ಟೆಲಿಫೋನ್ ಬೂತ್ ಸ್ವಗತ
ಹಿಂದೊಮ್ಮೆ
ಹೊರಗೆ ಕಾಯುತ್ತಿದ್ದರು ಜನ ತಮ್ಮ ಸರದಿಗೆ
ನೂರೆಂಟು ಕಾರಣಗಳಿದ್ದವು ಒಳಗೆ ಬಂದವರಿಗೆ.
ಅವಸರವಿಲ್ಲದೆ ಪ್ರೇಮಾಲಾಪದಲ್ಲಿ ತೊಡಗಿದ ಯುವಕ
ಹೊರಗೆ ನಿಂತವರ ಹಣೆಯಲ್ಲಿ ಕಾಣುತ್ತಿದೆ ತವಕ.
ತಡವಾಗಿ ಬರುತ್ತೇನೆ ಕಚೇರಿಯಲ್ಲಿ ಕೆಲಸ ಹೆಚ್ಚಿದೆ
ಎಂದು ಗೆಳತಿಯ ಜೊತೆ ಹೊರಟವನದು ಕೆಚ್ಚೆದೆ.
ನಿಮ್ಮ ಹೆಂಡತಿಯನ್ನು ಅಪಹರಿಸಿದ್ದೇನೆ, ಬ್ರಿಜ್ ಬಳಿಗೆ
ತಂದರೆ ಐದು ಸಾವಿರ ಪೌಂಡ್ ಬಿಡುಗಡೆ ನಿಮ್ಮವಳಿಗೆ
ಚೌಕಾಸಿ ಇಲ್ಲ! ತಡವಾದರೆ ಮಧ್ಯರಾತ್ರಿಗೆ ಒಂದೇ ಘಳಿಗೆ
ಗುಂಡು ಉಗುಳುವುದು ನನ್ನ ಬಂದೂಕಿನ ನಳಿಗೆ!
ನಾನೇ ಇಟ್ಟುಕೊಳ್ಳಬೇಕೇ?! ಏನಾಗಿದೆ ನಿಮ್ಮ ತಲೆಗೆ!
(ದೊಡ್ಡ ಮೀನು ಬಿತ್ತೆಂದುಕೊಂಡಿದ್ದೆ ಬಲೆಗೆ!
ಇದೊಳ್ಳೆ ಸಿಕ್ಕಿಕೊಂಡೆ ಶಾರ್ಕ್ ಹಲ್ಗೆ)
ಐನೂರು ಪೌಂಡ್ ಆದೀತೆ? ಹೋಗಲಿ ಐವತ್ತು?
ಏನೆಂದಿರಿ ನಾನೇ ಕೊಡಬೇಕೆ ಮತ್ತೂ!
ಅಮ್ಮಾ ನಾನಿರಲಾರೆ ಇವನ ಜೊತೆ ಇನ್ನು.
ತಪ್ಪು ಮಾಡಿದೆ ಮೀರಿ ನಿನ್ನ ಮಾತನ್ನು.
ಪ್ರತಿದಿನವೂ ಕುಡಿದು ಬರುತ್ತಾನೆ ಮನೆಗೆ
ಕೇಳಿದರೆ ಕೋಪ, ವಾಗ್ವಾದ, ಕೊನೆಗೆ
ನಾಚಿಕೆಗೆಟ್ಟವನು ಕೆನ್ನೆಗೆ ಹೊಡೆದ ನನಗೆ.
ನಾನು ನಗುತ್ತಿದ್ದೆ ಅಳುತ್ತಿದ್ದೆ ಇದನ್ನೆಲ್ಲ ಕೇಳುತ್ತಾ.
ಅದೆಷ್ಟು ರಹಸ್ಯಗಳು ನನ್ನಲ್ಲಿ ಅಡಗಿವೆ ಗೊತ್ತಾ!
ಎಷ್ಟು ಜನ ಮರೆತು ಹೋಗುತ್ತಿದ್ದರು ತಮ್ಮ ಕೊಡೆ!
ಈಗ ಯಾರೂ ಸುಳಿಯುವುದಿಲ್ಲ ನನ್ನ ಕಡೆ.
ಎಲ್ಲರ ಕೈಯಲ್ಲೂ ಈಗ ಸಂಚಾರಿ ಫೋನು
ನಿರರ್ಥಕವಾಗಿ ನಿಂತಿದ್ದೇನೆ ನಾನು.
ಯಾರಿಗೋ ಹೊಳೆಯಿತು ಹೊಸ ಐಡಿಯಾ.
ನನ್ನೊಳಗೆ ಕಟ್ಟಿದರು ಒಂದು ಗ್ರಂಥಾಲಯ.
ಆಗಾಗ ಮಾತಾಡುತ್ತೇನೆ ಪುಸ್ತಕಗಳ ಜೊತೆಗೆ
ಮತ್ತು ಹೂಂಗುಡುತ್ತೇನೆ ಅವರ ನಿರರ್ಥ-ಕತೆಗೆ.
ಸಿ. ಪಿ. ರವಿಕುಮಾರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ