ಒಂದು ವರ್ಷ ಕಂಡ "ರವಿ ಕಾಣದ್ದು"

ಸಿ ಪಿ ರವಿಕುಮಾರ್ 

ನನ್ನ ಬ್ಲಾಗ್ ಗೆ ಒಂದು ವರ್ಷ ತುಂಬಿತು. ಮೇ ೮, ೨೦೧೩ ದಿನಾಂಕದಂದು ನಾನು ಪ್ರಾರಂಭಿಸಿದ "ರವಿ ಕಾಣದ್ದು" ಬ್ಲಾಗ್ ಬರಹಗಳ ಸಂಖ್ಯೆ ನೂರು ದಾಟಿವೆ. ಇದುವರೆಗೂ ಸುಮಾರು ೧೧,೦೦೦ ಹಿಟ್ಸ್ ನನ್ನ ಬರಹಗಳಿಗೆ ಬಂದಿವೆ.  ನನ್ನ ಬರಹಗಳನ್ನು ಓದಿ ಪ್ರೋತ್ಸಾಹ ನೀಡುತ್ತಿರುವ ಎಲ್ಲರಿಗೂ ನನ್ನ ಕೃತಜ್ಞತೆಗಳು. ಈ ಸಂದರ್ಭದಲ್ಲಿ ಕೆಲವು ನೆನಪುಗಳನ್ನು ಓದುಗರ ಜೊತೆ ಹಂಚಿಕೊಳ್ಳುತ್ತಿದ್ದೇನೆ.

ನ್ನ ಬರವಣಿಗೆಯ ಹವ್ಯಾಸಕ್ಕೆ ಮೊದಲು ಪ್ರೋತ್ಸಾಹ ನೀಡಿದವರು ನನ್ನ ತಂದೆ ದಿ. ಸಿ. ಎಚ್. ಪ್ರಹ್ಲಾದರಾವ್. ಅವರು ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಹವ್ಯಾಸಿ ಪತ್ರಕರ್ತರಾಗಿದ್ದವರು. ನಮ್ಮ ಮನೆಯಲ್ಲಿ ಪುಸ್ತಕ್ಗಗಳೇ ಪುಸ್ತಕಗಳು! ನಮ್ಮ ತಂದೆಗೆ ದೆಹಲಿಗೆ ವರ್ಗವಾದಾಗ ನಾವು ಒಂದೇ ಕೋಣೆಯ ಮನೆಯಲ್ಲಿ ಬಾಡಿಗೆಗೆ ಇದ್ದೆವು; ಆಗ ನೂರಾರು ಪುಸ್ತಕಗಳನ್ನು ಅವರು ದೆಹಲಿ ಕನ್ನಡ ಶಾಲೆಯ ಗ್ರಂಥಾಲಯಕ್ಕೆ ದಾನ ಕೊಟ್ಟರು. ಈ ಪುಸ್ತಕಗಳನ್ನು ಇಟ್ಟುಕೊಳ್ಳಲು ನಮ್ಮ ಮನೆಯಲ್ಲಿ ಸ್ಥಳವಿದ್ದರೆ ತಾನೇ! ಮುಂದೆ ನಾವು ಎರಡು ಕೋಣೆಯ ಮನೆಗೆ ಬಡ್ತಿ ಹೊಂದಿದೆವು. ಆಗ ಬೆಂಗಳೂರಿಗೆ ಬೇಸಿಗೆ ರಜೆಗೆಂದು ಬಂದಾಗ ನಮ್ಮ ತಂದೆ ಕನ್ನಡ ಸಾಹಿತ್ಯ ಪರಿಷತ್ತಿನವರು ಆಯೋಜಿಸಿದ ಪುಸ್ತಕ ಪ್ರದರ್ಶನದಲ್ಲಿ  ಚಿಕ್ಕ ಹುಡುಗರಾಗಿದ್ದ ನನಗೆ ಮತ್ತು ನನ್ನ ಅಣ್ಣನಿಗೆ ಏನಿಲ್ಲವೆಂದರೂ ಐವತ್ತು-ಅರವತ್ತು ಪುಸ್ತಕಗಳನ್ನು ಕೊಂಡುತಂದರು! ಒಂದಕ್ಕಿಂತಲೂ ಒಂದು ಆಕರ್ಷಕ ಪುಸ್ತಕಗಳು! ಇವುಗಳನ್ನು ಓದುತ್ತಾ ರೈಲಿನಲ್ಲಿ ಎರಡು ದಿನಗಳ ಪ್ರಯಾಣ ಮಾಡಿ ದೆಹಲಿಗೆ ಮರಳಿದ ನೆನಪು ಎಂದೂ ಮಾಸುವುದಿಲ್ಲ!  ಇದಲ್ಲದೆ ವಿಮರ್ಶೆಯ ಕೃಪೆಗೆಂದು ಪ್ರತಿ ವಾರವೂ ವಿವಿಧ ಲೇಖಕರ ಪುಸ್ತಕಗಳು ಮನೆಗೆ ಬಂದು ಸೇರುತ್ತಲೇ ಇರುತ್ತಿದ್ದವು!

ದೆಹಲಿಯಿಂದ ಮರಳಿ ಬಂದು ನ್ಯಾಷನಲ್ ಹೈಸ್ಕೂಲ್ ಸೇರಿದಾಗ ನಾನು ಕನ್ನಡವನ್ನು ಮೊದಲ ಭಾಷೆಯಾಗಿ ಆಯ್ದು ಕೊಂಡೆ. "ಅಯ್ಯೋ! ಕನ್ನಡದಲ್ಲಿ ಸ್ಕೋರ್ ಮಾಡೋದಕ್ಕೆ ಆಗೋದಿಲ್ಲ! ಸಂಸ್ಕೃತ ತೊಗೋ!" ಎಂದು ಹಿತಬೋಧನೆ ಮಾಡಿದವರು ಹಲವರು. ನ್ಯಾಷನಲ್ ಹೈಸ್ಕೂಲ್ ಕನ್ನಡ ಮೇಷ್ಟ್ರು ಕೆ. ಶ್ರೀಕಂಠಯ್ಯ ನನ್ನಲ್ಲಿ ಹಳೆಗನ್ನಡ ಕಾವ್ಯವನ್ನು ಕುರಿತಾಗಿ ಶ್ರದ್ಧೆಯನ್ನೂ ಗೌರವವನ್ನೂ ಉಂಟುಮಾಡಿದರು. ಇದಕ್ಕೆ ಪೂರ್ವದಲ್ಲಿ ನಡೆದ ಒಂದು ಘಟನೆಯನ್ನು ನಿಮಗೆ ಹೇಳಬೇಕು. ನಾನು ನವದೆಹಲಿಯಲ್ಲಿ ಓದಿದ್ದು ದೆಹಲಿ ಕನ್ನಡ ಶಾಲೆಯಲ್ಲಿ.  ಅಲ್ಲಿ ಕನ್ನಡವನ್ನು ಐಚ್ಛಿಕ ವಿಷಯವನ್ನಾಗಿ ನಮಗೆ ಶ್ರೀಮತಿ ಮಾಯಾ ಶೆಣೈ ಎಂಬ  ಅಧ್ಯಾಪಕಿ ಪಾಠ ಮಾಡುತ್ತಿದ್ದರು.  ನಮಗೆ ಯಾರಿಗೂ ಹಳೆಗನ್ನಡದ ಗಂಧವೇ ಇರಲಿಲ್ಲ! ಒಮ್ಮೆ ಒಬ್ಬ ಪ್ರಸಿದ್ಧ ಗಮಕಿಗಳನ್ನು ಶಾಲೆಗೆ ಕರೆಸಿದ್ದರು. ಅವರು ನಮಗೆ ಒಂದು ಹಳೆಗನ್ನಡ ಕಾವ್ಯವನ್ನು ಗಮಕದ ಶೈಲಿಯಲ್ಲಿ ಓದಿ ಹೇಳಿದರು. ಅವರು ಓದುತ್ತಿದ್ದುದನ್ನು ಅರ್ಥ ಮಾಡಿಕೊಳ್ಳಲಾರದೆ ನಾವು ಮುಸಿಮುಸಿ ನಗುತ್ತಿದ್ದೆವು! ಅವರು ಓದಿದ್ದು ಹರಿಶ್ಚಂದ್ರ ಕಾವ್ಯದ  ವಸಿಷ್ಠ-ವಿಶ್ವಾಮಿತ್ರ ಸಂವಾದ ಎಂದು ನೆನಪಿದೆ. ಇಂದಿಗೂ ಈ ಘಟನೆ ನೆನೆದು ನನಗೆ ಪರಿತಾಪವಾಗುತ್ತದೆ.

ಕೆ ಶ್ರೀಕಂಠಯ್ಯ ಅವರು  ಹಳೆಗನ್ನಡದ ಕಾವ್ಯವನ್ನು ಹೇಗೆ ಓದಬೇಕು ಎಂಬುದನ್ನು ಓದುವ ಮೂಲಕ ನಮಗೆ ಹೇಳಿಕೊಟ್ಟರು. ಅವರು ಓದಿ ಹೇಳಿದ ರನ್ನ, ಪಂಪ, ರಾಘವಾಂಕ ಮೊದಲಾದ ಕವಿಗಳ ಕಾವ್ಯ ಭಾಗಗಳ ಸ್ವಾರಸ್ಯವನ್ನು ನಾನು ಇಂದಿಗೂ ನೆನಪಿಟ್ಟುಕೊಂಡಿದ್ದೇನೆ. ಅದೇ ಸಂದರ್ಭದಲ್ಲಿ ನಮ್ಮ ಮನೆಯಲ್ಲಿ ಲೇಖಕ ನಿರಂಜನ ಸಂಪಾದಿಸಿದ "ಜ್ಞಾನ ಗಂಗೋತ್ರಿ" ವಿಶ್ವಕೋಶದ ಏಳು ಭಾಗಗಳೂ ಬಂದಿದ್ದವು. ಜ್ಞಾನಗಂಗೋತ್ರಿ ಕನ್ನಡದಲ್ಲಿ ಒಂದು ಅಪೂರ್ವವಾದ ಪ್ರಯೋಗ. ಅದರಲ್ಲಿದ್ದ ಲೇಖನಗಳು ನನ್ನ ವಿಶ್ವವನ್ನು ವಿಸ್ತರಿಸಿದವು.

ಮುಂದೆ ನ್ಯಾಷನಲ್ ಕಾಲೇಜಿನಲ್ಲಿ ನಮಗೆ ಪಾಠ ಮಾಡಿದ ಶ್ರೀ ಎಚ್ ಎಸ್ ಮಾಧವರಾವ್ ಮತ್ತು ಕ ನಂ (ಶ್ರೀ ಕೆ ಎನ್ ನಾಗರಾಜು) ಮತ್ತು ನಾವು ಓದುತ್ತಿದ್ದಾಗ ಹೊಸದಾಗಿ ಕನ್ನಡ ಅಧ್ಯಾಪಕಿಯಾಗಿ ಸೇರಿದ ಶ್ರೀಮತಿ ಎಂ ಲೀಲಾವತಿ ನನ್ನ ಕನ್ನಡ ಬರವಣಿಗೆಯ ಉತ್ಸಾಹಕ್ಕೆ ನೀರೆರೆದು ಪೋಷಿಸಿದರು. ಮೊದಲ ಕನ್ನಡ ತರಗತಿಯಲ್ಲಿ ಮಾಧವರಾವ್ ನಮಗೆ ಮೂರು ವಿಷಯಗಳನ್ನು ಕೊಟ್ಟು ಯಾವುದಾದರೂ ವಿಷಯವನ್ನು ಕುರಿತು ಪ್ರಬಂಧ ಬರೆಯಿರಿ ಎಂದು ಹೇಳಿದರು. ನಾನು ಬರೆದ "ಸೊಳ್ಳೆಗಳು" ಎಂಬ ಪ್ರಬಂಧವನ್ನು ಮುಂದಿನ ತರಗತಿಯಲ್ಲಿ ಎಲ್ಲರ ಮುಂದೆ ಹೊಗಳಿದರು! ಬಸವನಗುಡಿ ನ್ಯಾಷನಲ್ ಕಾಲೇಜಿನ  ಆ ದಿನಗಳ ಸಾಂಸ್ಕೃತಿಕ ಚಟುವಟಿಕೆಗಳನ್ನು ನೆನೆದರೆ ಇಂದಿಗೂ ರೋಮಾಂಚನವಾಗುತ್ತದೆ! ಇಂಗ್ಲಿಷ್ ಕ್ಲಬ್, ಕನ್ನಡ ಸಂಘ, ಹಿಂದಿ ಸಮಿತಿ ಇವುಗಳೆಲ್ಲಾ ಏರ್ಪಡಿಸುತ್ತಿದ್ದ ಸ್ಪರ್ಧೆಗಳು, ಭಾಷಣಗಳು, ಒಂದೇ ಎರಡೇ! ಕನ್ನಡ ಸಂಘದ ಮೂಲಕ ನಮಗೆ ಕವಿ ಗೋಪಾಲಕೃಷ್ಣ ಅಡಿಗ, ಕೆ ಎಸ್ ನಿಸಾರ್ ಅಹ್ಮದ್,  ಸಂಶೋಧಕ ಎಂ ಚಿದಾನಂದಮೂರ್ತಿ, ಜಿ ವೆಂಕಟಸುಬ್ಬಯ್ಯ ಮೊದಲಾದವರ ಭಾಷಣಗಳನ್ನು ಕೇಳುವ ಅವಕಾಶ ದೊರೆಯಿತು.

ಆಗ ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘದ ಮೂಲಕ ದಿ. ಶ್ರೀನಿವಾಸರಾಜು ಅ ನ ಕೃ ಸ್ಮಾರಕ ಪ್ರಬಂಧ ಸ್ಪರ್ಧೆ ಏರ್ಪಡಿಸುತ್ತಿದ್ದರು. ನಮ್ಮ ಕನ್ನಡ ಮೇಷ್ಟ್ರು ಕ. ನಂ. ಹಾಗೂ ಮಾಧವರಾವ್ ಇಬ್ಬರೂ ನನ್ನನ್ನು ಭಾಗವಹಿಸಲು ಹುರಿದುಂಬಿಸಿದರು. ನನಗೆ ಬಹುಮಾನವೂ ಬಂತು! ಮುಂದೆ ಸತತವಾಗಿ ಮೂರು ಸಲ ನನಗೆ ಈ ಪ್ರಬಂಧಸ್ಪರ್ಧೆಯಲ್ಲಿ ಬಹುಮಾನ ಸಿಕ್ಕಿತು. ಶ್ರೀನಿವಾಸರಾಜು ಬಹಳ ಒಳ್ಳೆಯ ಪುಸ್ತಕಗಳನ್ನು ಬಹುಮಾನ ರೂಪದಲ್ಲಿ ಕೊಡುತ್ತಿದ್ದರು.  ಅಷ್ಟೇ ಅಲ್ಲ, ನಮ್ಮ ಬಹುಮಾನಿತ ಲೇಖನಗಳನ್ನು ಪ್ರಕಟಿಸಿ ವಿಜೇತರಿಗೆ ಇಪ್ಪತ್ತೈದು ಪ್ರತಿಗಳನ್ನು ಉಚಿತವಾಗಿ ಕೊಡುತ್ತಿದ್ದರು!

ದ್ವಿತೀಯ ಪಿ ಯು ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ನಾನು ನೂರಕ್ಕೆ ತೊಂಬತ್ತಾರು ಅಂಕ ಗಳಿಸಿದ್ದು ಒಂದು ಸುದ್ದಿಯಾಗಿಬಿಟ್ಟಿತು! ಪಿ ಯೂ ಸಿ ಮುಗಿಸಿ ಇಂಜಿನಿಯರಿಂಗ್ ಕಾಲೇಜ್ ಸೇರುವ ಮುನ್ನ ಬೇಸಿಗೆ ರಜೆಯಲ್ಲಿ ಕ.ನಂ. ನನಗೆ ಒಂದು ಪ್ರಾಜೆಕ್ಟ್ ಕೊಟ್ಟರು. ಆಗ ಸಮುದಾಯ ಎಂಬ ನಾಟಕ ತಂಡದವರು ಹಿಂದಿ  ಲೇಖಕ ಸರ್ವೇಶ್ವರ ದಯಾಲ್ ಸಕ್ಸೇನಾ ಅವರ "ಬಕರಿ" ಎಂಬ ನಾಟಕವನ್ನು ಕನ್ನಡದಲ್ಲಿ ಅನುವಾದ ಮಾಡಿಕೊಡಲು ಯಾರಿಗಾದರೂ ಸಾಧ್ಯವೇ ಎಂದು ಕ.ನಂ. ಅವರನ್ನು ಕೇಳಿದ್ದರು. ನನಗೆ ಹಿಂದಿ ಭಾಷೆ ಬರುತ್ತದೆ ಎಂದು ಗೊತ್ತಿದ್ದ ನಮ್ಮ ಮೇಷ್ಟ್ರು ನನ್ನಲ್ಲಿ ವಿಶ್ವಾಸವಿಟ್ಟು ಆ ಕೆಲಸವನ್ನು ನನಗೆ ಒಪ್ಪಿಸಿದರು. ಬಕರಿ ಎಂಬುದು ಒಂದು ರಾಜಕೀಯ ಪ್ರಹಸನ. ಅದರ ಅನುವಾದವನ್ನು ನಾನು ಒಂದು ಸವಾಲಾಗಿ ಸ್ವೀಕರಿಸಿದೆ. ನಾಟಕದಲ್ಲಿ ಅನೇಕ ಹಾಡುಗಳು ಬರುತ್ತವೆ; ಇವುಗಳನ್ನು ಪುರಂದರದಾಸರ ಗೀತೆಗಳ ಧಾಟಿಗೆ ಒಗ್ಗಿಸಿಕೊಂಡು ಅನುವಾದಿಸಿದೆ.  ಅನುವಾದದ ಹಸ್ತಪ್ರತಿಯನ್ನು ಕ.ನಂ. ಅವರಿಗೆ ಒಪ್ಪಿಸಿ ನಾನು ಇಂಜಿನಿಯರಿಂಗ್ ಸೇರಿದೆ.

ಸುಮಾರು ಒಂದು ವರ್ಷಗಳ ನಂತರ ನನಗೆ ಕ.ನಂ. ಅವರಿಂದ ಪತ್ರ ಬಂತು. "ಕುರಿ" ನಾಟಕದ ತಾಲೀಮು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುತ್ತಿದೆ, ಎಂ ಎಸ್ ಸತ್ಯು ಅದನ್ನು ನಿರ್ದೇಶಿಸುತ್ತಿದ್ದಾರೆ, ನೀವು ಹೋಗಿ ಅವರನ್ನು ಭೇಟಿ ಮಾಡಬಹುದು ಎಂಬ ಪತ್ರ.  ಸತ್ಯು ಅವರು ಈಗಾಗಲೇ ಹಿಂದಿ ಮತ್ತು ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದವರು. ನಾನು ತಾಲೀಮು ನಡೆಯುತ್ತಿದ್ದ ಸ್ಥಳಕ್ಕೆ ಹೋಗಿ ನನ್ನನ್ನು ನಾನೇ ಪರಿಚಯ ಮಾಡಿಕೊಂಡೆ.  ಹದಿನೆಂಟು ವರ್ಷದ ನನ್ನನ್ನು ಸತ್ಯು ಒಂದು ನಿಮಿಷ "ಓಹೋ! ನೀವೇನಾ!" ಎಂಬ ರೀತಿಯಲ್ಲಿ ಕುತೂಹಲದಿಂದ ನೋಡಿದರು. ನಾನು ಕುಳಿತುಕೊಂಡು ನಾಟಕದ ತಾಲೀಮು ನೋಡುತ್ತಿದ್ದೆ. ನಾನು ಅನುವಾದಿಸಿದ ಗೀತೆಗಳನ್ನು ಪ್ರಸಿದ್ಧ ಸಂಗೀತ ನಿರ್ದೇಶಕ ರಾಜೀವ್ ತಾರಾನಾಥ್ ಸಂಗೀತಕ್ಕೆ ಬಹಳ ಚೆನ್ನಾಗಿ ಅಳವಡಿಸಿದ್ದರು. ನನಗೆ ಅತ್ಯಂತ ತೃಪ್ತಿಯಾಯಿತು.  ಹಳ್ಳಿಯಲ್ಲಿ ಜನ ಅರಳಿಕಟ್ಟೆಯ ಮುಂದೆ ಸೇರಿ ಮಾತಾಡಿಕೊಳ್ಳುವ ದೃಶ್ಯವೊಂದರಲ್ಲಿ ನಾನು ಬರೆಯದೇ ಇದ್ದ ಒಂದು ಹಾಡನ್ನು ಅವರು ಉಪಯೋಗಿಸಿದ್ದು ಕೇಳಿ ನನಗೆ ಸ್ವಲ್ಪ ಇರುಸುಮುರುಸಾಯಿತು. ಅದೊಂದು "ಕತ್ತೆ ಹಾಡು" ಎಂಬ ಕಥನ ಕವನ. ನನಗೆ ಯಾಕೋ ತಡೆಯಲಾಗಲಿಲ್ಲ.  ಮನೆಗೆ ಬಂದು ಅದೇ ಹಾಡಿನ ಧಾಟಿಯಲ್ಲಿ ಕುರಿಯನ್ನು ವಂಚಿಸಿದ ತೋಳದ ಕತೆಯನ್ನು ಹೇಳುವ ಒಂದು ಬಲಾಡ್ ಶೈಲಿಯ ಗೀತೆಯನ್ನು ಬರೆದೆ. ಮುಂದಿನ ತಾಲೀಮು ನಡೆಯುವ ದಿನ ಧೈರ್ಯ ಮಾಡಿ ಕತ್ತೆ ಹಾಡನ್ನು ಹಾಡುತ್ತಿದ್ದ ಕಲಾವಿದನಿಗೆ ತೋರಿಸಿ "ನೀವು ಇದನ್ನು ಹಾಡಿದರೆ ಒಳ್ಳೆಯದಲ್ಲವೇ?" ಎಂದು ಕೇಳಿದೆ. ಆ ಕಲಾವಿದನ ಹೆಸರು ನನಗೆ ಮರೆತು ಹೋಗಿದೆ. ಅವನು ಕೂಡಾ ಹದಿನೆಂಟು-ಹತ್ತೊಂಬತ್ತು ವರ್ಷದ ಯುವಕ. ಅವನು ಕೂಡಲೇ ಅದಕ್ಕೆ ಒಪ್ಪಿ ಹಾಡಿಯೂ ತೋರಿಸಿದ! ಸತ್ಯು ಅವರ ಹತ್ತಿರ ಅವನಿಗೆ ಸ್ವಲ್ಪ ಸಲುಗೆ ಇತ್ತು. ಅವನು ನನ್ನ ಹಾಡನ್ನು ಸತ್ಯು ಅವರ ಮುಂದೆ ಹೇಳಿ ತೋರಿಸಿದಾಗ ಅವರೂ ತಕ್ಷಣ ಒಪ್ಪಿಕೊಂಡುಬಿಟ್ಟರು!

ಸಮುದಾಯ ತಂಡದಲ್ಲಿ ಅತ್ಯಂತ ಪ್ರತಿಭಾನ್ವಿತ ಕಲಾವಿದರ ಪರಿಚಯವಾಯಿತು. ಪ್ರಸನ್ನ (ರಂಗ ನಿರ್ದೇಶಕರು), ಮಾಲತಿ (ನಟಿ), ಮಾಲತಿ ಶರ್ಮಾ (ಆಕಾಶವಾಣಿ ಕಲಾವಿದೆ, ಬಹಳ ಪ್ರಸಿದ್ಧ ಗಾಯಕಿ), ಸಿ ಜಿ ಕೃಷ್ಣಸ್ವಾಮಿ (ರಂಗ ನಿರ್ದೇಶಕರು), ಸುರೇಂದ್ರನಾಥ್ (ರಂಗ ನಿರ್ದೇಶಕರು),  ಲಕ್ಷ್ಮಿಚಂದ್ರಶೇಖರ್  (ಮುಂದೆ ದೂರದರ್ಶನದಲ್ಲಿ ಗೃಹಭಂಗ ಮೊದಲಾದ ಧಾರಾವಾಹಿಗಳಲ್ಲಿ ನಟಿಸಿ ಹೆಸರು ಮಾಡಿದ ಕಲಾವಿದೆ) - ಇವರೆಲ್ಲರೂ ನನಗೆ ಪರಿಚಯವಾದರು. ಪಂಡಿತ ರಾಜೀವ್ ತಾರಾನಾಥ್ ಅವರನ್ನು ಭೇಟಿ ಮಾಡುವ ಅವಕಾಶವೂ ದೊರೆಯಿತು!

ಎಂ ಎಸ್ ಸತ್ಯು - "ಕುರಿ" ನಾಟಕದ ನಿರ್ದೇಶಕರು (ಇತ್ತೀಚಿಗೆ ಗೂಗಲ್ ಮಾಡಿದ ಜಾಹೀರಾತಿನಲ್ಲಿ ಇವರು ನಟಿಸಿದ್ದನ್ನು ನೀವು ನೋಡಿರಬಹುದು.) 

"ಕುರಿ" ರಂಗ ತಾಲೀಮುಗಳನ್ನು ನೋಡಲು ನಾನು ಮೂರು-ನಾಲ್ಕು ಸಲ ಹೋದೆ. ಆಗ ನಡೆದ ಒಂದು ಸ್ವಾರಸ್ಯಕರ ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಎನ್ನಿಸುತ್ತಿದೆ. ೧೯೮೦ ನೇ ಇಸವಿ. ಶ್ರೀಮತಿ ಇಂದಿರಾಗಾಂಧಿ ಚುನಾವಣೆಯಲ್ಲಿ ಪರಾಭವಗೊಂಡು ಜನತಾಪಕ್ಷವು ಸರಕಾರ ಸ್ಥಾಪಿಸಿತ್ತು.  ಶಾಹ್ ಕಮಿಷನ್ ಎಂಬ ಒಂದು ಸಮಿತಿಯನ್ನು  ತುರ್ತು ಪರಿಸ್ಥಿತಿಯಲ್ಲಿ ನಡೆದ ದಬ್ಬಾಳಿಕೆಯನ್ನು ವಿಶ್ಲೇಷಿಸಲು ರಚಿಸಿದ್ದರು. ಅಂದು ನಾನು ರವೀಂದ್ರ ಕಲಾಕ್ಷೇತ್ರಕ್ಕೆ ಸಂಜೆ ಹೋಗಿ ತಾಲೀಮನ್ನು ನೋಡುತ್ತಿರುವಾಗ ಒಮ್ಮೆಲೇ ಯಾರೋ ಬಂದು "ಇವತ್ತು ತಾಲೀಮು ನಿಲ್ಲಿಸಬೇಕಾಗಿ ಬರಬಹುದು!" ಎಂದರು. ಇಂದಿರಾಗಾಂಧಿ ಅವರನ್ನು ಬಂಧಿಸಲಾಗಿತ್ತು. ದೇವರಾಜ ಅರಸ್ ಅವರು ಆಗ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಆಗ ಅವರು ಇಂದಿರಾಗಾಂಧಿಯ ಕಟ್ಟಾಳು. ಬಂಧನಕ್ಕೆ ವಿರುದ್ಧವಾಗಿ ಕರ್ನಾಟಕದಲ್ಲಿ ಅಲೆಗಳು ಏಳುವುದರಲ್ಲಿ ಸಂಶಯವೇ ಇರಲಿಲ್ಲ. "ಎಲ್ಲರೂ ನಿಮ್ಮ ನಿಮ್ಮ ಮನೆಗಳಿಗೆ ಹೊರಡಿ!" ಎಂದು ಸಮುದಾಯ ಕಾರ್ಯಕರ್ತರು ಕಲಾವಿದರಿಗೆ ಹೇಳಿದರು.  ನಾನು ಹೊರಗೆ ಬಂದಾಗ ಎಲ್ಲಾ ಕಡೆ ಕತ್ತಲು ಹರಡಿತ್ತು. ಬೀದಿ ದೀಪಗಳೂ ಇರಲಿಲ್ಲ! ಬಸ್ ಮೊದಲಾದ ಯಾವ ವಾಹನ ಸೌಕರ್ಯಗಳೂ ಅಂದು ಇರಲಿಲ್ಲ. ನಮ್ಮ ಮನೆ ಇದ್ದದ್ದು ಜಯನಗರದಲ್ಲಿ. "ಬೇರೆ ಯಾವ ಬಸ್ ಸಿಗದೇ ಇದ್ದಾಗ ರೂಟ್ ನಂಬರ್ ೧೧ ಇದ್ದೇ ಇದೆ!" ಎಂದು ನಾವು ತಮಾಷೆ ಮಾಡುತ್ತಿದ್ದದ್ದು ನೆನಪಾಯಿತು. ಕಾಲು ನಡಿಗೆಗೆ ರೂಟ್ ನಂಬರ್ ೧೧ ಎಂಬ ಹೆಸರಿತ್ತು. ನಡೆದುಕೊಂಡು ಶಿವಾಜಿ ಟಾಕೀಸ್ ಹತ್ತಿರ ಬರುತ್ತಿದ್ದಾಗ ಗಲಭೆಯ ಲಕ್ಷಣಗಳು ತೋರಿದವು. ಜನ ಓಡಿ ಬರುತ್ತಿದ್ದರು. ಕೆಲವರು ಅಂಗಡಿಗಳ ಒಳಗೆ ನುಗ್ಗುತ್ತಿದ್ದರು! ನಾನೂ ಗಾಬರಿಯಿಂದ ಯಾವುದೋ ಅಂಗಡಿಗೆ ನುಗ್ಗಿದೆ. ಅಂಗಡಿಯ ಮಾಲೀಕ ಷಟರ್ ಎಳೆದ. ಹೊರಗೆ ಗಲಭೆ, ಟಿಯರ್ ಗ್ಯಾಸ್ ಎಲ್ಲಾ ನಡೆಯುತ್ತಿತ್ತು. ಸುಮಾರು ಹೊತ್ತಿನ ನಂತರ ಶಾಂತಿಯು ಮರಳಿದಂತೆ ತೋರಿತು. ಅಂಗಡಿಯವನು ಬಾಗಿಲು ತೆಗೆದ. ಎಲ್ಲರೂ ಹೆದರಿಕೊಂಡೇ ಹೊರಗೆ ನಡೆದರು.  ಅಂದು ನಾನು ಮನೆ ತಲುಪಿದಾಗ ರಾತ್ರಿ ಹನ್ನೊಂದು ಮೀರಿತ್ತು. ಆಗೆಲ್ಲಾ ಎಂಟು ಗಂಟೆಯ ನಂತರ ಯಾರೂ ಮನೆಯಿಂದ ಹೊರಗೆ ಹೋಗುತ್ತಿರಲಿಲ್ಲ. ನಮ್ಮ ತಂದೆ ಆಗ ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗಿದ್ದರು. ಮನೆಯಲ್ಲಿ ಆಗ ಟೆಲಿಫೋನ್ ಕೂಡಾ ಇರಲಿಲ್ಲ! ನಮ್ಮ ತಾಯಿ ಬಹಳ ಹೆದರಿಕೊಂಡು ನನ್ನ ದಾರಿ ಕಾಯುತ್ತಿದ್ದರು.

"ಕುರಿ" ಮೊದಲ ಪ್ರಯೋಗ ನನಗೆ ಚಿರಸ್ಮರಣೀಯ ಘಟನೆ. ಚಿತ್ರಕಲಾ ಪರಿಷತ್ತಿನಲ್ಲಿ ನಾಟಕದ ಮೊದಲ ಪ್ರಯೋಗ ನಡೆಯಿತು.  ಈ ಸಂದರ್ಭದಲ್ಲಿ ಒಂದು ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಅದರಲ್ಲಿ ಸತ್ಯು ಬರೆದ ಲೇಖನವಿತ್ತು. ಅವರು ನನ್ನ ಅನುವಾದವನ್ನು ಮೆಚ್ಚಿ ಬರೆದ ಒಂದು ವಾಕ್ಯವಿತ್ತು. ಅವರ ಪತ್ನಿ ಶಮಾ ಜೈದಿ ಕೂಡಾ ನನ್ನ ಅನುವಾದವನ್ನು ಮೆಚ್ಚಿದರು ಎಂದು ಸಮುದಾಯದ ಕಲಾವಿದರು ನನಗೆ ಮುಂದೆ ಹೇಳಿದರು.  "ಕುರಿ" ನಾಟಕದ ಮೊದಲ ಪ್ರಯೋಗಕ್ಕೆ ಅನೇಕ ಪರ್ಸಿದ್ಧ ಲೇಖಕರು, ಪತ್ರಕರ್ತರು ಬಂದಿದ್ದರು. ನನ್ನ ತಂದೆ ಮತ್ತು ತಾಯಿ ನನ್ನ ಜೊತೆ ಕುಳಿತಿದ್ದರು. ಪ್ರಸಿದ್ಧ ಲೇಖಕ ಖಾದ್ರಿ ಶಾಮಣ್ಣ ನಮ್ಮ ತಂದೆಯ ಪಕ್ಕದಲ್ಲಿ ಕುಳಿತಿದ್ದರು. ನಾಟಕದ ವ್ಯಂಗ್ಯ, ಮೊನಚಾದ ಸಂಭಾಷಣೆ, ಹಾಡುಗಳು - ಇವೆಲ್ಲ ಪ್ರೇಕ್ಷಕರಿಗೆ ತುಂಬಾ ಹಿಡಿಸಿತು. ಸಮುದಾಯ ತಂಡದವರು ಕುರಿಯನ್ನು "ಕಮರ್ಷಿಯಲ್ ಸಕ್ಸೆಸ್" ಎಂದು ಘೋಷಿಸಿದರು. ನಾಟಕ ಮುಂದೆ ಐವತ್ತಕ್ಕೂ ಮೀರಿ ಪ್ರದರ್ಶನಗಳನ್ನು ಕಂಡಿತು.  ಇದು ೧೯೮೦ರ ಘಟನೆ.

"ಕುರಿ" ನಾಟಕದ ಮರುಪ್ರದರ್ಶನ - ರಂಗಶಂಕರ - ೨೦೦೫ 

ದಾದ ಇಪ್ಪತ್ತೈದು ವರ್ಷಗಳ ನಂತರ "ರಂಗಶಂಕರ"ದಲ್ಲಿ "ಕುರಿ" ನಾಟಕವನ್ನು ಮತ್ತೊಮ್ಮೆ ಪುನರುಜ್ಜೀವನಗೊಳಿಸಲಾಯಿತು! ಈ ವಿಷಯ ನನಗೆ ತಿಳಿದದ್ದೂ ಆಕಸ್ಮಿಕ! ನಮ್ಮ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಭಾರದ್ವಾಜ್ ಎಂಬ ಸಹೋದ್ಯೋಗಿ ವೃತ್ತಪತ್ರಿಕೆಯ "ಇಂದಿನ ಕಾರ್ಯಕ್ರಮ" ಕಾಲಂನಲ್ಲಿ ನಾಟಕದ ಪ್ರದರ್ಶನದ ಬಗ್ಗೆ ಓದಿ "ಇದರಲ್ಲಿ ಉಲ್ಲೇಖವಾದ ಸಿ ಪಿ ರವಿಕುಮಾರ್ ನೀವೇನಾ?" ಎಂದು ಕೇಳಿದರು! ನನಗೆ ನಂಬಲೇ ಸಾಧ್ಯವಾಗಲಿಲ್ಲ!  ರಂಗಶಂಕರದಲ್ಲಿ ಉಳಿದ ಪ್ರೇಕ್ಷಕರಂತೆ ನಾನೂ ಟಿಕೆಟ್ ಕೊಂಡುಕೊಂಡು "ಕುರಿ" ನಾಟಕವನ್ನು ನೋಡಿದೆ. ಇಪ್ಪತ್ತೈದು ವರ್ಷಗಳ ನಂತರವೂ ನಾಟಕವನ್ನು ಯಥಾವತ್ ಪ್ರದರ್ಶಿಸಿದ ಸಮುದಾಯ ಕಲಾವಿದರನ್ನು ಕುರಿತು ನನಗೆ ಅತೀವ ಗೌರವವಿದೆ. ಅಂದು ನನಗೆ ಸತ್ಯು ಅವರ ಭೇಟಿ ಮತ್ತೆ ಆಯಿತು. "ನೋಡಿ, ಇಪ್ಪತ್ತೈದು ವರ್ಷಗಳ ನಂತರ ನಾಟಕವನ್ನು ಮತ್ತು ರಿವೈವ್ ಮಾಡಿದ್ದೇವೆ!" ಎಂದು ನಕ್ಕರು. ನಾಟಕ ಪ್ರದರ್ಶನ ಯಶಸ್ವಿಯಾಯಿತು. ಮತ್ತೆ ಅನೇಕ ಪ್ರದರ್ಶನಗಳನ್ನು ಕಂಡಿತು. ಕುರಿಯ ಮೊದಲ ಪ್ರಯೋಗದಲ್ಲಿ ಕುರಿಯ ಒಡತಿಯ ಪಾತ್ರ ಮಾಡಿದ್ದ ಲಕ್ಷ್ಮಿ ಚಂದ್ರಶೇಖರ್ ನಾಟಕದ ವಿಮರ್ಶೆ ಬರೆದರು.  ಮುಂದಿನ ಪ್ರದರ್ಶನಕ್ಕೆ ನನ್ನ ಅನೇಕ ಮಿತ್ರರೊಂದಿಗೆ ಹೋಗಿದ್ದೆ. ಅಂದು ನಾಟಕದ ನಂತರ ರಂಗದ ಮೇಲೆ ನನ್ನನ್ನೂ ಕರೆದು ಗೌರವಿಸಿದ್ದು ನನ್ನಲ್ಲಿ ಹಳೆಯ ನೆನಪನ್ನು ಮತ್ತೆ ಕಲಕಿತು. ಇಪ್ಪತ್ತೈದು ವರ್ಷಗಳ ಹಿಂದೆ ಮೊದಲ ಪ್ರದರ್ಶನದ ನಂತರ ನನ್ನನ್ನು ಇದೇ ರೀತಿ ಗೌರವಿಸಿದ್ದು ನೆನಪಾಯಿತು. ಹಿರಿಯ ಪತ್ರಕರ್ತರಾದ ಖಾದ್ರಿ ಶಾಮಣ್ಣ ನನ್ನ ಬೆನ್ನು ತಟ್ಟಿ "ಭೇಷ್" ಎಂದಿದ್ದು ನೆನಪಾಯಿತು. ಎಲ್ಲಕ್ಕಿಂತ ಅಂದು ಹೆಮ್ಮೆಯಿಂದ ಬೀಗುತ್ತಿದ್ದ ನನ್ನ ತಂದೆಯವರ ಸವಿನೆನಪು ನನ್ನನ್ನು ಕಾಡಿತು.

(ಮುಂದೆ ಎಂದಾದರೂ ಇದನ್ನು ಮುಂದುವರೆಸುತ್ತೇನೆ.)




ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)