನೋಡಿ, ಮಜಾ! ಶಿವ ಅನ್ನಪೂರ್ಣೆ ಹತ್ತಿರ ಹೋಗಿ ಭಿಕ್ಷೆ ಬೇಡಿದ್ದು ಗೊತ್ತು ತಾನೇ?" ಎಂದು ರಾಜಾರಾಂ ಮಿಲೆಟ್ ವಾಂಗಿಭಾತ್ ತಿನ್ನುತ್ತಾ ಕೇಳಿದರು.
"ಹೌದು, ಗೊತ್ತು. ಬ್ರಹ್ಮ ಕಪಾಲ ಹಿಡಿದು ಹೋಗಿದ್ದ ತಾನೇ? ನಾನು ಶಿವಮಹಾತ್ಮೆ ಪಿಕ್ಚರ್ ನೋಡಿದ್ದೀನಿ."
"ಹೂಂ. ಆಗ ಅವನು ಬೇಡಿಕೊಂಡಿದ್ದು ಏನು ಹೇಳಿ?" ರಾಜಾರಾಂ ಕೇಳಿದರು.
ಮರಿಗೌಡ "ಏನೋಪ್ಪ! ಹೊಟ್ಟೆ ಹಸೀತಿದೆ, ಅನ್ನ ಹಾಕು ಅಂತ ಕೇಳಿರಬಹುದು!" ಎಂದು ಮಿನಿ ಮಸಾಲೆ ದೋಸೆಯನ್ನು ಆಲೂಗಡ್ಡೆ ಪಲ್ಯದ ಜೊತೆ ಬಾಯಿಗೆ ಹಾಕಿಕೊಂಡರು.
"ಇಲ್ಲ."
"ಮತ್ತೆ? ಉಸಲಿ ಅಥವಾ ಗೊಜ್ಜವಲಕ್ಕಿ ಹಾಕು ಅಂತ ಬೇಡಿದನೆ?!"
"ಛೇ! ಏನ್ರೀ ನೀವು ಹೇಳೋದು! ಕೇಳಿಲ್ಲವೆನ್ರೀ ಸ್ತೋತ್ರ? ಅನ್ನಪೂರ್ಣೆ ಸದಾಪೂರ್ಣೆ ಶಂಕರ ಪ್ರಾಣವಲ್ಲಭೆ! ಜ್ಞಾನ ವೈರಾಗ್ಯ ಸಿದ್ಧ್ಯರ್ಥಂ ಭಿಕ್ಷಾಂದೇಹಿ ಚ ಪಾರ್ವತೀ!"
"ಅದನ್ನು ಶಂಕರಾಚಾರ್ಯರು ..." ಎಂದು ನಾನು ಹೇಳಲು ಹೋದೆ. ಅಷ್ಟರಲ್ಲಿ ರಾಜಾರಾಂ ಮುಂದುವರಿಸಿ "ನೋಡಿ, ಶಿವ ಕೇಳಿಕೊಂಡಿದ್ದು ಏನು, ಜ್ಞಾನ, ವೈರಾಗ್ಯ, ಇದನ್ನ! ನಿಮ್ಮ ಹಾಗೆ ಮಸಾಲೆ ದೋಸೆ, ರವೆ ಇಡ್ಲಿ, ಕೇಸರಿಭಾತ್ ಇದೆಲ್ಲ ಅಲ್ಲ. ಅದಕ್ಕೇ ಶಿವನಿಗೆ ನೈವೇದ್ಯ ಬಹಳ ಸಿಂಪಲ್."
"ಓಹೋ! ನಿಜ ಕಣ್ರೀ ನಿಮ್ಮ ಮಾತು! ನಾನೊಬ್ಬನೇ ಮಿನಿ ಮಸಾಲಾ ಕೊಡು, ರವಾ ಕೇಸರಿ ಕೊಡು ಅಂತ ಎಲ್ಲಾ ಒಬ್ಬನೇ ತಿನ್ನುತ್ತಿರೋದು!" ಎಂದು ಮರಿಗೌಡ ಸ್ವಲ್ಪ ಧ್ವನಿ ಏರಿಸಿದರು.
"ಹೆಹೆ! ನಿಜ ಕಣ್ರೀ! ನಾವು ಇದನ್ನೆಲ್ಲ ಎಲ್ರೀ ಕೇಳಿದೆವು? ಊಷ್ಟಾ ಮೆನು ನಾವು ಮಾಡಿದ್ದಾ?! " ಎಂದು ನಾನು ಪರಿಸ್ಥಿತಿಯನ್ನು ಸುಧಾರಿಸಲು ಪ್ರಯತ್ನಿಸಿದೆ. "ಇಷ್ಟಾಗಿ ಜ್ಞಾನ ವೈರಾಗ್ಯ ಇದರಿಂದ ಹೊಟ್ಟೆ ಯಾರಿಗೆ ತುಂಬತ್ತೆ ಹೇಳಿ! ಅನ್ನಪೂರ್ಣೆಗೆ ಇದು ಗೊತ್ತಿಲ್ಲವಾ? ಅವಳು ಗೊಜ್ಜವಲಕ್ಕಿ ತಿಂದರೆ ಇಡೀ ದಿನ ಹೊಟ್ಟೆ ಹಸಿಯೋದಿಲ್ಲ ಅಂತ ಶಿವನಿಗೆ ಜ್ಞಾನ ಕೊಟ್ಟು ಕಳಿಸಿದಳು ಅಂತ ಕಾಣತ್ತೆ!"
"ಇಲ್ಲ ಸಾರ್!" ಎಂದು ಕೈ ಮೇಲೆತ್ತಿ ಪ್ರತಿಭಟನೆ ಸೂಚಿಸಿ ಮರಿಗೌಡ ರವಾ ಕೆಸರಿಯಲ್ಲಿದ್ದ ಗೋಡಂಬಿಯನ್ನು ಚಮಚದಿಂದ ಬಾಯಿಗೆ ಹಾಕಿಕೊಂಡರು. ರಾಜಾರಾಂ ಅವರ ಕಡೆ ದುರುಗುಟ್ಟಿ "ವಾಟ್ ನೌ!" ಎನ್ನುವ ಹಾಗೆ ನೋಡಿದರು.
"ಗೊಜ್ಜವಲಕ್ಕಿಯಲ್ಲಿ ಏನೋ ವಿಶೇಷ ಇರಬಹುದು." ಎಂದು ಮರಿಗೌಡ ಮುಂದುವರೆಸಿದರು. "ಅದನ್ನು ತಿಂದರೆ ಜ್ಞಾನ ಮತ್ತು ವೈರಾಗ್ಯ ಎರಡೂ ಸಿಕ್ಕುತ್ತದೋ ಏನೋ, ಯಾರಿಗೆ ಗೊತ್ತು! ನೋಡಿ ಪುಳಿಚಾರ್ ಅಂತ ಬ್ರಾಹ್ಮಣರನ್ನ ಎಲ್ಲರೂ ಆಡಿಕೊಳ್ತಾರೆ. ಆದರೆ ಬ್ರಾಹ್ಮಣರು ತಿನ್ನೋ ಪುಳಿ ಅನ್ನ ಅಥವಾ ಗೊಜ್ಜಿನ ಚಿತ್ರಾನ್ನದ ಬಗ್ಗೆ ಯಾರೂ ಏನೂ ಹೇಳೋದಿಲ್ಲ. ಮೇಲುಕೋಟೆಯ ಪ್ರಸಾದ ತಿಂದವರಿಗೇ ಗೊತ್ತು ಅದರ ರುಚಿ! ಗೊಜ್ಜವಲಕ್ಕಿಯಲ್ಲಿ ಖಂಡಿತ ಏನಾದರೂ ವಿಶೇಷ ಇದೆ ನೋಡಿ. ಯಾರಾದರೂ ಅದನ್ನು ಸಂಶೋಧನೆ ಮಾಡಿ ಕಂಡು ಹಿಡಿಯಬೇಕು, ಅಷ್ಟೇ!"
ಆಗಲೇ ರಾಜಾರಾಂ ನಾನು ಮೇಲೆ ತಿಳಿಸಿದ ಕೋಟನ್ನು ಕೋಟ್ ಮಾಡಿದ್ದು. "ನಿನಗೆ ಏನೂ ತಿಳಿದಿಲ್ಲ ಎಂಬುದರಲ್ಲೇ ಎಲ್ಲಾ ತಿಳಿವಳಿಕೆಯೂ ಇದೆ - ಇದು ಬಹಳ ಪ್ರಸಿದ್ಧ ಉಕ್ತಿ. ಇದನ್ನು ಯಾರು ಹೇಳಿರಬಹುದು ಹೇಳಿ?"
"ಏನೋ ತಿಳೀದೇ! ಕುವೆಂಪು ಇರಬಹುದಾ? ಅಥವಾ ವಿವೇಕಾನಂದ? ಅಥವಾ ಎಚ್. ನರಸಿಂಹಯ್ಯ ಅವರಾ?"
"ನಿಜ ನೀವು ಹೇಳೋದು. ಈಗ ಯಾವುದೇ ಕೋಟ್ ಇದ್ದರೂ ಅದನ್ನ ಇವರಲ್ಲಿ ಒಬ್ಬರಿಗೆ ತಗುಲಿ ಹಾಕೋದು ಸಾಧಾರಣ.
ಬರೀ ಫೇಸ್ಬುಕ್ ವಾಟ್ಸಪ್ ಓದೋರಿಗೆ ಇವರು ಮೂರು ಜನ ಬಿಟ್ಟರೆ ಬೇರೆಯವರೂ ಕೋಟಬಲ್ ಕೋಟು ಹೇಳಿರಬಹುದು ಅಂತ ಗೊತ್ತಿಲ್ಲ."
"ಕೋಟಾ ಶಿವರಾಮಕಾರಂತ್ ಕೂಡಾ ಇದ್ದಾರೆ. ಅವರದ್ದಾ ನೀವು ಹೇಳಿದ ಕೋಟು?"
"ಇಲ್ಲ! ಅದನ್ನು ಹೇಳಿದ್ದು ಸಾಕ್ರಟೀಸ್!"
"ಓಹೋ. ಅವನು ಪ್ಲೇಟೋ ಶಿಷ್ಯ ಅಲ್ಲವೇ!"
"ಇಲ್ಲ, ಇವನ ಶಿಷ್ಯ ಪ್ಲೇಟೋ."
"ಹೆಹೆ. ನಿನಗೆ ಒಂದು ಪ್ಲೇಟೋ ಎರಡೋ ಅಂತ ಕೇಳಿದರೆ ಸಾಕ್ರಟೀಸ್ ಏನು ಹೇಳಿದ ಗೊತ್ತೇನ್ರಿ?" ಎಂದು ಮರಿಗೌಡ ಕೇಳಿದರು. ತತ್ರ್ವವಾದ ಕುರಿತು ಒಂದು ಭಾಷಣ ಬಿಗಿಯಲು ಸಿದ್ಧರಾಗಿದ್ದ ರಾಜಾರಾಂ ಅವರ ಮುಖ ಹೇಗೆಹೇಗೋ ಆಯಿತು. ನಾನು ಪರಿಸ್ಥಿತಿ ಸುಧಾರಿಸಲು "ರೀ ವೇಟರ್, ಇನ್ನೊಂದು ಪ್ಲೇಟ್ ರವಾ ಕೇಸರಿ ಕೊಡ್ತೀರಾ?" ಎಂದು ಕೂಗಿದೆ.
ಬಹಳ ಇಷ್ಟವಾದ ಬರಹ ಸರ್
ಪ್ರತ್ಯುತ್ತರಅಳಿಸಿನಮಗೆ ಏನೂ ತಿಳಿದಿಲ್ಲ ಎಂಬುದರಲ್ಲೇ ಎಲ್ಲಾ ತಿಳಿವಳಿಕೆಯೂ ಇದೆ ಎಂಬುದಂತೂ ಸತ್ಯ.
ಪ್ರತ್ಯುತ್ತರಅಳಿಸಿ