ಕನ್ನಡಂ ಕತ್ತರಿಯಲ್ತೆ!

ಸಿ ಪಿ ರವಿಕುಮಾರ್

"ಯ್ಯೋ ಕನ್ನಡಂ ಕತ್ತರಿಯಲ್ತೆ ಅಲ್ಲ! ಕನ್ನಡಂ ಕತ್ತುರಿಯಲ್ತೆ!" ಎಂದು ನಾನು ನಗುತ್ತಾ ಅರವಿಂದನನ್ನು ತಿದ್ದಿದ್ದು ನೆನಪಿದೆ. "ಕತ್ತುರಿ ಅಂದರೆ ಕಸ್ತೂರಿ. ಅಲ್ತೆ ಅಂದರೆ ಅಲ್ಲವೇ ಅನ್ನೋ ಅರ್ಥ. ಕನ್ನಡದ ಸುಗಂಧ ಕಸ್ತೂರಿಯ ಹಾಗೆ ಅಲ್ಲವೇ ಅಂತ ಮನೋರಮೆ  ಮುದ್ದಣನಿಗೆ ಚಾಲೆಂಜ್  ಮಾಡುತ್ತಿದ್ದಾಳೆ!"

ದುರದೃಷ್ಟವಶಾತ್ ಕಸ್ತೂರಿ ಕನ್ನಡಕ್ಕೆ ಕತ್ತರಿ ಬಿದ್ದಿದೆ. ಅಥವಾ ಹಾಗೆಂದು ಎಲ್ಲರೂ ಮಾತಾಡಿಕೊಳ್ಳುತ್ತಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಪೋಷಕರು ಯಾವ ಭಾಷೆಯನ್ನು ಮಕ್ಕಳಿಗೆ ಕಲಿಯಲು ಇಚ್ಛಿಸುತ್ತಾರೋ ಮಗು ಅದೇ ಭಾಷೆಯಲ್ಲಿ ಕಲಿಯಬೇಕು - ಯಾವುದೇ ಕಡ್ಡಾಯವನ್ನು ಹೇರುವ ಹಕ್ಕು ಸ್ಥಳೀಯ ಸರ್ಕಾರಕ್ಕೆ ಇಲ್ಲ.

ನಮ್ಮ ನಾಡಿನ ಮೊದಲ ರಾಷ್ಟ್ರಕವಿ ಎಂಬ ಬಿರುದು ಪಡೆದಿದ್ದ ಮಂಜೇಶ್ವರ ಗೋವಿಂದ ಪೈ ಕನ್ನಡಿಗರನ್ನು ಕಸ್ತೂರಿ ಮೃಗಕ್ಕೆ ಹೋಲಿಸಿದರು. ಕಸ್ತೂರಿ ಮೃಗವು ತನ್ನ ಮೈಯಿಂದ ಹೊಮ್ಮುವ ಸುವಾಸನೆಯ ಗುಟ್ಟನ್ನು ತಿಳಿಯದೆ ಸುಗಂಧವು ಎಲ್ಲಿಂದ ಬರುತ್ತಿದೆ ಎಂದು ಹುಡುಕುತ್ತಲೇ ಇರುತ್ತದೆಯಂತೆ!

"ಕನ್ನಡವೇ ಸತ್ಯ! ಕನ್ನಡವೇ ನಿತ್ಯ! ಅನ್ಯವೆನಲದೆ ಮಿಥ್ಯ!" ಎಂದ ಕುವೆಂಪು ಕನ್ನಡದ ಡಿಂಡಿಮವನ್ನು ಬಾರಿಸಲು ಕರೆ ಕೊಟ್ಟರು. ಅವರು ಈಗ ಇದ್ದಿದ್ದರೆ ಹೇಗೆ ಪ್ರತಿಕ್ರಿಯೆ ತೋರುತ್ತಿದ್ದರೋ! ಕನ್ನಡಿಗರ ನಿರಭಿಮಾನವನ್ನು ಕುರಿತು ಈಗಾಗಲೇ ಸಾಕಷ್ಟು ಚರ್ಚೆಗಳಾಗಿವೆ. ಈಗಿನ ಪರಿಸ್ಥಿತಿಯಲ್ಲಿ ಇಂಥ ಆತ್ಮಾವಹೇಳನವಾಗಲೀ ಪರಭಾಷೆಗಳ ನಿಂದೆಯಾಗಲೀ ಯಾವುದೇ ಫಲವನ್ನು ನೀಡಲಾರವು. ಇದು ಕನ್ನಡಕ್ಕೆ ಅಗ್ನಿಪರೀಕ್ಷೆಯ ಕಾಲ. ಮೊದಲು ಸದ್ಯದ ಪರಿಸ್ಥಿತಿಯನ್ನು ನೋಡೋಣ; ಇವು ಎಷ್ಟು ನಿಜವೋ ಎಷ್ಥು ಸುಳ್ಳೋ ಅಂಕಿ-ಅಂಶಗಳಿಲ್ಲದೆ ಹೇಳುವುದು ಕಷ್ಟ -

ಪಟ್ಟಿ ೧ - ಕನ್ನಡದ ದುರ್ಗತಿ 
ಅ) ನಗರಗಳಲ್ಲಿ ಕನ್ನಡವನ್ನು ಕಲಿಸಲು ಪೋಷಕರು ಹಿಂದುಮುಂದು ನೋಡುತ್ತಿದ್ದಾರೆ.  ಈ ಪರಿಸ್ಥಿತಿ ಹಳ್ಳಿಗಳಿಗೂ ಹಬ್ಬುವ ಲಕ್ಷಣಗಳು ತೋರುತ್ತಿವೆ. ಕನ್ನಡದಲ್ಲಿ ಕಲಿಸುವ ಸರ್ಕಾರಿ ಶಾಲೆಗಳು ಮುಚ್ಚುವ ಪರಿಸ್ಥಿತಿ ಬಂದಿದೆ.
ಆ) ಕನ್ನಡ ಸಾಹಿತ್ಯವನ್ನು ಓದುವವರ ಸಂಖ್ಯೆ ಬೆಳೆಯುತ್ತಿಲ್ಲ. ಕನ್ನಡದ ಪುಸ್ತಕಗಳನ್ನು ಕೊಂಡು ಓದುವವರು ಕಡಿಮೆ.
ಇ) ಕನ್ನಡ ಚಲನಚಿತ್ರಗಳು ಇನ್ನಿತರ ಭಾಷಾ ಚಿತ್ರಗಳ ಹೋಲಿಕೆಯಲ್ಲಿ ಸೋತಿವೆ. ಹಳ್ಳಿಗಳಲ್ಲೂ ಜನ ಇನ್ನಿತರ ಭಾಷೆಯ ಚಿತ್ರಗಳನ್ನು ನೋಡಲು ಮುಂದಾಗುತ್ತಿದ್ದಾರೆ. 
ಇದಕ್ಕೆ ವಿರುದ್ಧವಾದ ಕೆಲವು ಹೇಳಿಕೆಗಳನ್ನೂ ನಾವು ಕೆಲವು ಸಲ ಕೇಳುತ್ತೇವೆ -

ಪಟ್ಟಿ ೨ - ಕನ್ನಡದ ಪ್ರಗತಿ 
ಕ) ಜಗತ್ತಿನಲ್ಲಿ ಕನ್ನಡ ಮಾತಾಡುವವರ ಸಂಖ್ಯೆ ಜರ್ಮನ್ ಮಾತಾಡುವ ಸಂಖ್ಯೆಯನ್ನೂ ಮೀರಿ ಬೆಳೆದಿದೆ.
ಖ) ಸಾಹಿತ್ಯ ಸಮ್ಮೇಳನಗಳಲ್ಲಿ ಪುಸ್ತಕಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ. ಪ್ರಕಾಶಕರು ಲಾಭ ಮಾಡಿಕೊಳ್ಳುತ್ತಿದ್ದಾರೆ.  
ಮುಕ್ತ ಮಾರುಕಟ್ಟೆಯಲ್ಲಿ ಕನ್ನಡ ಉಳಿಯುತ್ತದೋ ಇಲ್ಲವೋ ಎಂಬುದನ್ನು ಕುರಿತು ತಲ್ಲಣಗಳು ವ್ಯಕ್ತವಾಗುತ್ತಿವೆ. ಕನ್ನಡವು ಬೇರೆ ಭಾಷೆಗಳ ಜೊತೆಗೆ ಸ್ಪರ್ಧಿಸಿ ಬೆಳೆಯಬೇಕಾದರೆ ಏನು ಮಾಡಬೇಕು ಎಂಬುದನ್ನು ಕುರಿತು ಚರ್ಚೆ ನಡೆಯಬೇಕಾಗಿದೆ.  ಕನ್ನಡವು ಯಾಕೆ ಜನಪ್ರಿಯವಲ್ಲ ಎಂಬುದಕ್ಕೆ ಕೆಲವು ಕಾರಣಗಳು ಹೀಗಿವೆ -

ಪಟ್ಟಿ-೩ - ಇತರ ಭಾಷೆಗಳು ಜನಪ್ರಿಯವಾಗಲು ಕಾರಣಗಳು 
ಚ) ಇಂಗ್ಲಿಷ್ ಭಾಷೆ ಕಲಿತರೆ ಕೆಲಸ ಸಿಕ್ಕುತ್ತದೆ; ಕೆಲಸದಲ್ಲಿ ಮುಂದುವರೆಯಲು ಇಂಗ್ಲಿಷ್  ಮುಖ್ಯ.
ಜ) ಕನ್ನಡದಲ್ಲಿ ವಿಜ್ಞಾನ ಹಾಗೂ ಸಂಬಂಧಿಸಿದ ವಿಷಯಗಳನ್ನು ಕುರಿತು ಸಾಹಿತ್ಯ ದುರ್ಲಭ.
ತ) ಹಾಲಿವುಡ್ ಚಿತ್ರಗಳಿಗೆ ಹೋದರೆ "ಪೈಸಾ ವಸೂಲ್" ಆಗುತ್ತದೆ - ತ್ರೀ ಡೀ ಮೊದಲಾದ ತಂತ್ರಜ್ಞಾನಗಳ ಬಳಕೆ ಪ್ರಾದೇಶಿಕ ಚಿತ್ರಗಲ್ಲಿ ಇಲ್ಲ.
ಪ) ಹಿಂದಿ ನಮ್ಮ ದೇಶದಲ್ಲಿ ಎಲ್ಲಾ ಕಡೆ ಬಳಸಲ್ಪಡುವ ಭಾಷೆ - .ಹೊರಗೆ ಹೋಗಬೇಕು ಎಂಬ ಇಚ್ಛೆ ಇರುವವರು ಅದನ್ನು ಕಲಿಯುವುದು ಮೇಲು.
ಈ ಪಟ್ಟಿಗೆ ನೀವು ಇನ್ನೂ ಹಲವನ್ನು ಸೇರಿಸಬಹುದೇನೋ! ಈ ಪರಿಕಲ್ಪನೆಗಳಲ್ಲಿ ನಿಜ ಎಷ್ಟು, ಸುಳ್ಳು ಎಷ್ಟು ಎಂಬುದನ್ನು ಸಂಶೋಧನೆ ಇಲ್ಲದೆ, ಅಂಕಿ-ಅಂಶಗಳೇ ಇಲ್ಲದೆ ನಂಬುವುದು ತಪ್ಪು. 

ಇನ್ನು ಕನ್ನಡವನ್ನು ಯಾಕೆ ಕಲಿಯಬೇಕು ಎಂಬುದಕ್ಕೆ ಏನು ವಾದಗಳಿವೆ? ನನಗೆ ಹೊಳೆದದ್ದನ್ನು ಕೆಳಗೆ ಕೊಟ್ಟಿದ್ದೇನೆ -

ಪಟ್ಟಿ ೪ - ಕನ್ನಡ ಯಾಕೆ ಕಲಿಯಬೇಕು ಎಂಬುದಕ್ಕೆ ಉತ್ತರಗಳು 
ಯ) ಕನ್ನಡ ಒಂದು ಕ್ಲಾಸಿಕಲ್ ಭಾಷೆ; ಬಹಳ ಹಳೆಯ ಭಾಷೆ; ಕನ್ನಡ ಸಾಹಿತ್ಯ ವಿಪುಲವಾದದ್ದು. ಕನ್ನಡಕ್ಕೆ ಏಳು ಜ್ಞಾನಪೀಠ ಪ್ರಶಸ್ತಿಗಳು ಸಂದಿವೆ; ಜ್ಞಾನಪೀಠ ಪ್ರಶಸ್ತಿಗೆ ಯೋಗ್ಯರಾದ ಇನ್ನೂ ಅನೇಕ ಸಾಹಿತಿಗಳು ನಮ್ಮಲ್ಲಿ ಇದ್ದರು, ಇದ್ದಾರೆ.
ರ) ತನ್ನ ಉಚ್ಛ್ರಾಯ ಸ್ಥಿತಿಯಲ್ಲಿ ಕನ್ನಡ ಚಲನಚಿತ್ರ ಉದ್ಯಮ ಭಾರತಕ್ಕೆ ಅಪೂರ್ವವಾದ ಕೊಡುಗೆಗಳನ್ನು ನೀಡಿದೆ. ಪ್ರಶಸ್ತಿಗಳ ಸರಮಾಲೆಯನ್ನೇ ಕನ್ನಡ ಚಲನಚಿತ್ರಗಳು ಪಡೆದ ಕಾಲವೂ ಇತ್ತು.  
ರಸ್ಕಿನ್ ಬಾಂಡ್ ಅವರ ಒಂದು ಕತೆಯಲ್ಲಿ ಹೀಗಾಗುತ್ತದೆ - ಬ್ಯಾಕ್ ಒಂದರಲ್ಲಿ ಕಸ ಗುಡಿಸುವ ಉದ್ಯೋಗ  ಮಾಡಿಕೊಂಡಿದ್ದ ಒಬ್ಬ ಹುಡುಗ ಒಂದು ಸಲ ಮಾಲೀಕರ ಮೇಲೆ ಕೋಪ ಮಾಡಿಕೊಂಡಿದ್ದಾನೆ; ಅವನಿಗೆ ಸಂಬಳ ಬರುವುದು ತದವಾಗಿದೆ. ತನ್ನ ಸ್ನೇಹಿತನಿಗೆ ಈ ಮಾತನ್ನು ಹೇಳಿಕೊಂಡು ಅವನು ರೇಗಾಡುತ್ತಾನೆ. ಅವನ ಸ್ನೇಹಿತ ಈ ಸಂಗತಿಯನ್ನು "ಬ್ಯಾಂಕ್ ಹತ್ತಿರ ಕಸ ಗುಡಿಸುವವನಿಗೆ ಕೊಡಲೂ ಕಾಸಿಲ್ಲವಂತೆ" ಎಂದು ಸುದ್ದಿ ಹರಡುತ್ತಾನೆ. ಹೀಗೆ ಸುದ್ದಿ ಒಬ್ಬರಿಂದ ಒಬ್ಬರಿಗೆ ತಲುಪಿ ಎಲ್ಲರೂ ಬ್ಯಾಂಕ್ ನಲ್ಲಿ ವಿಶ್ವಾಸ ಕಳೆದುಕೊಂಡು ತಮ್ಮ ತಮ್ಮ ಖಾತೆಗಳಿಂದ ಹಣ ತೆಗೆದುಕೊಳ್ಳಲು ಉತ್ಸಾಹಿತರಾಗುತ್ತಾರೆ. ಬ್ಯಾಂಕ್ ಮುಚ್ಚಿಹೋಗುತ್ತದೆ.

ಕನ್ನಡವೂ ಇಂಥ ಊಹಾಪೋಹಗಳ ಹಾವಳಿಗೆ ಗುರಿಯಾಗಿದೆಯೇ? ಇಂಗ್ಲಿಷ್ ಕಲಿತರೆ ಮಾತ್ರ ಕೆಲಸ ಸಿಕ್ಕುತ್ತದೆ ಎಂಬುದಕ್ಕೆ ಆಧಾರವಿದೆಯೇ? ಹಾಗೆ ಸಿಕ್ಕುವ ಕೆಲಸಗಳು ಯಾವುವು? ಹಾಗೆ ಕೆಲಸ ಸಿಕ್ಕವರ ಗಳಿಕೆ ಯಾವ ಮಟ್ಟದಲ್ಲಿದೆ?  ಕನ್ನಡದಲ್ಲಿ ಮಾರ್ಕೆಟ್ ಇಲ್ಲವೇ ಇಲ್ಲ ಎಂಬ ಹಾಗೇ ಇದ್ದರೆ ಕನ್ನಡ ತಂತ್ರಾಂಶಗಳು ಯಾಕೆ ಜನಪ್ರಿಯವಾಗುತ್ತಿವೆ? ಸಾಮಾಜಿಕ ಐ ಟಿ ತಾಣಗಳಲ್ಲೂ ಕನ್ನಡ ಯಾಕೆ ಜನಪ್ರಿಯವಾಗಿದೆ? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳುವುದು ಈಗ ಮುಖ್ಯ.

(ಮುಂದುವರೆಸುತ್ತೇನೆ. ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ.) 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)