ಪರಿಚಿತೆ (ಕಥೆ)

 ‘ಸಂಯುಕ್ತ ಕರ್ನಾಟಕ’ ‘ಸಾಪ್ತಾಹಿಕ ಸೌರಭ’ದಲ್ಲಿ 17 ಆಗಸ್ಟ್‌ 2025 ಪ್ರಕಟವಾದ ಕಥೆ

( ಸಿ. ಪಿ. ರವಿಕುಮಾರ್)



https://epaper.samyukthakarnataka.com/editionname/Bangalore/SMYK_BANG/page/9/article/SMYK_BANG_20250817_09_6


ಅವಳು ಮೇಕಪ್ ಮಾಡಿಕೊಳ್ಳದೆ ಮನೆಯಿಂದ ಹೊರಟುನಿಂತಳು. ಇದು ಬಹಳ ದಿಟ್ಟ ನಿರ್ಧಾರವಾಯಿತೇನೋ ಎಂಬ ಅಳುಕು ಮನಸ್ಸನ್ನು ಕಾಡಿತು. ಬಾಗಿಲ ಹತ್ತಿರ ಇದ್ದ ಚಪ್ಪಲಿ ಕಪಾಟಿನಲ್ಲಿ ಇಣುಕಿದಳು. ಹೈಹೀಲ್ಡ್ ಶೂಗಳನ್ನು ಬಿಟ್ಟು ಹಗುರವಾದ ಚಪ್ಪಲಿಯನ್ನು ಆರಿಸಿಕೊಂಡು ಬಾಗಿಲು ತೆರೆದು ಹೊರಟಾಗ ಎದುರು ದಿಕ್ಕಿನಿಂದ ಬಂದವಳನ್ನು ಕಂಡು ಅವಾಕ್ಕಾಗಿ ನಿಂತಳು.


ಕೊನೆಗೂ ಸಾವರಿಸಿಕೊಂಡು ‘ಓಹ್! ನೀನು!’ ಎಂದು ಕರೆದಳು. ಅವಳ ಧ್ವನಿಯಲ್ಲಿ ಸಂಭ್ರಮವಿತ್ತು. ಬಂದವಳು ನಕ್ಕಳು. ಅವಳ ನಗುವಿನಲ್ಲೂ ಸಂಭ್ರಮವಿತ್ತು.


ಇವಳು ಬಂದವಳನ್ನು ಆಲಂಗಿಸಿಕೊಂಡು ಒಳಗೆ ಕರೆದೊಯ್ದಳು. ಒಳಗೆ ಬಂದ ಅತಿಥಿಯೇ ಇವಳನ್ನು ಒಳಗೆ ಕರೆದುಕೊಂಡು ಹೋದಂತೆ ಇವಳಿಗೆ ಭಾಸವಾಯಿತು. ತನ್ನ ಮನೆಯ ಪರಿಚಯ ಅವಳಿಗೆ ಇಷ್ಟು ಚೆನ್ನಾಗಿರುವುದು ಹೇಗೆಂದು ಇವಳು ಯೋಚಿಸಿದಳು.


‘ಇಲ್ಲಿ ಕೂತುಕೋ!’ ಎಂದು ಇವಳು ಹೇಳಿದಾಗ ಅವಳೂ ಅದೇ ಮಾತನ್ನು ಹೇಳಿದ್ದು ಕೇಳಿ ಇವಳಿಗೆ ನಗು ಬಂತು. ಇಬ್ಬರೂ ನಕ್ಕರು.


‘ನಿನ್ನ ಸೀರೆ ಚೆನ್ನಾಗಿದೆ. ನಾವಿಬ್ಬರೂ ಅದನ್ನು ಒಂದೇ ಅಂಗಡಿಯಿಂದ ಖರೀದಿ ಮಾಡಿರಬೇಕು. ಲಾವಣ್ಯ ಸಿಲ್ಕ್ಸ್ ತಾನೇ?’


ಅವಳು ಹೌದೆಂದು ತಲೆಯಾಡಿಸಿದಳು.


‘ತಾಳು, ನಿನಗೆ ಬಾಯಾರಿರಬಹುದು. ಹಸಿವೂ ಆಗಿರಬೇಕು. ವೇಟ್ ಹೆಚ್ಚಾದೀತು ಅಂತ ನೀನು ಸರಿಯಾಗಿ ತಿನ್ನುವುದಿಲ್ಲ ಅಂತ ಕಾಣುತ್ತೆ’ ಎಂದು ಇವಳು ಅಡುಗೆಮನೆಗೆ ನುಗ್ಗಿ ಬೆಳಗ್ಗೆ ಮಾಡಿ ತಿನ್ನದೆ ಬಾಣಲೆಯಲ್ಲೇ ಉಳಿದಿದ್ದ ಉಪ್ಪಿಟ್ಟನ್ನು ಬಿಸಿ ಮಾಡಿ ತಟ್ಟೆಗೆ ಹಾಕಿ ತಂದಳು. ಕಾಫಿಗಾಗಿ ಹಾಲನ್ನು ಬಿಸಿ ಮಾಡಲು ಒಲೆಯ ಮೇಲಿಟ್ಟಳು.


‘ನೀನೂ ತಿಂದರೆ ಮಾತ್ರ ನಾನು ತಿನ್ನುವುದು’ ಎಂದು ಅವಳು ಹುಸಿ ಕೋಪ ತೋರಿದಳು. ಇವಳೂ ಉಪ್ಪಿಟ್ಟು ತಿಂದಳು. ಬಹಳ ದಿನಗಳ ನಂತರ ಉಪ್ಪಿಟ್ಟಿನ ರುಚಿ ಹತ್ತಿತು.


‘ಹಾಲು ಕುದ್ದು ರೆಡಿಯಾಗಿರಬಹುದು’ ಎಂದು ಇವಳು ಅಡುಗೆಮನೆಗೆ ಹೋದಳು. ಇನ್‌ಸ್ಟಂಟ್ ಕಾಫಿಯನ್ನು ಚಮಚದಿಂದ ಹಾಕಿ ಕಲಕುವಾಗ ‘ಫಿಲ್ಟರ್ ಇದೆ, ಆದರೆ ನನಗೊಬ್ಬಳಿಗೇ ಫಿಲ್ಟರ್ ಕಾಫಿ ಮಾಡಲು ಬೋರು’ ಎಂದು ನಕ್ಕಳು.


‘ನಿನಗೆ ಫಿಲ್ಟರ್ ಕಾಫಿ ಎಷ್ಟು ಇಷ್ಟ. ಮತ್ಯಾಕೆ ಚೌಕಾಸಿ ಮಾಡೋದು?’ ಎಂದು ಅವಳು ಬೈದಳು. ‘ಸಕ್ಕರೆ ಹಾಕು ಮಹರಾಯಿತಿ! ವೇಟ್ ಹೆಚ್ಚಾಗುತ್ತೆ ಅಂತ ನೀನು ಸಕ್ಕರೆ ಬಿಟ್ಟಿದ್ದೀಯ! ಅಷ್ಟು ಒಳ್ಳೆ ಉಪ್ಪಿಟ್ಟು ತಿಂದ ಮೇಲೆ ಸಕ್ಕರೆ ಹಾಕಿದ ಕಾಫಿ ಇಲ್ಲದಿದ್ದರೆ ಹೇಗೆ?’


ಇಬ್ಬರೂ ಕಾಫಿ ಕುಡಿದರು. ಇವಳು ಅವಳ ಕಡೆ ನೋಡಿದಳು. ತಾವಿಬ್ಬರೂ ಒಂದು ಕಾಲದಲ್ಲಿ ಎಷ್ಟು ಅನ್ಯೋನ್ಯವಾಗಿದ್ದೆವು! ಒಟ್ಟಿಗೆ ಬೆಳೆದೆವು. ಬಿಂದಾಸ್ ಎನ್ನುವ ಹಾಗಿದ್ದೆವು. ಯಾವಾಗ ನಾವು ಹದಿಹರೆಯ ಮುಟ್ಟಿದೆವೋ ಅಮ್ಮ, ಅಪ್ಪ, ಟೀಚರ್, ದೊಡ್ಡಮ್ಮ, ಚಿಕ್ಕಮ್ಮ ಎಲ್ಲರೂ ಉಪದೇಶ ಕೊಟ್ಟರು. ‘ಗಂಡುಬೀರಿಯರ ಹಾಗೆ ಆಡುವುದು ನಿಲ್ಲಿಸಿ. ಸೀರೆ ಉಟ್ಟುಕೊಳ್ಳಿ. ಗಂಭೀರವಾಗಿ ಇರುವುದು ಕಲಿಯಿರಿ. ಸಂಗೀತ ಕಲಿಯಿರಿ. ಅಡುಗೆ ಮಾಡೋದು ಕಲಿತುಕೊಳ್ಳಿ...’ ಈ ಉಪದೇಶಗಳಿಗೆ ಕೊನೆ ಇಲ್ಲ, ಮೊದಲಿಲ್ಲ. ಅದನ್ನೆಲ್ಲ ನೆನೆಸಿಕೊಂಡು ಇಬ್ಬರೂ ನಕ್ಕರು.


‘ನೀನು ಈಗ ಏನು ಮಾಡ್ತಾ ಇದ್ದೀಯ?’ ಎಂದು ಇವಳು ಕೇಳಿದಳು. ಅವಳ ಉತ್ತರ ಕೇಳಿ ‘ಓಹ್! ಕಾಕತಾಳೀಯ ಅಂದರೆ ಇದೇ. ನಾನೂ ಒಂದು ಸಾಫ್ಟ್‌ವೇರ್ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದೀನಿ!’ ಎಂದು ಉದ್ಗರಿಸಿದಳು. ಇಬ್ಬರೂ ತಮ್ಮ ಕೆಲಸದ ಬಗ್ಗೆ ಮಾತಾಡಿಕೊಂಡರು.


‘ಮದುವೆ?’ ಎಂದು ಇವಳು ಅನುಮಾನಿಸಿದಳು.


‘ಇಲ್ಲ. ಆಗಬೇಕು ಅಂತ ಅನ್ನಿಸಲೇ ಇಲ್ಲ.’


‘ನನಗೂ ಅಷ್ಟೇ. ಆದರೆ ಎಲ್ಲರಿಗೂ ಜವಾಬು ಹೇಳುವುದು ನನಗೆ ಕಷ್ಟ ಆಗುತ್ತೆ.’


‘ಅಯ್ಯೋ! ಅದೊಂದು ದೊಡ್ಡ ಪ್ರಾಬ್ಲಂ. ಸಿಕ್ಕವರೆಲ್ಲ ಅಲ್ಲಿ ಗಂಡಿದೆ, ಇಲ್ಲಿ ಗಂಡಿದೆ ಅಂತ ವಾಟ್ಸಾಪ್ ಮೆಸೇಜ್ ಕಳಿಸೋದು. ಫೋಟೋ ಕಳಿಸಿ ಜೋಡಿ ಚೆನ್ನಾಗಿದೆ ಅನ್ನೋದು. ಜಾತಕ ಕಳಿಸಿ ವಿಚಾರಿಸಿ ಅನ್ನೋದು.’


‘ಹೂಂ! ಇನ್ನು ಅಮ್ಮ ಅಪ್ಪ...’


‘ಮುಂಚೆ ತುಂಬಾ ಒತ್ತಾಯ ಮಾಡುತ್ತಿದ್ದರು. ಈಗ ಸ್ವಲ್ಪ ತಣ್ಣಗಾಗಿದ್ದಾರೆ. ನಾನು ಕೆಲಸದಲ್ಲಿ ಮುಂದೆ ಬಂದು ನನಗೆ ಪ್ರೋಮೋಷನ್ ಸಿಕ್ಕ ಮೇಲೆ ಈ ವಿಚಾರಣೆಗಳು ಸ್ವಲ್ಪ ತಗ್ಗಿವೆ.’


‘ಹೌದು, ಇದು ನನ್ನ ಅನುಭವ ಕೂಡಾ.’


ಅವರಿಬ್ಬರೂ ತಮ್ಮ ಅನುಭವಗಳು ಎಷ್ಟು ಸಮಾನವಾಗಿವೆ ಎಂದು ಆಶ್ಚರ್ಯದಿಂದ ನೋಡುತ್ತಿದ್ದರು. ಅವರು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ತಮ್ಮ ರಹಸ್ಯಗಳನ್ನು ಹೇಳಿಕೊಂಡು ನಕ್ಕರು.


ಅವಳ ಮೊಬೈಲ್ ಫೋನು ಎಚ್ಚರಿಸಿತು. ಅವಳು ಮನಸ್ಸಿಲ್ಲದೆ ಅದರ ಕಡೆ ನೋಡಿದಳು. ಅವಳ ಟೀಮ್ ಮೆಂಬರ್ ಒಬ್ಬ ಫೋನ್ ಮಾಡಿದ್ದ. ಅವಳು ‘ಒಂದೇ ನಿಮಿಷ!’ ಎಂದು ಮೇಲೆದ್ದು ರೂಮಿಗೆ ಹೋದಳು.


‘ಮೇಡಂ, ನೀವು ಎಷ್ಟು ಹೊತ್ತಿಗೆ ಬರ್ತೀರಾ? ಮೀಟಿಂಗ್ ಇದೆಯಲ್ಲ? ಮುಂದಿನ ವಾರ ನಮ್ಮ ಪ್ರೆಸೆಂಟೇಷನ್ ಇದೆ, ಮರೆತಿರಾ?’


‘ಹೌದಲ್ಲ! ನಾನು ಇವತ್ತು ಮನೆಯಿಂದಲೇ ತೊಗೊತೀನಿ. ಲಿಂಕ್ ಕಳಿಸು!’ ಎಂದು ಉತ್ತರಿಸಿ ಲಿವಿಂಗ್ ರೂಮಿಗೆ ಮರಳಿದಳು. ಅವಳು ಎಲ್ಲೋ ಕಾಣಲಿಲ್ಲವಲ್ಲ! ಅವಳಿಗೆ ವಿದಾಯ ಹೇಳಿ ಬೀಳ್ಕೊಟ್ಟು ನಂತರ ಕಾನ್ಫರೆನ್ಸ್ ಕಾಲ್ ತೊಗೊಳ್ಳೋದು ಎಂದು ಇವಳು ಎಲ್ಲಾ ಕಡೆ ಹುಡುಕಿದಳು. ಅವಳು ಎಲ್ಲೂ ಕಾಣಲಿಲ್ಲ.


ಆತಂಕದಿಂದಲೇ ಇವಳು ಕಂಪ್ಯೂಟರ್ ಮುಂದೆ ಕೂತಳು. ಕಂಪ್ಯೂಟರ್ ತೆರೆಯ ಮೇಲೆ ನೋಡಿದಾಗ ಅವಳನ್ನು ಅದರೊಳಗೆ ಕಂಡು ಇವಳು ಬೆಚ್ಚಿದಳು.


ಲ್ಯಾಪ್‌ಟಾಪ್ ಸಿದ್ಧವಾಗಿ ಬೆಳಕು ಬೀರಿದಾಗ ಅವಳು ಎಲ್ಲೋ ಕರಗಿಹೋದಳು.


(ಸೇಂಟ್ ಲೂಸಿಯಾ ದ್ವೀಪರಾಷ್ಟ್ರದ, ನೊಬೆಲ್ ಪ್ರಶಸ್ತಿ ಪುರಸ್ಕೃತ ಕವಿ, ನಾಟಕಕಾರ ಸರ್ ಡೆರೆಕ್ ಆಲ್ಟನ್ ವಾಲ್ಕಾಟ್ ಅವರ ಕವಿತೆಯನ್ನು ಆಧರಿಸಿದ್ದು)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಕತ್ತಲೆ ಬೆಳಕು - ಶ್ರೀರಂಗರ ನಾಟಕ