ನೆನಪು - ಮಿಸೆಸ್ ಮಂಗಳಂ

 ನನಗೆ ಕಲಿಸಿದ ಅನೇಕ ಗುರುಗಳಲ್ಲಿ ಒಬ್ಬರು ಮಿಸೆಸ್ ಮಂಗಳಂ. ಆರನೇ ಕ್ಲಾಸಿನಲ್ಲಿ ನಮಗೆ ಜಾಗ್ರಫಿ ಮತ್ತು ಏಳನೇ ಕ್ಲಾಸಿನಲ್ಲಿ ಇಂಗ್ಲಿಷ್ ಹೇಳಿಕೊಟ್ಟರು. ಜಾಗ್ರಫಿಯನ್ನು ಬಹಳ ಸ್ವಾರಸ್ಯಕರವಾಗಿ ಪಾಠ ಮಾಡುತ್ತಿದ್ದರು. ಇಂಗ್ಲಿಷ್ ಪಾಠ ಮಾಡುವಾಗ ಅವರು ಆಕ್ಟಿವ್ ಮತ್ತು ಪ್ಯಾಸಿವ್ ವಾಯ್ಸ್ ನಮಗೆ ಹೇಳಿಕೊಟ್ಟ ರೀತಿಯನ್ನು ಎಂದೂ ಮರೆಯಲು ಸಾಧ್ಯವಿಲ್ಲ.   ಬಹಳ ಸ್ಟ್ರಿಕ್ಟ್ ಟೀಚರ್ ಎಂದು ಹೆಸರು ತೆಗೆದುಕೊಂಡಿದ್ದರು.  ನಾನು ಟೆಸ್ಟ್ ಒಂದರಲ್ಲಿ ಬರೆದ ಎಸ್ಸೆ ಅವರಿಗೆ ಇಷ್ಟವಾಗಿಬಿಟ್ಟಿತು.  ಅದನ್ನು ಇತರ ಟೀಚರರ ಮುಂದೆಯೂ ಹೊಗಳಿ ನನ್ನಲ್ಲಿ ಆತ್ಮವಿಶ್ವಾಸ ತುಂಬಿದರು. ದೆಹಲಿಯ ಶಾಲೆಯಾದ್ದರಿಂದ ನಾವು ವಿದ್ಯಾರ್ಥಿಗಳು ಪರಸ್ಪರ ಹಿಂದಿಯಲ್ಲಿ ಮಾತಾಡುವುದು ರೂಢಿಯಾಗಿತ್ತು.  ನಮಗೆ ಇಂಗ್ಲಿಷ್ ಭಾಷೆಯಲ್ಲಿ ಮಾತಾಡಲು  ಮಿಸೆಸ್ ಮಂಗಳಂ ನಾನಾ ಬಗೆಯ ಪ್ರೇರಣೆ ಕೊಡುತ್ತಿದ್ದರು. "ತಪ್ಪು ಮಾತಾಡಿದರೂ ಪರವಾಗಿಲ್ಲ, ನಾನು ತಿದ್ದುತ್ತೇನೆ" ಎಂದು ತಿದ್ದುತ್ತಿದ್ದರು. ಇಂಗ್ಲಿಷ್ನಲ್ಲಿ ಮಾತಾಡಿದರೆ ಪಾಯಿಂಟ್ಸ್ ಕೊಡುತ್ತಿದ್ದರು. ಅವರ ಕ್ಲಾಸಿನಲ್ಲಿ ಹಿಂದಿಯಲ್ಲಿ ಮಾತಾಡಿದರೆ ನೆಗೆಟಿವ್ ಪಾಯಿಂಟ್ಸ್ ಕೊಡುತ್ತಿದ್ದರು. ನನಗೆ ಮತ್ತು ಉಷಾ ಎನ್ನುವ ಸಹ ವಿದ್ಯಾರ್ಥಿನಿಗೆ ಕಾಂಪಿಟಿಷನ್ ಇರುತ್ತಿತ್ತು! ಒಮ್ಮೆ ನನಗೆ ತಿಳಿಯದಂತೆ ನಾನು ಹಿಂದಿಯಲ್ಲಿ ಮಾತಾಡಿದ್ದಕ್ಕೆ ನೆಗೆಟಿವ್ ಪಾಯಿಂಟ್ಸ್ ಕೊಟ್ಟರು. ನಾನು ಪ್ರತಿಭಟಿಸಲು ಹೋಗಿ ಮತ್ತೆ ಹಿಂದಿಯಲ್ಲಿ ಮಾತಾಡಿದಾಗ ಮತ್ತೆ ನೆಗೆಟಿವ್ ಪಾಯಿಂಟ್ಸ್ ಅಲ್ಲದೆ ಮಿಸೆಸ್ ಮಂಗಳಂ ಅವರ ನಗು.  ಇಂಗ್ಲಿಷ್ ಪರೀಕ್ಷೆಯಲ್ಲಿ ವಾಕ್ಯವನ್ನು ಕಲಸು ಮೇಲೋಗರ ಮಾಡಿ ಅದನ್ನು ಸರಿಪಡಿಸುವ ಪ್ರಶ್ನೆ ಇರುತ್ತಿತ್ತು.  ಒಮ್ಮೆ several of  he marrying thought times her of ಎಂಬ ಪದಪುಂಜವನ್ನು ಕೊಟ್ಟರು. ಇದನ್ನು ನಾನು he thought of marrying her several times ಎಂದು ಸರಿಪಡಿಸಿದ್ದಕ್ಕೆ ಮಿಸೆಸ್ ಮಂಗಳಂ ತಪ್ಪು ಗುರುತು ಹಾಕಿದ್ದರು. ನಾನು ಇದು ಸರಿಯಾಗೇ ಇದೆಯಲ್ಲ  ಎಂದು ವಾಡಿಸಿದೆ. ನನ್ನ ಕಿವಿ ಹಿಂಡಿ he thought several times of marrying her ಎಂದು ತಿದ್ದಿದರು! ನಾನು ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ "ಯಾಕೆ ಮಿಸ್, ಒಬ್ಬಳನ್ನೇ ಹಲವು ಸಲ ಮದುವೆಯಾಗಬಹುದಲ್ಲ?" ಎಂದು ವಾದಿಸಲು ಹೋಗಿ ಮತ್ತೆ ಕಿವಿ ಹಿಂಡಿಸಿಕೊಂಡೆ.


ಆಗಲೇ ಸೋಡಾ ಗಾಜು ಹಾಕುತ್ತಿದ್ದ ಮಿಸೆಸ್ ಮಂಗಳಂ ಅವರ ದೃಷ್ಟಿ ಕ್ರಮೇಣ ಕ್ಷೀಣಿಸಿ ಅವರಿಗೆ ಕಣ್ಣು ಕಾಣಿಸುತ್ತಿಲ್ಲ ಎಂದು ಸುಮಾರು ಇಪ್ಪತ್ತು ವರ್ಷಗಳ ಹಿಂದೆಯೇ ತಿಳಿಯಿತು. ಅವರು ಈಗ ಇದ್ದಾರೋ ಇಲ್ಲವೋ ತಿಳಿಯದು.  ಅವರ ನೆನಪು ಇಂದಿಗೂ ಚೇತೋಹಾರಿ. ಅವರಿಗೆ ಗೌರವಪೂರ್ವಕ ನಮನ.


#ನೆನಪುಗಳು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)