ನಮ್ಮ ಕನ್ನಡ ಮೇಷ್ಟ್ರು ಕೆ. ಎಸ್.

 ನ್ಯಾಷನಲ್ ಹೈಸ್ಕೂಲಿನಲ್ಲಿ ನಮಗೆ ಕನ್ನಡ ಪಾಠ ಮಾಡಿದ ಶ್ರೀ ಕೆ. ಶ್ರೀಕಂಠಯ್ಯ (ಮುಂದೆ ಅವರು ಪಿಎಚ್.ಡಿ. ಪಡೆದು ಡಾ. ಕೆ. ಶ್ರೀಕಂಠಯ್ಯ ಆದರು) ನಾನು ಸದಾ ನೆನೆಸುವ ಶಿಕ್ಷಕರಲ್ಲಿ ಒಬ್ಬರು. ದೆಹಲಿಗೆ ವರ್ಗವಾಗಿ ಹೋಗಿದ್ದ ನಮ್ಮ ತಂದೆ  ಬೆಂಗಳೂರಿಗೆ ಮರಳಿ ಬಂದಾಗ ಅವರು ನನ್ನನ್ನು ನ್ಯಾಷನಲ್ ಹೈಸ್ಕೂಲಿಗೆ ಸೇರಿಸಿದರು. ನಾನು ಸೇರಿದ್ದು ಒಂಬತ್ತನೇ ಕ್ಲಾಸಿಗೆ.  ಬಹಳ ಜನ ನನಗೆ ಸಂಸ್ಕೃತ ತೊಗೋ, ಎಂಟನೇ ಕ್ಲಾಸಿನಲ್ಲಿ ನೀನು ಸಂಸ್ಕೃತ ಕಲಿಯದೆ ಇದ್ದರೂ ಪರವಾಗಿಲ್ಲ, ಉತ್ತರವನ್ನು ಇಂಗ್ಲಿಷ್ ಅಥವಾ ಕನ್ನಡದಲ್ಲಿ ಬರೆಯಬೇಕು, ಅದು ಸ್ಕೋರಿಂಗ್ ಸಬ್ಜೆಕ್ಟ್ ಎಂದು ಸಲಹೆ ನೀಡಿದರೂ ನಾನು ಕನ್ನಡವನ್ನೇ ಆರಿಸಿಕೊಂಡೆ. ಇದಕ್ಕಾಗಿ ನಾನು ಇಂದಿಗೂ ಕೃತಜ್ಞನಾಗಿದ್ದೇನೆ.  ನಾನೇನಾದರೂ ಎಂಟನೇ ಕ್ಲಾಸಿನಲ್ಲಿದ್ದಾಗ ಬೆಂಗಳೂರಿಗೆ ವಾಪಸ್ ಬಂದಿದ್ದರೆ ಏನಾಗುತ್ತಿತ್ತೋ! 


ನಮ್ಮ ಕನ್ನಡ ಮೇಷ್ಟ್ರು ಕೆ.ಎಸ್. ಬಹಳ ಮುಂಗೋಪಿ ಎಂದೇ ಅವರು ಪ್ರಸಿದ್ಧರಾಗಿದ್ದರು.  ಅವರು ಪಿಎಚ್.ಡಿ. ಪದವಿಗಾಗಿ ಪ್ರಯತ್ನ ಪಡುತ್ತಿದ್ದುದರಿಂದ ಲೈಬ್ರರಿಯಲ್ಲಿ ಸಾಕಷ್ಟು ಸಮಯ ಕಳೆಯುತ್ತಿದ್ದರು. ಯಾವಾಗಲೂ ಟ್ರಿಮ್ಮಾಗಿ ಡ್ರೆಸ್ ಮಾಡಿಕೊಂಡು ಬರುತ್ತಿದ್ದರು. ಅವರ ಪಾಠ ಮಾಡುವ ಶೈಲಿ ಸ್ವಲ್ಪ ವಿಭಿನ್ನ.  ಯಾರಾದರೂ ಒಬ್ಬ ವಿದ್ಯಾರ್ಥಿಯನ್ನು ಎದ್ದುನಿಂತು ಪಾಠ ಓದಲು ಹೇಳುತ್ತಿದ್ದರು. ಉಳಿದವರು ಆಗ ತಮ್ಮ ಪುಸ್ತಕದ ಮೇಲೆ ಗಮನ ಹರಿಸಬೇಕು. ಪುಸ್ತಕ ತರದಿದ್ದರೆ ಕ್ಲಾಸಿನಿಂದ ಹೊರಗೆ ಕಳಿಸುತ್ತಿದ್ದರು. ಒಮ್ಮೆ ನಾನೂ ಹೊರಗೆ ನಿಲ್ಲಬೇಕಾಯಿತು. ನನ್ನನ್ನು ಕಂಡರೆ ಬಹಳ ಗೌರವ ಇಟ್ಟುಕೊಂಡಿದ್ದ ನಮ್ಮ ಕ್ಲಾಸ್ ಟೀಚರ್ ಬಿ.ಆರ್. ಚಂದ್ರದೇಖರಯ್ಯ ಅವರು ಕ್ಲಾಸಿನ ಮುಂದೆ ಆಗಲೇ ಬರಬೇಕೇ! ಏನಾಯಿತೆಂದು ವಿಚಾರಿಸಿದರು. ನಾನು ಮೈಯೆಲ್ಲಾ ಹಿಡಿ ಮಾಡಿಕೊಂಡು ವಿಷಯ ಹೇಳಿದೆ. ಅವರು ಏನೂ ಹೆಚ್ಚು ಹೇಳದೆ ಹೊರಟರು. ಅವರಿಗೆ ಕೆ.ಎಸ್. ಅವರ ಕಟ್ಟುನಿಟ್ಟು ಗೊತ್ತಿದ್ದ ವಿಷಯವೇ!


ಕೆ.ಎಸ್. ಅವರದ್ದು ಮಹಾ ಸ್ಟ್ರಿಕ್ಟ್ ಗ್ರೇಡಿಂಗ್ ಎಂದು ಎಲ್ಲ ಹುಡುಗರೂ ಮಾತಾಡಿಕೊಳ್ಳುತ್ತಿದ್ದರು. ನನಗೆ ಮೊದಲ ಟೆಸ್ಟಿನಲ್ಲಿ ಸಾಧಾರಣ ಅಂಕಗಳು ಬಂದವು. ನನಗೆ ಇದು ನುಂಗಲಾರದ ತುತ್ತು.  ನಾನು ಮಾಡಿದ ತಪ್ಪು ಎಂದರೆ ಕೇಳಿದ ಪ್ರಶ್ನೆಗೆ ಕ್ಲುಪ್ತವಾಗಿ ಉತ್ತರ ಬರೆದಿದ್ದು. ಕನ್ನಡದಲ್ಲಿ ಹೆಚ್ಚು ಬರೆದಷ್ಟೂ ಅಂಕಗಳು ಹೆಚ್ಚು ಎಂದು ನನಗೆ ಸಹಪಾಠಿಗಳು ಹೇಳಿದರು.  ನನ್ನ ತಪ್ಪನ್ನು ಸರಿಪಡಿಸಿಕೊಂಡಮೇಲೆ ನನ್ನ ಅಂಕಗಳು ಮೇಲೇರಿದವು. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 150ಕ್ಕೆ ನನಗೆ 125 ಅಂಕಗಳು ಬಂದವು. 


ಆಗ ಡೀಟೇಲ್ಡ್ ಮತ್ತು ನಾನ್ ಡೀಟೇಲ್ಡ್ ಎಂಬ ಎರಡು ಪಠ್ಯಗಳಿರುತ್ತಿದ್ದವು.  9ನೇ ಕ್ಲಾಸಿನಲ್ಲಿ ಗಾಂಧೀಜಿಯವರ ಜೀವನ ಚರಿತ್ರೆ ಮತ್ತು 10ನೇ ಕ್ಲಾಸಿನಲ್ಲಿ ವಿಶ್ವೇಶ್ವರಯ್ಯ ಅವರ ಜೀವನಚರಿತ್ರೆ ಪಾಠವಾಗಿದ್ದವು.  ಒಬ್ಬ ಹುಡುಗನನ್ನು ಓದಲು ಹೇಳಿ ಕೆ.ಎಸ್. ಕೇಳುತ್ತಾ ಕೂಡುತ್ತಿದ್ದರು. ಯಾವುದಾದರೂ ಸ್ವಾರಸ್ಯಕರ ಭಾಗ ಬಂದಾಗ  ಟೇಕ್ ಎನ್ನುತ್ತಿದ್ದರು. ಈ ಟೇಕ್ ಭಾಗಗಳನ್ನು ಮಾತ್ರ ಓದಿದರೆ ಪರೀಕ್ಷೆಯಲ್ಲಿ ಪಾಸ್ ಆಗಬಹುದು ಎಂಬುದು ಇದರ ತಾತ್ಪರ್ಯ. ಈ ನಾನ್ ಡೀಟೇಲ್ಡ್ ಪುಸ್ತಕಗಳಲ್ಲಿ ಬಹುಶಃ ಅರ್ಧಕ್ಕೂ ಕಡಿಮೆಗೆ "ಟೇಕ್' ಗೌರವ ಸಿಕ್ಕುತ್ತಿತ್ತು.  


ಕೆ.ಎಸ್. ಅವರ ನಿಜವಾದ ಪ್ರತಿಭೆ ಇದ್ದದ್ದು ಹಳೆಗನ್ನಡ ಸಾಹಿತ್ಯವನ್ನು ಓದಿ ತಿಳಿಸುವುದರಲ್ಲಿ.  ಅವರಿಗೆ ಹಳೆಗನ್ನಡ ಕಾವ್ಯವನ್ನು ಅರ್ಥಗರ್ಭಿತವಾಗಿ ಓದುವ ಕಲೆ ಕರಗತವಾಗಿತ್ತು. ಮೆಚ್ಚಿಕೊಳ್ಳಬೇಕಾದದ್ದೆಂದರೆ ಅವರು ಎಂದೂ ಅತಿ ಎನ್ನಿಸುವಷ್ಟು ವಿವರಣೆ ಕೊಡುತ್ತಿರಲಿಲ್ಲ. ಎಷ್ಟು ಬೇಕೋ ಅಷ್ಟು.  ನಡುವೆ ಪದಗಳ ಸ್ವಾರಸ್ಯವನ್ನು ವಿವರಿಸಿ ಸಮಾಸ, ಸಂಧಿ ಇವುಗಳನ್ನು  ವಿವರಿಸುತ್ತಿದ್ದರು. ಅವರ ಪಾಠ ಎಂದೂ ಡ್ರೈ ಎನ್ನಿಸುತ್ತಿರಲಿಲ್ಲ.  ನಡುವೆ ಏನಾದರೂ ಹಾಸ್ಯದ ಮಾತುಗಳನ್ನು ಸೇರಿಸುತ್ತಿದ್ದರು. ನಾವು 10ನೇ ಕ್ಲಾಸಿಗೆ ಬಂದಾಗ ಅವರು ಥೀಸಿಸ್ ಒಪ್ಪಿಸಿದರು ಎಂದು ತೋರುತ್ತದೆ. ಹೀಗಾಗಿ ಅವರು ಸ್ವಲ್ಪ ಹೆಚ್ಚು ನಿರಾಳವಾದರು.  ಅವರಿಗೆ ಕನ್ನಡ ಸಿನಿಮಾ ನೋಡುವ ಹುಮ್ಮಸ್ಸು ಇದ್ದುದನ್ನು ಆಗಲೇ ನಾವು ಗುರುತಿಸಿದ್ದು. ಕ್ಲಾಸಿನಲ್ಲಿ ಒಮ್ಮೊಮ್ಮೆ ಈ ಚಿತ್ರಗಳ ಬಗ್ಗೆ ಪ್ರಸ್ತಾಪ ಬರುತ್ತಿತ್ತು.  "ನೆನ್ನೆ ಅರ್ಜುನನಿಗೆ ಫಲುಗುಣ ಅಂತ ಯಾಕೆ ಹೆಸರು ಬಂತು ಅಂತ ಒಬ್ಬ ಕೇಳಿದ. ನಾನು ಅದನ್ನು ಹುಡುಕಿಕೊಂಡು ಬಂದರೆ ಆ ಹುಡುಗ ಎಲ್ಲಿ, ಎಲ್ಲೋ ಕಳ್ಳಾಕುಳ್ಳ ಚಿತ್ರ ನೋಡೋಕೆ ಹೊರಟುಹೋಗಿದ್ದ" ಎಂದು ಅವರು ಹೇಳಿದರೆ ಹುಡುಗರು ಹೋ ಎಂದು ಕೂಗುತ್ತಿದ್ದರು.  ಆಗ ಮೇಷ್ಟ್ರುಬಹಳ ತೆಳ್ಳನೆಯ ಹಾಸ್ಯ ಮಾಡಿದರೂ ಹುಡುಗರಿಗೆ ಅಷ್ಟೇ ಸಾಕಾಗುತ್ತಿತ್ತು.  ನಗುಬಂತಾ ಎಂದು ಕೇಳುವ ಅಗತ್ಯವೇ ಇರುತ್ತಿರಲಿಲ್ಲ.


ನನ್ನ ಬರವಣಿಗೆಯನ್ನು ಕೆ.ಎಸ್. ಮೆಚ್ಚಿಕೊಂಡಿದ್ದು ನನಗೆ ಪ್ರೋತ್ಸಾಹ ನೀಡಿತು. ನನ್ನ ಉತ್ತರಗಳಿಗೆ ಒಳ್ಳೆಯ ಅಂಕಗಳನ್ನು ಕೊಡುವುದಷ್ಟೇ ಅಲ್ಲ, ಒಂದೆರಡು ಸಲ ಅವನ್ನು ಎಲ್ಲರ ಮುಂದೆ ಓದಲು ಕೂಡಾ ಹೇಳಿದರು. ನಾನು ಪಿಯುಸಿ ಸೇರಿ ಮೊದಲ ವರ್ಷದಲ್ಲಿದ್ದಾಗ ಅವರಿಗೆ ಪಿಎಚ್.ಡಿ. ಸಿಕ್ಕಿತು. ಅವರಿಗೆ ನ್ಯಾಷನಲ್ ಕಾಲೇಜಿನಲ್ಲಿ ನಡೆದ ಒಂದು ಸನ್ಮಾನ ಸಮಾರಂಭ ಏರ್ಪಡಿಸಲಾಯಿತು. ಅದಕ್ಕೆ ನಾನೂ ಹೋಗಿದ್ದೆ.  ಕುಮಾರವ್ಯಾಸನ ಕಾವ್ಯದಲ್ಲಿ ಜನಜೀವನ ಚಿತ್ರಣ ಎಂಬುದನ್ನು ಕುರಿತು ಅವರ ಥೀಸಿಸ್.  ಅವತ್ತು ಇದೇ ವಿಷಯ ಕುರಿತು ಅವರು ಭಾಷಣ ಕೂಡಾ ಮಾಡಿದರು.


ಅವರು ಉತ್ತಮ ಬರಹಗಾರರಾಗಬಹುದಾಗಿತ್ತು. ಅದೇಕೋ ಅವರು ಹೆಚ್ಚು ಬರೆಯಲಿಲ್ಲ. ಬದಲಿಗೆ ಮಕ್ಕಳಿಗೆ ಸೂಕ್ತವಾದ ರಸಪ್ರಶ್ನೆಗಳಲ್ಲಿ ಹೆಚ್ಚು ಆಸಕ್ತಿ ವಹಿಸಿದರು. ಸುಧಾ ಪತ್ರಿಕೆಯಲ್ಲಿ ಮಕ್ಕಳ ಪುಟದಲ್ಲಿ ಅವರ ರಸಪ್ರಶ್ನೆಗಳು ಆಗಾಗ ಪ್ರಕಟವಾಗುತ್ತಿದ್ದವು. 


ಕೆ.ಎಸ್. ಅವರಿಂದ ನಾವು ಕಲಿತದ್ದು ಬಹಳ. ಅವರ ನೆನಪು ನನಗೆ ಚೈತನ್ಯ ನೀಡುತ್ತಿದೆ.


#ನೆನಪುಗಳು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)