ಎರಡು ದಡ


"ಬಂದಿನಿ" ಚಿತ್ರವನ್ನು ನಿರ್ದೇಶಿಸಿದವರು ಬಿಮಲ್ ರಾಯ್. "ಮಧುಮತಿ," "ದೇವದಾಸ್" ಮೊದಲಾದ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ ಖ್ಯಾತಿ ಇವರದ್ದು. "ಬಂದಿನಿ" (ಅಥವಾ "ಬಂಧಿತೆ") ಚಿತ್ರದಲ್ಲಿ ಕೊಲೆಯ ಆಪಾದನೆಯ ಮೇಲೆ ಜೈಲಿಗೆ ಸೇರಿದ ಒಬ್ಬ ಯುವತಿಯ ಕಥೆ ಇದೆ. ಚಿತ್ರದಲ್ಲಿ ಬರುವ "ಮೇರೇ ಸಾಜನ್ ಹೈಂನ್ ಉಸ್ ಪಾರ್ ..." ಗೀತೆಯಲ್ಲಿ ನಾಯಕಿಯ ಮನಸ್ಸಿನಲ್ಲಿ ಏಳುವ ದ್ವಂದ್ವಗಳ ಚಿತ್ರಣವಿದೆ. ನಾಯಕಿಯ ಪಾತ್ರದಲ್ಲಿ ನೂತನ್ ಅವರ ಅಭಿನಯ ಮನಸ್ಸನ್ನು ಕಲಕುತ್ತದೆ. ನಾಯಕಿಗೆ ಇರುವುದು ಜೈಲಿನ ಬಂಧನ ಒಂದೇ ಅಲ್ಲ. ಅವಳ ಚರಿತ್ರೆಯೂ ಅವಳನ್ನು ಬಂಧಿಸಿದೆ. ತಾನು ಹಿಂದೆ ಸ್ವೀಕರಿಸಿದ್ದ ಗಂಡಿನಿಂದ (ಅಶೋಕ್ ಕುಮಾರ್) ದೂರವಾಗಿ ತನಗೆ ಹೊಸ ಬಾಳನ್ನು ನೀಡಬಲ್ಲ ಜೈಲಿನ ಡಾಕ್ಟರ್ (ಧರ್ಮೇಂದ್ರ) ಕಡೆಗೆ ಅವಳ ಮನಸ್ಸು ವಾಲುತ್ತಿದೆ. ಆದರೆ "ಈ ಆಕರ್ಷಣೆ ತಪ್ಪು, ನಿಲ್ಲು!" ಎಂದು ಅವಳ ಮನಸ್ಸು ಅವಳನ್ನು ಸೆರಗು ಹಿಡಿದು ನಿಲ್ಲಿಸುತ್ತಿದೆ ... 
ಕಪ್ಪು ಬಿಳುಪಿನ ಚಿತ್ರಪಟದ ಮೇಲೆ ಈ ಗೀತೆಯನ್ನು ಅದೆಷ್ಟು ಕಲಾತ್ಮಕವಾಗಿ ಚಿತ್ರೀಕರಿಸಲಾಗಿದೆ ಎಂಬುದನ್ನು ನೀವು ನೋಡಿ ಮೆಚ್ಚಬೇಕು. ನಾಯಕಿ ನಿರ್ಧಾರಕ್ಕೆ ಬಂದು ತನ್ನ ಪ್ರಿಯತಮನನ್ನು ಹುಡುಕಿಕೊಂಡು ಹೊರಟಿದ್ದಾಳೆ. ನದಿಯ ಆ ದಡದಲ್ಲಿ ಅವಳ ಹೊಸ ಬದುಕು ಅವಳಿಗಾಗಿ ಕಾಯುತ್ತಿದೆ. ಆದರೆ ಹಳೆಯದೆಲ್ಲವನ್ನೂ ಬಿಟ್ಟು ಹೊರಡುವುದು ಅಷ್ಟು ಸುಲಭವೇ? ನಾಯಕಿಯ ಮನಸ್ಸು ನೌಕೆಯ ಅಂಬಿಗನನ್ನು "ಈ ಸಲ ಅಲ್ಲಿಗೇ ಕರೆದುಕೊಂಡು ಹೋಗಿಬಿಡು!" ಎಂದು ಗೋಗರೆಯುತ್ತಿದೆ. ತಾನು ಮಾಡುತ್ತಿರುವುದು ಪಾಪವೇ ಎಂದು ಅವಳ ಮನಸ್ಸು ಭೀತವಾಗಿದೆ. "ನನ್ನನ್ನು ಮರೆತುಬಿಡು! ನನ್ನನ್ನು ಕ್ಷಮಿಸು!" ಎಂದು ಅವಳು ತನ್ನ ಪತಿಗೆ ಮನದಲ್ಲೇ ಮೌನ ಸಂದೇಶ ಕಳಿಸುತ್ತಾಳೆ. ಅವಳನ್ನು ಎರಡು ಶಕ್ತಿಗಳು ಒಮ್ಮೆಲೇ ತಮ್ಮತ್ತ ಎಳೆಯುತ್ತಿವೆ. ಅವಳ ಮನಸ್ಸು ಪ್ರಿಯತಮನ ಕಡೆ ವಾಲುತ್ತಿದ್ದರೂ ಧರ್ಮವು ಅವಳನ್ನು ಪತಿಯ ಕಡೆ ತಳ್ಳುತ್ತಿದೆ. 
ಚಿತ್ರದ ಈ ಗೀತೆಯನ್ನು ಸ್ವತಃ ಸಂಗೀತ ನಿರ್ದೇಶಕ ಎಸ್ ಡಿ ಬರ್ಮನ್ ಹಾಡಿದ್ದಾರೆ. ಶೈಲೇಂದ್ರ ಸರಳ ಭಾಷೆಯಲ್ಲಿ ಗಹನವಾದ ಭಾವನೆಗಳನ್ನು ಕಡೆದಿದ್ದಾರೆ. ಎಷ್ಟು ಸಲ ಕೇಳಿದರೂ ತನ್ನ ಮಾಂತ್ರಿಕ ಸ್ಪರ್ಶವನ್ನು ಕಳೆದುಕೊಳ್ಳದ ಗೀತೆಯನ್ನು ನೀವೂ ಕೇಳಿ. ಹಿಂದಿ ಅರ್ಥವಾಗದವರಿಗೆ ಗೀತೆಯ ಅನುವಾದವನ್ನು ಕೆಳಗೆ ಕೊಟ್ಟಿದ್ದೇನೆ.


ಎರಡು ದಡ
 
ಮೂಲ ಹಿಂದಿ ಗೀತೆ - ಶೈಲೇಂದ್ರ 
ಕನ್ನಡ ಅನುವಾದ - ಸಿ ಪಿ ರವಿಕುಮಾರ್ 

ಓ ಅಂಬಿಗ!
ನನ್ನಿಯನು ಆ ದಡದಲ್ಲಿ, ನಾನಿಲ್ಲಿ, ಪರಿತಪಿಸುತ್ತಿಹೆ ಮನದಲ್ಲಿ 
ಕರೆದೊಯ್ಯಿ, ಈ ಸಲ ಬೇಡುವೆ ನಿನ್ನಲ್ಲಿ, ಕರೆದೊಯ್ಯಿ!


ಮನವೆಂಬ ಹೊತ್ತಿಗೆಯಿಂದ ಹೆಸರನ್ನು ನನ್ನದನ್ನಳಿಸು 
ಗುಣವಿದ್ದಿತೋ ನಾನರಿಯೆ, ಅವಗುಣಗಳನ್ನು ನೀ ಕ್ಷಮಿಸು!
ಈ ಬೀಳುಕೊಡುಗೆಗೆ ನಾನು
ಕಾದೇನು ಸಾವಿನ ಬಳಿಕವೂ!   

ಬರಬೇಡ ಹತ್ತಿರ, ಸುಡುವೆ! ಎನ್ನುತಿದೆ ಮನದೊಳಗೆ ಅಗ್ನಿ 
ಬಂದಿನಿಯು ನಾನು ಸಂಸಾರಿ, ಮನವೆಲ್ಲೋ ಹೋಗುತಿದೆ ಹಾರಿ!
ಸೆರಗನ್ನು ಎಳೆಯುತ ನಿಲ್ಲು! 
ಎನ್ನುತ್ತ ಕರೆದಿದೆ ಹದಿಬದೆ! 


ಕಾಮೆಂಟ್‌ಗಳು

  1. Original song - courtesy http://hindilyricspratik.blogspot.in/2010/12/o-mere-maajhi-s-d-burman.html -
    ओ मेरे माँझी - O Mere Maajhi (S D Burman)
    MovieAlbum : बंदिनी (1963)
    Music By : एस.डी.बर्मन
    Lyrics By : शैलेन्द्र
    Performed By : एस.डी.बर्मन

    ओ रे माँझी, ओ रे माँझी, ओ मेरे माँझी,
    मेरे साजन हैं उस पार, मैं मन मार हूँ इस पार
    ओ मेरे माँझी अब की बार, ले चल पार, ले चल पार
    मेरे साजन हैं उस पार..

    मन की किताब से तुम मेरा नाम ही मिटा देना
    गुण तो न था कोई भी अवगुण मेरे भुला देना
    मुझे आज की विदा का, मर के भी रहता इंतज़ार
    मेरे साजन हैं उस पार..

    मत खेल जल जाएगी, कहती है आग मेरे मन की
    मैं बंदिनी पिया की, मैं संगिनी हूँ साजन की
    मेरा खींचती है आँचल, मनमीत तेरी, हर पुकार
    मेरे साजन..
    ओ रे माँझी...

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)