ನಡೆ ಮುಂದೆ ನೀನೊಬ್ಬನೇ!



ಮೂಲ ಕವಿತೆ: ರಬೀಂದ್ರನಾಥ  ಟ್ಯಾಗೋರ್ ಕನ್ನಡಕ್ಕೆ: ಸಿ.ಪಿ. ರವಿಕುಮಾರ್ 

ನೀನು ಕರೆದಾಗ ಯಾರೂ ಓ ಎನ್ನಲಿಲ್ಲವೇ?
ಮೇಲೆದ್ದು ನಡೆ ಮುಂದೆ ನೀನೊಬ್ಬನೇ!
ಒಂಟಿಯಾದರೇನಂತೆ, ನಡೆ ಮುಂದೆ ಒಬ್ಬನೇ,
ಮೇಲೆದ್ದು ನಡೆ ಮುಂದೆ ನೀನೊಬ್ಬನೇ!

ನಿನ್ನ ಮಾತಿಗೆ ಯಾರೂ ಉತ್ತರಿಸಲಿಲ್ಲವೇ?
ಅವರು ತಳೆದರೆ ಮೌನ? ಬಾಯ್ಬಿಡಲು ಹೆದರಿದರೆ?
ಮುಕ್ತಕಂಠದಿಂದ ನೀನು ಮಾತಾಡಲು ಬಾಯ್ತೆರೆ!
ಮೌನದಲ್ಲಿ ನಿನಗೆ ನಿನ್ನ ದನಿಯೇ ಆಸರೆ!

ಕಾಡುದಾರಿಯಲ್ಲಿ ಎಲ್ಲ ನಿನ್ನ ಬಿಟ್ಟು ಅಗಲಿದರೆ?
ಕಗ್ಗತ್ತಲಿನಲ್ಲಿ ನಿನ್ನ ಒಂಟಿ ಬಿಟ್ಟು ನಡೆದರೆ?
ಮುಳ್ಳುಹಾದಿಯಲ್ಲಿ ಪಾದರಕ್ಷೆ ಇಲ್ಲದಿದ್ದರೆ 
ರಕ್ತಸಿಕ್ತ ಪಾದದಿಂದ ತುಳಿದು ಮುಳ್ಳು ನಡೆ!

ಸುರಿವ ಮಳೆಯ ಕಾಳರಾತ್ರಿ, ದೀಪವಿಲ್ಲ, ಕತ್ತಲೆ!
ಸುಸ್ವಾಗತ ಕೋರದಂತೆ ಬಾಗಿಲುಗಳು ಮುಚ್ಚಿವೆ!
ನಿನ್ನ ನೋವು ಸಿಡಿಲಿನಂತೆ, ಅದರೊಳಗಡೆ ಕಿಚ್ಚಿದೆ!
ಹಚ್ಚಿ ನಿನ್ನ ಹೃದಯ-ದೊಂದಿ ಬೆಳಕಿನಲ್ಲಿ ನಡೆ!

ನೀನು ಕರೆದಾಗ ಯಾರೂ ಓ ಎನ್ನಲಿಲ್ಲವೇ?
ಮೇಲೆದ್ದು ನಡೆ ಮುಂದೆ ನೀನೊಬ್ಬನೇ!
ಒಂಟಿಯಾದರೇನಂತೆ, ನಡೆ ಮುಂದೆ ಒಬ್ಬನೇ,
ಮೇಲೆದ್ದು ನಡೆ ಮುಂದೆ ನೀನೊಬ್ಬನೇ!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)