ದ್ರಾಕ್ಷಿಯ ಗೊಂಚಲು ಮತ್ತು ಕವಿತೆ




ದ್ರಾಕ್ಷಿಯ ಗೊಂಚಲು 

ಸೂರ್ಯನ ಬೆಳಕಿನಲ್ಲಿ

ಹೊಳೆಯುತ್ತಿದೆ:

ಹಸಿರು, ಕೆಂಪು, ಊದಾ, ನೇರಳೆ, ಕಪ್ಪು, ಕಿತ್ತಳೆ!

ಹೀಗೆ ಒಂದೊಂದು ಹಣ್ಣಿಗೂ ಒಂದೊಂದು ವರ್ಣ

ತುಂಬುತ್ತಾ ಅದೆಷ್ಟು ಹೊತ್ತು ವ್ಯಯಿಸುವೆ ಎಂದು ಕೋಪಿಸಿಕೊಂಡು ಕೇಳಿದೆ ಪ್ರಕೃತಿಯನ್ನ.

ಎಷ್ಟು ದಿನ ಇದ್ದೀತು ಗೊಂಚಲಿನ ಬಣ್ಣ!

ಗಾಳಿ ಬಿಸಿಲಿಗೆ ಪಕ್ವವಾಗಿ ಯಾರೋ ಕಿತ್ತರೆ ಸರಿ

ಕಿತ್ತದಿದ್ದರೆ ಕೆಳಬಿದ್ದು ಸೇರುವುದು ಮಣ್ಣ!

ನಕ್ಕು ನುಡಿಯಿತು ಅದೇ ನನ್ನ ಪ್ರಕೃತಿ

ಏನೇ ಮಾಡಿದರೂ ಸಾವಧಾನ!

ನೀನು ಬರೆದಾಗ ಕವಿತೆ ಹೇಗೆ ಒಂದೊಂದೇ

ಪದವನ್ನೂ ತೂಗಿ ಅಳೆದು ಸುರಿದು

ಬದಲಿಸಿ  ಅಲ್ಲಿಂದ ಇಲ್ಲಿ ಕದಲಿಸಿ

ಒಂದೆಡೆ ಬಿಡಿಸಿ ಇನ್ನೊಂದೆಡೆ ಸೇರಿಸಿ

ಒದ್ದಾಡುವಾಗ ಬಂದವರು ಯಾರೋ

ಎಷ್ಟು ದಿನ ಈ ಕವಿತೆಯ ಜೀವನ

ಎಂದು ಕೇಳಿದರೆ ಏನು ಹೇಳುವೆ ಉತ್ತರವನ್ನ!

ಇಷ್ಟಾಗಿ ನಿನ್ನ ನಿರೀಕ್ಷೆ ಮೀರಿ 

ಕವಿತೆ ಅಮರವಾದರೆ ಆಗ ಕೈ ಹಿಸುಕುತ್ತ

ಅಯ್ಯೋ ಇನ್ನಷ್ಟು ಚೆನ್ನಾಗಿ ಬರೆಯಬೇಕಿತ್ತು 

ಎಂದು ಅನುಭವಿಸುವೆಯಾ ಕೊರಗಿನ ಕಷ್ಟ!


(ಜಲವರ್ಣ: ಕಾರಾ ಬ್ರೌನ್)

ಚಿತ್ರಕವಿತೆ: ಸಿ. ಪಿ. ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)