ವಿಠ್ಠಲ್ ಪದಕೋಶ



ಬೆಳೆಸಿಕೊಳ್ಳಲು, ವಿಕಸಿಸಿಕೊಳ್ಳಲು, ಹಿಗ್ಗಿಸಲು

ತನ್ನ ಕನ್ನಡ ಪದಗಳ ಭಂಡಾರ, ಖಜಾನೆ, ಕೋಶ,

ಕೊಂಡನು, ಖರೀದಿಸಿದನು, ಕ್ರಯಕ್ಕೆ ತಂದನು ವಿಠಲ 

ಕನ್ನಡ ಕನ್ನಡ ಸಮಾನಾರ್ಥಕ ಪದಕೋಶ.


ಇದಾದ ಕೆಲ ಕಾಲದಲ್ಲಿ, ನಂತರ, ತರುವಾಯ, ಅನಂತರ,

ಇರಲೇ ಇಲ್ಲ ಅವನಿಗೆ ಪದಗಳಿಗೆ ದುರ್ಭಿಕ್ಷ, ಕ್ಷಾಮ, ಬರ 

ಮನಸ್ಸಿಗೆ ತೋರಿದ್ದನ್ನು, ಅನ್ನಿಸಿದ್ದನ್ನು, ತೋಚಿದ್ದನ್ನು

ಪ್ರಕಟಿಸಲು, ಆಡಲು, ಪ್ರದರ್ಶಿಸಲು ಪದಗಳ ತತ್ವಾರ


ಇದೆಲ್ಲಾ ಸರಿಯೇ, ಒಳ್ಳೆಯದೇ, ಚೆನ್ನವೇ, ಲಾಯಕ್ಕಾದುದೇ,

ಮಂಗಳವೇ, ಮೆಚ್ಚುವಂಥದ್ದೇ, ಸ್ತುತ್ಯರ್ಹವೇ, ಆದರೆ

ಅವನ ಗೆಳೆಯರಿಗೆ ಪಾಪ ಬೋರಾಗತೊಡಗಿತು, ಬೈರಿಗೆಯಾಯಿತು,

ಕೊರೆತ ಎನ್ನಿಸತೊಡಗಿತು ವಿಠಲನನ್ನು ಕಂಡರೆ 


ನಿಮಗೆ ಇದು ಆಗಲಿ ಪಾಠ, ಒಂದು ನಿದರ್ಶನ, ಒಂದು ಕಲಿಕೆ,

ಒಂದು ಉದಾಹರಣೆ, ಒಂದು ಜೀವನ ಶಿಕ್ಷಣ:

ಕಲಿತದ್ದನ್ನು, ಪಡೆದ ಶಿಕ್ಷಣವನ್ನು, ಗಳಿಸಿದ ಪಾಂಡಿತ್ಯವನ್ನು 

ಮೆರೆಸಬಹುದು, ತೋರಬಹುದು, ಮಾಡಬಹುದು ಪ್ರದರ್ಶನ 


ಆದರೆ ದಯವಿಟ್ಟು, ಕೃಪೆ ಮಾಡಿ, ನಿಮ್ಮ ದಮ್ಮಯ್ಯ, ಕೇಳಿಸಿಕೊಳ್ಳಿ

ನನ್ನದೊಂದು ಸಲಹೆ, ಕಿವಿಮಾತು, ಬುದ್ಧಿವಾದ, ಹಿತವಚನ:

ಎಂದೂ ಮರೆಯದಿರಿ ಸಂಕ್ಷಿಪ್ತ, ಸಾರಾಂಶ, ರುಚಿಗೆ ತಕ್ಕಷ್ಟು,

ಹೃಸ್ವ, ಅಡಕ, ಸಂಗ್ರಹ ಎಂಬ ಪದಗಳನ್ನ.


....

Brian Bilston  ಅವರ Roger's Thesaurus ಎಂಬ ಕವಿತೆಯ ಕನ್ನಡ ರೂಪ,  ಭಾವಾನುವಾದ, ರೂಪಾಂತರ.

ಇದನ್ನು ಮಾಡಿದ್ದು ನಾನು, ನಿಮ್ಮ ವಿಶ್ವಾಸಿ, ನಿಮ್ಮವ, ತಮ್ಮವ, ರವಿಕುಮಾರ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಕತ್ತಲೆ ಬೆಳಕು - ಶ್ರೀರಂಗರ ನಾಟಕ