ಹಳ್ಳಿ ಶಾಲೆ ಮೇಷ್ಟ್ರು

 ಕವಿತೆ ಓದುವ ಮುನ್ನ ... 
 
ಲಿವರ್ ಗೋಲ್ಡ್ ಸ್ಮಿತ್ ಮೂಲತಃ ಐರ್ ಲ್ಯಾಂಡ್ ನಲ್ಲಿ ಹುಟ್ಟಿ ನಂತರ ಇಂಗ್ಲೆಂಡ್ ಗೆ ಬಂದು ನೆಲೆಸಿದ ಕವಿ, ನಾಟಕಕಾರ, ಕಾದಂಬರಿಕಾರ. ಸಾಮ್ಯುಯೆಲ್ ಜಾನ್ಸನ್ ಎಂಬ ಖ್ಯಾತ ಬರಹಗಾರನ ಮೈತ್ರಿಯನ್ನು ಪಡೆದುದು ಇವನ ಹೆಮ್ಮೆ - ಏಕೆಂದರೆ ಜಾನ್ಸನ್ ಗೆ ಐರ್ ಲ್ಯಾಂಡ್ ಮತ್ತು ಐರಿಷ್ ಜನರ ಬಗ್ಗೆ ಅತೀವ ಅಸಹನೆಯಿತ್ತು. 
ಗೋಲ್ಡ್ ಸ್ಮಿತ್ ಬರೆದ "ವಿಕರ್  ಆಫ್ ವೇಕ್ ಫೀಲ್ಡ್" ಕಾದಂಬರಿಯನ್ನು ಕುರಿತು ಒಂದು ಸ್ವಾರಸ್ಯಕರ ಘಟನೆಯಿದೆ.ಒಂದು ಮುಂಜಾನೆ  ಜಾನ್ಸನ್ ಗೆ ಯಾರೋ ಗೋಲ್ಡ್ ಸ್ಮಿತ್ ಕಳಿಸಿದ ಸಂದೇಶವನ್ನು ತಂದುಕೊಟ್ಟರು - "ನಾನು ಬಹಳ ಕಷ್ಟದಲ್ಲಿ ಸಿಲುಕಿದ್ದೇನೆ; ನಾನು ಖುದ್ದಾಗಿ ನಿಮ್ಮಲ್ಲಿ ಬರಲಾರೆ. ನೀವೇ ದಯಮಾಡಿ ನನ್ನ ಮನೆಗೆ ಬಂದರೆ ಬಹಳ ಉಪಕಾರವಾಗುತ್ತದೆ" ಎಂಬ ಒಕ್ಕಣೆ ಇದ್ದ ಪತ್ರ.  ಜಾನ್ಸನ್ ಕೂಡಲೇ ಮಿತ್ರನಿಗೆ  ತಾನು ಖಂಡಿತ  ಬರುತ್ತೇನೆಂಬ ಭರವಸೆ ಕೊಟ್ಟು ಪತ್ರಕ್ಕೆ ಉತ್ತರ ಕಳಿಸಿ; ಜೊತೆಗೆ . ಒಂದು ಗಿನಿಯಷ್ಟು ಹಣ ಕಳಿಸಿಕೊಟ್ಟ.  ಬಟ್ಟೆ ತೊಟ್ಟ ನಂತರ ಜಾನ್ಸನ್ ಮಿತ್ರನ ಮನೆಗೆ ಬಂದಾಗ ಆತ ಬಾಡಿಗೆ ಇದ್ದ ಮನೆಯ ಒಡತಿ ಬಾಡಿಗೆ ಹಣ ಕೊಡದ ಆರೋಪವನ್ನು ಹೊರಿಸಿ ಗೋಲ್ಡ್ ಸ್ಮಿತ್ ನನ್ನು ಬಂಧನಕ್ಕೆ ಒಳಪಡಿಸಿದ್ದಳು. ಇದರಿಂದ ವಿಪರೀತ ನೊಂದ ಗೋಲ್ಡ್ ಸ್ಮಿತ್ ನ ಕೋಪ-ತಾಪಗಳು ತಾರಕ್ಕೇರಿದ್ದವು. ತಾನು ಕಳಿಸಿದ್ದ ಗಿನಿಯನ್ನು ಮಿತ್ರನು ಈಗಾಗಲೇ ಮುರಿಸಿ ಒಂದು ಬಾಟಲ್ ಮದ್ಯವನ್ನು ಖರೀದಿಸಿದ್ದು ಜಾನ್ಸನ್ ಗೆ ಪ್ರತ್ಯಕ್ಷವಾಗಿತ್ತು! ಮದ್ಯದ ಬಾಟಲಿಗೆ ಮುಚ್ಚಳ ಹಾಕಿ "ಏನಯ್ಯಾ,ಅದು ಹಾಗಿರಲಿ, ಈ ಪರಿಸ್ಥಿತಿಯಿಂದ ಹೇಗೆ ಹೊರಕ್ಕೆ ಬರುವುದು?" ಎಂದು ಮಿತ್ರನೊಂದಿಗೆ ಸಂಭಾಷಣೆ ಪ್ರಾರಂಭಿಸಿದ.  ತಾನು ಬರೆದ ಒಂದು ಕಾದಂಬರಿಯ ಹಸ್ತಪ್ರತಿಯನ್ನು ತೋರಿಸಿದ ಗೋಲ್ಡ್ ಸ್ಮಿತ್ "ಇದು ಮುದ್ರಣಕ್ಕೆ ತಯಾರಾಗಿದೆ" ಎಂದು ಸೂಚಿಸಿದ. ಜಾನ್ಸನ್ ಹಸ್ತಪ್ರತಿಯ ಮೇಲೆ ಕಣ್ಣಾಡಿಸಿದ. ಕಾದಂಬರಿಯ ಗುಣವನ್ನು ಕೂಡಲೇ ಅರಿತುಕೊಂಡ.  ಮನೆಯ ಒಡತಿಗೆ "ಇನ್ನು ಸ್ವಲ್ಪ ಹೊತ್ತಿನಲ್ಲಿ ಬರುತ್ತೇನೆ," ಎಂದು ಹೇಳಿದವನೇ ನೇರ ಒಬ್ಬ ಪ್ರಕಾಶಕನ ಬಳಿಗೆ ಬಂದು ಹಸ್ತಪ್ರತಿಯನ್ನು ಅರವತ್ತು ಪೌಂಡ್ ಗಳಿಗೆ ಮಾರಿದ. ಹಣವನ್ನು ಮಿತ್ರನಿಗೆ ತಂದು ಕೊಟ್ಟ. ಈ ಹಣದಿಂದ  ಗೋಲ್ಡ್ ಸ್ಮಿತ್  ಸಾಲದ ಸೆರೆಯಿಂದ ಮುಕ್ತನಾದ. ತನ್ನ ಮನೆಯ ಒಡತಿಗೆ ದೊಡ್ಡ ಬಾಯಲ್ಲಿ ಮನಸಾರ ಶಪಿಸುವುದನ್ನು ಮರೆಯಲಿಲ್ಲ! ಆ ಕಾದಂಬರಿಯೇ "ವಿಕರ್ ಆಫ್ ವೇಕ್ ಫೀಲ್ಡ್."
ಗೋಲ್ಡ್ ಸ್ಮಿತ್ ಬರೆದ  "ದ ಡೆಸರ್ಟೆಡ್ ವಿಲೇಜ್" (ಎಲ್ಲರೂ ತೊರೆದ ಹಳ್ಳಿ)  ಎಂಬ ದೀರ್ಘ ಕವನದ ಭಾಗವಾದ 'ದ ವಿಲೇಜ್ ಸ್ಕೂಲ್ ಮಾಸ್ಟರ್" ನಮ್ಮ ಒಂಬತ್ತನೇ  ತರಗತಿಯ ಪಠ್ಯ ಪುಸ್ತಕದಲ್ಲಿತ್ತು. ಇದನ್ನು ನಮಗೆ ಪಾಠ ಹೇಳಿದವರು ನ್ಯಾಷನಲ್ ಹೈಸ್ಕೂಲಿನ ಎಸ್ ಕೃಷ್ಣಪ್ಪ ಎಂಬ ಉಪಾಧ್ಯಾಯರು. ಅವರ ನೆನಪಿಗೆ ಈ ಭಾಷಾಂತರವನ್ನು ಅರ್ಪಿಸುತ್ತಿದ್ದೇನೆ. 


ಹಳ್ಳಿ ಶಾಲೆ ಮೇಷ್ಟ್ರು

ಮೂಲ ಇಂಗ್ಲಿಷ್ ಕವಿತೆ - ಆಲಿವರ್ ಗೋಲ್ಡ್ ಸ್ಮಿತ್
ಕನ್ನಡಕ್ಕೆ - ಸಿ ಪಿ ರವಿಕುಮಾರ್

ಈ ದಾರಿಯುದ್ದಕ್ಕೂ ಹಾಕಿರುವ ಬೇಲಿಯ ಮೇಲೆ 
ವ್ಯರ್ಥ ಮುಗುಳ್ನಗುವ ಪುಟ್ಟಹೂಗಳ ಸರಮಾಲೆ
ಕೇಳಿ ಲಾಗಾಯ್ತಿನ ಮಾತು, ಈ ಬೇಲಿಯ  ಹಿಂದಿತ್ತು, 
ದೊಡ್ಡ ಮನೆಯೊಂದು, ಬರೀ ಗದ್ದಲ ತುಂಬಿತ್ತು 
ಅಲ್ಲೊಬ್ಬ ಆಳು, ಆಳಲೇ ಹುಟ್ಟಿದ ಹಾಗಿದ್ದಾತ,
ಹಳ್ಳಿ ಶಾಲೆಯ ಹೆಮ್ಮೆಯ ಮಾಸ್ತರಾಗಿದ್ದ 
ನೋಡಿದರೆ ಯಾರಿಗೂ ಭಯ ಹುಟ್ಟಬೇಕು
ನನ್ನಂಥ ಹುಡುಗರಿಗೆ ಚೆನ್ನಾಗಿ ಗೊತ್ತು 
ಬೆಳಗ್ಗೆ ಮಾಸ್ತರನ ಮುಖವನ್ನು ನೋಡುತ್ತಲೇ 
ಇಂದು ಯಾರಿಗೆ ವಕ್ರ ಎಂದು ಊಹಿಸುವ ಕಲೆ!
ಹೇಗೋ ಬರಿಸಿಕೊಂಡು ಬಾರದ ನಗೆ
ನಗುತ್ತಿದ್ದೆವು ನಾವು ಈತನ ಪ್ರತಿಯೊಂದು ಚಾಟಿಕೆಗೆ!
ಆತನ ಬಳಿಯಿತ್ತು ನಗೆ ಚಾಟಿಕೆಗಳ ದೊಡ್ಡ ಖಜಾನೆ! 
ಕೋಪ ಬಂದಾಗ ಮಾತ್ರ ಮುಖದಲ್ಲಿ ಎಂಥ ಬದಲಾವಣೆ!
ಇಂದು ಬರಲಿದೆ ಯಾರಿಗೋ ಕಪ್ಪು ಅಮಾವಾಸ್ಯೆ 
ಎಂದು ಗುಸುಗುಸು ಹಬ್ಬುತ್ತಿತ್ತು ಎಲ್ಲೆಡೆಗೆ!
ಪಾಪ! ಆತನ ಮನಸ್ಸಿನಲ್ಲಿ ಇಲ್ಲದೇ ಇರಲಿಲ್ಲ ಕರುಣೆ
ಪಾಠ ಕಲಿಸಬೇಕೆಂಬ ಹುಚ್ಚು ಜಾಸ್ತಿ ಇತ್ತಷ್ಟೇ!
ನಮ್ಮ ಮಾಸ್ತರು ಎಷ್ಟು ಕಲಿತವರು ಎಂದು 
ಹೆಮ್ಮೆ ಹೇಳಿಕೊಳ್ಳುತ್ತಿದ್ದರು ಹಳ್ಳಿಗರು -
ಓದು-ಬರಾವು ಲೆಕ್ಕ-ಪತ್ರ ಹಾಗಿರಲಿ
ಎಕರೆ ಗುಂಟೆಗಳ ಲೆಕ್ಕ  ಬಾಯತುದಿಯಲ್ಲಿ!
ಬಿಂದಿಗೆಯಲ್ಲಿ ಎಷ್ಟು ಹಿಡಿಯುತ್ತದೆ ಹಾಲು 
ಎಂದು ಖಡಕ್ ಲೆಕ್ಕ ಹೇಳುತಾರೆ ಮಾಸ್ತರರು!
ವಾದಿಸುವುದರಲ್ಲೂ ನಮ್ಮ ಮಾಸ್ತರರು ಮುಂದು!
ಸೋತರೂ ನಿಲ್ಲದೆ  ವಾದ ಮುಂದುವರೆಯುವುದು!
ಇವರ ಸುತ್ತಲೂ ಬಾಯ್ ಬಿಟ್ಟುಕೊಂಡು ಹಳ್ಳಿಗರು 
ನಿಲ್ಲುವರು ಮೂಗಿನ ಮೇಲೆ ಬೆರಳಿಟ್ಟುಕೊಂಡು!
ಹೇಗಿಟ್ಟುಕೊಂಡಿದ್ದಾರೆ ಇಷ್ಟೊಂದು ವಿಷಯ 
ಪುಟ್ಟ ತೆಂಗಿನಕಾಯಿ ತಲೆಯಲ್ಲಿ, ವಿಸ್ಮಯ! 
ಈಗ ಈ ವೈಭೋಗವೆಲ್ಲಾ  ಹಳೆಯ ಮಾತಾಯಿತು - 
ಯಾರ ತಲೆಯಲ್ಲೂ ಉಳಿದಿಲ್ಲ ಮಾಸ್ತರರ ನೆನಪು!

---
Image of Oliver Goldsmith - Courtesy of  http://en.wikiquote.org/wiki/Oliver_Goldsmith 
Kannada Translation of "The Village Schoolmaster" by Oliver Goldsmith
(c) C.P. Ravikumar, 2014

ಕಾಮೆಂಟ್‌ಗಳು

  1. Here is the original poem by Oliver Goldsmith -

    The Village Schoolmaster

    Beside yon straggling fence that skirts the way
    With blossom'd furze unprofitably gay,
    There, in his noisy mansion, skill'd to rule,
    The village master taught his little school;
    A man severe he was, and stern to view,
    I knew him well, and every truant knew;
    Well had the boding tremblers learn'd to trace
    The days disasters in his morning face;
    Full well they laugh'd with counterfeited glee,
    At all his jokes, for many a joke had he:
    Full well the busy whisper, circling round,
    Convey'd the dismal tidings when he frown'd:
    Yet he was kind; or if severe in aught,
    The love he bore to learning was in fault.
    The village all declar'd how much he knew;
    'Twas certain he could write, and cipher too:
    Lands he could measure, terms and tides presage,
    And e'en the story ran that he could gauge.
    In arguing too, the parson own'd his skill,
    For e'en though vanquish'd he could argue still;
    While words of learned length and thund'ring sound
    Amazed the gazing rustics rang'd around;
    And still they gaz'd and still the wonder grew,
    That one small head could carry all he knew.
    But past is all his fame. The very spot
    Where many a time he triumph'd is forgot.

    ಪ್ರತ್ಯುತ್ತರಅಳಿಸಿ
  2. ಕೆಲವು ಸಾಲುಗಳಲ್ಲಿ ಜನರ ಮುಗ್ದತೆ, ಮೇಷ್ಟ್ರ ಕೋಪ ಅದರ ಹಿಂದಿನ ಹಾಸ್ಯ ಮನೋಭಾವ ಹಿಡಿದಿಟ್ಟಿದ್ದಾರೆ ,
    ,ಮತ್ತು ಅವರನ್ನು ಮರೆಯದೆ ಬರೆದಿಟ್ಟ ಸಾಲುಗಳು

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)