ಮತ್ತೆ ಬೆಳಗಾಗುವುದು

ಸಾಹಿರ್ ಲುಧಿಯಾನವಿ ಅವರ ಲೇಖನಿಯಲ್ಲಿ ಮೂಡಿದ "ವೋ ಸುಬಹ್ ಕಭೀ ತೋ ಆಯೇಗೀ" ಯಾರ ಮನಸ್ಸನ್ನಾದರೂ ಕಲಕುವ ಗೀತೆ. ಫಿರ್ ಸುಬಹ್  ಹೋಗೀ ಎಂಬ ಚಿತ್ರಕ್ಕೆ ಬರೆದ ಗೀತೆಯನ್ನು ಖಯ್ಯಾಮ್ ಸಂಗೀತಕ್ಕೆ ಅಳವಡಿಸಿದ್ದಾರೆ ಮತ್ತು ಮುಖೇಶ್ ಹಾಡಿದ್ದಾರೆ.  ಇಲ್ಲವೇ ಇಲ್ಲವೋ ಎಂಬಷ್ಟು ಹಿನ್ನೆಲೆ ವಾದ್ಯವನ್ನು ಬಳಸಿ ಸಾಹಿತ್ಯಕ್ಕೆ ಒತ್ತು ಕೊಟ್ಟಿರುವುದು ಈ ಗೀತೆಯ ವಿಶೇಷ.  ತಮ್ಮ ಮಾಮೂಲು ಶೈಲಿಯಲ್ಲಿ ಕಠಿಣ ಉರ್ದೂ ಶಬ್ದಗಳನ್ನು ಬಳಸುವ ಸಾಹಿರ್ ಈ ಗೀತೆಯಲ್ಲಿ ವಿಭಿನ್ನವಾದ ಶೈಲಿಯನ್ನು ಅನುಸರಿಸಿದ್ದಾರೆ ಎಂಬುದು ಕೂಡಾ ಈ ಹಾಡಿನ ವಿಶೇಷ.

ಒಂಬತ್ತು ತಿಂಗಳು ತುಂಬುವ ಮೊದಲೇ ಹುಟ್ಟಿದ ನನ್ನ ಮಗಳು ಹತ್ತು ದಿನ  ತೀವ್ರ ನಿಗಾ ಘಟಕದಲ್ಲಿ ಇದ್ದ ಸಮಯ. ಮಗು ಹುಟ್ಟಿದ ಸಂಭ್ರಮ ಇರಬೇಕಾಗಿದ್ದ ಕಡೆ ಆತಂಕ. ಪ್ರತಿ ದಿವಸ ಮನೆಯಿಂದ ವಾರ್ಡಿಗೆ, ವಾರ್ಡಿನಿಂದ ಐಸಿಯೂ, ಐಸಿಯೂನಿಂದ ಡಾಕ್ಟರ್ ಕೋಣೆಗೆ ತಿರುಗುವುದು. ಡಾಕ್ಟರ್ ಏನಾದರೂ ಶುಭಸೂಚನೆ ನೀಡುತ್ತಾರೋ ಎಂದು ಅವರ ಕಡೆ ನೋಡುವುದು.  ಯಾವ ಭರವಸೆಯನ್ನೂ ಕೊಡಲು ಸಾಧ್ಯವಿಲ್ಲ ಎಂಬ ವೈದ್ಯರ ಮಾತುಗಳನ್ನು ಕೇಳಿಸಿಕೊಂಡರೂ ಮನೆಯ ಹಿರಿಯರಿಗೆ "ಎಲ್ಲಾ ಚೆನ್ನಾಗಿದೆ" ಎಂದೇ  ಹೇಳುವುದು. ಈ ದಿನಗಳು ಎಂದು ಕೊನೆಗೊಳ್ಳುವುವೋ ಎಂದು ಅಧೀರರಾಗುವುದು ...

ಒಂದು ದಿನ ಐಸಿಯೂಗೆ ಹೋಗಿದ್ದಾಗ ಹೊರಗೆ ಏನೋ ಸ್ವಲ್ಪ ಗಲಾಟೆ ಕೇಳಿಸಿತು. ಒಬ್ಬ ವೈದ್ಯೆ ಅಲ್ಲಿ ನಿಂತಿದ್ದ ಒಬ್ಬ ಯುವತಿಗೆ ಬೈಯ್ಯುತ್ತಿದ್ದರು. ಹಣವನ್ನು ಯಾಕೆ ಕಟ್ಟಿಲ್ಲ ಎಂದು ಆಸ್ಪತ್ರೆಯ ಸಿಬ್ಬಂದಿ ಸಿಡಿಮಿಡಿ ಮಾಡುತ್ತಿದ್ದರು. ಆ ಯುವತಿಯ ಪಕ್ಕದಲ್ಲಿ ಒಬ್ಬ ವಯಸ್ಸಾದ ಹೆಂಗಸು ನಿಂತಿದ್ದಳು. ಅವರನ್ನು ನೋಡಿದರೆ ಅವರು ಬಡವರು ಎಂದು ಹೇಳಬಹುದಾಗಿತ್ತು. ವೈದ್ಯೆಯ ಮಾತುಗಳನ್ನು ಕೇಳಿಸಿಕೊಳ್ಳುತ್ತಲೇ ಇಲ್ಲವೋ ಎಂಬಂತೆ ಅವರಿಬ್ಬರೂ ಕಲ್ಲುಶಿಲೆಗಳ ಹಾಗೆ ನಿಂತಿದ್ದರು. ನಂತರ ನನಗೆ ತಿಳಿದು ಬಂತು. ಆ ಯುವತಿಯ ಮಗು ಐಸಿಯೂನಲ್ಲಿದೆ.  ಆ ಮಗುವಿಗೆ ಹೃದಯದ ತೊಂದರೆ ಇದೆ. ಅಂತಿಂಥ ತೊಂದರೆಯಲ್ಲ - ಹೃದಯದಲ್ಲಿ ಒಂದು ರಂಧ್ರವಿದೆ. ಈಗಾಗಲೇ ಐಸಿಯೂನಲ್ಲಿ ಒಂದು ವಾರ ಕಳೆದಿದೆ. ಆಸ್ಪತ್ರೆಗೆ ಕೊಡಬೇಕಾದ ಫೀಸ್ ಕಟ್ಟಲು ಇವರ ಬಳಿ ಹಣವಿಲ್ಲ.  ಅಷ್ಟೇ ಅಲ್ಲ - ಆ ಯುವತಿಯ ಗಂಡನಿಗೆ ಹೆಣ್ಣು ಮಗುವಾಗಿದೆ ಎಂಬ ಸಿಟ್ಟು; ಹೀಗಾಗಿ ಅವನು ಆಸ್ಪತ್ರೆಯ ಕಡೆ ಮುಖವನ್ನೇ ತೋರಿಸಿಲ್ಲ.  ಆ ವೃದ್ಧ ಹೆಂಗಸು ತನ್ನ ಬಾಣಂತಿ ಮಗಳ ಆರೈಕೆಯನ್ನು ಹೇಗೆ ಪೂರೈಸುತ್ತಿದ್ದಳೋ! ಇಂಥ ನಿರಾಶಾಜನಕ ಸ್ಥಿತಿಯಲ್ಲಿ ಅವರು ಅದು ಹೇಗೆ ಜೀವನ ಮಾಡುತ್ತಿದ್ದರೋ!

ತ್ತೆ ಬೆಳಗಾಗುವುದು ಎಂಬ ಭರವಸೆ ಇಲ್ಲದಿದ್ದರೆ ಬದುಕು ಅಸಂಭವವಾಗುತ್ತದೆ. ಸಾಹಿರ್ ಅವರು ಇಂಥ ನತದೃಷ್ಟರ ನೋವು, ಹತಾಶೆ, ಮತ್ತು ಕ್ಷೀಣ ಭರವಸೆಗಳನ್ನು ತಮ್ಮ ಗೀತೆಯಲ್ಲಿ ಸಾಕಾರಗೊಳಿಸಿದ್ದಾರೆ.  ನೋವು ತುಂಬಿದ ಧ್ವನಿಯಲ್ಲಿ ಮುಖೇಶ್ ಇದನ್ನು ಹಾಡಿದ್ದಾರೆ. ಗೀತೆಯಲ್ಲಿ ನಾಯಕ ಹತಾಶಳಾಗಿರುವ ನಾಯಕಿಗೆ ಸಾಂತ್ವನ ಹೇಳುತ್ತಿದ್ದಾನೆ. ಕತ್ತಲು ಕರಗದೇ ಇರುತ್ತದೆಯೇ, ಮತ್ತೆ ಬೆಳಗಾಗದೇ ಇರುವುದೇ ಎಂದು ಕೇಳುವಾಗ ಅವನಲ್ಲೂ ಅಂತಹ ನಂಬಿಕೆ ಇದ್ದಂತೆ ತೋರುವುದಿಲ್ಲ.  ಬೆಳಗಿಗಾಗಿ ಕಾಯುತ್ತಾ ತನ್ನಂಥವರ ಬದುಕು ದುಸ್ಸಹವಾಗಿರುವುದರ ಬಗ್ಗೆ ಅವನಿಗೆ ಆಕ್ರೋಶವೂ ಇದೆ. ಆದರೆ ಎಷ್ಟೇ ಕ್ಷೀಣವಾಗಿದ್ದರೂ ಭರವಸೆಯೇ ಒಂದು ಬೆಳಕು.

ನಾಯಕನ ಪರಿಸ್ಥಿತಿಗೆ ಸಮಾಜವೂ ಕಾರಣ ಎಂಬ ತಾತ್ಪರ್ಯ ಗೀತೆಯಲ್ಲಿದೆ. ಸಮಾಜದಲ್ಲಿ ಒಬ್ಬ ಬಡವನಿಗೆ, ಅವನ ಭಾವನೆಗಳಿಗೆ, ಅವನ ಆಕಾಂಕ್ಷೆಗಳಿಗೆ ಬೆಲೆ ಇಲ್ಲ. ಸಾಹಿರ್ ಈ ಗೀತೆಯನ್ನು ಬರೆದಾಗ ಉತ್ತರಭಾರತದ  ನಾಯ್ಡಾದಲ್ಲಿ ಅಂಗಾಂಗಗಳನ್ನು ಕದಿಯಲು ಮಕ್ಕಳನ್ನು ಅಮಾನುಷವಾಗಿ ಹತ್ಯೆ ಮಾಡಿದ್ದನ್ನು ಕೇಳಿರಲಿಲ್ಲ. ಹೆತ್ತ ಮಕ್ಕಳನ್ನೇ ಮಾರುವ ಸ್ಥಿತಿಗೆ ಬಂದ ತಂದೆ-ತಾಯಿಯರ ವಿಷಯ ಓದಿರಲಾರರು. ಸಾಲದ ಭಾರ ತಡೆಯಲಾರದೆ ಆತ್ಮಹತ್ಯೆ ಮಾಡಿಕೊಂಡ ರೈತರ ವಿಷಯ ಕೇಳಿರಲಾರರು ... ಈ ಗೀತೆಯನ್ನು ರಚಿಸಿದ ಐವತ್ತು ವರ್ಷಗಳ ಅವಧಿಯಲ್ಲಿ ಸಮಾಜ ಅದೆಷ್ಟು ಕುಸಿದಿದೆ! ಇಷ್ಟಾದರೂ "ಬರದೇನು ಬಾಳಿಗೆ ಆ ಬೆಳಗು?" (ವೋ ಸುಬಹ್ ಕಭೀ ತೋ ಆಯೇಗಿ) ಎಂಬ ಭರವಸೆಯೇ ನಮಗಿರುವ ದೀಪ.


ಮತ್ತೆ ಬೆಳಗಾಗುವುದು ಮೂಲ ಹಿಂದಿ ಗೀತೆ: ಸಾಹಿರ್ ಲುಧಿಯಾನವಿ
ಕನ್ನಡಕ್ಕೆ: ಸಿ ಪಿ ರವಿಕುಮಾರ್


ಬರದೇನು ಬಾಳಿಗಾ ಬೆಳಗು?
ಈ ಕಾಲ-ಕರಾಳದ ಮುಖದಿಂದ ಸರಿದಾಗ ಕಾರಿರುಳಿನ ಸೆರಗು
ಕರಗುವುದೋ ದುಃಖದ ಮುಗಿಲೆಂದು, ಉಕ್ಕುವುದೋ ಆನಂದದ ಕಡಲು
ಕುಣಿವುದು ಗಗನವು ಪುಳಕಿತಗೊಂಡು, ಇಳೆ ಹಾಡುವುದೋ ಹರ್ಷದ ಹಾಡು
ಬರದೇನು ಬಾಳಿಗಾ ಬೆಳಗು?

ಆ ಬೆಳಗಿಗೆ ಕಾಯುತ ಯುಗದಿಂದ, ದಿನದಿನವೂ ಸಾಯುತ್ತಿದೆ ಬದುಕು
ಅಮೃತದೊಂದೇ ಹನಿಹನಿಗಾಗಿ ಕುಡಿವೆವು ಕಾರ್ಕೋಟಕ ವಿಷವನ್ನು
ಸೋತವರು, ಹಸಿದವರನು ಕಂಡು ಕರಗದೆ ಕಲ್ಲಿನ ಕರುಣಾಸಿಂಧು?
ಬರದೇನು ಬಾಳಿಗಾ ಬೆಳಗು?

ಇವು ನನ್ನಯ ನಿನ್ನಯ ಆಕಾಂಕ್ಷೆ, ಸರಿ ಇವುಗಳಿಗೆಲ್ಲಿದೆ ಬೆಲೆಯಿಷ್ಟು?
ಮಣ್ಣಿಗೆ ಇದ್ದರೂ ಇದ್ದೀತು ಬೆಲೆ, ಮಾನವನಿಗೆ ಎಲ್ಲಿದೆ ಕಿಮ್ಮತ್ತು?
ತೂಗುವುದಿಲ್ಲವೋ ಮನುಜನನೆಂದು ತಕ್ಕಡಿಯಲಿ ಹುಸಿ ಕಾಸನ್ನಿಟ್ಟು
ಬರದೇನು ಬಾಳಿಗಾ ಬೆಳಗು?

ಕಾಮೆಂಟ್‌ಗಳು

  1. Hindi Lyrics of the song - courtesy http://geetmanjusha.com/

    वो सुबह कभी तो आयेगी, वो सुबह कभी तो आयेगी
    इन काली सदियों के सर से, जब रात का आँचल ढलकेगा
    जब दुःख के बादल पिघलेंगे, जब सुख का सागर छलकेगा
    जब अंबर झूम के नाचेगा, जब धरती नग्में गायेगी
    वो सुबह कभी तो आयेगी

    जिस सुबह की खातिर जुग जुग से, हम सब मर मर कर जीते हैं
    जिस सुबह के अमृत की धून में, हम जहर के प्याले पीते हैं
    इन भूखी प्यासी रूहों पर, एक दिन तो करम फर्मायेगी
    वो सुबह कभी तो आयेगी

    माना के अभी तेरे मेरे अरमानों की क़िमत कुछ भी नहीं
    मिट्टी का भी हैं कुछ मोल मगर, इन्सानों की क़िमत कुछ भी नहीं
    इन्सानों की इज़्ज़त जब झूठे सिक्कों में ना तोली जायेगी
    वो सुबह कभी तो आयेगी

    ಪ್ರತ್ಯುತ್ತರಅಳಿಸಿ
  2. Can you translate the kogile(ಕತ್ತಲು ಕಳೆದಿದೆ) poem by Sri Seetharama Bhat into English
    My Email id sswami_nathan@hotmail.com

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)