ನಮ್ಮ ನಂದಿನಿ ನಮ್ಮ ಎಮ್ಮೆ

 



"ನಮ್ಮ ನಂದಿನಿ ನಮ್ಮ ಎಮ್ಮೆ" ಅಂತ ಒಬ್ಬರು ಬರೆದಿದ್ದಾರೆ. ನಂದಿನಿಯ ತುಪ್ಪವನ್ನು ತಿರುಪತಿ ಲಡ್ಡುಗಳಿಗೆ ಇನ್ನು ಮುಂದೆ ಬಳಸುವುದಿಲ್ಲ ಎಂದು ನಿರ್ಧರಿಸಲು ಇದೇ ಕಾರಣವಾಯಿತೇ ಎಂಬ ಅನುಮಾನ.ನನ್ನನ್ನು ಕಾಡುತ್ತಿದೆ. ಎಮ್ಮೆಗೆ ಆದ ಅಪಮಾನ ಅನ್ಯಾಯಗಳು ಒಂದೇ ಎರಡೇ!


ಎಮ್ಮೆಗೆ ನಂದಿನಿ ಅಂತ ಹೆಸರು ಇಟ್ಟಿದ್ದು ಆಶ್ಚರ್ಯ ಮತ್ತು ಸಂತೋಷದ ವಿಷಯ. ನೋಡಿ, ಗಂಗೆ ಬಾರೇ ಗೌರಿ ಬಾರೇ ಎಂದೆಲ್ಲಾ ಕರೆಯುವುದು ಗೋವನ್ನು. ಕೃಷ್ಣನು ಮೇಯಿಸಲು ಕರೆದೊಯ್ದದ್ದು ಗೋವನ್ನು.  ನೀನಾರಿಗಾದೆಯೋ ಎಲೆ ಮಾನವ ಎಂದೆಲ್ಲಾ ಹಾಡಿದ್ದು ಗೋವು. ಎಮ್ಮೆಯ ಸುದ್ದಿಯೇ ಎಲ್ಲೂ ಬಾರದು. ಬಂದರೆ ಯಮನ ವಾಹನವಾಗಿ. ಅಥವಾ ಮಹಿಷಾಸುರನ ಅವತಾರವಾಗಿ. ಎಂದಾದರೂ ಎಮ್ಮೆಗೆ ನಂದಿನಿ, ಕುಮುದಿನಿ ಎಂದೆಲ್ಲಾ ಚಂದದ ಹೆಸರು ಇಟ್ಟಿದ್ದು ಕೇಳಿರುವಿರಾ? ಇಲ್ಲ, ಇಲ್ಲ! ಇದಕ್ಕೆ ಕಾರಣ ಏನೆಂದು ಊಹಿಸುವುದು ಅಂತಹ ಕಷ್ಟವೂ ಏನಲ್ಲ.  ಬಿಳಿ, ಕಂದು, ಮುಂತಾದ ವರ್ಣಗಳಲ್ಲಿ ಹೊಳೆಯುವ ಗೋವಿಗೆ ಮಾತ್ರ.ಈ ಹೆಸರುಗಳು! ಕಪ್ಪು ಎಂಬ ಕಾರಣಕ್ಕೆ ಎಮ್ಮೆಗೆ ಕಡೆನೋಟ. ಗೋವೇ ಎಂದು ಹಸುವನ್ನು ಮುದ್ದಾಡಿ ಎಮ್ಮೆ ಕಂಡಾಗ ಗೋ ಅವೇ ಎನ್ನುವ ತಾರತಮ್ಯ ಭಾವ! ಇಷ್ಟೆಲ್ಲಾ ಅನ್ಯಾಯವಾದರೂ ಎಂದಾದರೂ ಎಮ್ಮೆಯು ಪ್ರತಿಭಟಿಸಿದ್ದನ್ನು ನೋಡಿದ್ದೀರಾ? ಪಾಪ, ಎತ್ತಿಗೆ ಜ್ವರ ಬಂದಾಗಲೂ ಬರೆ ಹಾಕಿಸಿಕೊಂಡ ಬಡಪಾಯಿ!  ಇದೊಂದೇ ಕಾರಣಕ್ಕೆ ಎತ್ತಿನ ಮೇಲೆ ಎಮ್ಮೆಗೆ ಸ್ವಲ್ಪ ಅಸಮಾಧಾನ. ಎತ್ತು ತ ಏರಿಗೆ ಎಳೆದಾಗ ಎಮ್ಮೆ ನೀರಿಗೆ ಎಳೆಯಲು ಇದೇ ಕಾರಣ. ಆಕಳು ಕಪ್ಪಾದರೆ ಹಾಲು ಕಪ್ಪೇ ಎಂಬ ಗಾದೆ ಮಾಡಿದವನ ಕಣ್ಣು ಎಮ್ಮೆಯ ಮೇಲೆ ಅದೇಕೆ ಬೀಳಲಿಲ್ಲವೋ!  ಎಮ್ಮೆ ಕಪ್ಪಾದರೂ ಎಮ್ಮೆಯ ಹಾಲೂ ಕಪ್ಪಿಲ್ಲ.  ಕಾಫಿ ಕಪ್ಪಿನಲ್ಲಿ  ಎಮ್ಮೆಯ ಹಾಲನ್ನು ಹಾಕಿ ಸವಿದವವರೂ ಎಮ್ಮೆಯ ವಕಾಲತ್ತು ವಹಿಸಲಿಲ್ಲ!


ಈಗ "ನಮ್ಮ ನಂದಿನಿ ನಮ್ಮ ಎಮ್ಮೆ" ಎಂದು ಬರೆದದ್ದು ನೋಡಿ ನಂದಿನಿ ತುಪ್ಪವು ಎಮ್ಮೆಯ ಹಾಲಿನಿಂದ ಮಾಡಿದ್ದು ಎಂಬ ನಿರ್ಧಾರಕ್ಕೆ ಜಿಗಿದು ಅದನ್ನು ತಿರುಪತಿ ಲಡ್ಡುಗಳಿಗೆ ಬೇಡ ಎಂದು ನಿರ್ಧರಿಸಿಬಿಟ್ಟರೇ?!  ತುಪ್ಪ ಅಂದರೆ ತುಪ್ಪವಪ್ಪ. ಎಮ್ಮೆ ತುಪ್ಪ ಅಂದರೆ ತಪ್ಪಾ? ಅದಕ್ಕೇನು ಕಡಿಮೆ ಕಷ್ಟ ಪಡಬೇಕಾ! ಅಯ್ಯೋ ಎಮ್ಮೆಯೇ ನೀನೇಕೆ ಹೀಗೆ ನೀರಿನಲ್ಲಿ ನಿದ್ರಿಸುತ್ತಿರುವೆ! ನಿನಗಾದ ಅನ್ಯಾಯಕ್ಕೆ ನಿನಗೆ ಕೋಪ ಬಾರದೆ ಎಂದು ನಾನು ಎಮ್ಮೆಯನ್ನು ಕೇಳಿದೆ. ಅದು ನನ್ನ ಕಡೆಗೆ ತಿರುಗಿ ನೋಡಿ ಮತ್ತೆ ಸುಮ್ಮನೆ ಕಣ್ಣು ಮುಚ್ಚಿ ನಿದ್ರೆಗೆ ಜಾರಿತು. ವಾಹ್, ಇದಲ್ಲವೇ ನಿರ್ಲಿಪ್ತತೆ! ಇದಲ್ಲವೇ ಸಹಿಷ್ಣುತೆ! ಇದಲ್ಲವೇ ತಾವರೆಯ ದಳದ ಮೇಲಿರುವ ನೀರಿನ ಹನಿಯ ನಿರಂಜನ ಭಾವ!


ನಿಜ ನಿಜ. ನಮ್ಮ ನಂದಿನಿ ನಮ್ಮ ಎಮ್ಮೆ. ನಮ್ಮ ಎಮ್ಮೆ.ನಮ್ಮ ಹೆಮ್ಮೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)