ಕನ್ನಡಿ


ಮೂಲ ಅಮೇರಿಕನ್ ಕವಿತೆ - ಸಿಲ್ವಿಯಾ ಪ್ಲಾತ್ 
ಕನ್ನಡ ಅನುವಾದ - ಸಿ ಪಿ ರವಿಕುಮಾರ್ 






ನಾನು ಬೆಳ್ಳಿ, ನಾನು ಕರಾರುವಾಕ್ಕು, ನನಗಿಲ್ಲ ಯಾವ ಪೂರ್ವಾಗ್ರಹ
ನನ್ನ ಕಣ್ಣಿಗೆ ಕಂಡಿದ್ದೆಲ್ಲಾ ಕೂಡಲೇ ಹಾಗೇ ಇಡಿಇಡಿಯಾಗಿ ಸ್ವಾಹಾ
ಒಲವಿನ ಒಗ್ಗರಣೆಯಿಲ್ಲ, ದ್ವೇಷದ ಉಪ್ಪುಕಾರವಿಲ್ಲ.
ಸತ್ಯ ಹೇಳುತ್ತೇನೆ ಅಷ್ಟೇ, ನಾನು ಕ್ರೂರಿಯೇನಲ್ಲ,
ಯಾವುದೋ ಕ್ಷುದ್ರ ದೇವತೆಯ ನಾಲ್ಕು ಮೂಲೆಯ ಕಣ್ಣು.
ದಿನದ ಬಹುಭಾಗ ಧ್ಯಾನಿಸುತ್ತೇನೆ ಮುಂದಿರುವ ಗೋಡೆಯನ್ನು.
ಅದು ನಸುಗೆಂಪು, ಮೇಲೆ ಕಲೆಗಳು; ನೋಡುತ್ತಾ ಅದೆಷ್ಟು ಕಾಲ
ಕಳೆದಿರುವೇನೋ, ಈಗದು ಹೊಕ್ಕಿದೆ ನನ್ನ ಅಂತರಾಳ;
ಮೇಲಿಂದಮೇಲೆ ನಮ್ಮ ನಡುವೆ ಹಾಯುತ್ತವೆ ಮುಖಗಳು, ಕತ್ತಲು.
ನಾನೊಂದು ಕೊಳವಾಗುತ್ತೇನೆ. ನನ್ನೊಳಗೆ ಇಣುಕುತ್ತಾಳೆ ಒಬ್ಬ ಹೆಣ್ಣು,
ತಾನು ನಿಜವಾಗಿ ಯಾರೆಂದು ಹುಡುಕುತ್ತಾಳೆ ನನ್ನೊಳಗೆ
ತಿಂಗಳ ಬೆಳಕು ಮೇಣದ ಬತ್ತಿಗಳು ಸುಳ್ಳುಹೇಳುತ್ತವೆ ಅವಳಿಗೆ
ನನ್ನತ್ತ ನೋಡಿದರೆ ಸಿಕ್ಕುವುದು ಸಾಚಾ ಪ್ರತಿಫಲ
ಅವಳು ಬಿಕ್ಕಳಿಸಿ ಮುಖ ಮುಚ್ಚಿ ಉದುರಿಸುವಳು ದೃಗ್ ಜಲ.
ನಾನವಳಿಗೆ ಬೇಕು; ಬರುತ್ತಾಳೆ ನನ್ನತ್ತ ಮತ್ತೆ ಮತ್ತೆ.
ಕತ್ತಲು ಹರಿದಾಗ ಅವಳ ಮುಖವೇ ಕಾಣುವುದು ಪ್ರತಿಬೆಳಗ್ಗೆ.
ಇವಳು ನನ್ನಲ್ಲಿ ಮುಳುಗಿಸಿದ್ದಾಳೆ ಒಬ್ಬ ಯುವತಿಯನ್ನು; ಒಬ್ಬ ಮುದುಕಿ ಪ್ರತಿನಿತ್ಯ
ನನ್ನೊಳಗಿನಿಂದ ಮೇಲೇಳುತ್ತಾಳೆ ಭಯಾನಕ ಮೀನಿನಂತೆ  ಅವಳತ್ತ.

==
ಫೋಟೋ ಕೃಪೆ - fineartamerica.com 
(c) 2014, C.P. Ravikumar


ಕವಿತೆಯ ನವಿರು -

ಈ ಕವಿತೆಯನ್ನು ಹತ್ತನೇ ತರಗತಿಯ ಇಂಗ್ಲಿಷ್ ಪಠ್ಯದಲ್ಲಿ ಸೇರಿಸಿದ್ದಾರೆ. ಸಿಲ್ವಿಯಾ ಪ್ಲಾತ್  ಒಬ್ಬ ಅಮೇರಿಕನ್ ಕವಯಿತ್ರಿ;  ತನ್ನ ಕವಿತೆಗಳಿಗೆ ಪುಲಿಟ್ಜರ್ ಪ್ರಶಸ್ತಿ ಪಡೆದವಳು. ಟೆಡ್ ಹ್ಯೂಸ್ ಎಂಬ ಕವಿಯನ್ನು ಮದುವೆಯಾದಳು. ಇವರಿಗೆ ಎರಡು ಮಕ್ಕಳಾದವು.  ಸಿಲ್ವಿಯಾ ಮನೋವ್ಯಥೆಗೆ ತುತ್ತಾಗಿ ತನ್ನ ಮೂವತ್ತೊಂದನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡಳು.

ಈ ಕವಿತೆಯಲ್ಲಿ ಸಿಲ್ವಿಯಾ ಪ್ಲಾತ್ ಕನ್ನಡಿಯ ಆತ್ಮ ಸಂಭಾಷಣೆಯನ್ನು ಬರೆದಿದ್ದಾಳೆ. ಕನ್ನಡಿ ಪ್ರತಿನಿತ್ಯ ತಾನು ನೋಡುವುದನ್ನು ಯಾವ ಮುಚ್ಚುಮರೆಯಿಲ್ಲದೆ ಕರಾರುವಾಕ್ಕಾಗಿ ಹೇಳುತ್ತದೆ. ಎಷ್ಟೋ ಸಲ ಕನ್ನಡಿ ಹೇಳುವುದು ನಮಗೆ ಅಪ್ರಿಯವೆನ್ನಿಸಬಹುದು. ಒಂದು ಹೆಣ್ಣು ಕನ್ನಡಿಯಲ್ಲಿ ತನ್ನನ್ನು ತಾನೇ ನೋಡಿಕೊಂಡು ತನಗೆ ವಯಸ್ಸಾಗುತ್ತಿದೆ ಎಂಬ ಕುರುಹುಗಳನ್ನು ಕನ್ನಡಿಯಲ್ಲಿ ಕಂಡು ವ್ಯಥೆಗೆ ಈಡಾಗುತ್ತಾಳೆ. ಅವಳ ವೃದ್ಧಾಪ್ಯದ ರೂಪ ಒಂದು ಭಯಂಕರ ಮೀನಿನಂತೆ ಕನ್ನಡಿಯ ಒಳಗೆ ಏಳುತ್ತಿದೆ ಎಂದು ಕನ್ನಡಿ ಹೇಳುವಾಗ ನಮಗೆ ಒಂದು ಬಗೆಯ ಭಯ ಉಂಟಾಗುತ್ತದೆ.

ಹತ್ತನೇ ತರಗತಿಯಲ್ಲಿ ಮಕ್ಕಳಿಗೆ ಇಂಥ ಕವಿತೆಗಳನ್ನು ಓದಲು ಅವಕಾಶ ಮಾಡಿಕೊಟ್ಟ ಪಠ್ಯಪುಸ್ತಕ ಸಮಿತಿಗೆ ಅಭಿನಂದನೆಗಳು. ನಮ್ಮ ಕನ್ನಡ ಪಠ್ಯಪುಸ್ತಕಗಳ ಸಮಿತಿಗಳು ಕಲಿಯಬೇಕಾದದ್ದು ಸಾಕಷ್ಟಿದೆ.

Translation of "Mirror" by Sylvia Plath
(c) 2014, C.P. Ravikumar

ಕಾಮೆಂಟ್‌ಗಳು

  1. "Mirror" by Sylvia Plath

    I am silver and exact. I have no preconceptions.
    What ever you see I swallow immediately
    Just as it is, unmisted by love or dislike.
    I am not cruel, only truthful---
    The eye of a little god, four-cornered.
    Most of the time I meditate on the opposite wall.
    It is pink, with speckles. I have looked at it so long
    I think it is a part of my heart. But it flickers.
    Faces and darkness separate us over and over.
    Now I am a lake. A woman bends over me,
    Searching my reaches for what she really is.
    Then she turns to those liars, the candles or the moon.
    I see her back, and reflect it faithfully.
    She rewards me with tears and an agitation of hands.
    I am important to her. She comes and goes.
    Each morning it is her face that replaces the darkness.
    In me she has drowned a young girl, and in me an old woman
    Rises toward her day after day, like a terrible fish.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)