ಈಸ್ಟ್ ಇಂಡಿಯಾ ಕಂಪನಿ - ಪ್ರಪ್ರಥಮ ಕಾರ್ಪೊರೇಟ್ ದಾಳಿಕೋರರು -6

ಮೂಲ - ವಿಲಿಯಂ ಡ್ಯಾಲ್ ರಿಂಪಲ್
ಕನ್ನಡಕ್ಕೆ - ಸಿ ಪಿ ರವಿಕುಮಾರ್

ಅಲಾಹಾಬಾದ್ ಕೋಟೆಯ ಬಳಿ ನಾನೊಂದು ಚಿಕ್ಕ ದೋಣಿಯನ್ನು ಬಾಡಿಗೆಗೆ ಪಡೆದು ನನ್ನನ್ನು ವಿಹಾರಕ್ಕೆ ಕರೆದೊಯ್ಯಲು ಅಂಬಿಗನಿಗೆ ಸೂಚಿಸಿದೆ. ಗೋಧೂಳಿಯ ಸಮಯವಾಗಿತ್ತು. ಇಳಿಯುವ ಸಂಜೆಯ ಬೆಳಕಿನಲ್ಲಿ ಯಮುನಾ ನದಿಯ ನೀರು ಪೋವಿಸ್ ಅರಮನೆಯಲ್ಲಿರುವ ರತ್ನಗಳ ಉಪಾದಿಯಲ್ಲಿ ಹೊಳೆಯುತ್ತಿತ್ತು.    ಯಮುನಾ ಮತ್ತು ಗಂಗಾ ಸೇರುವ ಸಂಗಮಸ್ಥಾನದಲ್ಲಿ ಜನ ಮುಳುಗೇಳುತ್ತಿದ್ದರು.  ಪ್ರವಾಸಿಗರು ಮತ್ತು ಸಂನ್ಯಾಸಿಗಳ ನಡುವೆಯೇ ಕೆಲವು ಹುಡುಗರು ಕೈಯಲ್ಲಿ ಬಿದಿರಿನ ಗಾಳ ಇಟ್ಟುಕೊಂಡು ಮೀನು ಹಿಡಿಯಲು ಕುಳಿತಿದ್ದರು. ಕೊಕ್ಕರೆಗಳು ದಡದ ಬಳಿ ನೀರಿನಲ್ಲಿ ನಿಂತಿದ್ದವು.  ಗಿಳಿಗಳು ಮತ್ತು ಮೈನಾ ಹಕ್ಕಿಗಳು ಹಾರಾಡುತ್ತಿದ್ದವು.
ನಲವತ್ತು ನಿಮಿಷಗಳ ಕಾಲ ನಮ್ಮ ಪ್ರಯಾಣ ಮುಂದುವರೆಯಿತು.  ನೀರಿನ ಅಲೆಗಳು ನಮ್ಮ ದೋಣಿಯ ಪಕ್ಕಗಳಿಗೆ ಬಂದು ಬಡಿಯುತ್ತಿದ್ದವು. ಮೈಲಿಯುದ್ದದ ಕೋಟೆಯನ್ನೂ ಅದರ ಸುತ್ತುಬಳಸುಗಳನ್ನೂ ದಾಟಿದೆವು. ಕೋಟೆಯ ಗೋಡೆಗಳಲ್ಲಿ ಕಾಣುವ ಮುಘಲ್ ವಾಸ್ತುಶಾಸ್ತ್ರವನ್ನು ಗಮನಿಸುತ್ತಾ ನಾನು ಯೋಚಿಸಿದೆ. ಲಂಡನ್ನಿನ ಕೇವಲ ಒಂದು ಕಂಪನಿ ಇಲ್ಲಿಗೆ ಬಂದು ಇಲ್ಲಿಯ ಇಡೀ ಸಾಮ್ರಾಜ್ಯವನ್ನು ವಶ ಪಡಿಸಿಕೊಂಡಿತೇ? ಇಂಥ ಅದ್ಭುತವಾದ, ಬಲಿಷ್ಠವಾದ, ಸುಂದರವಾದ ಕೋಟೆಯನ್ನು ಕಟ್ಟಿದ ಚಾಣಾಕ್ಷರನ್ನು ಸೋಲಿಸಿತೆ?

ಈ ವಿಪರ್ಯಾಸಕ್ಕೆ ಚರಿತ್ರಕಾರರು ಅನೇಕ ಕಾರಣಗಳನ್ನು ಕೊಡುತ್ತಾರೆ. ಮುಘಲ್ ಆಳ್ವಿಕೆಯಲ್ಲಿ ಭಾರತ ತಮ್ಮ ತಮ್ಮಲ್ಲೇ ಸ್ಪರ್ಧಿಸುವ  ಅನೇಕ ಚಿಕ್ಕಚಿಕ್ಕ ರಾಜ್ಯಗಳಲ್ಲಿ ವಿಭಜಿತವಾದುದು.  ಕೈಗಾರಿಕಾ ಕ್ರಾಂತಿಯಿಂದ ಯೂರೋಪ್ ಮೂಲದ ಶಕ್ತಿಗಳು ಯುದ್ಧತಂತ್ರದಲ್ಲಿ ಸಾಧಿಸಿದ ಪ್ರಗತಿ. ಆದರೆ ಇದೆಲ್ಲಕ್ಕಿಂತ ದೊಡ್ಡ ಕಾರಣವೆಂದರೆ ಕಂಪನಿಗೆ ಬ್ರಿಟನ್ನಿನ ಪಾರ್ಲಿಮೆಂಟಿನಿಂದ ಸಿಕ್ಕ ಆಧಾರ. ಹದಿನೆಂಟನೇ ಶತಮಾನದ ಉದ್ದಕ್ಕೂ ಈ ಎರಡೂ ಸಂಸ್ಥೆಗಳ ನಡುವಣ ಸಂಬಂಧ ಕುದುರುತ್ತಲೇ ಹೋಯಿತು. ಭಾರತದಿಂದ ಮರಳಿದ ಕ್ಲೈವ್ ಮೊದಲಾದ  "ನಬಾಬ್" ಅತಿರಥ-ಮಹಾರಾಥಿಗಳು ಪಾರ್ಲಿಮೆಂಟಿನಲ್ಲಿ ಸ್ಥಾನಗಳನ್ನೂ, ಪಾರ್ಲಿಮೆಂಟ್ ಸದಸ್ಯರನ್ನೂ ಬುಟ್ಟಿಗೆ ಹಾಕಿಕೊಂಡರು - ಉದಾಹರಣೆಗೆ ರಾಟನ್ ಬರೋ ಎಂಬ ಸಂಸ್ಥಾನಗಳ ಸದಸ್ಯರು. ಇದಕ್ಕೆ ಪ್ರತಿಯಾಗಿ ಪಾರ್ಲಿಮೆಂಟ್ ತನ್ನ ರಾಜಶಕ್ತಿಯನ್ನು ಕಂಪನಿಯ ಕೆಲಸಗಳಿಗಾಗಿ ಧಾರೆ ಎರೆಯಿತು. ಫ್ರೆಂಚ್ ಮತ್ತು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗಳು ಸೆಣಸಾಟದಲ್ಲಿ ತೊಡಗಿದಾಗ ಪಾರ್ಲಿಮೆಂಟ್ ತನ್ನ ಸೈನ್ಯವನ್ನೂ ಹಡಗುಗಳನ್ನೂ ಯುದ್ಧಕ್ಕಾಗಿ ಕಳಿಸಿತು.

ಕೋಟೆಯ ಗೋಡೆಯ ಸುತ್ತ ದೋಣಿಯಲ್ಲಿ ಪ್ರದಕ್ಷಿಣೆ ಮಾಡುವಾಗ ನಾನು ಪ್ರಸ್ತುತ ಭಾರತದಲ್ಲಿ ರಾಜಕಾರಣಿಗಳಿಗೂ ಕಾರ್ಪೊರೇಷನ್ ಗಳಿಗೂ ಇರುವ ಗಳಸ್ಯಕಂಠಸ್ಯ ಸಂಬಂಧವನ್ನು ಕುರಿತು ಯೋಚಿಸುತ್ತಿದ್ದೆ.  ಈ ಸಂಬಂಧದಿಂದ ಕೆಲವು ವ್ಯಕ್ತಿಗಳಿಗೆ ಕ್ಲೈವ್ ಮತ್ತು ಅವನ ಕಂಪನಿಯ ನಿರ್ದೇಶಕರಿಗೆ ಬಂದ ಲಾಭಕ್ಕಿಂತ ಹೆಚ್ಚಿನ ಲಾಭ ವೈಯಕ್ತಿಕವಾಗಿ ಆಗಿದೆ.  ಜಗತ್ತಿನ 2000 ಮಂದಿ ದಶಸಹಸ್ರ ಕೋಟ್ಯಾಧೀಶರ ಪೈಕಿ  6.9% ಮಂದಿ ಈ ದೇಶದಲ್ಲಿ  ಇದ್ದಾರೆ.  ಇಷ್ಟಾದರೂ ಜಗತ್ತಿನ ಜಿ‌ಡಿ‌ಪಿಯಲ್ಲಿ ಭಾರತದ ಪಾಲು 2.1% ಮಾತ್ರ. ಭಾರತದ ದಶಸಹಸ್ರ ಕೋಟ್ಯಾಧೀಶರ ವಾರ್ಷಿಕ ವರಮಾನ ದೇಶದ ಜಿ‌ಡಿ‌ಪಿಯ 10% ಆಗಿದೆ. ಇದಕ್ಕೆ ಹೋಲಿಸಿದರೆ ಚೈನಾ ದೇಶದಲ್ಲಿ ಈ ಸಂಖ್ಯೆ 3% ಮಾತ್ರ. ಈ ವ್ಯಕ್ತಿಗಳ ವೈಯಕ್ತಿಕ ಸಂಪತ್ತು ಸೃಷ್ಟಿಯಾದದ್ದು ರಾಜಶಕ್ತಿಯ ದುರುಪಯೋಗ ಪಡೆದುಕೊಂಡು ಎಂಬುದು ಗಮನಿಸಬೇಕಾದ ವಿಷಯ. ಪ್ರಭಾವಿ ರಾಜಕಾರಣ ಬಳಸಿ ಭೂಮಿ, ಗಣಿಗಾರಿಕೆ ಮೊದಲಾದವುಗಳ ಮೇಲೆ  ವ್ಯಕ್ತಿಗಳು ಹಿಡಿತ ಸಾಧಿಸಿದ್ದಾರೆ.  ಹೊರದೇಶಗಳಿಂದ ಬರಬಹುದಾದ ಸ್ಪರ್ಧೆಯಿಂದ ಮುಕ್ತರಾಗಿದ್ದಾರೆ. 
ಬಹುರಾಷ್ಟ್ರೀಯ ಕಂಪನಿಗಳನ್ನು ಭಾರತದಲ್ಲಿ ರಾಕ್ಷಸರಂತೆ ಕಾಣಲಾಗುತ್ತದೆ. ಇದಕ್ಕೆ ಕಾರಣಗಳೂ ಇವೆ. ಭೋಪಾಲ್ ಅನಿಲ ಸೋರಿಕೆ ದುರಂತದಲ್ಲಿ ಸಾವಿರಾರು ಜನರು ಸತ್ತರು. ಅಮೆರಿಕಾ ಮೂಲದ ಬಹುರಾಷ್ಟ್ರೀಯ ಕಂಪನಿ ಯೂನಿಯನ್ ಕಾರ್ಬೈಡ್ ನ್ಯಾಯಾಂಗದ ಇಕ್ಕಳದಿಂದ ಪಾರಾಗಿದ್ದಲ್ಲದೆ ಸಂತ್ರಸ್ತರಿಗೆ ಮೂವತ್ತು ವರ್ಷಗಳ ನಂತರವೂ ಸರಿಯಾದ ಪರಿಹಾರ ಕೊಡದೆ ನಿರ್ಭಯವಾಗಿದೆ. ಭಾರತೀಯ ಕಾರ್ಪೊರೇಷನ್ ಗಳಾದ ರಿಲಯನ್ಸ್, ಟಾಟಾ,  ಡಿ‌ಎಲ್‌ಎಫ್,  ಅದಾನಿ ಮೊದಲಾದವು ಭಾರತದ ನಿಯಮ ಸೃಷ್ಟಿಕರ್ತರ ಮೇಲೆ ಮತ್ತು ಸುದ್ದಿಮಾಧ್ಯಮಗಳ ಮೇಲೆ  ಪ್ರಭಾವ ಬೇರುವಲ್ಲಿ  ತಮ್ಮ ವಿದೇಶೀ ಪ್ರತಿಸ್ಪರ್ಧಿಗಳಿಗಿಂತಲೂ ಹೆಚ್ಚು ಚಾಣಾಕ್ಷತನ ಮೆರೆದಿವೆ. ರಿಲಯನ್ಸ್ ಈಗ ದೇಶದ ಅತ್ಯಂತ ದೊಡ್ಡ ಮಾಧ್ಯಮ ಕಂಪನಿಯಾಗಿದೆ. ಈ ಕಂಪನಿಯ ಮಾಲೀಕ ಮುಕೇಶ್ ಅಂಬಾನಿ ಹಿಂದೆ ಯಾರಿಗೂ ಇಲ್ಲದಂತಹ ರಾಜಕೀಯ ಪ್ರಭಾವ ಮತ್ತು ಬಲವನ್ನು ಹೊಂದಿದ್ದಾರೆ.

ಕಳೆದ ಐದು ವರ್ಷಗಳ ಕಾಂಗ್ರೆಸ್ ಆಳ್ವಿಕೆಯಲ್ಲಿ ಭ್ರಷ್ಟಾಚಾರದ ಪ್ರಕರಣಗಳು ಸಾಲಾಗಿ ಹೊರಗೆ ಬಂದಿವೆ.   ಬೇಕಾದವರಿಗೆ ಭೂಮಿ ಮತ್ತು ಗಣಿಗಾರಿಕೆ ಹಕ್ಕುಗಳನ್ನು ಕೊಡಲಾಗಿದೆ. ಮೊಬೈಲ್ ಸ್ಪೆಕ್ಟ್ರಮನ್ನು ಅದರ ನಿಜವಾದ ಬೆಲೆಯ ನಿಕೃಷ್ಟ ಭಾಗಕ್ಕೆ ಮಾರಲಾಗಿದೆ.  ಈ ಭ್ರಷ್ಟಾಚಾರಗಳಿಂದ ರೋಸಿದ ಜನತೆ 2014ರ ಮೇ ತಿಂಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯದ ಸೋಲಿಗೆ ಕಾರಣರಾಗಿದ್ದಾರೆ.  ಆದರೆ ಈ ಸೋಲಿನಿಂದ ದೇಶದ ಹಳೇಹುಲಿ ಬಂಡವಾಳಗಾರರಿಗೆ ಯಾವುದೇ ಸಂಕಷ್ಟ ಒದಗುವುದು ಅನುಮಾನ.

ಮೇ ತಿಂಗಳ ಚುನಾವಣೆಗೆ ತಗುಲಿದ ವೆಚ್ಚ 4.9 ದಶಸಹಸ್ರ ಡಾಲರ್ ಗಳು. ಅಮೆರಿಕಾ ದೇಶದ ಚುನಾವಣೆಯ ನಂತರ ವೆಚ್ಚದಲ್ಲಿ ಇದು ಎರಡನೇ ಸ್ಥಾನದಲ್ಲಿದೆ. ಕಾರ್ಪೊರೇಟ್ ಕಂಪನಿಗಳ  ಕಾಣಿಕೆಗಳ ಬೃಹತ್ ಅಲೆಗಳು ನರೇಂದ್ರ ಮೋದಿ ಅವರನ್ನು ಪ್ರಧಾನಮಂತ್ರಿಯ ಸ್ಥಾನದಲ್ಲಿ ತಂದು ಕೂಡಿಸಿದವು. ವೆಚ್ಚದ ಸರಿಯಾದ ಅಂದಾಜು ಸಿಕ್ಕುವುದು ಕಷ್ಟವಾದರೂ ಮೋದಿ ಅವರ ಭಾರತೀಯ ಜನತಾ ಪಕ್ಷ ಕೇವಲ ಮುದ್ರಣ ಮತ್ತು ಬಿತ್ತರ ಮಾಧ್ಯಮಗಳ ಮೇಲೆ ಒಂದು ದಶಲಕ್ಷ ಸಹಸ್ರ ಡಾಲರ್ ಖರ್ಚು ಮಾಡಿವೆ ಎಂಬ ಅಂದಾಜಿದೆ.  ಚುನಾವಣೆಗೆ ಬಂದ ಕಾಣಿಕೆಗಳಲ್ಲಿ 90% ಅಲಿಖಿತ ಕಾರ್ಪೊರೇಟ್ ಮೂಲಗಳಿಂದ ಬಂದವು. ಅವರಿಗೆ ಯಾವ ಬಗೆಯ ಆಶ್ವಾಸನೆಗಳನ್ನು ಕೊಡಲಾಯಿತೋ ಯಾರಿಗೆ ಗೊತ್ತು? ಮೋದಿ ಅವರ ಸರಕಾರದ ಪ್ರಾಬಲ್ಯವನ್ನು ನೋಡಿದಾಗ ಕಾರ್ಪೊರೇಟ್ ಬೆಂಬಲಿಗರು ತಾವು ಅಂದುಕೊಂಡಷ್ಟನ್ನು ಹೀರಲು ಸಾಧ್ಯವಿಲ್ಲವಾದರೂ ತಮ್ಮ ಕಾಣಿಕೆಗಳಿಗೆ ಒಂದಷ್ಟು ಮರುಕಾಣಿಕೆಗಳನ್ನು ಪಡೆಯುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ.

ಭಾರತದ ರಿಸರ್ವ್ ಬ್ಯಾಂಕಿನ ಗವರ್ನರ್ ಸ್ಥಾನದಲ್ಲಿರುವ ರಘುರಾಮ್ ರಾಜನ್ ಮುಂಬೈ ನಗರದಲ್ಲಿ ಸೆಪ್ಟೆಂಬರ್ 2014ರಲ್ಲಿ ಕೊಟ್ಟ ಭಾಷಣದಲ್ಲಿ ಕಾರ್ಪೊರೇಟ್ ಸಂಸ್ಥೆಗಳ ಕಾಣಿಕೆಗಳು ಪಾರ್ಲಿಮೆಂಟಿನ ಪರಿಶುದ್ಧತೆಯನ್ನು ಹಾಳುಗೆಡವುದರ ಬಗ್ಗೆ ತಮ್ಮ ಕಳಕಳಿಯನ್ನು ವ್ಯಕ್ತಪಡಿಸಿದರು. "ನಮ್ಮ ಪ್ರಜಾಪ್ರಭುತ್ವ ಮತ್ತು ನಮ್ಮ ಆರ್ಥಿಕ ಸ್ಥಿತಿ ಎರಡೂ ಹೆಚ್ಚು ಪ್ರಜ್ವಲವಾಗುತ್ತಿವೆ ಎಂಬುದರ ಜೊತೆಗೆ ಕಳೆದ ಚುನಾವಣೆಯಲ್ಲಿ ಹಿಂದಿದ್ದ ಸೋದರಳಿಯ ಸೋಷಿಯಲಿಸಂ ಬದಲಾಗಿ ನಾವು ಸೋದರಳಿಯ ಕ್ಯಾಪಿಟಲಿಸಮನ್ನು ತಂದು ಕೂಡಿಸುತ್ತಿದ್ದೇವೆಯೇ ಎಂಬ ಅನುಮಾನ ಬರುತ್ತಿದೆ. ಗೆಳೆಗೆಳೆ ಕ್ಯಾಪಿಟಲಿಸಂ ಪದ್ಧತಿಯಲ್ಲಿ ಶ್ರೀಮಂತರೂ ಪ್ರಭಾವಿಗಳೂ ತಾವು ಭ್ರಷ್ಟ ರಾಜಕಾರಣಿಗಳಿಗೆ ಕೊಟ್ಟ ಹಣಕ್ಕೆ ಬದಲಾಗಿ ಭೂಮಿ, ನೈಸರ್ಗಿಕ ಸಂಪತ್ತು ಹಾಗೂ ಸ್ಪೆಕ್ಟ್ರಂಗಳನ್ನು ಪಡೆಯುತ್ತಾರೆ ಎಂಬ ಅಪವಾದವಿದೆ. ಗೆಳೆಗೆಳೆ ಕ್ಯಾಪಿಟಲಿಸಂ ಪದ್ಧತಿ ಪಾರದರ್ಶಕತೆಯನ್ನು ಮತ್ತು ಸ್ಪರ್ಧಾತ್ಮಕತೆಯನ್ನು ನಾಶ ಮಾಡುತ್ತದೆ; ಹಾಗಾಗಿ ಮುಕ್ತ ವಹಿವಾಟಿನ ಮೇಲೆ ಮತ್ತು ಆರ್ಥಿಕ ಬೆಳವಣಿಗೆಯ ಮೇಲೆ  ದುಷ್ಪರಿಣಾಮ ಉಂಟಾಗುತ್ತದೆ.  ಪ್ರಜೆಗಳ ಹಿತಾಸಕ್ತಿಗಿಂತ ಕೆಲವು ವಿಶೇಷ ಹಿತಾಸಕ್ತಿಗಲೇ ಮುಖ್ಯವಾದಾಗ ಪ್ರಜಾಪ್ರಭುತ್ವದ ಮೂಲ ಆಶಯಕ್ಕೇ ಧಕ್ಕೆ ಉಂಟಾಗುತ್ತದೆ."
ಇನ್ನೂರು ವರ್ಷಗಳಿಗೂ ಹಿಂದೆ, ಈಸ್ಟ್ ಇಂಡಿಯಾ ಕಂಪನಿಯು ಶ್ರೀಮಂತಿಕೆಯ ಅಗ್ಗದ ಪ್ರದರ್ಶನ  ಮತ್ತು ರಾಜಕೀಯ ಭ್ರಷ್ಟಾಚಾರದಲ್ಲಿ ಮುಳುಗಿದ್ದಾಗ ಇದೇ ಬಗೆಯ ಕಳಕಳಿಯನ್ನು ವ್ಯಕ್ತ ಪಡಿಸುತ್ತಾ ಅಂದಿನ ಸತ್ತೆಗೆ ವಿರುದ್ಧಪಕ್ಷದಲ್ಲಿದ್ದ ವ್ಹಿಗ್ ಪಕ್ಷಕ್ಕೆ ವಕ್ತಾರನಾದ ಹೋರೇಸ್ ವಾಲ್ ಪೋಲ್  ಕಿಡಿ ಕಾರಿದ್ದ. "ಇಂಗ್ಲೆಂಡ್ ಈಗ ಆಗಿರುವಾದರೂ ಏನು? ಭಾರತದ ಸಂಪತ್ತಿಗೆ ಒಂದು ಉಗ್ರಾಣ." 1767ರಲ್ಲಿ ಪಾರ್ಲಿಮೆಂಟಿನಲ್ಲಿ ತನ್ನ ಕಾರ್ಯಾಚರಣೆಗೆ ಬಂದ ವಿರೋಧವನ್ನು ಕಂಪನಿ 400,000 ಪೌಂಡ್ ಗಳ ದಕ್ಷಿಣೆ ತೆತ್ತು ನಿರ್ನಾಮ ಮಾಡಿತು.  ಆದರೆ ಕಂಪನಿಯ ವಿರುದ್ಧ ಪಾರ್ಲಿಮೆಂಟಿನಲ್ಲಿ ಅನೇಕರಿಗೆ ಅಸಹನೆ ಇದ್ದೇ ಇತ್ತು. ಈ ಅಸಹನೆ 1788ರ ಫೆಬ್ರುವರಿ 13ನೇ ತಾರೀಕು ಭುಗಿಲೆದ್ದಿತು. ಕ್ಲೈವ್ ನ ನಂತರ ಬಂಗಾಳದ ಗವರ್ನರ್ ಆಗಿ ನಿಯುಕ್ತಗೊಂಡ ವಾರೆನ್ ಹೇಸ್ಟಿಂಗ್ಸ್ ನನ್ನು ನ್ಯಾಯಾಂಗದ ಕಟಕಟೆಯಲ್ಲಿ ನಿಲ್ಲಿಸಿದ ದಿನವದು. ಈಸ್ಟ್ ಇಂಡಿಯಾ ಕಂಪನಿಯನ್ನು ಹೀಗೆ ನ್ಯಾಯಾಂಗ ತನಿಖೆಗೆ ಒಳಪಡಿಸಿದ್ದು ಇದೊಂದೇ ಸಲ.  ಈ ತನಿಖೆಯಲ್ಲಿ ಮಾತಾಡಿದವನು ಅಂದಿನ ಅತ್ಯುತ್ತಮ ವಾಗ್ಮಿ ಎಡಮಂಡ್ ಬರ್ಕ್.

ಕಂಪನಿಯ ಮೇಲೆ ಆರೋಪ ಹೊರಿಸುತ್ತಾ ಬರ್ಕ್ ಕಂಪನಿಯ "ನಬಾಬ್" ಗಳು (ಉರ್ದೂ ಪದ ನವಾಬ್ ಎಂಬುದರ ಅಪಭ್ರಂಶ) ಹೇಗೆ ಹಣ ತೆತ್ತು ಪಾರ್ಲಿಮೆಂಟಿನಲ್ಲಿ ಪ್ರಭಾವ ಗಳಿಸುತ್ತಿದ್ದಾರೆ ಎಂದು ವರ್ಣಿಸಿದ. ತಮ್ಮ ಪರವಾಗಿ ಮತ ಹಾಕಲು ಪಾರ್ಲಿಮೆಂಟ್ ಸದಸ್ಯರಿಗೆ ಲಂಚ ತಿನ್ನಿಸುವುದು, ಭಾರತದಿಂದ ಕೊಳ್ಳೆ ಹೊಡೆದು ತಂಡ ಹಣವನ್ನು ಬಳಸಿ ಭ್ರಷ್ಟ ವಿಧಾನಗಳಿಂದ  ಪಾರ್ಲಿಮೆಂಟ್ ನಲ್ಲಿ ಸ್ಥಾನಗಳನ್ನು ಗಿಟ್ಟಿಸಿಕೊಳ್ಳುವುದು - ಇವೆರಡೂ ಕೆಲಸಗಳಲ್ಲಿ ತೊಡಗಿದ್ದ ಕಂಪನಿಯ ವಿರುದ್ಧ ಬರ್ಕ್ ವಾಕ್ ಪ್ರಹಾರ ಮಾಡಿದ. "ಇವತ್ತು ಗ್ರೇಟ್ ಬ್ರಿಟನ್ನಿನ ಸಾಮಾನ್ಯರು ಭಾರತದ ಅಪರಾಧಿಗಳನ್ನು ತನಿಖೆಗೆ ಒಳಪಡಿಸುತ್ತಿದ್ದಾರೆ. ಆದರೆ ಮುಂದೆ ಈ ಭಾರತದ ಅಪರಾಧಿಗಲೇ ಗ್ರೇಟ್ ಬ್ರಿಟನ್ನಿನ ಸಾಮಾನ್ಯರೆಂದು ಕರೆಸಿಕೊಳ್ಳುವ ಭೀತಿ ಎದುರಾಗಿದೆ."
ಲಾರ್ಡ್ ಕಾರ್ನ್ ವಾಲಿಸ್ 
ಹೀಗೆ ಬರ್ಕ್ ಯಾವ ಸಮಸ್ಯೆಯನ್ನು ಎತ್ತಿ ತೋರಿಸಿದನೋ ಅದು ಇಂದು ಕೂಡಾ ಪ್ರಜಾಪ್ರಭುತ್ವದ ಅತ್ಯಂತ ದೊಡ್ಡ ಆತಂಕಗಳಲ್ಲಿ ಒಂದು - ಯಾವ ಮುಲಾಜಿಲ್ಲದ ಕಾರ್ಪೋರೇಷನ್ನೊಂದು ಸಂಸತ್ತನ್ನೇ ಭ್ರಷ್ಟತೆಯಿಂದ ಕೊಂಡುಕೊಳ್ಳುವ ಸಾಧ್ಯತೆ. ಈನಡುವೆ ಕಾರ್ಪೋರೇಷನ್ನುಗಳು ನಿವೃತ್ತಿ ಹೊಂದಿದ ರಾಜಕಾರಣಿಗಳಿಗೆ ವೃತ್ತಿ ಕೊಟ್ಟು ಅವರ ಮಾಜೀ ಪ್ರಭಾವವನ್ನು ಬಳಸಿಕೊಳ್ಳುವುದನ್ನು ನೋಡುತ್ತೇವೆ. ಈ ಕೆಲಸವನ್ನು ಈಸ್ಟ್ ಇಂಡಿಯಾ ಕಂಪನಿ ಕೂಡಾ ಮಾಡಿತು.  ಅಮೆರಿಕಾ ದೇಶದಲ್ಲಿ ಕಾಲೊನಿಗಳು ವಾಷಿಂಗ್ ಟನ್ ಪಾಲಾಗಿದ್ದನ್ನು ವೀಕ್ಷಿಸಿದ ಲಾರ್ಡ್ ಕಾರ್ನ್ ವಾಲಿಸ್ ನನ್ನು ಕಂಪನಿ ಕೆಲಸಕ್ಕಿಟ್ಟುಕೊಂಡು ಭಾರತಕ್ಕೆ ಕಳಿಸಿತು.   "ಒಬ್ಬ ಸಾಧಾರಣ ಇಂಗ್ಲಿಷ್ ಪ್ರಜೆ, ಒಂದು ಸ್ಟಾಕ್ ಕಂಪನಿಯ ಕೆಲಸಗಾರನನ್ನು ಅಲ್ಪಕಾಲ ಜಗತ್ತಿನ ಅತ್ಯಂತ ದೊಡ್ಡ ಸಾಮ್ರಾಜ್ಯದ ಒಡೆಯನನ್ನಾಗಿ ಮಾಡಿರುವುದು ಒಂದು ವಿಪರ್ಯಾಸ. ರಾಜರು, ರಾಜಕುಮಾರರು ಅವನ ಮುಂದೆ ನಮ್ರತೆಯಿಂದ ತಲೆಬಾಗುತ್ತಿದ್ದಾರೆ. ಚರಿತೆಯಲ್ಲಿ ಇಂಥದ್ದೊಂದು ಹಿಂದೆ ನಡೆದಿರಲಾರದು" ಎಂದು ಒಬ್ಬ ವೀಕ್ಷಕ ಬರೆದಿದ್ದಾನೆ. 
ಲಾರ್ಡ್ ಹೇಸ್ಟಿಂಗ್ಸ್ 
ಹೇಸ್ಟಿಂಗ್ಸ್ ನ್ಯಾಯಾಲಯದ ಅಗ್ನಿಪರೀಕ್ಷೆಯಲ್ಲಿ ಬಚಾವಾದ. ಇದಾದ 60 ವರ್ಷಗಳ ನಂತರ, ಕಂಪನಿಯು ದಿವಾನಿ ಹಕ್ಕನ್ನು ಕಸಿದುಕೊಂಡ  90 ವರ್ಷಗಳ ತರುವಾಯ, 1857ರಲ್ಲಿ ಕೊನೆಗೂ ಬ್ರಿಟಿಷ್ ಆಧಿಪತ್ಯ ಕಂಪನಿಯನ್ನು ಹಿಂದಕ್ಕೆ ಕರೆಯಿತು. 1857 ಮೇ 10ನೇ ತಾರೀಕು ಕಂಪನಿಯ ಸುರಕ್ಷತಾ ಸಿಬ್ಬಂದಿಯವರೇ ತಮ್ಮ ಮಾಲೀಕರ ವಿರುದ್ಧ ಬಂಡಾಯವೆದ್ದರು. ಈ ಬಂಡಾಯವನ್ನು ಬಗ್ಗುಬಡಿಯುವುದರಲ್ಲಿ ಕಂಪನಿ ಹೇಗೋ ಯಶಸ್ವಿಯಾಯಿತು. ಮುಂದಿನ ಒಂಬತ್ತು ತಿಂಗಳುಗಳು ಅನಿಶ್ಚಿತತೆಯಲ್ಲಿ ಕಳೆದವು. ಅನಂತರ ಒಂದು ದಿನ ಹತ್ತಾರು ಸಾವಿರ ಬಂಡಾಯಗಾರರನ್ನು ಕಂಪನಿ ಗುಂಡಿಟ್ಟು ಅಥವಾ ಗಲ್ಲಿಗೇರಿಸಿ ಕೊಂದಿತು. ಗಂಗಾನದಿಯ ದಡದಲ್ಲಿರುವ ಅಂಗಡಿ ಮುಗ್ಗಟ್ಟುಗಳು ನೇಣುಬಿಗಿದ  ಸೈನಿಕರ ದೇಹಗಳು ತೂಗಾಡುವುದನ್ನು ಮೂಕಸಾಕ್ಷಿಗಳಾಗಿ ನೋಡಿದವು. ಬ್ರಿಟಿಷ್ ಕಾಲೊನೀಕರಣದ ಚರಿತ್ರೆಯಲ್ಲೇ ಇದು ಅತ್ಯಂತ ಭೀಕರ ಘಟನೆಯಾಗಿತ್ತು.  
Charles John Canning by Richard Beard, 1840s.jpgಲಾರ್ಡ್ ಕ್ಯಾನಿಂಗ್ 
ಈ ಘಟನೆ ಬ್ರಿಟಿಷ್ ಸಾಮ್ರಾಜ್ಯದ ಸಹನೆಯನ್ನು ಕೊನೆಗೊಳಿಸಿತು. ಇದುವರೆಗೂ ಕಂಪನಿಯನ್ನು ಮುಚ್ಚಟೆಯಿಂದ ಬೆಳೆಸಿದ ಬಿಟನ್ನಿನ ಪಾರ್ಲಿಮೆಂಟ್ ತನ್ನ ಕೂಸನ್ನು ತಾನೇ ನುಂಗಿಹಾಕಿತು. ಅಪರಿಮಿತ ದುರಾಶೆಯ ಕಾರ್ಪೊರೇಷನ್ನಿನ  ಅಪಾಯವನ್ನು ಕೊನೆಗೂ ಮನಗಂಡ ಬ್ರಿಟಿಷ್ ಸಾಮ್ರಾಜ್ಯಶಾಹಿ ಅದಕ್ಕೆ ಸಂಕೋಲೆ ಹಾಕಿತು.  ಅಲಾಹಾಬಾದಿನ ಕೋಟೆಯ ಗೋಡೆಗಳ ಒಳಗೆ ಒಂದು ಕೋಣೆಯಲ್ಲಿ 1859ನೇ ಇಸವಿಯಲ್ಲಿ ಲಾರ್ಡ್ ಕ್ಯಾನಿಂಗ್ ಬ್ರಿಟಿಷ್ ಸಾಮ್ರಾಜ್ಯದ ಆಜ್ಞೆಯನ್ನು ಓದಿ ಹೇಳಿದ. ಭಾರತದಲ್ಲಿದ್ದ ಕಂಪನಿಯ ಎಲ್ಲಾ ಸಂಪತ್ತನ್ನೂ ರಾಷ್ಟ್ರೀಕೃತಗೊಳಿಸಿ ಅದನ್ನು ಬ್ರಿಟಿಷ್ ಕಿರೀಟದ ಸ್ವಾಮ್ಯಕ್ಕೆ ಕೊಡಲಾಗುವುದು. ಇನ್ನು ಮುಂದೆ ಕಂಪನಿಯ ನಿರ್ದೇಶಕರ ಬದಲಾಗಿ ಭಾರತವನ್ನು ವಿಕ್ಟೋರಿಯಾ ರಾಣಿಯೇ ಆಳುವರು. 
ಮುಂದೆ ಹದಿನೈದು ವರ್ಷ ಹಾಗೂ ಹೀಗೂ ತನ್ನ ಕತ್ತರಿಸಿದ ಕಾಲುಗಳ ಮೇಲೇ ಓಡಾಡಿಕೊಂಡಿದ್ದ ಕಂಪನಿ ಕೊನೆಗೂ 1874ರಲ್ಲಿ ಕೊನೆಯುಸಿರೆಳೆಯಿತು. ಈಗ ಈಸ್ಟ್ ಇಂಡಿಯಾ ಕಂಪನಿ ಎಂಬ ಬ್ರಾಂಡ್ ಹೆಸರನ್ನು ಒಬ್ಬ ಗುಜರಾತಿ ವ್ಯಾಪಾರಿ ಹೊಂದಿದ್ದಾನೆ. ಲಂಡನ್ನಿನ ವೆಸ್ಟ್ ಎಂಡ್ ಎಂಬಲ್ಲಿರುವ ಅಂಗಡಿಯಿಂದ ಆತ ಕಂಪನಿಯ ಹೆಸರಿನಲ್ಲಿ ಕಾಂಡಿಮೆಂಟ್ಸ್ ಮತ್ತು ವಿಶೇಷ ಆಹಾರಪದಾರ್ಥಗಳನ್ನು ಮಾರುತ್ತಿದ್ದಾನೆ.  ಇತಿಹಾಸದ ವಿಪರ್ಯಾಸ ಎಂಬಂತೆ ಪೋವಿಸ್ ಅರಮನೆಯ ಈಗಿನ ವಾರಸುದಾರ ಒಬ್ಬ ಬಂಗಾಳಿ ಕನ್ಯೆಯನ್ನು ಮದುವೆಯಾಗಿದ್ದಾನೆ. ಅವರ ವೈಭವದ ವಿವಾಹದ ಚಿತ್ರಗಳು ಪೋವಿಸ್ ಅರಮನೆಯ ಚಹಾ ಕೋಣೆಯಲ್ಲಿ ತೂಗುತ್ತಿವೆ.  ಮುಂದೆ ಹುಟ್ಟಲಿರುವ ಕ್ಲೈವ್ ನ ವಂಶಸ್ಥರು ಅರ್ಧ ಭಾರತೀಯರಾಗಿರುತ್ತಾರೆ ಎಂಬುದು ಇದರರ್ಥ.  

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)