ಈಸ್ಟ್ ಇಂಡಿಯಾ ಕಂಪನಿ : ಪ್ರಪ್ರಥಮ ಕಾರ್ಪೊರೇಟ್ ದಾಳಿಕೋರರು - 4


ಮೂಲ ಲೇಖನ: ವಿಲಿಯಂ ಡ್ಯಾಲ್ ರಿಂಪಲ್
ಕನ್ನಡಕ್ಕೆ : ಸಿ ಪಿ ರವಿಕುಮಾರ್

ಭಾಗ 4

ವಿಕ್ಟೋರಿಯಾ ರಾಣಿಯ ಆಳ್ವಿಕೆಯ ಉತ್ತುಂಗದ ಕಾಲದಲ್ಲಿ  ಬ್ರಿಟಿಷರು ವ್ಯಾಪಾರಕ್ಕೆಂದು ಭಾರತಕ್ಕೆ ಬಂದು ಅಲ್ಲಿ ತಮ್ಮ ಸಾಮ್ರಾಜ್ಯವನ್ನು ಹರಡಿದ ವಿಧಾನದ ಬಗ್ಗೆ ತೀವ್ರ ಕಸಿವಿಸಿ ಇತ್ತು. ವಿಕ್ಟೋರಿಯನ್ ಮುಂದಾಳುಗಳಿಗೆ ದೇಶದ ರಾಜಕಾರಣ ಮುಖ್ಯವಾದುದು. ವೈಜ್ಞಾನಿಕವಾಗಿ ತಮ್ಮ ದೇಶ ಮುಂದುವರೆದ ದೇಶ; ನಾಗರೀಕತೆಯಲ್ಲಿ ತಾವು ಮುಂದುವರೆದವರು. ಪಶ್ಚಿಮದಿಂದ ಪೂರ್ವದತ್ತ ಜ್ಞಾನ ಹರಡಲಿ, ರೈಲ್ವೆ ಮೊದಲಾದ ವೈಜ್ಞಾನಿಕ ಆವಿಷ್ಕಾರಗಳು ಹಿಂದುಳಿದ ದೇಶಗಳಿಗೂ ತಲುಪಲಿ, ಕಲೆ-ನಾಗರೀಕತೆಗಳು ಪೂರ್ವಿ ದೇಶಗಳಿಗೂ ದೊರೆಯಲಿ ಎಂಬುದು ಅವರ ಆದರ್ಶವಾಗಿತ್ತು.  ತಮ್ಮ ದೇಶದ ಭ್ರಷ್ಟ ಕಾರ್ಪೊರೇಷನ್ ಒಂದು ಈ ಲೆಕ್ಕಾಚಾರದಲ್ಲಿ ಅದು ಹೇಗೆ ಬಂದುಸೇರಿತು? ಈಸ್ಟ್ ಇಂಡಿಯಾ ಕಂಪನಿ ಭಾರತದಲ್ಲಿ ಕೊಳ್ಳೆ ಹೊಡೆಯುತ್ತಿದೆ ಎಂಬುದರ ಬಗ್ಗೆ ವಿಕ್ಟೋರಿಯನ್ನರು "ಜಾಣಕುರುಡು"  ಮನೋಭಾವವನ್ನು ಧರಿಸಿದರು. 
ಬ್ರಿಟನ್ನಿನ "ಹೌಸ್ ಆಫ್ ಕಾಮನ್ಸ್" (ನಮ್ಮ ಲೋಕಸಭೆಯ ಸಮಾನ ಸಂಸ್ಥೆ) ಇನ್ನೊಂದು ಚಿತ್ರವನ್ನು ಬರೆಸಿ ಸೆಂಟ್ ಸ್ಟೀಫನ್ಸ್ ಹಾಲ್ ನಲ್ಲಿ ಸ್ಥಾಪಿಸಿದೆ.  ಕಳೆದ ವರ್ಷ ನಾನು ಒಬ್ಬ ಪಾರ್ಲಿಮೆಂಟ್ ಸದಸ್ಯರನ್ನು ಭೇಟಿಯಾಗಲು ಹೋದಾಗ ಚಿತ್ರ ಕಣ್ಣಿಗೆ ಬಿತ್ತು. ಒಪ್ಪಂದದ ಘಟನೆಯನ್ನು ಹೇಗೆ ತಿರುಚಿ ಅದನ್ನು ವಿಭಿನ್ನ ರೀತಿಯಲ್ಲಿ ಬಿಂಬಿಸಲಾಗಿದೆ ಎಂಬುದಕ್ಕೆ ಇದೂ ಒಂದು ಉದಾಹರಣೆ. 
ಈ ಚಿತ್ರ "ಬ್ರಿಟನ್ನಿನ ಏಳ್ಗೆ" ಎಂಬ ಸರಣಿಯಲ್ಲಿ ಬರೆಸಿರುವ ಭಿತ್ತಿಚಿತ್ರ. ಬ್ರಿಟನ್ನಿನ ಏಳ್ಗೆಯಲ್ಲಿ ಯಾವ ಘಟನೆಗಳು ಮುಖ್ಯವಾಗಿದ್ದವು ಎಂಬುದನ್ನು ಆ ಕಾಲದಲ್ಲಿ ನೇಮಕಗೊಂಡ ಒಂದು ಸಮಿತಿ ಆಯ್ಕೆ ಮಾಡಿ ಚಿತ್ರಗಳನ್ನು ಬರೆಸಿತು -  877ರಲ್ಲಿ ಡೆನ್ ಮಾರ್ಕ್ ಮೇಲೆ ದೊರೆ ಆಲ್ಫ್ರೆಡ್ ಸಾಧಿಸಿದ ವಿಜಯ, ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್ 1707ರಲ್ಲಿ ಒಂದಾಗಿದ್ದು, ಇತ್ಯಾದಿ. ಭಾರತಕ್ಕೆ ಸಂಬಂಧಿಸಿದ ಚಿತ್ರದಲ್ಲಿ ದಿವಾನಿಯನ್ನು ಹಸ್ತಾಂತರಿಸುವ ದೃಶ್ಯವಿಲ್ಲ; ಬದಲಾಗಿ ಅದಕ್ಕೂ ಮುಂಚೆ ನಡೆದ ಒಂದು ಘಟನೆಯ ಚಿತ್ರವಿದೆ. ಈ ಚಿತ್ರದಲ್ಲೂ ಒಬ್ಬ ಮುಘಲ್ ರಾಜಕುಮಾರ ಎತ್ತರದ ಪೀಠದ ಮೇಲೆ ಛತ್ರದ ಕೆಳಗೆ ಆಸೀನನಾಗಿದ್ದಾನೆ.  ಇದೊಂದು ಆಸ್ಥಾನದ ದೃಶ್ಯ. ಎರಡೂ ಕಡೆ ಬಾಗಿ ನಮಸ್ಕರಿಸುತ್ತಿರುವ ಸೇವಕರಿದ್ದಾರೆ. ಒಡ್ಡೋಲಗದವರು ವಾದ್ಯ ನುಡಿಸುತ್ತಿದ್ದಾರೆ. ಮುಘಲ್ ರಾಜಕುಮಾರನ ಎದುರಿಗೆ ಒಬ್ಬ ಇಂಗ್ಲಿಷ್ ತರುಣ ನಿಂತಿದ್ದಾನೆ. ಆದರೆ ಇಲ್ಲಿ ಶಕ್ತಿಯ ಮೇಲಾಟ ಭಿನ್ನವಾದದ್ದು.



ಜಹಾಂಗೀರ್ ದೊರೆಯ ಮುಂದೆ ನಿಂತಿರುವವನು ಸಾರ್ ಥಾಮಸ್ ರೋ.  1614ರಲ್ಲಿ  ಮೊದಲನೆಯ ಜೇಮ್ಸ್ ದೊರೆ ಕಳಿಸಿದ ರಾಯಭಾರಿ.  ಮುಘಲ್ ಸಾಮ್ರಾಜ್ಯ ಅತ್ಯಂತ ಬಲಾಢ್ಯವೂ ಶ್ರೀಮಂತವೂ ಆಗಿದ್ದ ಕಾಲ. ಜಹಾಂಗೀರ್ ತನ್ನ ತಂದೆ ಅಕ್ಭರ್ ನಿಂದ ವಂಶಪಾರಂಪರ್ಯವಾಗಿ ಪಡೆದ ಸಾಮ್ರಾಜ್ಯಕ್ಕೆ ಶ್ರೀಮಂತಿಕೆಯಲ್ಲಿ ಸರಿಸಾಟಿಯಾಗಿದ್ದುದು ಮಿಂಗ್ ಚೈನಾ ಸಾಮ್ರಾಜ್ಯ ಮಾತ್ರ.  ಜಹಾಂಗೀರನ ಆಳ್ವಿಕೆ ಭಾರತದ ಬಹುಭಾಗವನ್ನು ಆಕ್ರಮಿಸಿತ್ತು - ಇಂದಿನ ಪಾಕೀಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನವನ್ನೂ ಸೇರಿ.  ಆಟೋಮಾನ್ ಸಾಮ್ರಾಜ್ಯಕ್ಕೆ ಹೋಲಿಸಿದರೆ ಜಹಾಂಗೀರನ ಸಾಮ್ರಾಜ್ಯದ ಜನಸಂಖ್ಯೆ  ಐದು ಪಟ್ಟು   ದೊಡ್ಡದು - ಸುಮಾರು ಹತ್ತು ಕೋಟಿ ಮಂದಿ. ಅವನ ಸಾಮ್ರಾಜ್ಯದ ರಾಜಧಾನಿಗಳು ಅಂದಿನ ಬೃಹತ್ ನಗರಗಳು. 
ಕವಿ ಮಿಲ್ಟನ್ ಬರೆದ "ಪ್ಯಾರಾಡೈಸ್ ಲಾಸ್ಟ್" ಕವಿತೆಯಲ್ಲಿ ಜಹಾಂಗೀರನ ಮುಘಲ್ ಸಾಮ್ರಾಜ್ಯದ ನಗರಗಳನ್ನು ಆsಡಂಗೆ "ಮುಂದೆ ಹುಟ್ಟಲಿರುವ ದೈವೀ ರಚನೆಯ ಅದ್ಭುತಗಳು" ಎಂದು ತೋರಿಸಲಾಗುತ್ತದೆ. ಇದೇನೂ ಅತಿಶಯೋಕ್ತಿಯಾಗಿರಲಿಲ್ಲ. ಆಗ್ರಾ ನಗರದಲ್ಲಿ ಆಗಲೇ ಸುಮಾರು ಏಳು ಲಕ್ಷ ಜನರಿದ್ದರು. ಯೂರೋಪಿನ  ಎಲ್ಲಾ ನಗರಗಳೂ ಇದರ ಮುಂದೆ ಕುಬ್ಜನಗರಗಳು.  ಲಾಹೋರ್ ನಗರವು ಲಂಡನ್, ಪ್ಯಾರಿಸ್, ಲಿಸ್ಬನ್, ಮ್ಯಾಡ್ರಿಡ್ ಮತ್ತು ರೋಮ್ ನಗರಗಳ ಸಂಯುಕ್ತಕ್ಕಿಂತಲೂ ದೊಡ್ಡದಾಗಿತ್ತು. ಜಗತ್ತಿನ ತಯಾರಿಕೆಯಲ್ಲಿ  ಕಾಲುಭಾಗ ಭಾರತದಲ್ಲೇ ನಡೆಯುತ್ತಿದ್ದ ಕಾಲ. ಇದಕ್ಕೆ ಹೋಲಿಸಿದರೆ ಜಗತ್ತಿನ ಜಿ‌ಡಿ‌ಪಿಗೆ ಬ್ರಿಟನ್ನಿನ ಕೊಡುಗೆ ಕೇವಲ 2% ಮಾತ್ರವಾಗಿತ್ತು. ಈಸ್ಟ್ ಇಂಡಿಯಾ ಕಂಪನಿ ಎಷ್ಟು ಚಿಕ್ಕದಾಗಿತ್ತು ಎಂದರೆ ಅದಕ್ಕೆ ಒಂದು ಕಚೇರಿ ಕೂಡಾ ಇರಲಿಲ್ಲ; ಕಂಪನಿಯ ಗವರ್ನರ್ ಸಾರ್ ಥಾಮಸ್ ಸ್ಮಿತ್ ಎಂಬುವನ ಮನೆಯಲ್ಲೇ ಆದರೆ ಕಚೇರಿ ಇತ್ತು. ಅಲ್ಲಿ ಕೆಲಸ ಮಾಡುತ್ತಿದ್ದವರು ಆರು ಜನ. ಆದರೆ ಕಂಪನಿಯ ಬಳಿ ಆಗಲೇ 30 ದೊಡ್ಡ ದೋಣಿಗಳು ಮತ್ತು ಥೇಮ್ಸ್ ನದಿಯ ದಂಡೆಯಲ್ಲಿ ಡೆಪ್ಟ್ ಫೋರ್ಡ್ ಎಂಬ ಕಡೆ ತನ್ನದೇ ಆದ ಸರಕನ್ನು ಏರಿಳಿಸುವ ಸ್ಥಾನವಿತ್ತು.

ಜಹಾಂಗೀರನ ತಂದೆ ಅಕ್ಬರ್ ಯೂರೋಪಿನಿಂದ ಬಂದ ವಲಸಿಗರನ್ನು "ಅನಾಗರೀಕರ ಸಂತೆ" ಎಂದೇ ಕರೆಯುತ್ತಿದ್ದ. ಅವರನ್ನು ಸುಧಾರಿಸಲು ಅವನು ಯೋಜನೆಯನ್ನೂ ಹಾಕಿಕೊಂಡಿದ್ದ. ಆದರೆ ಮುಂದೆ ಇದು ಅಸಾಧ್ಯವಾದ ಕಾರ್ಯ ಎಂದು ಬಗೆದು ಯೋಜನೆಯನ್ನು ಕೈಬಿಟ್ಟ. ಜಹಾಂಗೀರನಾದರೋ ಸ್ವಲ್ಪ ದುಸ್ಸಾಹಸಿ. ಅವನಿಗೆ ದುಷ್ಟ ಮೃಗಗಳನ್ನು ಬೇಟೆಯಾಡುವ ಕುತೂಹಲ.  ಹೀಗಾಗಿ ಸರ್ ಥಾಮಸ್ ರೋನನ್ನು ಸಂಭ್ರಮದಿಂದಲೇ ಬರಮಾಡಿಕೊಂಡ. ರೋ ಯಾವ ಮಂಜು ಮುಸುಕಿದ ದ್ವೀಪದಿಂದ ಬಂದಿದ್ದನೋ ಅದು ಹೇಗಿದೆ, ಅಲ್ಲಿನ ವಿದ್ಯಮಾನಗಳೇನು ಮೊದಲಾದವುಗಳನ್ನು ಕುತೂಹಲದಿಂದ ಕೇಳಿ ತಿಳಿದುಕೊಂಡ.

ಹೌಸ್ ಆಫ್ ಕಾಮನ್ಸ್ ಸಮಿತಿಗೆ ಈ ಘಟನೆಯೇ ಮುಖ್ಯವೆಂದು ತೋರಿತು; ಇದು ಭಾರತದೊಂದಿಗೆ ಬ್ರಿಟನ್ನಿನ ಸಂಬಂಧದ ಪ್ರಾರಂಭ ಎನ್ನುವ ರೀತಿಯಲ್ಲಿ ಅವರು ಈ ಚಿತ್ರವನ್ನು ಆರಿಸಿದರು. ಆದರೆ ನಿಜವೆಂದರೆ ಇಂಥ ಸಂಬಂಧ ಪ್ರಾರಂಭವಾಗಿದ್ದು ರಾಯಭಾರಿಯ ಭೇಟಿಯಿಂದಲ್ಲ, ವ್ಯಾಪಾರದಿಂದ. ಸೆಪ್ಟೆಂಬರ್ 24, 1599ರಂದು ಎಂಬತ್ತು ಮಂದಿ ವ್ಯಾಪಾರಿಗಳು, ಸಾಹಸಿಗಳು ಲಂಡನ್ನಿನ ಫೌಂಡರ್ಸ್ ಹಾಲ್ ಎಂಬಲ್ಲಿ ಒಂದು ಸಭೆ ನಡೆಸಿದರು.  ತಾವು ಸೇರಿ ಒಂದು ಕಂಪನಿಯನ್ನು ಪ್ರಾರಂಭಿಸಲು ಮೊದಲನೇ ಎಲಿಜಬೆತ್ ರಾಣಿಗೆ ವಿನಂತಿ ಕಳಿಸಲು ನಿರ್ಧಾರ ಮಾಡಿದರು. ಇದಾದ ಒಂದು ವರ್ಷದ ನಂತರ ಕಂಪನಿಯನ್ನು ಪ್ರಾರಂಭಿಸಿ 15 ವರ್ಷಗಳ ಕಾಲ ಯಾವ ಸ್ಪರ್ಧೆಯೂ ಇಲ್ಲದೆ ಅನಿರ್ಬಾಧಿತವಾಗಿ ಪೂರ್ವದೇಶಗಳೊಂದಿಗೆ ವ್ಯಾಪಾರ ನಡೆಸುವ ಅನುಮತಿ ಅರಮನೆಯಿಂದ ಸಿಕ್ಕಿತು.

ಅರಮನೆಯ ಅನುಜ್ಞೆಯಲ್ಲಿ ಅಂದು ವಿಶೇಷವಿತ್ತು. ಅಲ್ಲಿಯವರೆಗೆ ಕಂಪನಿ ಎಂದರೆ ಕುಟುಂಬದ ಕೆಲವು ಸದಸ್ಯರು ಸೇರಿ ನಡೆಸುವ ಕೆಲಸವಾಗಿತ್ತು. ಆದರೆ ಈಸ್ಟ್ ಇಂಡಿಯಾ ಕಂಪನಿಗೆ ಮುಕ್ತ ಮಾರುಕಟ್ಟೆಯಲ್ಲಿ ಷೇರುಗಳನ್ನು ಮಾರಿ ಎಷ್ಟು ಜನರನ್ನಾದರೂ ಪಾಲುದಾರರನ್ನಾಗಿ ಮಾಡಿಕೊಳ್ಳುವ ಅನುಮತಿ ಸಿಕ್ಕಿತ್ತು. ಇದರಿಂದ ಕಂಪನಿಗೆ ಅಪಾರವಾದ ಹಣ ಹೂಡಿಕೆದಾರರಿಂದ ಹರಿದುಬರುವ ಸಾಧ್ಯತೆ ತಲೆದೋರಿತು. ಇಂಥ ಪರವಾನಗಿ ಹಿಂದೆ ಸಿಕ್ಕಿದ್ದು 1555ರಲ್ಲಿ,  ಮಸ್ಕೋವಿ ಕಂಪನಿ ಎಂಬ ಸಂಸ್ಥೆಗೆ ಮಾತ್ರ.  ಇದಾದ 44 ವರ್ಷಗಳ ನಂತರ ಈಸ್ಟ್ ಇಂಡಿಯಾ ಕಂಪನಿಗೆ ಈ ಬಗೆಯ ಅನುಮತಿ ಸಿಕ್ಕಿತು. ಆಜ್ಞಾಪಾತ್ರದಲ್ಲಿ ಕಂಪನಿಯು ಹೊರದೇಶಗಳಲ್ಲಿ ಭೂಮಿಕಾಣಿ ಖರೀದಿಸಬಹುದೇ ಎಂಬುದರ ಬಗ್ಗೆ ಯಾವ ಸೂಚನೆಯೂ ಇರಲಿಲ್ಲ. ಆದರೆ ಅಗತ್ಯ ಬಿದ್ದರೆ ಕಂಪನಿಯು ಯುದ್ಧ ನಡೆಸಲು ಅನುಮತಿಯಿತ್ತು!

ವಿಲಿಯಮ್ ಹಾಕಿನ್ಸ್ 
ರೋ ಭಾರತಕ್ಕೆ ಬರುವ ಆರು ವರ್ಷಗಳ ಹಿಂದೆ, ಆಗಸ್ಟ್ 28, 1608ರಂದು, ವಿಲಿಯಮ್ ಹಾಕಿನ್ಸ್ ಎಂಬ ಕಂಪನಿಯ ಪ್ರತಿನಿಧಿಯೊಬ್ಬ ಭಾರತಕ್ಕೆ ಮೊಟ್ಟ ಮೊದಲಬಾರಿಗೆ ಬಂದಿದ್ದ.  ಆತನಿಗೆ ಸಮುದ್ರಯಾನದ ಹುಚ್ಚು. ಆಗ್ರಾ ನಗರಕ್ಕೆ ಬಂದಾಗ ಅಲ್ಲಿಯ ಚಕ್ರವರ್ತಿ ಅವನಿಗೆ ಮದುವೆ ಮಾಡಿಕೊಟ್ಟ ಹೆಣ್ಣನ್ನು ವರಿಸಿ ಇಂಗ್ಲೆಂಡ್ ಗೆ ಮರಳಿದ.  ಹೌಸ್ ಆಫ್ ಕಾಮನ್ಸ್ ಸಮಿತಿ ಈ ಘಟನೆಯನ್ನು ಕಡೆಗಣಿಸಲು ನಿರ್ಧರಿಸಿತು.

(ಮುಂದಿನ ಭಾಗ ಇಲ್ಲಿ ಓದಿ) 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)