ಗಟ್ಟಿಯಾದ ಮೌನ

ಗಟ್ಟಿಯಾದ ಮೌನ 



ಸಿ. ಪಿ. ರವಿಕುಮಾರ್ 

ಇವನು ಗಟ್ಟಿಯಾಗಿ ಮಾತಾಡುತ್ತಾನೆ
ಮೊಬೈಲ್ ಕೈಯಲ್ಲಿ ಹಿಡಿದಾಗ
ಬಸ್ ನಲ್ಲಿ ಕುಳಿತಾಗ

ಕೈಯಲ್ಲಿ ಕೆಲಸವಿಲ್ಲದೆ
ಮೈ ಪರಚಿಕೊಳ್ಳುವ ಹಾಗಾದಾಗ
ಅಕ್ಕಪಕ್ಕದವರ ಪರಿವೆಯಿಲ್ಲದೆ
ಗಟ್ಟಿಯಾಗಿ ಮಾತಾಡುತ್ತಾನೆ

ಕೊಂಡ ಮನೆಯ ಸಾಲದ ಬಗ್ಗೆ
ಕೊಳ್ಳಬೇಕಿನಿಸಿದ ಕ್ಯಾಮೆರಾ ಬಗ್ಗೆ
ಸ್ನೇಹಿತನ ಮದುವೆಯ ಬಗ್ಗೆ
ಇನ್ನೊಬ್ಬನ ವಿಚ್ಛೇದನದ ಬಗ್ಗೆ
ಸಿಹಿಕಹಿ ನೊರೆಂಟು
ಮಾತಾಡುತ್ತಾನೆ
ಗಟ್ಟಿಯಾಗಿ ಮಾತಾಡುತ್ತಾನೆ.

ನೋಡಿದ ಸಿನಿಮಾ
ಕನಸಿನ ನಾಯಕಿ
ಊಟಕ್ಕೆ ಹೋಗಿದ್ದ ರೆಸ್ಟೊರಾಂ
ತಿಂದ ಖಾದ್ಯ ಕುಡಿದ ಪಾನೀಯದ
ಇವುಗಳ ಬಗ್ಗೆ
ಉಪ್ಪು ಕಾರವಾಗಿ
ಗಟ್ಟಿಯಾಗಿ ಮಾತಾಡುತ್ತಾನೆ.

ಮಧ್ಯೆ ಮಧ್ಯೆ ಧ್ವನಿ ತಗ್ಗಿಸಿ
ಏನೋ ಪಿಸುಗುಟ್ಟಿ
ಮೈ ಕುಲುಕಿಸಿ ನಗುತ್ತಾನೆ.
ಯಾವುದೋ ಅಸಭ್ಯ ಜೋಕಿಗೆ
ಗಟ್ಟಿಯಾಗಿ ನಗುತ್ತಾನೆ.

ಇವನ ಪಕ್ಕದಲ್ಲಿ ಕುಳಿತವನು
ಪತ್ರಿಕೆಯನ್ನು ಹರಡಿಕೊಂಡು
ಓದುತ್ತಾ
ಸಂಭಾಷಣೆಗೆ ಪೀಠಿಕೆ ಹಾಕುತ್ತಾನೆ
ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ
ನಿಮಗೇನು ಅನ್ನಿಸುತ್ತೆ?
ಸುಪ್ರೀಂ ಕೋರ್ಟ್ ತೀರ್ಪು ಸರಿಯೆ?
ಎಂದು ಇವನ ಕಡೆ ನೋಡುತ್ತಾನೆ.


ಇವನ ಮೊಬೈಲ್ ನಿಶಬ್ದವಾಗಿದೆ.
ತರಂಗಾಂತರವನ್ನು ಗುರುತಿಸದಂತೆ.
ಇವನು ಹಠಾತ್ ಮೌನಿಯಾಗಿದ್ದಾನೆ.
ಗಟ್ಟಿಯಾಗಿ ಮೌನಿಯಾಗಿದ್ದಾನೆ.

(c) 2014, C.P. Ravikumar


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)