ಬೇಜಾನ್ ಹರಟೆ
ಬೇಜಾನ್ ಅಂದರೆ ಸಮೃದ್ಧ ಎಂಬ ಅರ್ಥ ಬಂದಿದ್ದು ಹೇಗೋ ತಿಳಿಯದು. ಉದಾಹರಣೆಗೆ "ನಮ್ಮ ಮನೆಯಲ್ಲಿ ಗೋಕುಲಾಷ್ಟಮಿ ಹಬ್ಬಕ್ಕೆ ಬೇಜಾನ್ ತಿಂಡಿ ಮಾಡಿದ್ದಾರೆ" ಎಂದು ಶ್ರೀ ರಾಮಸ್ವಾಮಿ ಅಯ್ಯಂಗಾರ್ ಅವರು ಹೇಳಿದರೆ ಅವರ ಮನೆಯಲ್ಲಿ ಯಥೇಚ್ಛವಾಗಿ ಮಾಡಿದ ಚಕ್ಕುಲಿ, ಕೋಡುಬಳೆ, ತೇಂಗೊಳಲು, ಮುಚ್ಚ್ಚೋರೆ, ಕರಿಗಡುಬು, ಇದೆಲ್ಲವನ್ನೂ ನೀವು ಕಲ್ಪಿಸಿಕೊಳ್ಳಬಹುದು. ಬೇಜಾನ್ ಎಂಬುದು ಇಮಾಮ್ ಸಾಹೇಬರು ಕನ್ನಡಕ್ಕೆ ತಂದಿರಬಹುದಾದ ಪದವಾದ್ದರಿಂದ ಗೋಕುಲಾಷ್ಟಮಿಗೂ ಇಮಾಮ್ ಸಾಬಿಗೂ ನೇರವಾದ ಸಂಬಂಧ ಇಲ್ಲಿ ಸ್ಥಾಪಿತವಾಗಿದ್ದನ್ನೂ ನೀವು ಮನಗಾಣಬಹುದು.
ಜಾನ್ ಎಂದರೆ ಉರ್ದುವಿನಲ್ಲಿ ಪ್ರಾಣ. ಹಾಗೆಂದು ಜಾನೀ ಎಂದು ಒಬ್ಬ ಉರ್ದು ಭಾಷಿಗನು ನಿಮ್ಮನ್ನು ಕರೆದರೆ ಅವನು ನಿಮ್ಮನ್ನು ಪ್ರಾಣಿ ಎಂದು ಮೂದಲಿಸುತ್ತಿಲ್ಲ. ನೀನು ನನಗೆ ಪ್ರಾಣದಷ್ಟೇ ಪ್ರಿಯ ಎಂದು ಆದರ ಪ್ರಕಟಿಸುತ್ತಿದ್ದಾನೆ. ರಾಮನು ಸೀತೆಯನ್ನು ಜಾನ್ ಕೀ ಎಂದು ಕರೆಯುತ್ತಿದ್ದದ್ದು ಇದಕ್ಕೇನಾ ಎನ್ನಬೇಡಿ. ಜನಕನ ಮಗಳಾದ್ದರಿಂದ ಅವಳಿಗೆ ಬಂದ ಹೆಸರದು. ಜಾನ್ವರ್ ಅಂದರೆ ಪ್ರಾಣ ಉಳ್ಳದ್ದು. ಆದರೆ "ಜಾನ್ ಗಯಾ" ಎಂದರೆ ಪ್ರಾಣ ಹೋಯಿತು ಅನ್ನುವ ಅರ್ಥವಲ್ಲ. ಅವನಿಗೆ ತಿಳಿದು ಹೋಯಿತು ಎನ್ನುವಾಗ ವೋ ಜಾನ್ ಗಯಾ ಎನ್ನಬಹುದು.
ಬೇ ಎಂದರೆ ಉರ್ದುವಿನಲ್ಲಿ ರಹಿತ ಎಂಬ ಅರ್ಥ. ಉದಾಹಣೆಗಾಗಿ ಬೇಜುಬಾನ್ (ನಾಲಗೆ ಇಲ್ಲದ), ಬೇಕಸೂರ್ (ತಪ್ಪು ಮಾಡಿಲ್ಲದ), ಬೇಶರಮ್ (ನಾಚಿಕೆ ಇಲ್ಲದ) ಇತ್ಯಾದಿ. ಬೇಕರಿ ಅನ್ನುವುದು ಈ ಸಾಲಿಗೆ ಸೇರುವುದಿಲ್ಲ. ಬೇಕರಿ ಏನಿದ್ದರೂ ಅಂಗಡಿ ಸಾಲಿನಲ್ಲಿ ಇದ್ದರೆ ಚೆನ್ನ. ಬೇಕರಿಯಲ್ಲಿ ಕರಿದ ಪದಾರ್ಥಗಳು ಬೇಜಾನ್ ಇರುತ್ತವೆ. ಪೋಟೇಟೋ ಕರಿ ಹಾಕಿ ಮಾಡಿದ ಪಫ್ ಇತ್ಯಾದಿಗಳು ಕೂಡಾ ಇರುತ್ತವೆ. ಹೀಗಾಗಿ ಬೇಕರಿ ಪ್ರಾಡಕ್ಟ್ ಅಂದರೆ ಕರಿ ಇಲ್ಲದ ಪದಾರ್ಥ ಎನ್ನುವುದು ಸರಿಯಾಗದು. ಕರಿ ಕರಕಲಾದ ಪದಾರ್ಥಗಳನ್ನು ಬೇಕರಿಯಲ್ಲಿ ಮಾರಲಾಗದು. ಬೇ ಏರಿಯಾ ಎನ್ನುವುದರಲ್ಲಿಯೂ ಬೇ ಎಂದರೆ ರಹಿತ ಎನ್ನುವ ಅರ್ಥ ಇಲ್ಲ. ಬೇ ಎಂದರೆ ಕೊಲ್ಲಿ ಎಂದರ್ಥ. ಅಯ್ಯಯ್ಯೋ ಕೊಲ್ಲಿ ಅಂದರೆ ಕೊಂದು ಹಾಕಿರಿ ಎಂದು ಅಪಾರ್ಥ ಮಾಡಿಕೊಳ್ಳಬೇಡಿ. ಬಂಗಾಳಕೊಲ್ಲಿ ಎಂದಾಗ ಅಲ್ಲಿ ಕೊಲ್ಲಿ ಎಂದರೆ ಭೂಮಿಯಿಂದ ಬಹುಮಟ್ಟಿಗೆ ಆವೃತವಾದ ಸಮುದ್ರಭಾಗ ಎಂದರ್ಥ. ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಇರುವ ಬೇ ಪ್ರದೇಶಕ್ಕೆ ಬೇ ಏರಿಯಾ ಎನ್ನುತ್ತಾರೆ. ಬೇಕಾದಷ್ಟು ಭಾರತೀಯರು ಅಲ್ಲಿ ಬೇಜಾನ್ ಸ್ಯಾಲರಿಯ ನೌಕರಿಗಳಲ್ಲಿದ್ದಾರೆ.
ಬೇಜಾನ್ ಎಂದರೆ ಡೆಡ್ಲಿ ಎಂಬ ಅರ್ಥ ಸರಿ ಹೋಗುತ್ತದೆ. ನಿನ್ನ ಪರೀಕ್ಷೆ ಹೇಗಾಯಿತು ಎಂದಾಗ ಯಾರಾದರೂ ಡೆಡ್ಲಿ ಎಂದು ಉತ್ತರಿಸಿದರೆ ಪರೀಕ್ಷೆ ತುಂಬಾ ಚೆನ್ನಾಗಿ ಆಯಿತು ಎಂದೇ ಅರ್ಥ. ಮೇಷ್ಟ್ರು ಕೊಟ್ಟ ಪ್ರಶ್ನೆಪತ್ರಿಕೆ ಡೆಡ್ಲಿಯಾಗಿತ್ತು ಎಂದರೆ ಬಹಳ ಕಷ್ಟವಾಗಿತ್ತು ಎಂದು ಅರ್ಥ. ಹೆಂಡತಿ ಮಾಡಿದ ಇಡ್ಲಿ ಡೆಡ್ಲಿಯಾಗಿತ್ತು ಎಂದರೆ ಏನೆಂದು ನಿಮಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಬೇಜಾನ್ ಎಂಬುದು ಕೂಡಾ ಒಂದು ಡೆಡ್ಲಿ ಪದವೇ ಎಂದು ಹೇಳುತ್ತಾ ಇಲ್ಲಿಗೆ ಮುಗಿಸುತ್ತೇನೆ. ಬೇಜಾನ್ ಟೈಮ್ ಆಗಿಹೋಯಿತು. ನಾನು ಇಳಿಯುವ ಸ್ಟಾಪ್ ಬಂತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ