ಪೋಸ್ಟ್‌ಗಳು

ಲಾಕ್ ಡೌನ್ ಉದಯ

ಇಮೇಜ್
ಬೆಳ್ಳಂಬೆಳಗ್ಗೆ ಮಳೆ ಬಲು ಜೋರು ಏಳಲು ಯಾತಕ್ಕೋ ಬೇಜಾರು ಮಲಗುವೆನಮ್ಮಾ ಬೆಚ್ಚಗೆ ಹೊದ್ದು ಮಾಡಲಾದರೂ ಏನಿದೆ ಎದ್ದು ಲಾಕ್ ಡೌನ್ ಅಂತ ಮುಚ್ಚಿದೆ ಸ್ಕೂಲು ಈಗ ಯಾವ ಎಕ್ಸಾಮ್ ಇದೆ ಹೇಳು ದೇವರು ವರ ಕೊಟ್ಟರೂ ಪೂಜಾರಿ ಕೊಡದ ಹಾಗೆ ನೀನೇತಕೆ, ವೈರಿ, ಏಳೋ ಏಳೋ ಏಳೋ ಬೇಗ ರಿಕಾರ್ಡು ಹಚ್ಚುವೆ ಒಂದೇ ರಾಗ! ಏನು ಮಾಡಲಿದೆ ನಾ ಮೇಲೆದ್ದು ಹೊರಗಡೆ ಹೋದರೆ ಕೊಡುವರು ಗುದ್ದು ಬೋರಾಗಿದೆ ಮನೆಯೊಳಗೇ ಇದ್ದು ಕೋವಿಡ್ ಕರೋನಾ ಎರಡರದೇ ಸದ್ದು ಸರಿಯೇ ಕಣೋ ಹೇಳುವುದೂ ನೀನು ಬೆಚ್ಚಗೆ ಹೊದ್ದು ಮಲಗುವೆ ನಾನೂ ಅಪ್ಪನೇ ಮಾಡಲಿ ಇಂದಿನ ತಿಂಡಿ ಮಲಗಲು ಸೂಚಿಸುತಿದೆ ಈ ಥಂಡಿ ಅಯ್ಯೋ ಬೇಡಮ್ಮಾ ಇದೋ ಎದ್ದೆ ಅಪ್ಪನ ಉಪ್ಪಿಟ್ ಹಸಿಹಸಿ, ಮುದ್ದೆ ನೀನೇ ಮಾಡು ಪೂರಿಸಾಗು ರೆಡಿಯಾದಾಗ ನನ್ನನು ಕೂಗು ಅಷ್ಟರವರೆಗೂ ಮಲಗುವೆ ನಾನು ಸವಿಯುತ್ತಾ ನಿದ್ದೆಯ ಜಾಮೂನು - ಸಿ ಪಿ ರವಿಕುಮಾರ್, ಏಪ್ರಿಲ್ ೨೪, ೨೦೨೦

ಸ್ಮರಣೆಯೊಂದೇ ಸಾಲದೇ?

ಇಮೇಜ್
ಗೆಳೆಯ ಸುಧೀಂದ್ರ ಕನ್ನಡ ಲೇಖಕರ ನೆನಪುಗಳನ್ನು ವಿಡಿಯೋ ಮೂಲಕ ಹಂಚಿಕೊಳ್ಳುತ್ತಿದ್ದಾನೆ. ಇದು ಬಹಳ ಸಂತೋಷದ ಸಂಗತಿ.  ಅವನು ನಿರಂಜನ ಮತ್ತು ಅನುಪಮಾ ಅವರನ್ನು ಕುರಿತು ಮಾತಾಡಿದ್ದು ಸ್ವಾರಸ್ಯಕರವಾಗಿದೆ. ಕೆಲವು ಖಾಸಗೀ ನೆನಪುಗಳನ್ನು ದಾಖಲಿಸುವ ಪ್ರಯತ್ನ ಇಲ್ಲಿದೆ. ನಿರಂಜನ ಮತ್ತು ಅನುಪಮಾ  ಅವರ ಸ್ಮರಣೆ ಎಂದಿಗೂ ಚೇತೋಹಾರಿ. ನಮ್ಮ ತಂದೆಗೆ ನಿರಂಜನ ಹತ್ತಿರದ ಗೆಳೆಯರು. ಒಂದು ಕಾಲದಲ್ಲಿ ಇಬ್ಬರೂ ಕನ್ನಡ ಪತ್ರಿಕೆಗಳಿಗೆ ಬರೆದವರು. ಆದರೆ ನನ್ನ ತಂದೆಯವರ ಒಲವು ಇಂಗ್ಲಿಷ್ ಬರವಣಿಗೆಯಲ್ಲಿ ಹೆಚ್ಚಿತ್ತು.  ನಿರಂಜನ ದಂಪತಿಗಳ ಮದುವೆಯಲ್ಲೂ ನಮ್ಮ ತಂದೆ ಒಂದು ಸಣ್ಣ ಪಾತ್ರ ವಹಿಸಿದ್ದರು.  ನನ್ನ ತಾಯಿಗೆ ಅನುಪಮಾ ಅವರು ಗೆಳತಿಯಾಗಿದ್ದರು. ಒಮ್ಮೆ ಅವರಿಗೆ ಚಿಕಿತ್ಸೆ ಕೂಡಾ ನೀಡಿದ್ದರು.  ನಮ್ಮ ತಂದೆ ದೆಹಲಿಗೆ ವರ್ಗವಾಗಿ ಹೋದಾಗ ಐದು  ವರ್ಷಗಳ ಕಾಲ ಸಂಪರ್ಕಗಳು ಕಡಿಮೆಯಾದವು. ಆಗ ಇಂದಿನಂತೆ  ಫೋನ್, ಸೋಷಿಯಲ್ ಮೀಡಿಯಾ ಇವೆಲ್ಲಾ ಇರಲಿಲ್ಲ. ಪತ್ರ ವ್ಯವಹಾರವೊಂದೇ ಆಗಿದ್ದ ಸಂಪರ್ಕ ಸಾಧನ!  ನಾವು ಮರಳಿ ಬೆಂಗಳೂರಿಗೆ ಬಂದಾಗ ಅವರು ನಮ್ಮ ತಂದೆಗೆ ವಿಮರ್ಶೆಗಾಗಿ ಕಳಿಸಿದ ಜ್ಞಾನಗಂಗೋತ್ರಿಯ ಸಂಪುಟಗಳನ್ನು ಓದುತ್ತಾ ನಾನು ಬೆಳೆದೆ. ಅಂಥ ದೊಡ್ಡ ಪ್ರಮಾಣದ ವಿಶ್ವಕೋಶದ ಸಂಪಾದನೆಯ ಹೊಣೆಯನ್ನು ಹೊರುವುದು ನಿರಂಜನ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಆದರೆ ಕೆಲಸದ ಒತ್ತಡ ಅವರ ಮೇಲೆ ಹೆಚ್ಚಾಯಿತು. ಸ...

ಪಂಥ (ಷೆಕಾಫ್ ಅವರ ಸಣ್ಣಕತೆ,)

ಇಮೇಜ್
ಪಂಥ ಮೂಲ ಕಥೆ - ಆಂಟನ್ ಷೆಕಾಫ್ ಕನ್ನಡಕ್ಕೆ - ಸಿ. ಪಿ. ರವಿಕುಮಾರ್ ಶರತ್ಕಾಲದ ಕಡುಗಪ್ಪು ರಾತ್ರಿ. ವೃದ್ಧ ಬ್ಯಾಂಕರ್ ತನ್ನ ಬೈಠಕ್ಕಿನಲ್ಲಿ ಶತಪಥ ತಿರುಗುತ್ತಿದ್ದ. ಹದಿನೈದು ವರ್ಷಗಳ ಹಿಂದಕ್ಕೆ ಅವನ ನೆನಪು ಓಡಿತು. ಇಂಥದ್ದೇ ಶರತ್ಕಾಲದ ರಾತ್ರಿಯಂದು ತಾನು ನೀಡಿದ ಔತಣಕೂಟದಲ್ಲಿ ಅದೆಷ್ಟು ಮಂದಿ ಬುದ್ಧಿವಂತರು ಸೇರಿ ಸುರಸ  ಸಂಭಾಷಣೆಗಳಲ್ಲಿ ತೊಡಗಿದ್ದರು! ಕೊನೆಗೆ ಮಾತು ಗಲ್ಲುಶಿಕ್ಷೆಯತ್ತ ಹೊರಳಿತು. ಅಲ್ಲಿ ನೆರೆದಿದ್ದ ಬಹಳ ಜನ ಬುದ್ಧಿಜೀವಿಗಳು ಮತ್ತು ಪತ್ರಕರ್ತರು ಮರಣದಂಡನೆಯನ್ನು ಬಲವಾಗಿ ಟೀಕಿಸಿದರು.   ಅದೊಂದು ಪ್ರಾಚೀನ ರೀತಿಯ ಶಿಕ್ಷೆ, ಅನೀತಿಯುತವಾದದ್ದು, ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುವ ನಾಡುಗಳಲ್ಲಿ ಅಸಮ್ಮತವಾದ ಪದ್ಧತಿ ಎಂದು ಅವರು ವಾದಿಸಿದರು.  ಮರಣದಂಡನೆಗೆ ಬದಲಾಗಿ  ಜೀವಾವಧಿ ಕಾರಾಗೃಹವಾಸ ಶಿಕ್ಷೆಯನ್ನು ಘೋಷಿಸುವುದೇ ಸರಿಯಾದದ್ದು ಎಂದು ಕೆಲವರು ಅಭಿಪ್ರಾಯ ಕೊಟ್ಟರು. "ನಾನು ಒಪ್ಪುವುದಿಲ್ಲ," ಎಂದು ಬ್ಯಾಂಕರ್ ಘೋಷಿಸಿದ. "ನನಗೆ ಎರಡರದ್ದೂ ಅನುಭವವಿಲ್ಲವಾದರೂ ಹೋಲಿಕೆಯಲ್ಲಿ ಮರಣದಂಡನೆಯೇ ಹೆಚ್ಚು ನೀತಿಯುಕ್ತವಾದದ್ದು, ಹೆಚ್ಚು ಮಾನವೀಯವಾದದ್ದು  ಎನ್ನಿಸುತ್ತದೆ. ಮರಣದಂಡನೆ ಮನುಷ್ಯನನ್ನು ಒಂದೇ ಏಟಿಗೆ ಕೊಲ್ಲುತ್ತದೆ. ಆದರೆ ಜೀವಾವಧಿ ಶಿಕ್ಷೆ ಅವನನ್ನು ನಿಧಾನವಾಗಿ ಕೊಲ್ಲುತ್ತದೆ. ನೀವೇ ಹೇಳಿ, ಒಂದೇ ಕ್ಷಣದಲ್ಲಿ ಗಲ್ಲಿಗೇರಿಸಿ ಪ್ರಾಣ ತೆಗೆದುಬಿಡುವವನು ಉತ...

ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ (ಹಾಸ್ಯಪ್ರಬಂಧ)

ಇಮೇಜ್
ಇನ್ನೂ ನನಗೆ ಒಮ್ಮೊಮ್ಮೆ ಪರೀಕ್ಷೆಯಲ್ಲಿ ಬರೆಯುತ್ತಿರುವ ಕನಸುಗಳು ಬರುತ್ತವೆ! ಕೊರೋನಾ ಭಯದಲ್ಲಿ ನಾವೆಲ್ಲರೂ ನಮ್ಮ ನಮ್ಮ ಬಿಲಗಳೊಳಗೆ ಸೇರಿಕೊಂಡಿರುವ ಈ  ಸಂದರ್ಭದಲ್ಲೂ ನನಗೆ ಇಂಥದೊಂದು ಕನಸಾಯಿತು. ಕನ್ನಡ ಪರೀಕ್ಷೆಯಲ್ಲಿ "ಈ ವಚನವನ್ನು ಕುರಿತು ಟಿಪ್ಪಣಿ ಬರೆಯಿರಿ" ಎಂಬ ಪ್ರಶ್ನೆ ಬಂದಿದೆ. "ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ? ಹೊಸ್ತಿಲಲ್ಲಿ ಹುಲ್ಲು ಹುಟ್ಟಿ ಮನೆಯೊಳಗೆ ರಜ ತುಂಬಿ ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ? ತನುವಿನಲಿ ಹುಸಿ ತುಂಬಿ ಮನದಲಿ ವಿಷಯ ತುಂಬಿ ಮನೆಯೊಳಗೆ ಮನೆಯೊಡೆಯನಿಲ್ಲ ಕೂಡಲಸಂಗಮದೇವ !" ಇದಕ್ಕೆ ನಾನು ಉತ್ತರಿಸುತ್ತಿದ್ದೇನೆ. ಈ ವಚನದಲ್ಲಿ ಕೋವಿಡ್ ೧೯ ಕಾಲಮಾನದಲ್ಲಿ ಮನೆಯೊಡೆಯರ  ಪಾಡನ್ನು ವಚನಕಾರರು ಮನೋಜ್ಞವಾಗಿ ಚಿತ್ರಿಸಿದ್ದಾರೆ.  ಮನೆಯಲ್ಲೇ ಇರುವ ಮನೆಯೊಡೆಯನಿಗೆ ಒಂದೇ ಎರಡೇ ಕೆಲಸ? ಕಸ ("ರಜ") ಗುಡಿಸಬೇಕು. ಹೊಸ್ತಿಲನ್ನು ಸಾರಿಸಿ ರಂಗವಲ್ಲಿ ಹಾಕಬೇಕು. ಇವೆಲ್ಲವನ್ನೂ ಪಕ್ಕದ ಮನೆಯವರು ನೋಡುವ ಮುನ್ನವೇ ಮಾಡಿ ಮುಗಿಸಬೇಕು. ಅನಂತರ  ಅಡಿಗೆ ಇತ್ಯಾದಿ ಕೆಲಸಗಳೂ ಇಲ್ಲವೇ? ಪ್ರಸ್ತುತ  ವಚನದಲ್ಲಿ "ರಜ" ಎಂಬ ಪದದ ವಿಶೇಷ ಪ್ರಯೋಗವನ್ನು ಗಮನಿಸಿ. ಲಾಕ್ ಡೌನ್ ಕಾಲದಲ್ಲಿ ಕೆಲವರಿಗೆ ಪ್ರತಿದಿನವೂ ರಜದಂತೆ ತೋರುತ್ತಿದೆ! ಮಕ್ಕಳಿಗೆ ರಜಾ ಬಂದರೂ ಏನು ಮಾಡಲೂ ತಿಳಿಯದೆ ಅಪ್ಪ-ಅಮ್ಮಂದಿರನ್ನು ಕಾಡುತ್ತಿದ್ದಾರೆ. ಇನ್ನು ವರ್ಕ್ ಫ್ರಮ್...

ಎಂಜಲು

ಇಮೇಜ್
ಎಂಜಲಿಗೇಕೆ ಹೆದರುವಿರಿ, ಎಂಜಲು ಬದುಕಿನಲ್ಲಿ? ನೀವು ಕುಡಿಯುವ ಹೊಳೆಯ ನೀರನ್ನು ಅಲ್ಲೆಲ್ಲೋ ಎಂಜಲು ಮಾಡಿದೆ ಒಂದು ಸಾರಂಗ, ಒಂದು ಕಾಡೆಮ್ಮೆ, ಒಂದು ಆನೆ. ಪಾಲಿಥೀನ್ ಬ್ಯಾಗಲ್ಲಿ ಬಂತೆಂದು ಹಾಲೇನೂ ಪರಿಶುದ್ಧವಲ್ಲ ಅಮ್ಮನ ಕೆಚ್ಚಲಿಗೆ ಬಾಯಿಟ್ಟು ಎಂಜಲು ಮಾಡಿದೆ ಕರು. ನೀಟಾಗಿ ಪ್ಯಾಕೇಜ್ ಮಾಡಿದ ಬೇಳೆ ಕಾಳನ್ನು ಹೊಲದಲ್ಲಿ ರುಚಿ ನೋಡಿ ಎಂಜಲು ಮಾಡಿದೆ ಒಂದು ಹಕ್ಕಿ. ನೀವು ಆನಂದದಿಂದ ಮೆಲ್ಲುವ ಪಾನಿಪೂರಿಯ ಹಿಟ್ಟಿನ ರುಚಿ ನೋಡಿದೆ ಜಿರಳೆ ಎಂಜಲು ಮಾಡಿದೆ ಇಲಿ. ಹೆದರಿಕೆ ಏಕೆ ಎಂಜಲಿಗೆ ಎಂಜಲಿನಲ್ಲಿರಬಹುದು ವೈರಾಣು ಎಂದೇ? ಮೈಕ್ರೋಸ್ಕೋಪಿನಲ್ಲಿ ನೋಡಿದರೆ ಕೋಟಿಗಟ್ಟಲೆ ಕಾಣುತ್ತವೆ ಜೀವಿಗಳು, ಎರಡೇ, ಒಂದೇ! ಕಂಡಾಗ ತಿನ್ನುವ ಆಸೆಯಾದರೂ ದ್ರಾಕ್ಷಿ ಗೊಂಚಲು ಬೇಡ ಎನ್ನುತ್ತಿರುವಿರಿ - ನೆನೆದು ಯಾರದೋ ಎಂಜಲು! ಪಾಪಗಳನ್ನು ತೊಳೆಯುವ ಗಂಗೆ ಬರುತ್ತಾಳಲ್ಲ ನಿಮ್ಮ ಮನೆಗೆ! ಅಡುಗೆ ಮನೆಯಲ್ಲಿ ಹುಡುಕಿ ನೋಡಿ ಸಿಕ್ಕುತ್ತದೆ ಉಪ್ಪಿನ ಜಾಡಿ ಬೆಚ್ಚನೆ ನೀರಿನಲ್ಲಿ ಉಪ್ಪು ಬೆರೆಸಿ ತೊಳೆಯಿರಿ ಹಣ್ಣು ಕೊಟ್ಟ ಭೂಮಿಯನ್ನು ಸ್ಮರಿಸಿ ಉಪ್ಪು ನೀಡಿದ ಕಡಲನ್ನು ನೆನೆದು ಉಜ್ಜಿ ತೊಳೆದರೆ ನಾಶ ಎಲ್ಲ ಕೆಟ್ಟಕ್ರಿಮಿಜೀವಕೋಶ ತೊಳೆದರೆ ಶುದ್ಧಜಲದಲ್ಲಿ ಮತ್ತೊಮ್ಮೆ ನೈವೇದ್ಯಕ್ಕೆ ಸಿದ್ಧ, ಗೊಂಚಲಿನ ಹೆಮ್ಮೆ. ದ್ರಾಕ್ಷಿಯೊಂದಿಗೆ ನಿಮ್ಮ ಭೀತಿಯನ್ನೂ ಒಂದಿಷ್ಟು ತೊಳೆದುಬಿಡಿ ಉಪ್ಪು ನೀರಿನಲ್ಲಿಟ್ಟು. --ಸಿ. ಪಿ. ರವಿಕುಮಾರ್

ಹಾಡುವರಾರು ನದೀತಟದಲ್ಲಿ?

ಇಮೇಜ್
ಮೂಲ ಹಿಂದಿ ಕವಿತೆ - ಹರಿವಂಶರಾಯ್ ಬಚ್ಚನ್  ಕನ್ನಡ ಅನುವಾದ - ಸಿ. ಪಿ. ರವಿಕುಮಾರ್  ಹಾಡುವರಾರು ನದೀತಟದಲ್ಲಿ? ಭಂಗಗೊಳಿಸುತ್ತ ನಿಶೆಯ ನೀರವ  ಮೇಲೇಳುವ ಈ ಗ್ರಾಮೀಣ ಸ್ವರ  ಹಾಯುತ ಹುರುಳಿಯ ಹೊಲಗಳ ಮೇಲೆ  ಎಬ್ಬಿಸುತಿದೆ ಕಾವೇರಿಯೊಳು ಅಲೆ! ಹಾಡುವರಾರು ನದೀತಟದಲ್ಲಿ? ಬಂಧುಗಳಿರಬಹುದಿಲ್ಲೇ ಸನಿಹದಲಿ, ಧ್ಯಾನಿಸುತ್ತ ಮೌನದಿ ಮನದಲ್ಲಿ, ವ್ಯರ್ಥವಲ್ಲ ತಮ್ಮಯ ಆಲಾಪ,  ಶ್ರವಣಸುಖವ ತರುತಿದೆ ಜನಪದಕೆ! ಹಾಡುವರಾರು ನದೀತಟದಲ್ಲಿ? ವಿಚಲಿತವಾಗಿದೆ ಇಂದೇತಕೆ ಮನ  ಕೇಳುತ ಈ ಏಕಾಂತದ ಗಾಯನ? ಇದನೇ ಕೇಳುತ ನಾ ಮುಂಜರಿವೆ! ಇದನೇ ಹಾಡುವೆ, ಇದನೇ ಬರೆವೆ!  ಹಾಡುವರಾರು ನದೀತಟದಲ್ಲಿ?

ಕೊರೋನಾ ಕೊರೋನಾ - ಭಾಗ ೨ (ಚುಟುಕಗಳು)

ಇಮೇಜ್
ಕನಕಾ  ********* ಪ್ರತಿ ರಾಮನವಮಿಗೆ ಪಾನಕ ತಪ್ಪದೆ ಹಂಚುವಳು ಮಿಸ್ ಕನಕಾ ಈ ಸಲ ಯುಗಾದಿಗೇ ಏನು ಸ್ಫೂರ್ತಿ ಇವಳಿಗೆ ಹಂಚುತಿಹಳು ನೆಟ್ ಮೇಲೆ ಕೊರೋನಾ ಪ್ಯಾನಿಕ ಶಾರ್ವರಿ  ******* ಓ ಸಂವತ್ಸರ ಶಾರ್ವರಿ! ಎಷ್ಟಂತಾ ಮಾಡೋದು ವರಿ? ಕೊರೊನಾ ಕೋವಿಡ್ ಮೂರನೇ ಹಂತ ಮುಗಿಯುವ ಮುನ್ನವೇ ಬಂತೇ ಹಂತಾ ತಿಳಿಸವರಿಗೆ, ವೀ ಆರ್ ಇನ್ ನೋ ಹರಿ! ಬೋರಸ್  ********** ಬಂತು  ಕರೋನಾ ವೈರಸ್ ಮನೇಲಿರಿ ಅಂತ ಕೋರಸ್ ಲಾಕ್ ಡೌನ್ ಅಂತೆ ಕ್ಯಾನ್ಸಲ್ ಸಂತೆ ನ್ಯೂಸ್ ಚಾನೆಲ್ಸ್ ಡೋಂಟ್ ಬೋರಸ್ ಇಳಿಮುಖ  *********** ಎಲ್ಲದರಲ್ಲೂ ಈಗ ಇಳಿಮುಖ ಎಂದು ಬೇಸರಿಸಿದರು ಶ್ರೀಮತಿ ರೇಖಾ ಹಾಕೋದು ಕೇಳಿದ್ದೆ ಲಾಕಪ್ನಲ್ಲಿ ಕೈದಿಗಳ್ನ ಅದಕ್ಕೂ ಸಂಚಕಾರ ತಂತು ಕರೋನಾ ಲಾಕಪ್ ಹೋಗಿ ಲಾಕ್ ಡೌನ್ ಬರಬೇಕಾ? ಮಾರ್ಚ್ ೨೨ - ಸಂಜೆ  *********************** ಸಂಜೆ ಕೇಳಿದೆ  ಇವಳನ್ನು "ಏನು, ತಿಂಡಿ ಮಾಡಿದ್ಯಾ?" ಪಾತ್ರೆ ಕುಕ್ಕುವ ಸದ್ದು! "ಏನೂ ಆಗಲಿಲ್ಲ ತಾನೇ ಸದ್ಯ?" ಮುಂದುವರೆಯಿತು ತಾಲಿ, ಜೊತೆಗೆ ಢಣಢಣಾ ಸದ್ದು ಅಬ್ಬಾ ಏನೋ ವಿಶೇಷವೇ ಇರಬಹುದೆಂದು ಖುದ್ದು ಹೋಗಿ ನೋಡಿದರೆ ಥಾಲೀ ಪೀಟ್ ಎಂಬ ರುಚಿಕರ ಖಾದ್ಯ! ಸಂಕಷ್ಟಿ  ********* ಹೊರಗೆ ಹೋಗಲು ಸಂಕಷ್ಟ ಎದುರಾಗಿ ಮನೆಯಲ್ಲೇ ಗಣಪತಿಯ ಫೋಟೋಗೆ ಎರಗಿ ಅದೂ ಇಲ್ಲದಿದ್ದರೂ ಚಿಂತೆ ಇಲ್ಲ ಎಲ್ಲದಕ್ಕೂ ವಾಟ್ಸಾಪ್ ಇದೆಯಲ್ಲ ಭಜೇಹಂ ಶ್...