ಹೆಣ್ಣು ಕೆಲಸ
ಮೂಲ ಅಮೇರಿಕನ್ ಕವಿತೆ - ಮಾಯಾ ಆಂಜೆಲೋ
ಕನ್ನಡ ಅನುವಾದ: ಸಿ. ಪಿ. ರವಿಕುಮಾರ್
ಬಟ್ಟೆ ಬರೆ ಹೊಲಿಗೆ ರಿಪೇರಿ
ನೆಲ ಉಜ್ಜಿ ಸಾರಿಸಬೇಕು
ಬುಟ್ಟಿಯಿಂದ ಒಳ್ಳೆಯ ಕಾಯಿ ಆರಿಸಬೇಕು
ಒಲೆ ಮೇಲೆ ಬೇಯಿಸಬೇಕು ಮುದ್ದೆ
ಒರೆಸಬೇಕು ಮಗು ಮಾಡಿದ ಒದ್ದೆ
ಅಡುಗೆ ಮಾಡಬೇಕು ಬರಲಿರುವ ಅತಿಥಿಗೆ
ನೀರು ಹಣಿಸಬೇಕು ತೋಟದಲ್ಲಿ ಪಾತಿಗೆ
ಇಸ್ತ್ರಿ ಮಾಡಬೇಕು, ಬಟ್ಟೆಗಳು ಕಾದಿವೆ
ಬಟ್ಟೆ ಹಾಕಬೇಕು ಪುಟ್ಟ ಮಕ್ಕಳಿಗೆ
ನಾಜೂಕಾಗಿ ತರಕಾರಿ ಹೆಚ್ಚಬೇಕು
ಅಂದವಾಗಿಡಬೇಕು ಧೂಳಿಲ್ಲದೆ ಎಲ್ಲೂ
ನಂತರ ಜಡ್ದಾದವರ ಶುಶ್ರೂಷೆ
ಬಿಡಿಸಿ ತಂದು ಕಟ್ಟಬೇಕು ಮಲ್ಲಿಗೆ ಮಾಲೆ
ಓ ಎಳೆಬಿಸಿಲೇ, ನನ್ನ ಮೇಲೆ ಬೆಳಗು
ಓ ಮಳೆಯೇ, ನನ್ನ ಮೇಲೆ ಸುರಿ
ಓ ತಂಗಾಳಿಯೇ ಬೀಸು ನನ್ನತ್ತ
ತಣಿಸು ಒಂದಷ್ಟು ನನ್ನೆದೆಯ ಉರಿ
ಓ ಬಿರುಗಾಳಿಯೇ ಬೀಸಬಾರದೆ ಒಮ್ಮೆ
ಸುಯ್ಯೆಂದು ಹಾರಿಸಿ ಕರೆದೊಯ್ದು ದೂರ
ಕೆಳಗಿಳಿಸಬಾರದೇ ಒಂದೆರಡು ತಾಸು
ಇಳಿಸಿಕೊಳ್ಳುವೆ ಕಾಲ ಮೇಲಿನ ಭಾರ
ಓ ಮಂಜುಹನಿಗಳೇ ಮೆಲ್ಲಮೆಲ್ಲನೆ
ಸಿಂಚನಗೊಳ್ಳಿ ನನ್ನ ಮೇಲೆ
ತಂಪಾದ ಚುಂಬನವಿತ್ತು ನನ್ನ ಬಳಲಿದ ಶರೀರಕ್ಕೆ
ಬರುವವರೆಗೂ ನನಗೆ ಮತ್ತೆ ಸುಖನಿದ್ರೆ
ಸೂರ್ಯನೇ, ಮಳೆಯೇ, ಬಾಗಿದ ಆಕಾಶವೇ ,
ಬೆಟ್ಟವೇ, ಕಡಲೇ, ಎಲೆಗಳೇ, ಶಿಲೆಗಳೇ,
ತಾರೆಗಳ ಬೆಳಕೇ, ಬೆಳದಿಂಗಳ ಸೆಳಕೇ,
ನನ್ನವರೆಂದು ನನಗಿಲ್ಲ ಯಾರೂ ನೀವಲ್ಲದೇ
====
Kannada translation of "Woman Work" - a poem by Maya Angelou
(c) 2014, C.P. Ravikumar
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ