ನೆನಪು - ಮಿಸೆಸ್ ಶೆಣೈ
ನನ್ನ ಸ್ಕೂಲ್ ಟೀಚರ್ ಮಿಸೆಸ್ ಶೆಣೈ ನನ್ನನ್ನು ಬಹಳ ಪ್ರೀತಿಯಿಂದ ಕಂಡವರು. ದೆಹಲಿಯ ಕನ್ನಡ ಶಾಲೆಯಲ್ಲಿದ್ದ ಕೆಲವೇ ಕನ್ನಡ ಶಿಕ್ಷಕರಲ್ಲಿ ಮಿಸೆಸ್ ಮಾಯಾ ಶೆಣೈ ಕೂಡಾ ಒಬ್ಬರು. ಅವರಿಗೆ ಆಗ ಐವತ್ತರ ವಯಸ್ಸೆಂದು ತೋರುತ್ತದೆ. ಕೂದಲು ಬೆಳ್ಳಗಾಗಿತ್ತು. ಅವರು ಧರಿಸುತ್ತಿದ್ದ ಕನ್ನಡಕದ ಹಿಂದೆ ಕಣ್ಣುಗಳು ಮಿಂಚುತ್ತಿದ್ದವು. ಅವರನ್ನು ಕಂಡರೆ ಎಲ್ಲರೂ ಸ್ವಲ್ಪ ಹೆದರುತ್ತಿದ್ದರು. ಶಿಕ್ಷಕರೂ ಅವರನ್ನು ಬಹಳ ಗೌರವದಿಂದ ಕಾಣುತ್ತಿದ್ದರು. ಧ್ವನಿ ಜೋರು. ಸ್ವಾಭಿಮಾನ ಅವರ ಧ್ವನಿಯಲ್ಲಿ ಇಣುಕುತ್ತಿತ್ತು. ನಾನು ಗುಂಡುಗುಂಡಾಗಿದ್ದೇನೆಂಬ ಕಾರಣ ನನ್ನ ಗಲ್ಲದ ಮೇಲೆ ಅವರಿಗೆ ಬಹಳ ಪ್ರೀತಿ. ಗಲ್ಲಗಳನ್ನು ಹಿಂಡಿಯೇ ನನ್ನನ್ನು ಮಾತಾಡಿಸುತ್ತಿದ್ದುದು. ನಮಗೆ ಕನ್ನಡ ಒಂದು ಸಬ್ಜೆಕ್ಟ್ ಇತ್ತು. ಅದನ್ನು ಮಿಸೆಸ್ ಶೆಣೈ ತೆಗೆದುಕೊಳ್ಳುತ್ತಿದ್ದರು. ಇದಲ್ಲದೆ ಆರನೇ ತರಗತಿಯಲ್ಲಿ ನಮಗೆ ಸೋಷಿಯಲ್ ಸ್ಟಡೀಸ್ ಪಾಠ ಮಾಡಿದರು ಎಂದು ನೆನಪು.
ಕನ್ನಡ ಕ್ಲಾಸಿನಲ್ಲಿ ನಾವು ಐದೋ ಆರೋ ಮಕ್ಕಳು ಇರುತ್ತಿದ್ದೆವು, ಅಷ್ಟೇ. ನಮ್ಮನ್ನು ಲೈಬ್ರರಿಯಲ್ಲಿ ಕೂಡಿಸಿಕೊಂಡು ಪಾಠ ಮಾಡುತ್ತಿದ್ದರು. ಪಾಠದ ಬದಲು ಹರಟೆ, ಕಥೆ ಎಲ್ಲವೂ ನಡೆಯುತ್ತಿತ್ತು! ಲೈಬ್ರರಿಯ ಪುಸ್ತಕಗಳ ಮೇಲೆ ಕಣ್ಣಾಡಿಸಲೂ ನಮಗೆ ಅನುಮತಿ ಇತ್ತು. ನಮಗೆ ಅವರು ಸಾಕಷ್ಟು ಸಲಿಗೆ ಕೊಟ್ಟುಬಿಟ್ಟಿದ್ದರು! ಉಷಾ, ಸಂಧ್ಯಾ ಎನ್ನುವ ಹುಡುಗಿಯರು ಇದ್ದರು. ಅವರು ಮಿಸೆಸ್ ಶೆಣೈ ಅವರ ಸೀರೆ ಬಹಳ ಚೆನ್ನಾಗಿದೆ ಎಂದರೆ ಅವರಿಗೆ ಬಹಳ ಖುಷಿ. ಅದರ ಬಗ್ಗೆ ಅವರು ಮಾತಾಡಿಕೊಳ್ಳುತ್ತಿದ್ದರು.
ಒಮ್ಮೆ ಕನ್ನಡ ರಾಜ್ಯೋತ್ಸವದ ಸಂದರ್ಭವೋ ಏನೋ ಮಕ್ಕಳಿಂದ ಕಾರ್ಯಕ್ರಮಗಳನ್ನು ನಡೆಸಲು ಸುತ್ತೋಲೆ ಬಂದಿತೆಂದು ತೋರುತ್ತದೆ. ಕರ್ನಾಟಕ ಭವನದಲ್ಲಿ ಈ ಕಾರ್ಯಕ್ರಮ ಇತ್ತೆಂದು ಮಸುಕಾಗಿ ನೆನಪಿದೆ. ಮಿಸೆಸ್ ಡಿಸೋಜಾ ಎಂಬ ಕನ್ನಡ ಶಿಕ್ಷಕಿ ನಮ್ಮಿಂದ ನಾಟಕ ಆಡಿಸಿದರು. ಮಿಸೆಸ್ ಶೆಣೈ ಅವರು ಶಿಫಾರಸು ಮಾಡಿದ್ದರಿಂದಲೋ ಏನೋ ನನಗೆ ಪ್ರಮುಖ ಪಾತ್ರ. ರಾಮಣ್ಣನಿಂದ ಭೀಮಣ್ಣ ಸಾಲ ತೆಗೆದುಕೊಂಡಿರುತ್ತಾನೆ. ಸಾಲ ವಾಪಸು ಕೇಳಲು ಹೋದರೆ ಮಂಗಳವಾರ ಬನ್ನಿ ಎನ್ನುತ್ತಾನೆ. ಮಂಗಳವಾರ ಹೋದರೆ ಶುಕ್ರವಾರ ಬನ್ನಿ ಅನ್ನುತ್ತಾನೆ. ರಾಮಣ್ಣನಿಗೆ ಸಾಕಾಗಿ ಕೋರ್ಟ್ ಕೇಸ್ ಹಾಕುತ್ತಾನೆ. ಭೀಮಣ್ಣ ಲಾಯರ್ ಹತ್ತಿರ ಬಂದು ಸಲಹೆ ಕೇಳುತ್ತಾನೆ. (ಲಾಯರ್ ಪಾತ್ರ ನನಗೆ.) ಕೋರ್ಟಿನಲ್ಲಿ ಏನು ಕೇಳಿದರೂ ಮಾತೇ ಬರದಂತೆ ಬ್ಯಾ ಬ್ಯಾ ಬ್ಯಾ ಅನ್ನು ಎಂದು ಲಾಯರ್ ಸಲಹೆ ಕೊಡುತ್ತಾನೆ. ಕೋರ್ಟಿನಲ್ಲಿ ಭೀಮಣ್ಣ ಹಾಗೇ ನಟಿಸುತ್ತಾನೆ. ಜಡ್ಜ್ ತಲೆಯ ಮೇಲೆ ಕೈಹೊತ್ತು ಕೇಸ್ ಡಿಸ್ಮಿಸ್ ಮಾಡುತ್ತಾನೆ. ಲಾಯರ್ ಭೀಮಣ್ಣನ ಹತ್ತಿರ ಫೀಸ್ ಕೇಳಲು ಹೋದಾಗ ಅವನು ಬ್ಯಾ ಬ್ಯಾ ಬ್ಯಾ ಎಂದು ಶುರು ಮಾಡುತ್ತಾನೆ. ಲಾಯರ್ ತಲೆಯ ಮೇಲೆ ಕೈ ಹೊತ್ತುಕೊಳ್ಳುತ್ತಾನೆ. ಲಾಯರ್ ಪಾತ್ರಕ್ಕಾಗಿ ನನಗೆ ಮೀಸೆ ಬರೆದು ಮಿಸೆಸ್ ಡಿಸೋಜಾ ತಯಾರು ಮಾಡಿದ್ದು ನೆನಪಿದೆ. ಅವರ ಉತ್ಸಾಹವನ್ನು ನೆನೆದರೆ ಆಶ್ಚರ್ಯವಾಗುತ್ತದೆ.
ಮಿಸೆಸ್ ಶೆಣೈ ಅವರ ಸೋಷಿಯಲ್ ಸ್ಟಡೀಸ್ ಕ್ಲಾಸಿನಲ್ಲಿ ಒಮ್ಮೆ ಒಂದು ಘಟನೆ ನಡೆಯಿತು. ಅನಿಲ್ ಕುಲಕರ್ಣಿ ಎನ್ನುವ ಒಬ್ಬ ಹುಡುಗ ನನ್ನ ಪಕ್ಕದಲ್ಲಿ ಮುಂದಿನ ಬೆಂಚಿನಲ್ಲಿ ಕೂಡುತ್ತಿದ್ದ. ಬಹಳ ಸ್ವಾಭಿಮಾನಿ ಹುಡುಗ. ಮನಸ್ಸಿಗೆ ಅನ್ನಿಸಿದ್ದನ್ನು ಜೋರಾಗಿ ಹೇಳುತ್ತಿದ್ದ. ಯಾವುದೋ ಸಂದರ್ಭದಲ್ಲಿ ಕ್ಲಾಸಿನಲ್ಲಿ ಗಲಾಟೆ ಇತ್ತು. ಮಿಸೆಸ್ ಶೆಣೈ ಕೋಪ ಮಾಡಿಕೊಂಡರು. ಆದರೂ ಗದ್ದಲ ನಿಲ್ಲಲಿಲ್ಲ. ಅವರು ಕೋಪದಲ್ಲಿ ನಮ್ಮನ್ನು ಬೈದರು. ದೊಡ್ಡವರ ಬಗ್ಗೆ ನಿಮಗೆ ಮರ್ಯಾದೆ ಇಲ್ಲವೇ, ನಡತೆ ಹೇಗಿರಬೇಕು ಎಂದು ಗೊತ್ತಿಲ್ಲವೇ, ಮನೆಯಲ್ಲಿ ನಿಮಗೆ ಏನು ಹೇಳಿಕೊಡುತ್ತಾರೆ ಎಂದು ಅವರ ಮಾತು ಸಾಗಿತು. ಅನಿಲ್ ಸ್ವಲ್ಪ ಕೆರಳಿ "ನಮಗೆ ಸರಿಯಾದ ನಡತೆ ಇಲ್ಲದಿದ್ದರೆ ನಮಗೆ ಪಾಠ ಹೇಳುವ ಟೀಚರ್ಸ್ ..." ಎಂದು ಪ್ರಾರಂಭಿಸಿದ. ಅವನ ಪಕ್ಕದಲ್ಲಿದ್ದ ನನಗೆ ಅವನು ಹೇಳಿದ್ದು "ಟೀಚರ್ಸ್ ನಮಗೆ ಹೇಳಿಕೊಡಬೇಕು" ಎಂದು ಕೇಳಿಸಿತು. ಆದರೆ ಮಿಸೆಸ್ ಶೆಣೈ ಅದನ್ನು ಅಪಾರ್ಥ ಮಾಡಿಕೊಂಡುಬಿಟ್ಟರು. "ಟೀಚರ್ಸ್ಗ್ ಗೂ ನಡತೆ ಬರುವುದಿಲ್ಲ" ಎನ್ನುತ್ತಿದ್ದಾನೆ ಎಂದುಕೊಂಡು, "ಹೌದಲ್ಲವಾ, ಪಾಠ ಹೇಳಿಕೊಡುವ ಟೀಚರ್ಸ್ ಗೂ ನಡತೆ ಬರುವುದಿಲ್ಲ ಅಲ್ಲವಾ?" ಎಂದು ಕೆರಳಿ ನಮ್ಮ ಬೆಂಚ್ ಬಳಿಗೆ ಧಾವಿಸಿದರು. ಅನಿಲ್ ಅವರ ಕೋಪ ನೋಡಿ ಹೆದರಿ "ಇಲ್ಲ, ಇಲ್ಲ, ..." ಎಂದು ಏನೋ ಹೇಳಿದ. ಆದರೆ ಮಿಸೆಸ್ ಶೆಣೈ ವಿಪರೀತ ಕೋಪದಲ್ಲಿ ಅವನು ಹೇಳಿದ್ದನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಅನಿಲ್ ಗೆ ಅವರು ಮುಖದ ಮೇಲೆ, ತಲೆಯ ಮೇಲೆ ಪಟಪಟ ಬಾರಿಸಿದರು. ಅವನು "ಇಲ್ಲ, ಇಲ್ಲ, ..." ಎನ್ನುತ್ತಲೇ ಇದ್ದ. "ಎಷ್ಟು ನಿನ್ನ ಅಧಿಕಪ್ರಸಂಗಿತನ!" ಎಂದು ಮಿಸೆಸ್ ಶೆಣೈ ಉಗ್ರರೂಪ ತಾಳಿದರು. ನಂತರ ತಮ್ಮ ಚೇರ್ ಮೇಲೆ ಹೋಗಿ ಕುಳಿತರೂ ಅವರ ಕೋಪ ಇಂಗಿರಲಿಲ್ಲ. ಹುಡುಗರ ಅಧಿಕಪ್ರಸಂಗಿತನಕ್ಕೆ ಛೀಮಾರಿ ಹಾಕಿದರು. ಎಲ್ಲ ಹುಡುಗ ಹುಡುಗಿಯರೂ ಸ್ತಬ್ಧರಾಗಿ ಕೂತಿದ್ದರು. ಅನಿಲ್ ಬಹಳ ಒಳ್ಳೆಯ ಹುಡುಗ ಎಂದು ಹೆಸರು ಮಾಡಿದ್ದವನು. ಅವನ ಬಗ್ಗೆ ಎಲ್ಲರಿಗೂ ಕೆಟ್ಟೆನ್ನಿಸಿತು. ಅವನು ಬಹಳ ಅತ್ತ. ಆದರೆ ಮುಂದಿನ ಪೀರಿಯಡ್ ಬರುವವರೆಗೆ ಮಿಸೆಸ್ ಶೆಣೈ ಕೋಪ ಮಾಯವಾಗಿತ್ತು. ಅನಿಲನನ್ನು ಸಹಜವಾಗಿ ಮಾತಾಡಿಸಿದರು. ಅವನಿಗೂ ನಿರಾಳವಾಯಿತು.
ನಾನು ದೆಹಲಿ ಬಿಟ್ಟು ಬರುವ ಸಂದರ್ಭ ಬಂದಾಗ ಮಿಸೆಸ್ ಶೆಣೈ ಬಹಳ ನೊಂದುಕೊಂಡರು. ನನ್ನನ್ನು ಮನೆಗೆ ಕರೆದರು. ನಮ್ಮ ಮನೆಗೂ ಬಂದರು. ನಮ್ಮ ತಾಯಿಯ ಆತಿಥ್ಯ ಸ್ವೀಕರಿಸಿದರು. ಅವರೊಂದಿಗೆ ಒಬ್ಬ ಸಾಧಾರಣ ಗೃಹಿಣಿಯಂತೆ ಹಲಸಿನ ಹಪ್ಪಳ ಮಾಡುವ ವಿಧಾನ ಇತ್ಯಾದಿ ಹರಟೆ ಹೊಡೆದರು. ನಮ್ಮ ಟೀಚರ್ ಹೀಗೆ ಮನೆಗೆ ಬಂದು ತಮ್ಮ ವಿಭಿನ್ನ ರೂಪದಲ್ಲಿ ಪ್ರಸ್ತುತರಾದದ್ದನ್ನು ಜೀರ್ಣಿಸಿಕೊಳ್ಳಲು ನನಗೆ ಸ್ವಲ್ಪ ಸಮಯವೇ ಬೇಕಾಯಿತು. ಮಿಸೆಸ್ ಶೆಣೈ ಈಗ ಇಲ್ಲ. ಆದರೆ ಅವರು ತೋರಿದ ಅಭಿಮಾನ ಮತ್ತು ಪ್ರೀತಿಯನ್ನು ಇಂದೂ ನೆನೆಸುತ್ತೇನೆ.
#ನೆನಪುಗಳು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ