ಈಸ್ಟ್ ಇಂಡಿಯಾ ಕಂಪನಿ - ಪ್ರಪ್ರಥಮ ಕಾರ್ಪೊರೇಟ್ ದಾಳಿಕೋರರು - 2

(ಭಾಗ 1 ಇಲ್ಲಿ ಓದಬಹುದು)

ಮೂಲ ಲೇಖನ - ವಿಲಿಯಂ ಡ್ಯಾಲ್ ರಿಂಪಲ್
ಕನ್ನಡಕ್ಕೆ - ಸಿ ಪಿ ರವಿಕುಮಾರ್

ಭಾರತವನ್ನು ಬ್ರಿಟಿಷರು ಗೆದ್ದ ಬಗ್ಗೆ ನಾವು ಮಾತಾಡುವಾಗ ಅದರ ಹಿಂದಿರುವ ಒಂದು ಭಯಾನಕ ಸತ್ಯವನ್ನು ಮರೆತುಬಿಡುತ್ತೇವೆ. ಹದಿನೆಂಟನೇ ಶತಮಾನದ ಕೊನೆಯಲ್ಲಿ ಭಾರತವನ್ನು ಆಕ್ರಮಿಸಿಕೊಂಡಿದ್ದು ಬ್ರಿಟಿಷ್ ಸರಕಾರವಲ್ಲ - ಲಂಡನ್ ನಗರದಲ್ಲಿ ಮುಖ್ಯಕಚೇರಿ ಹೊಂದಿದ, ಯಾವುದೇ ಹತೋಟಿಗೆ ಒಳಪಡದ ಒಂದು ಖಾಸಗೀ ಕಂಪನಿ. ಈ ಕಚೇರಿಯೂ ಬಹಳ ದೊಡ್ಡದೇನಲ್ಲ, ಐದು ಕಿಟಕಿಗಳುಳ್ಳ ಒಂದು ಚಿಕ್ಕ ಕೋಣೆ. ಭಾರತದಲ್ಲಿ ಈ ಕಂಪನಿಯ ಮುಂದಾಳುವಾಗಿದ್ದವನು ರಾಬರ್ಟ್ ಕ್ಲೈವ್ ಎಂಬ ಒಬ್ಬ ತಲೆತಿರುಕ ಸಮಾಜದ್ವೇಷಿ.

ಈಸ್ಟ್ ಇಂಡಿಯಾ ಕಂಪನಿ ಅನೇಕ ದೃಷ್ಟಿಕೋನಗಳಿಂದ ಕಾರ್ಪೊರೇಟ್ ದಕ್ಷತೆಗೆ ಮಾದರಿ. ನೂರು ವರ್ಷಗಳ ಇತಿಹಾಸವುಳ್ಳ ಕಂಪನಿಯ ಮುಖ್ಯ ಕಚೇರಿಯಲ್ಲಿದ್ದ ಕಾಯಂ ನೌಕರರ ಸಂಖ್ಯೆ 35. ಈ ಬೆರಳೆಣಿಕೆಯಷ್ಟು ನೌಕರರು ನಡೆಸಿದ ಕಾರ್ಪೊರೇಟ್ ಪಿತೂರಿಗೆ ಸಮಾನವಾದುದು ಇತಿಹಾಸದಲ್ಲಿ ಬೇರೊಂದಿಲ್ಲ.  ದಕ್ಷಿಣ ಏಷ್ಯಾ ಖಂಡದ ಬಹಳಷ್ಟು ಪ್ರದೇಶವನ್ನು ಸೈನ್ಯಾಚರಣೆಯಲ್ಲಿ ಗೆದ್ದು ವಶಪಡಿಸಿಕೊಂಡು ಲೂಟಿ ಹೊಡೆದರು.  ಕಾರ್ಪೊರೇಟ್ ಹಿಂಸೆಯ ದೃಷ್ಟಿಯಿಂದ ನೋಡಿದರೆ ಈ ಕಂಪನಿ ಅದ್ವಿತೀಯ ಸ್ಥಾನ ಪಡೆದುಕೊಳ್ಳುತ್ತದೆ. ಇದಕ್ಕೆ ಹೋಲಿಸಿದರೆ ಇಂದಿನ ಅತಿದೊಡ್ಡ ಕಂಪನಿಗಳೆಂದು ಕರೆಸಿಕೊಳ್ಳುವ ಎಕ್ಸಾನ್, ಮೋಬಿಲ್, ವಾಲ್ ಮಾರ್ಟ್, ಗೂಗಲ್ ಮೊದಲಾದವು ಪಾಪದ ಪ್ರಾಣಿಗಳು. ಚರಿತ್ರೆಯ ಒಂದು ಮುಖ್ಯ ಪಾಠವೇನೆಂದರೆ ಸರಕಾರೀ ಶಕ್ತಿಗಳು ಮತ್ತು ಕಾರ್ಪೊರೇಟ್ ಶಕ್ತಿಗಳ ನಡುವಣ ಆಲಿಂಗನ ನರ್ತನದಲ್ಲಿ ಕಾರ್ಪೊರೇಟ್ ಶಕ್ತಿಯನ್ನು ಸರಕಾರೀ ಶಕ್ತಿಗಳು ಹಿಡಿತದಲ್ಲಿ ಇಟ್ಟುಕೊಳ್ಳಲು ಬಯಸಿದಷ್ಟೂ ಅವು ಹಿಡಿತದಿಂದ ತಪ್ಪಿಸಿಕೊಳ್ಳಲು ತನ್ನ ಕೈಯಲ್ಲಿ ಸಾಧ್ಯವಾದುದನ್ನೆಲ್ಲಾ ಮಾಡುತ್ತದೆ.  
ತನಗೆ ಬೇಕಾದಾಗಲೆಲ್ಲಾ  ಕಂಪನಿ ಬ್ರಿಟಿಷ್ ಆಧಿಪತ್ಯದಿಂದ ದೂರ ನಿಂತು ನ್ಯಾಯಾಲಯದಲ್ಲಿ ಸೆಣಸಿತು. ಷಾಹ್ ಆಲಂ ಸಹಿ ಹಾಕಿದ "ದಿವಾನಿ" ಪತ್ರವು ನ್ಯಾಯಬದ್ಧವಾಗಿ ತನಗೇ ಸೇರಬೇಕೆಂದು ಕಂಪನಿ ನ್ಯಾಯಾಲಯದಲ್ಲಿ ವಾದಿಸಿ ಜಯ ಗಳಿಸಿತು.  ಹಾಗೆ ನೋಡಿದರೆ ಕಂಪನಿಯ ಸುರಕ್ಷತೆಗಾಗಿ ಬಳಸಿದ ಜಲಸೇನೆ ಮತ್ತು ಭೂಸೇನೆಗಳ ಮೇಲೆ ಬ್ರಿಟಿಷ್ ಸಾಮ್ರಾಜ್ಯ  ಬೃಹತ್ ಪ್ರಮಾಣದ ವೆಚ್ಚ ಭರಿಸಿತ್ತು.  ಇಷ್ಟಾದರೂ ದಿವಾನಿ ಪತ್ರ ಕಂಪನಿಗೆ ಸೇರಬೇಕೇ ಅಥವಾ ಬ್ರಿಟನ್ನಿನ ಕಿರೀಟಕ್ಕೆ ಸೇರಬೇಕೇ ಎಂಬ ಪ್ರಶ್ನೆ ಎದ್ದಾಗ ಪಾರ್ಲಿಮೆಂಟ್ ಸದಸ್ಯರು ಕಂಪನಿಯ ಪರವಾಗಿ ಮತ ಹಾಕಿದರು. ಏಕೆಂದರೆ ಕಂಪನಿಯ ಕಾಲು ಭಾಗದಷ್ಟು ಷೇರುದಾರರು ಈ ಸದಸ್ಯರೇ ಆಗಿದ್ದರು. ಭಾರತದಲ್ಲಿ ಕರ ಸಂಗ್ರಹಣೆ ಮಾಡುವ ಅಧಿಕಾರ ಬ್ರಿಟನ್ ಕಿರೀಟಕ್ಕೆ ಹೋಗಿದ್ದಿದ್ದರೆ ಷೇರು ಮಾರುಕಟ್ಟೆಯಲ್ಲಿ ಕಂಪನಿಯ ಮೌಲ್ಯ ಕುಸಿದುಹೋಗುತ್ತಿತ್ತು.  ಇದೇ ಕಾರಣಕ್ಕಾಗಿ ಬೇರೆ ದೇಶಗಳಿಂದ ಬರುವ ಸ್ಪರ್ಧೆಯಿಂದ ಕಂಪನಿಯನ್ನು ರಕ್ಷಿಸುವುದು ಕೂಡಾ ಬ್ರಿಟಿಷ್ ವಿದೇಶಾಂಗ ನೀತಿಯ ಭಾಗವೇ ಆಗಿಹೋಯಿತು.

ಚಿತ್ರದಲ್ಲಿ ತೋರಿಸಿರುವ ವಿನಿಮಯದಿಂದ ಮುಂದೆ ಭಯಂಕರ ಪರಿಣಾಮಗಳು ಉಂಟಾದವು.  ಕೇವಲ ತನ್ನ ಷೇರುದಾರರಿಗೆ ಮಾತ್ರ ಈಸ್ಟ್ ಇಂಡಿಯಾ ಕಂಪನಿ ಜವಾಬು ಕೊಡಬೇಕಾಗಿತ್ತು. ತಾನು ವಶಕ್ಕೆ ತೆಗೆದುಕೊಂಡ ರಾಜ್ಯಗಳ ಅಭಿವೃದ್ಧಿಯಾಗಲಿ, ಉತ್ತಮ ಆಡಳಿತವಾಗಲಿ ಕಂಪನಿಗೆ ಮುಖ್ಯವಾಗಿರಲಿಲ್ಲ. ಹೀಗಾಗಿ ಬಂಗಾಳವನ್ನು ಲೂಟಿ ಮಾಡಿ ಅಲ್ಲಿದ್ದ ಸಂಪತ್ತನ್ನು ಪಶ್ಚಿಮದಿಕ್ಕಿಗೆ ಕೊಂಡೊಯ್ಯುವ ಕಾರ್ಯವೇ ಕಂಪನಿಗೆ ಪ್ರಮುಖವಾಯಿತು.



ಮೊದಲೇ ಯುದ್ಧದಿಂದ ತತ್ತರಿಸಿದ್ದ ಬಂಗಾಳದಲ್ಲಿ 1769ರಲ್ಲಿ ಭೀಕರ ಬರಗಾಲ ತಲೆದೋರಿತು. ಇದೂ ಸಾಲದೆಂಬಂತೆ ಕಂಪನಿ ವಿಧಿಸಿದ ಹೆಚ್ಚಿನ ಕರಗಳಿಂದ ಜನ ಕಂಗಾಲಾದರು. ಕಂಪನಿಯ ಕರ ಸಂಗ್ರಾಹಕರು ನಡೆಸಿದ ಅನ್ಯಾಯಗಳನ್ನು ಇಂದು ನಾವು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಪರಿಗಣಿಸುತ್ತೇವೆ. ಮುಘಲ್ ಆಡಳಿತದಲ್ಲಿ ಕೆಲಸಕ್ಕಿದ್ದ ಒಬ್ಬ ಹಿರಿಯ ಅಧಿಕಾರಿ ಹೀಗೆ ದಾಖಲಿಸಿದ್ದಾನೆ - "ತಮ್ಮ ಆಸ್ತಿಯ ವಿವರಗಳನ್ನು ಬಹಿರಂಗಗೊಳಿಸಲು ಭಾರತೀಯರಿಗೆ ಚಿತ್ರಹಿಂಸೆ ನೀಡಲಾಗುತ್ತಿತ್ತು. ಹಳ್ಳಿಗಳನ್ನು, ನಗರಗಳನ್ನು ಲೂಟಿ ಮಾಡಲಾಯಿತು.  ಕಂಪನಿಯ ಮೇಲಧಿಕಾರಿಗಳು ಮತ್ತು ಅವರ ಕೆಳಗೆ ಕೆಲಸ ಮಾಡುವವರಿಗೆ ಇದೇ ಧರ್ಮ, ಇದೇ ಮೋಜು ಎಂಬಂತಾಯಿತು."
ಬಂಗಾಳದ ಸಂಪತ್ತು ಬ್ರಿಟನ್ ಗೆ ವೇಗವಾಗಿ ಹರಿಯತೊಡಗಿತು.  ಶ್ರೀಮಂತರಾಗಿದ್ದ ನೇಕಾರರನ್ನು ಮತ್ತು ಕೆಲಸಗಾರರನ್ನು ಹೊಸ ಮಾಲೀಕರು  ಜೀತದಾಳುಗಳಂತೆ ದುಡಿಸಿಕೊಂಡರು.  ಬಂಗಾಳದ ಮಾರುಕಟ್ಟೆಯಲ್ಲಿ ಬ್ರಿಟಿಷ್ ತಯಾರಿಕೆಗಳ ಪ್ರವಾಹ ಹರಿಯಿತು. ಬಂಗಾಳದಲ್ಲಿ ನಡೆದ ಲೂಟಿಯಲ್ಲಿ ಒಂದು ಭಾಗ ಕ್ಲೈವ್ ನ ಖಾಸಗೀ ಕೋಶಕ್ಕೆ ಹೋಗಿ ಸೇರುತ್ತಿತ್ತು.  ಅವನು ಸ್ವದೇಶಕ್ಕೆ ಹಿಂತಿರುಗಿದಾಗ ಅವನ ಆಸ್ತಿಯ ಒಟ್ಟು ಮೌಲ್ಯ 234,000 ಪೌಂಡ್ ಗಳು (ಇಂದಿನ ಲೆಕ್ಕದಲ್ಲಿ 23 ದಶಲಕ್ಷ ಪೌಂಡ್). ಇಡೀ ಯೂರೋಪಿನಲ್ಲಿ ಅವನಷ್ಟು ಗಳಿಸಿದವರು ಆಗ ಬೇರೆ ಯಾರೂ ಇರಲಿಲ್ಲ.  1757ರಲ್ಲಿ ನಡೆದ ಪ್ಲಾಸಿ ಯುದ್ಧದಲ್ಲಿ ಕ್ಲೈವ್  ಮೋಸ, ಭ್ರಷ್ಟಾಚಾರ, ಕೃತ್ರಿಮ ಪತ್ರಗಳ ತಯಾರಿಕೆಯಂತಹ ಹೀನ ಕುತಂತ್ರಗಳನ್ನು ಬಳಸಿ ಗೆದ್ದ. ಯುದ್ಧದ ನಂತರ ಅವನು ಕಂಪನಿಯ ಕೋಶಕ್ಕೆ ಸೇರಿಸಿದ್ದು ಸೋತ ಬಂಗಾಳದ ದೊರೆಗಳಿಂದ ವಸೂಲಿ ಮಾಡಿದ 2.5 ದಶಲಕ್ಷ ಪೌಂಡ್ ಗಳು (ಇಂದಿನ ಲೆಕ್ಕದಲ್ಲಿ 250 ದಶಲಕ್ಷ ಪೌಂಡ್ ಗಳು).

ಇದನ್ನು ಸಾಧಿಸಲು ಅವರಿಗೆ ಅಂಥ ಕಷ್ಟವೇನೂ ಆಗಲಿಲ್ಲ. ಬಂಗಾಳದ ಬೊಕ್ಕಸವನ್ನು ಸಾರಾಸಗಟಾಗಿ ನೂರು ದೋಣಿಗಳಿಗೆ ತುಂಬಿ ನವಾಬನ ಅರಮನೆಯಿಂದ ಗಂಗಾನದಿಯ ಮೇಲೆ ಫೋರ್ಟ್ ವಿಲಿಯಂ ಎಂಬ ಸ್ಥಳಕ್ಕೆ ತರಲಾಯಿತು. ಈ ಕೋಟೆ  ಕಲ್ಕತ್ತಾ ನಗರದಲ್ಲಿ ಕಂಪನಿಯ ಕೇಂದ್ರವಾಗಿತ್ತು.  ಈ ಲೂಟಿಯಿಂದ ದಕ್ಕಿದ ನಿಧಿಯಿಂದ ಒಂದು ಭಾಗವನ್ನು ಪೋವಿಸ್ ಅರಮನೆಯ ಪುನರುತ್ಥಾನಕ್ಕೆ ಬಳಸಲಾಯಿತು.

ಮುಂದಿನ ಭಾಗ ಇಲ್ಲಿ ಓದಿ 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)