ಈಸ್ಟ್ ಇಂಡಿಯಾ ಕಂಪನಿ - ಪ್ರಪ್ರಥಮ ಕಾರ್ಪೊರೇಟ್ ದಾಳಿಕೋರರು - ಭಾಗ 3

ಮೂಲ : ವಿಲಿಯಮ್ ಡ್ಯಾಲ್ ರಿಂಪಲ್  
ಕನ್ನಡಕ್ಕೆ - ಸಿ ಪಿ ರವಿಕುಮಾರ್ 
(ಭಾಗ 1 ಮತ್ತು ಭಾಗ 2 ಓದಿದ ನಂತರ ಮೂರನೇ ಭಾಗವನ್ನು ಮುಂದೆ ಓದಿ)
ಬೆಂಜಮಿನ್ ವೆಸ್ಟ್ (ಚಿತ್ರಕಾರ. 1738-1820)
ಪೋವಿಸ್ ಅರಮನೆಯಲ್ಲಿರುವ ಚಿತ್ರದಲ್ಲಿ ಸೂಕ್ಷ್ಮವಾಗಿ ಮೋಸವಿದೆ. ಇದನ್ನು ಬರೆದ ಚಿತ್ರಕಾರ ಬೆಂಜಮಿನ್ ವೆಸ್ಟ್ ಎಂದೂ ಭಾರತಕ್ಕೆ ಕಾಲಿಟ್ಟವನಲ್ಲ. ಚಿತ್ರದ ಹಿನ್ನೆಲೆಯಲ್ಲಿ ಕಾಣುವ ಮಸೀದಿ ನಮ್ಮ ಸೆಂಟ್ ಪಾಲ್ ಚರ್ಚನ್ನು ಹೋಲುತ್ತಿದೆಯಲ್ಲ ಎಂದು ಆ ಕಾಲದಲ್ಲೇ ಒಬ್ಬ ಕಲಾವಿಮರ್ಶಕ ಹೇಳಿದ್ದ.  ದಿಟವೆಂದರೆ ದಿವಾನಿಯನ್ನು ಒಪ್ಪಿಸಲು ಯಾವ ವಿಶೇಷ ಸಮಾರಂಭವೂ ಇರಲೇ ಇಲ್ಲ. ಈ ಒಪ್ಪಂದ ನಡೆದದ್ದು ಕ್ಲೈವ್ ನ ಡೇರೆಯಲ್ಲಿ. ಈಚೆಗೆ ವಶಪಡಿಸಿಕೊಂಡ ಮುಘಲ್ ಕೋಟೆಯ ಹೊರಗೆ ಕ್ಲೈವ್ ನ ಡೇರೆ ಹಾಕಲಾಗಿತ್ತು. ಷಾಹ್ ಆಲಂ ಕುಳಿತಿದ್ದುದು ಯಾವ ರಾಜಗದ್ದುಗೆಯ ಮೇಲೋ ಅಲ್ಲ. ಕ್ಲೈವ್ ಮಹಾಶಯನ ಡೇರೆಯಲ್ಲಿದ್ದ ಒಂದು ಆಸನದ ಮೇಲೆ.  ಈ ಆಸನವನ್ನು ಒಂದು ಊಟದ ಮೇಜಿನ ಮೇಲಿಟ್ಟು ಅದರ ಮೇಲೊಂದು ಚಾದರವನ್ನು ಹೊದಿಸಲಾಗಿತ್ತು. 
ಮುಂದೆ ಈ ಪತ್ರಕ್ಕೆ "ಅಲಾಹಾಬಾದ್ ಒಪ್ಪಂದ" ಎಂಬ ಹೆಸರನ್ನು ಕೊಟ್ಟು ಬ್ರಿಟಿಷರು ಅದಕ್ಕೆ ಔನ್ನತ್ಯ ತಂದುಕೊಟ್ಟರು. ಈ ಒಪ್ಪಂದದಲ್ಲಿ ಇದ್ದ ಒಪ್ಪಿಗೆಯ ಅಂದ ಹೇಗಿತ್ತೆಂದರೆ ಅದು ಕ್ಲೈವ್ ಹೇಳಿ ಬರೆಸಿದ ಉಕ್ತಲೇಖನವಾಗಿತ್ತು. ಹೆದರಿದ್ದ ಷಾಹ್ ಆಲಂ ಅವುಗಳಿಗೆಲ್ಲಾ ತಲೆ ಅಲ್ಲಾಡಿಸಿದ್ದ. ಅಂದಿನ ಮುಘಲ್ ಇತಿಹಾಸಕಾರ ಸಯೀದ್ ಗುಲಾಂ ಹುಸೇನ್ ಹೀಗೆ ಬರೆಯುತ್ತಾನೆ. "ಇಲ್ಲಿ ನಡೆದ ದೊಡ್ಡ ಪ್ರಮಾಣದ ವಿನಿಮಯ ಎಷ್ಟು ಗುರುತರವಾದದ್ದೆಂದರೆ ಅದಕ್ಕೆ ಸಹಿ ಹಾಕುವ ಮುನ್ನ ಅನೇಕ ಮುತ್ಸದ್ದಿಗಳು, ರಾಯಭಾರಿಗಳು ಬರಬೇಕಾಗಿತ್ತು; ಇಂಗ್ಲೆಂಡ್ ದೇಶದ ರಾಜ ಮತ್ತು ಈಸ್ಟ್ ಇಂಡಿಯಾ ಕಂಪನಿಯ ಜೊತೆ ದೀರ್ಘ ಚರ್ಚೆ, ವಾದ-ವಿವಾದಗಳ ನಂತರ ಮಾತ್ರ ಇಂಥ ಒಪ್ಪಂದಕ್ಕೆ ಸಹಿ ಬೀಳಬೇಕಾಗಿತ್ತು. ನಿಜವೆಂದರೆ ಒಂದು ಕತ್ತೆಯನ್ನು ವ್ಯಾಪಾರ ಮಾಡಲು ಎಷ್ಟು ಸಮಯ ಬೇಕೋ ಅದಕ್ಕಿಂತ ಕಡಿಮೆ ಸಮಯದಲ್ಲಿ ಈ ವ್ಯವಹಾರ ಮುಗಿದುಹೋಯಿತು."
1795ರಲ್ಲಿ ಈ ಚಿತ್ರವನ್ನು ಮೊದಲ ಶಾಲಾ ರಾಯಲ್ ಅಕಾಡೆಮಿಯಲ್ಲಿ ಪ್ರದರ್ಶಿಸಿದಾಗ ಅದರಲ್ಲಿರುವ ತಪ್ಪುಗಳನ್ನು ಎತ್ತಿ ತೋರಿಸಲು ಮೇಲಿನ ಘಟನೆಯನ್ನು ವೀಕ್ಷಿಸಿದ ಒಬ್ಬನಾದರೂ ಬದುಕಿರಲಿಲ್ಲ.  ಇಂಗ್ಲೆಂಡಿನ ಪಾರ್ಲಿಮೆಂಟ್ ಸದಸ್ಯರು ಅನೇಕರು ಕ್ಲೈವ್ ಗಳಿಸಿದ ಅಕ್ರಮ ಸಂಪತ್ತನ್ನು ಕಂಡು ಹೊಟ್ಟೆಕಿಚ್ಚಿನಿಂದ ಬೆಂದರು; ಅವನ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಲಾಯಿತು. ಚಿತ್ರ ಪೂರ್ಣವಾಗುವ ಕೆಲವು ತಿಂಗಳ ಮುನ್ನ ಕ್ಲೈವ್ ತನ್ನ ಕುತ್ತಿಗೆಯನ್ನು ಪೇಪರ್ ಕತ್ತರಿಸುವ ಚಾಕುವಿನಿಂದ ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡ.  ನವೆಂಬರ್ ತಿಂಗಳ ಕೊರೆಯುವ ಚಳಿರಾತ್ರಿಯಲ್ಲಿ ಅವನ ದೇಹವನ್ನು ಶ್ರೋಪ್ ಷೈರ್ ಎಂಬ ಹಳ್ಳಿಯಲ್ಲಿ ರಹಸ್ಯವಾಗಿ ಮಣ್ಣು ಮಾಡಲಾಯಿತು. ಕೆಲವು ವರ್ಷಗಳ ಹಿಂದೆ ನೆಲ ಅಗೆಯುವ ಕಾರ್ಮಿಕರಿಗೆ ಕ್ಲೈವ್ ನ ಅಸ್ಥಿ ಸಿಕ್ಕಿದಾಗ ಅವುಗಳನ್ನು ಏನು ಮಾಡಬೇಕೆಂದು ಚರ್ಚೆಯಾಯಿತು. ಕೊನೆಗೆ ಅವುಗಳನ್ನು ಗಪ್ ಚಿಪ್ ಎಂದು ಕಂಡ ಸ್ಥಳದಲ್ಲೇ ಮತ್ತೆ ಹೂಳಲಾಯಿತು. ಅವನ ಅಸ್ಥಿಗಳು ಇನ್ನೂ ಅಲ್ಲೇ ಇವೆ; ಗೋರಿಯ ಮೇಲೆ ಅವನ ಹೆಸರಿನ ಬದಲು "ಪ್ರೈಮಸ್ ಇನ್ ಇಂಡಸ್" (ಭಾರತದಲ್ಲಿ ಮುಂದಾಳು) ಎಂದು ನಮೂದಿಸಲಾಗಿದೆ.  
ಕಂಪನಿಯ ಇತ್ತೀಚಿನ ನಿರರ್ಗಳ ಟೀಕಾಕಾರ ನಿಕ್ ರಾಬಿನ್ಸ್ ಹೀಗೆ ಹೇಳುತ್ತಾನೆ - "ಲೆಡನ್ ಹಾಲ್ ರಸ್ತೆಯಲ್ಲಿರುವ  ಕಂಪನಿಯ ಮುಖ್ಯ ಕಾರ್ಯಾಲಯ ಈಗ ರಿಚರ್ಡ್ ರಾಜರ್ಸ್ ಅವರ ಲಾಯ್ಡ್ ಭವನದ ಕೆಳಗಡೆ ಇದೆ.  ಯಾವ ಕಂಪನಿಯನ್ನು ಮೆಕಾಲೆ "ಜಗತ್ತಿನ ಅತಿಶ್ರೇಷ್ಠ ಕಾರ್ಪೊರೇಷನ್" ಎಂದು ಹೊಗಳಿದನೋ, ಯಾವ ಕಂಪನಿ ಮುಘಲರ ಸರಿಸಾಟಿಯಾಗಿ ದಕ್ಷಿಣ ಏಷ್ಯಾ ಖಂಡದ ಬಹುಭಾಗವನ್ನು ಆಕ್ರಮಿಸಿಕೊಂಡು ಆಳಿತೋ  ಆ ಕಂಪನಿಯ ಅವಶೇಷದ ಮೇಲೆ  ಕ್ಲೈವ್ ನ ಸಮಾಧಿಯ ಮೇಲೆ ಹಾಕಿರುವಂಥ ಗುರುತು ಕೂಡಾ ಸಿಕ್ಕುವುದಿಲ್ಲ." ಆದರೆ ಕಂಪನಿಯು ಬಿಟ್ಟುಹೋದ ಸ್ವಭಾವದ ಕುರುಹುಗಳು ಈಗ ಹಲವೆಡೆ  ಕಾಣುತ್ತವೆ. ಯಾವ ಕಂಪನಿಯೂ ಮೃಗೀಯ ಸ್ವಭಾವದಲ್ಲಿ ಈಸ್ಟ್ ಇಂಡಿಯಾ ಕಂಪನಿಯನ್ನು ಸರಿಗಟ್ಟಲಾರವಾದರೂ ಅನೇಕ ಕಂಪನಿಗಳು ಸರಕಾರೀ ಶಕ್ತಿಯನ್ನು ತಮ್ಮ ಉಪಯೋಗಕ್ಕೆ ಬಳಸಿಕೊಳ್ಳಲು ಪ್ರಯತ್ನಿಸಿ ಯಶಸ್ವಿಯಾಗಿವೆ. 
ಆಲಾಹಾಬಾದಿನ ಜನರೂ ಈ ಐತಿಹಾಸಿಕ ಘಟನೆಯನ್ನು ಮರೆತುಬಿಟ್ಟಿದ್ದಾರೆ. ಆಲಾಹಾಬಾದಿನಲ್ಲಿರುವ ಕೆಂಪುಕಲ್ಲಿನ ಕೋಟೆಗೆ ನಾನು ಕಳೆದವರ್ಷ ಭೇಟಿ ಕೊಟ್ಟಿದ್ದೆ. ಈ ಕೋಟೆಯಲ್ಲೇ ಷಾಹ್ ಆಲಂನಿಂದ ಒಪ್ಪಂದವನ್ನು ಬಸಿದುಕೊಂಡದ್ದು.  ಲಾಹೋರ್, ಆಗ್ರಾ ಮತ್ತು ದೆಹಲಿಯ ಕೋಟೆಗಳಿಗೆ ಹೋಲಿಸಿದರೆ ಇದು ಸಾಕಷ್ಟು ದೊಡ್ಡದು. ಕೋಟೆಯನ್ನು ಮುಚ್ಚಿ ಮಿಲಿಟರಿ ಕಾವಲು ಹಾಕಲಾಗಿದೆ. ನಾನು ಭೇಟಿ ಇತ್ತಾಗ ಕಂಡ ಅಲ್ಲಿನ ಸುರಕ್ಷಣಾ ಸಿಬ್ಬಂದಿಗಾಗಲಿ ಅಥವಾ ಅಧಿಕಾರಿಗಳಿಗಾಗಲಿ ಈ ಕೋಟೆಯಲ್ಲಿ ನಡೆದ ಘಟನೆಗಳ ಬಗ್ಗೆ ತಿಳುವಳಿಕೆ ಇರಲಿಲ್ಲ.  ಯಾವ ಸುರಕ್ಷಣಾ ಸಿಬ್ಬಂದಿಯವರೂ ಈಸ್ಟ್ ಇಂಡಿಯಾ ಕಂಪನಿಯ ಹೆಸರೇ ಕೇಳಿಲ್ಲ.  ಕ್ಲೈವ್ ನ ಡೇರೆಯನ್ನು ಹಾಕಲಾದ ಪೆರೇಡ್ ಬಯಲಿನಲ್ಲಿ ಕಂಪನಿಯ ತೋಪುಗಳು ಇನ್ನೂ ಹಾಗೇ ಇವೆ.   
ಸಿಬ್ಬಂದಿಗೆ ಭವಿಷ್ಯದಲ್ಲೇ ಹೆಚ್ಚು ಆಸಕ್ತಿ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ, ಅವರ ಅಮೇರಿಕಾ ಯಾತ್ರೆಯಲ್ಲಿ ಅವರಿಗೆ ಸಿಕ್ಕ ಅಭೂತಪೂರ್ವ ಸ್ವಾಗತದ ಬಗ್ಗೆ ಸಿಬ್ಬಂದಿ ಮಾತಾಡುತ್ತಿದ್ದರು. ಒಬ್ಬನು ಅಂದಿನ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯನ್ನು ಬಿಡಿಸಿ "ನೋಡಿ, ವೈಟ್ ಹೌಸ್ ನಲ್ಲಿ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಒಬಾಮಾ ಮಾತಾಡಿದ ವಿಷಯಗಳಲ್ಲಿ ಆಲಾಹಾಬಾದ್ ವಿಷಯ ಕೂಡಾ ಇತ್ತು" ಎಂದು ಬೀಗಿದ.  "ಎಂಟುನೂರು ವರ್ಷಗಳ ಗುಲಾಮಗಿರಿಯ ನಂತರ" ಭಾರತ ಕೊನೆಗೂ ತನ್ನ ಕಾಲಮೇಲೆ ತಾನು ನಿಲ್ಲುತ್ತಿದೆ ಎಂಬ ಬಗ್ಗೆ ಅವರು ಸಂಭ್ರಮ ಪಡುತ್ತಿದ್ದರು.  ಮುಘಲರು, ಈಸ್ಟ್ ಇಂಡಿಯಾ ಕಂಪನಿ, ಬ್ರಿಟಿಷ್ ಸಾಮ್ರಾಜ್ಯ, ಇವೆಲ್ಲವೂ ಅವರ ನೆನಪಿನಿಂದ ದೂರವಾಗಿದ್ದವು. "ಬಹಳ ಬೇಗ ನಮ್ಮ ದೇಶ ಮಹಾನ್ ರಾಷ್ಟ್ರವಾಗಲಿದೆ. ಆಲಾಹಾಬಾದ್ ಒಂದು ಮಹಾನ್ ನಗರವಾಗಲಿದೆ," ಎಂದು ಒಬ್ಬ ಸೆಂಟ್ರಿ ಅಭಿಮಾನದಿಂದ ನುಡಿದ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)