ವಸಂತಾಗಮನದಲ್ಲಿ ಬರೆದ ಸಾಲುಗಳು

ಮೂಲ: ವಿಲಿಯಂ ವರ್ಡ್ಸ್ ವರ್ತ್

ಕನ್ನಡ ಅನುವಾದ: ಸಿ. ಪಿ. ರವಿಕುಮಾರ್



ಉದ್ಯಾನದಲ್ಲಿ ಒರಗಿ ಕುಳಿತಿದ್ದಾಗ ಒಂದು ದಿನ

ಕೇಳಿದವು ಕಿವಿಗೆ ಸಹಸ್ರಾರು ಇನಿಸ್ವನ

ಕೆಲವು ಸಲ ಸಂತೋಷದ ಸಿಹಿಘಳಿಗೆಯಲ್ಲೂ

ಒಳನುಗ್ಗುತ್ತವೆ ದುಃಖದಾಯಿ ಆಲೋಚನೆಗಳು


ಪ್ರಕೃತಿಯ ಸೃಷ್ಟಿಯನ್ನು ಆಸ್ವಾದಿಸುತ್ತಾ 

ದೃಷ್ಟಿ ಹರಿಯಿತು ಒಳಗಿನ ಆತ್ಮದತ್ತ

ಮುದುಡಿ ಮರುಗಿತು ನನ್ನ ಮನವು ಮರುಕ್ಷಣ

ನೆನೆದು ಮನುಷ್ಯ ಮನುಷ್ಯನಿಗೆ ಮಾಡಿರುವುದನ್ನ


ನಲಿಯುತ್ತಿದ್ದವು ಗಿಡದಲ್ಲಿ ಡೇರೆ ಹೂಗಳ ಗುಚ್ಛ

ನಡುನಡುವೆ ಬಸವನಪಾದ ಬೆಳೆದಿತ್ತು ಯಥೇಚ್ಛ

ಪ್ರತಿಯೊಂದು ಹೂವೂ ತಾನು ಉಸಿರಾಡುವ ಗಾಳಿ

ಸಂತೋಷದಿಂದಲೇ ಸೇವಿಸುವುದಿಲ್ಲವೇ ಹೇಳಿ!


ಆಡುತ್ತಿದ್ದವು ಅಲ್ಲೇ ಹಕ್ಕಿಗಳು ಹತ್ತಾರು

ಏನು ಯೋಚಿಸುತ್ತಿದ್ದವೋ ಬಲ್ಲವರು ಯಾರು

ನೋಡಿದರೆ ಕುಪ್ಪಳಿಸುತ್ತಾ ಹಾರಾಡುವುದನ್ನು ಎಲ್ಲೆಡೆ

ಸಂತೋಷವೇ ತುಂಬಿದಂತಿತ್ತು ಹಕ್ಕಿಗಳ ಪ್ರತಿ ನಡೆ.


ಸೂಸಲು ಸುಳಿಗಾಳಿ ಅತ್ತಿತ್ತ ತೂಗಿ

ನಕ್ಕವು ಎಳೆರೆಂಬೆಗಳು ಸಂತಸದಿ ಬೀಗಿ

ರೆಂಬೆಗಳ ಮೇಲೆ ಹಸಿರು ಚಿಗುರೆಲೆ, ಹೂವು

ತಂಗಾಳಿಯ ಸ್ಪರ್ಶಕ್ಕೆ ಸುಖಿಸಿದವು ತಾವೂ.


ಆಗಿದ್ದಲ್ಲಿ ಎಲ್ಲರೂ ಸುಖವಾಗಿರಲಿ ಎಂಬುದೇ 

ಪ್ರಕೃತಿಯ ಯೋಜನೆ, ನನ್ನ ಆತ್ಮ ಕೇಳುತ್ತಿದೆ 

ಏಕೆಂದು ರೋದಿಸುತ್ತಾ,  ವಹಿಸುತ್ತ ಮೌನ

ನೆನೆದು ಮನುಷ್ಯ ಮನುಷ್ಯನಿಗೆ ಮಾಡಿರುವುದನ್ನ.

ಕಾಮೆಂಟ್‌ಗಳು

  1. ಮನುಷ್ಯನಲ್ಲಿರುವ ವಿಚಾರ ಶಕ್ತಿಯೇ ಎಲ್ಲಾ ವಿಕೃತಿಗೆ ಕಾರಣವಾಗಿದೆ. ಸುಮ್ಮನೇ ನಡೆಯುತ್ತಿದ್ದರೂ ಪ್ರಕೃತಿ ಜನೋಪಕಾರಿ ಯಾಗಿ ಪ್ರಗತಿಯತ್ತ ಸಾಗುತ್ತಿದೆ ಎಂದು ಕವಿ ಸೊಗಸಾಗಿ ಹೇಳಿದ್ದಾನೆ.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)