ಈಸ್ಟ್ ಇಂಡಿಯಾ ಕಂಪನಿ - ಪ್ರಪ್ರಥಮ ಕಾರ್ಪೊರೇಟ್ ದಾಳಿಕೋರರು - 5
ಮೂಲ: ವಿಲಿಯಂ ಡ್ಯಾಲ್ ರಿಂಪಲ್
ಕನ್ನಡಕ್ಕೆ : ಸಿ ಪಿ ರವಿಕುಮಾರ್
ಭಾಗ 5
ಈಸ್ಟ್ ಇಂಡಿಯಾ ಕಂಪನಿ ಅಷ್ಟು ತೀವ್ರವಾಗಿ ಮೇಲೆ ಬರಲು ಹದಿನೆಂಟನೇ ಶತಮಾನದಲ್ಲಿ ಮುಘಲ್ ಸಾಮ್ರಾಜ್ಯದ ತೀವ್ರ ಪತನವೂ ಕಾರಣ. 1739ನೇ ಇಸವಿಯಲ್ಲೂ, ಕ್ಲೈವ್ ಗೆ 14 ವರ್ಷವಾಗುವವರೆಗೂ, ಮುಘಲರು ಕಾಬೂಲಿನಿಂದ ಮದ್ರಾಸಿನವರೆಗೆ ಹರಡಿದ ದೊಡ್ಡ ಸಾಮ್ರಾಜ್ಯವನ್ನು ಆಳುತ್ತಿದ್ದರು. ಆ ವರ್ಷ ಪರ್ಷಿಯಾ ದೇಶದಿಂದ ನಾದಿರ್ ಷಾ ಎಂಬ ಸಾಹಸಿ ತನ್ನ 150,000 ಸಂಖ್ಯೆಯ ಅಶ್ವಸೇನೆಯೊಂದಿಗೆ ಖೈಬರ್ ಪಾಸ್ ದಾಟಿ ಭಾರತಕ್ಕೆ ನುಗ್ಗಿದ. ಹದಿನೈದು ಲಕ್ಷ ಸಂಖ್ಯೆಯ ಮುಘಲ್ ಸೈನ್ಯವನ್ನು ಸೋಲಿಸಿದ. ಮೂರು ತಿಂಗಳ ದಾಳಿಯ ನಂತರ ನಾದಿರ್ ಷಾ ಪರ್ಷಿಯಾ ದೇಶಕ್ಕೆ ಮರಳಿದಾಗ ಮುಘಲರು 200 ವರ್ಷಗಳ ಆಳ್ವಿಕೆಯಲ್ಲಿ ಒಗ್ಗೂಡಿಸಿದ ಅತ್ಯಮೂಲ್ಯ ಐಶ್ವರ್ಯಗಳನ್ನು ಕೊಳ್ಳೆ ಹೊಡೆದು ಕೊಂಡೊಯ್ದ. ಷಾಹ್ ಜಹಾನನ ಅಮೋಘವಾದ ಮಯೂರ ಸಿಂಹಾಸನ, ಜಗತ್ತಿನ ಅತ್ಯಂತ ದೊಡ್ಡ ವಜ್ರ ಕೋಹ್-ಇ-ನೂರ್, ಅದರ "ಸೋದರಿ" ಎಂದೇ ಪ್ರಸಿದ್ಧವಾದ ಇನ್ನೊಂದು ವಜ್ರ "ದರಿಯಾ ನೂರ್," ಚಿನ್ನ ಬೆಳ್ಳಿ ವಜ್ರವೈಡೂರ್ಯಗಳನ್ನು ಪೇರಿಸಿದ ಗಾಡಿಗಳನ್ನು ಎಳೆಯುವ 700 ಆನೆಗಳು, 4000 ಒಂಟೆಗಳು, 12,000 ಕುದುರೆಗಳು. ಅಂದಿನ ದಿನಾಂಕದಲ್ಲಿ ಈ ಸಂಪತ್ತಿನ ಮೌಲ್ಯ 875 ದಶಲಕ್ಷ ಪೌಂಡ್ ಗಳು. ಕ್ಲೈವ್ ಬಂಗಾಳದಿಂದ ಹೀರಿದ ಸಂಪತ್ತಿನ ಮೌಲ್ಯಕ್ಕೆ ಹೋಲಿಸಿದರೆ ಇದು ಅನೇಕ ಪಟ್ಟು ದೊಡ್ಡದು.
ನಾದಿರ್ ಷಾ
ನಾದಿರ್ ಷಾ
ಅಫೀಮು ವ್ಯಾಪಾರ
ಮುಘಲ್ ಸಾಮ್ರಾಜ್ಯವನ್ನು ಮುನ್ನಡೆಸುತ್ತಿದ್ದ ಸಂಪತ್ತನ್ನು ನಾದಿರ್ ಷಾಹ್ ಕೊಳ್ಳೆ ಹೊಡೆದು ಹೋದ ನಂತರ ಸಾಮ್ರಾಜ್ಯ ಬಹುಬೇಗ ಪತನಗೊಂಡಿತು. ಅದೇ ವರ್ಷ ಫ್ರಾನ್ಸ್ ದೇಶದಿಂದ ಬಂದಿದ್ದ "ಕಂಪನಿ ಡಿ ಇಂಡೆ" ಎಂಬ ಫ್ರೆಂಚ್ ಕಂಪನಿ ತನ್ನದೇ ನಾಣ್ಯಗಳನ್ನು ಟಂಕಿಸಿ ಚಲಾವಣೆಗೆ ತಂದಿತು. ಹೇಳುವವರು ಕೇಳುವವರಿಲ್ಲದೆ ಫ್ರೆಂಚ್ ಮತ್ತು ಇಂಗ್ಲಿಷ್ ಕಂಪನಿಗಳು ಸಿಪಾಯಿಗಳನ್ನು ಸೇರಿಸಿಕೊಳ್ಳುತ್ತಾ ಅವರಿಂದ ಕವಾಯತು ಮಾಡಿಸುತ್ತಾ ತಮ್ಮ ಸೇನಾಬಲವನ್ನು ವೃದ್ಧಿ ಪಡಿಸಿಕೊಳ್ಳುತ್ತಿದ್ದವು. ಈಸ್ಟ್ ಇಂಡಿಯಾ ಕಂಪನಿ ಇಡೀ ಜಗತ್ತಿನಲ್ಲಿ ತನ್ನ ವ್ಯಾಪಾರ ಪ್ರಾರಂಭಿಸಿತು. ರೋಮನ್ನರ ಕಾಲದಿಂದಲೂ ಪಶ್ಚಿಮದಿಂದ ಪೂರ್ವದತ್ತ ಹರಿಯುತ್ತಿದ್ದ ಹಣದ ಹೊನಲಿನ ದಿಕ್ಕನ್ನು ಈಸ್ಟ್ ಇಂಡಿಯಾ ಕಂಪನಿ ತಾನೊಂದೇ ಬದಲಿಸಿಬಿಟ್ಟಿತು. ಚೀನಾ ದೇಶಕ್ಕೆ ಅಫೀಮು ಕೊಂಡೊಯ್ಯುವ ಸನ್ನಾಹದಲ್ಲಿ ಕಂಪನಿ ಅನೇಕ ಯುದ್ಧಗಳಲ್ಲಿ ಭಾಗಿಯಾಗಿ ಹಾಂಗ್ ಕಾಂಗ್ ದೇಶದಲ್ಲಿ ತನ್ನ ಭದ್ರ ನೆಲೆಯನ್ನು ಕಟ್ಟಿಕೊಂಡು ನಶೆ ಪದಾರ್ಥಗಳ ಮಾರಾಟದಲ್ಲಿ ತನ್ನ ಏಕಸ್ವಾಮ್ಯ ಸಾಧಿಸಿತು. ಚೀನಾ ದೇಶದಿಂದ ಚಹಾ ಕೊಂಡೊಯ್ದು ಅಮೆರಿಕಾದ ಮೆಸಾಚುಸೆಟ್ಸ್ ವರೆಗೂ ಮುಟ್ಟಿಸಿತು. ಬಾಸ್ಟನ್ ನಗರದ ಬಂದರುಗಳಲ್ಲಿ ಚಹಾ ದಾಸ್ತಾನುಗಳನ್ನು ಎಸೆದ ಕಾರಣ ಅಮೆರಿಕಾ ದೇಶದಲ್ಲಿ ಸ್ವಾತಂತ್ರ್ಯ ಸಂಗ್ರಾಮವೇ ಪ್ರಾರಂಭವಾಯಿತು.
1803ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಮುಘಲ್ ಸಾಮ್ರಾಜ್ಯದ ರಾಜಧಾನಿಯಾದ ದೆಹಲಿಯನ್ನು ಆಕ್ರಮಿಸಿತು. ಇಷ್ಟು ಹೊತ್ತಿಗೆ ಕಂಪನಿಯ ಬಳಿ 260,000 ಸೈನಿಕರ ಪಡೆಯಿತ್ತು. ಇದು ಬ್ರಿಟಿಷ್ ಸೈನ್ಯದ ಎರಡರಷ್ಟು ದೊಡ್ಡದಾಗಿತ್ತು. ಕಂಪನಿಯ ಸೈನ್ಯದ ಬಳಿ ಇದ್ದ ತುಪಾಕಿ-ತೋಪುಗಳ ಸಂಖ್ಯೆ ಏಷ್ಯಾ ದೇಶದಲ್ಲಿ ಬೇರಾವುದೇ ದೇಶದ ಬಳಿ ಇದ್ದುದ್ದಕ್ಕಿಂತ ಹೆಚ್ಚಾಗಿತ್ತು. ಕಂಪನಿಯ ನಿರ್ದೇಶಕರಲ್ಲಿ ಒಬ್ಬನು ಒಪ್ಪಿಕೊಂಡ ಹಾಗೆ ಕಂಪನಿಯು "ಸಾಮ್ರಾಜ್ಯದ ಒಳಗೊಂದು ಸಾಮ್ರಾಜ್ಯ"ವೇ ಆಗಿತ್ತು. ತನ್ನ ಕಾರ್ಯಗಳನ್ನು ನೋಡಿಕೊಳ್ಳಲು ಮೇಲ್ವಿಚಾರಕರ ಮತ್ತು ಸಿವಿಲ್ ಸೇವಕರ ಬಹುದೊಡ್ಡ ಜಾಲವನ್ನೇ ಕಂಪನಿ ನಿರ್ಮಾಣ ಮಾಡಿತ್ತು. ಲಂಡನ್ ನಗರದ ಹಡಗಿನ ಕಟ್ಟೆಗಳಲ್ಲಿ ಬಹುಪಾಲನ್ನು ಕಂಪನಿಯೇ ನಿರ್ಮಿಸಿತು. ಬ್ರಿಟನ್ನಿನ ವರಮಾನದ ಸುಮಾರು ಅರ್ಧದಷ್ಟನ್ನು ಕಂಪನಿಯೇ ತರುತ್ತಿತ್ತು. ತನ್ನನ್ನು "ಜಗತ್ತಿನಲ್ಲೇ ವ್ಯಾಪಾರಿಗಳ ಅತ್ಯಮೋಘ ಸಂಘ" ಎಂದು ವರ್ಣಿಸಿಕೊಂಡಿದ್ದು ಅತಿಶಯೋಕ್ತಿಯೇನೂ ಆಗಿರಲಿಲ್ಲ.
ಇಷ್ಟಾದರೂ ಇಂದಿನ ದೊಡ್ಡ ಕಾರ್ಪೊರೇಷನ್ ಗಳಂತೆ ಈಸ್ಟ್ ಇಂಡಿಯಾ ಕಂಪನಿ ಏಕಕಾಲದಲ್ಲಿ ಅತ್ಯಂತ ಪ್ರಬಲ ಸಂಸ್ಥೆಯೂ ಹಾಗೂ ಆರ್ಥಿಕ ಸಂದಿಗ್ಧಗಳಿಗೆ ಬಲಿಪಶುವಾಗಬಲ್ಲ ಸಂಸ್ಥೆಯೂ ಆಗಿತ್ತು. ದಿವಾನಿಯನ್ನು ಕಸಿದುಕೊಂಡು ಬಂಗಾಳದ ಸಂಪತ್ತನ್ನು ಲೂಟಿ ಹೊಡೆದ ಮೇಲೆ ಏಕಾಏಕಿ ದುಪ್ಪಟ್ಟಾಗಿದ್ದ ಕಂಪನಿಯ ಷೇರು ಬಂಗಾಳದಲ್ಲಿ ಭೀಕರ ಬರಗಾಲ ಬಂದು ಭೂ-ತೆರಿಗೆಯ ಆದಾಯ ಕುಸಿದಂತೆ ಕಂಡುಬಂದಾಗ ಏಕಾಏಕಿ ಕುಸಿಯಿತು. ಈಗ ಈಸ್ಟ್ ಇಂಡಿಯಾ ಕಂಪನಿಯ ಮೇಲೆ 15 ದಶಲಕ್ಷ ಪೌಂಡ್ ಸಾಲದ ಹೊರೆ ಇತ್ತು. ಇದಲ್ಲದೆ ಬ್ರಿಟಿಷ್ ಸಾಮ್ರಾಜ್ಯಕ್ಕೆ ಕಂಪನಿ ಹತ್ತು ದಶಲಕ್ಷ ಪೌಂಡ್ ತೆರಿಗೆ ಬಾಕಿ ಇತ್ತು. ಈ ವಿಷಯ ಹೊರಗೆ ಬಂದಾಗ ಯೂರೋಪಿನಲ್ಲಿ ಮೂವತ್ತು ಬ್ಯಾಂಕ್ ಗಳು ಒಂದಾದ ಮೇಲೊಂದು ತುಪುತುಪು ಉದುರಿದವು. ವ್ಯಾಪಾರ-ವ್ಯವಹಾರಗಳು ಬಹುಮಟ್ಟಿಗೆ ನಿಂತೇ ಹೋದವು.
ನಮಗೆ ಈನಡುವೆ ಕಾಣುವ ಅಸಹ್ಯಕರ ಸನ್ನಿವೇಶಗಳನ್ನು ಹೋಲುವ ರೀತಿಯಲ್ಲಿ ಈ ಅತಿ-ಚಟುವಟಿಕೆಯ ಕಂಪನಿ ಕೈಚೆಲ್ಲಿ ತಪ್ಪೊಪ್ಪಿಗೆ ನೀಡಿ ಬ್ರಿಟಿಷ್ ಸರಕಾರದಿಂದ ರಕ್ಷಣೆ ಬೇಡಿತು. 1772ರ ಜುಲೈ 15ರಂದು ಕಂಪನಿಯ ನಿರ್ದೇಶಕರು ಇಂಗ್ಲೆಂಡಿನ ಬ್ಯಾಂಕ್ ಮುಂದೆ 400,000 ಪೌಂಡ್ ಗಳ ಸಾಲದ ಪ್ರಸ್ತಾಪ ಇಟ್ಟರು. ಇದಾದ ಎರಡು ವಾರಗಳ ನಂತರ ಇನ್ನೂ 300,000 ಪೌಂಡ್ ಗಳ ಸಾಲಕ್ಕೆ ಅರ್ಜಿ ಕೊಟ್ಟರು. ಬ್ಯಾಂಕ್ ಅವರಿಗೆ 200,000 ಪೌಂಡ್ ಮಾತ್ರ ಕೊಟ್ಟಿತು. ಆಗಸ್ಟ್ ತಿಂಗಳೊಳಗೆ ಕಂಪನಿಯ ನಿರ್ದೇಶಕರು ತಮಗೆ ಇನ್ನೂ ಹತ್ತು ದಶಲಕ್ಷ ಪೌಂಡ್ ಗಳ ಸಾಲ ಬೇಕಾಗುತ್ತದೆ ಎಂಬ ವಿಷಯವನ್ನು ಪಿಸುಮಾತಿನಲ್ಲಿ ಹೇಳಲು ಪ್ರಾರಂಭಿಸಿದ್ದರು. ಇಂಥ ದೊಡ್ಡ ಸಾಲ ಕೇಳರಿಯದ ಸಂಗತಿಯಾಗಿತ್ತು. ಬರುವ ವರ್ಷ ಎಡ್ಮಂಡ್ ಬರ್ಕ್ ಎಂಬ ಅಧಿಕಾರಿಯ ವರದಿಯಲ್ಲಿ ಆತ ಹೀಗೆ ಬರೆದ - "ಕೊರಳಿಗೆ ಹಾಕಿದ ಉರುಳುಕಲ್ಲಿನ ಹಾಗೆ ಕಂಪನಿಯ ಆರ್ಥಿಕ ಸಂಕಷ್ಟಗಳು (ಬ್ರಿಟಿಷ್ ಸರಕಾರವನ್ನು) ಆಳವಾದ ನೀರಿನಲ್ಲಿ ಮುಳುಗಿಸಿಬಿಡುತ್ತವೆ. ಈ ಹಾಳು ಕಂಪನಿ ಒಂದು ವಿಷಸರ್ಪವಿದ್ದ ಹಾಗೆ. ತನ್ನನ್ನು ಸಾಕಿದ ದೇಶವನ್ನೇ ನಿರ್ನಾಮ ಮಾಡಿಬಿಡುತ್ತದೆ."
ಆದರೆ ತನ್ನ ಅಗಾಧತೆಯಲ್ಲಿ ಈಸ್ಟ್ ಇಂಡಿಯಾ ಕಂಪನಿ ಎಷ್ಟು ದೊಡ್ಡದೆಂದರೆ ಲೇಮನ್ ಬ್ರದರ್ಸ್ ಹಾಗೆ ಅದು ಪರಾಭವಗೊಳ್ಳುವುದು ಅಸಾಧ್ಯವಾಗಿತ್ತು. ಹೀಗಾಗಿ 1773ರಲ್ಲಿ ಜಗತ್ತಿನ ಮೊಟ್ಟ ಮೊದಲ ಬಹುರಾಷ್ಟ್ರೀಯ ಕಂಪನಿಯನ್ನು ಮೊಟ್ಟ ಮೊದಲಬಾರಿಗೆ ಬಹುದೊಡ್ಡ ಮೊತ್ತವನ್ನು ಕೊಟ್ಟು ಸಂರಕ್ಷಿಸಲಾಯಿತು. ಮುಳುಗುವ ಕಂಪನಿಯನ್ನು ರಕ್ಷಿಸಿದ ತನ್ನ ದೊಡ್ಡಸ್ತಿಕೆಗೆ ಬದಲಾಗಿ ಬ್ರಿಟಿಷ್ ಸರಕಾರ ಕಂಪನಿಗೆ ಭಾರೀ ಗಾತ್ರದ ಲಗಾಮು ಹಾಕಿ ಅದರ ನಿಯಂತ್ರಣವನ್ನು ತನ್ನ ಕೈಗೆ ತೆಗೆದುಕೊಂಡಿತು. ಈ ಬಗೆಯ ವಿದ್ಯಮಾನಕ್ಕೂ ಜಗತ್ತಿನಲ್ಲಿ ಇದು ಪ್ರಥಮ ನಿದರ್ಶನ.
I like this book , Where I will get this book
ಪ್ರತ್ಯುತ್ತರಅಳಿಸಿ