ಟಾರ್ಚ್
ಮೂಲ ಹಿಂದಿ ಕವಿತೆ - ಮಂಗಲೇಶ್ ಡಬರಾಲ್
ಕನ್ನಡ ಅನುವಾದ - ಸಿ ಪಿ ರವಿಕುಮಾರ್
ಇಂದು ಬಹಳ ದಿನಗಳ ನಂತರ ನೆನಪಾಗುತ್ತಿದೆ
ಅಪ್ಪ ಮನೆಗೊಂದು ಟಾರ್ಚ್ ಕೊಂಡು ತಂದ ಘಟನೆ
ಎಷ್ಟು ಸುಂದರವಾಗಿತ್ತು, ಕಾರ್ ಹೆಡ್ ಲೈಟ್ ನಂತೆ ಅದರ ಚಹರೆ
ಇಡೀ ಓರಗೆಯಲ್ಲಿ ಇಂಥದ್ದೊಂದೂ ಇರಲಿಲ್ಲ ಹಿಂದೆ
ರಾತ್ರಿಯ ಕತ್ತಲನ್ನು ಇಬ್ಭಾಗ ಮಾಡಿ
ಸೀಳುವ ಬೆಳಕಿನ ಕೋಲಿನದೇ ಮೋಡಿ
ಹೀಗಿರುತ್ತ ಪಕ್ಕದ ಮನೆ ಅಜ್ಜಿ ಬಂತು ಒಂದುದಿನ
ಒಂದಷ್ಟು ಬೆಂಕಿ ಕೇಳಿ ಪಡೆಯಲೆಂದು ಟಾರ್ಚ್ ನಿಂದ!
ನಗು ಬಂತು ಅಪ್ಪನಿಗೆ ಅವಳ ಪ್ರಶ್ನೆ ಕೇಳಿ
"ಅಜ್ಜೀ - ಇದು ಬರೀ ಬೆಳಕು ಕೊಡುವ ದೊಂದಿ!
ಕತ್ತಲಲ್ಲಿ ಹೇಗೆ ಉರಿಯುತ್ತದೆ ನೋಡಿ:
ಬೆಳಗುತ್ತದೆ ದೂರಕ್ಕೂ ಬೆಟ್ಟಗುಡ್ಡಗಳ ಹಾದಿ"
"ಒಂದಿಷ್ಟು ಬೆಂಕಿಯೂ ಕೊಟ್ಟಿದ್ದರೆ ಚೆನ್ನಾಗಿತ್ತು ಮಗೂ,
ರಾತ್ರಿಯೆಲ್ಲಾ ನನಗೆ ನಿದ್ದೆಯೇ ಬರದು
ಬೆಳಗ್ಗೆ ಹೇಗೆ ಹೊತ್ತಿಸಲಿ ಇದ್ದಿಲ ಒಲೆ
ಎನ್ನುವ ಯೋಚನೆಯಲ್ಲೇ ಕೆಡುತ್ತದೆ ತಲೆ!
ಇಷ್ಟಕ್ಕೂ ನಮ್ಮಂಥ ಸಂಸಾರಿಗರಿಗೆ ಯಾಕಪ್ಪಾ ಬೇಕು
ರಾತ್ರಿಯಲ್ಲೂ ಬೆಳಗಿನಂತೆ ಬೆಳಗೋದಕ್ಕೆ ಬೆಳಕು?
ಅದೆಲ್ಲ ದೊಡ್ಡವರಿಗೆ ಹೇಳಿ ಮಾಡಿಸಿದ್ದು
ಕತ್ತಲಲ್ಲಿ ನೋಡಲು ಅವರಿಗೆ ಏನಾದರೂ ಇದ್ದೀತು."
ಅಜ್ಜಿಯ ಮಾತಿಗೆ ಅಪ್ಪ ಉತ್ತರಿಸಲಿಲ್ಲ
ಬಹಳ ಹೊತ್ತು ಆವರಿಸಿತ್ತು ಮೌನ.
ಬಹಳ ವರ್ಷಗಳ ಅನಂತರ ಈ ನಡುವೆ
ನೆನಪಿನಲ್ಲಿ ಸುಳಿಯುವುದು ಹಳೆಯ ಘಟನೆ
ಬೆಳಕನ್ನು ಬೀರುವ ಟಾರ್ಚಿನಂತೆ
ಬೆಂಕಿ ಬೇಡಲು ಬಂದ ಅಜ್ಜಿಯಂತೆ
ಅಪ್ಪನ ನಿರುತ್ತರ ಮೌನದಂತೆ
ನಿಶ್ಶಬ್ದವಾಗಿ ನುಸುಳಿ ಬಂದರೂ ಅಲ್ಲೇ
ನಿಲ್ಲುವುದು ಕೈಕಟ್ಟಿ ನೋಡುತ್ತ ಸುಮ್ಮನೆ
ಈ ಕಾಲದ ಕವಿತೆ ಮತ್ತದರ ವಿಡಂಬನೆ.
=============
ಕವಿತೆಯ ನವಿರು - ಕಥನಶೈಲಿಯಲ್ಲಿರುವ ಈ ಕವಿತೆಯಲ್ಲಿ ಒಂದು ಸರಳ ಘಟನೆಯ ವಿವರವಿದೆ. ಕವಿಯ ತಂದೆ ಮನೆಗೆ ಟಾರ್ಚ್ ತರುತ್ತಾರೆ. ಅದು ತನ್ನ ಹೊಸತನದಿಂದ ಎಲ್ಲರ ಮನಸ್ಸು ಗೆಲ್ಲುತ್ತದೆ. ಒಂದು ದಿನ ಪಕ್ಕದ ಮನೆಯ ಅಜ್ಜಿ ಟಾರ್ಚ್ ನಿಂದ ಒಂದಷ್ಟು ಬೆಂಕಿ ಕೇಳಲು ಬರುತ್ತಾಳೆ! ಆಕೆಗೆ ಟಾರ್ಚ್ ಕೇವಲ ಬೆಳಕು ಮಾತ್ರ ನೀಡುತ್ತದೆ, ಬೆಂಕಿಯಲ್ಲ ಎಂದು ಗೊತ್ತಿಲ್ಲ! ಅದು ಗೊತ್ತಾದಾಗ ಅವಳು ಹೇಳುವ ಮಾತು ಅರ್ಥಗರ್ಭಿತವಾಗಿದೆ. ಕವಿಗೆ ಈ ಘಟನೆ ಆಧುನಿಕ ಕವಿತೆಯನ್ನು ನೆನಪಿಗೆ ತರುತ್ತದೆ! ಅವರಿಗೆ ಬಹುಶಃ ಆಧುನಿಕ ಕವಿತೆ ಕೇವಲ ಆಡಂಬರವಾಗಿ ಕಾಣುತ್ತಿರಬಹುದು - ಹೇಗೆ ಟಾರ್ಚ್ ಕೇವಲ ಬೆಳಕು ನೀಡುತ್ತಾ ಬೆಂಕಿಯನ್ನು ನೀಡುವುದಿಲ್ಲವೋ ಹಾಗೆ!
Kannada translation of "Torch" - a hindi poem by Mangalesh Dabaral
(c) 2014, C.P. Ravikumar
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ