ಈಸ್ಟ್ ಇಂಡಿಯಾ ಕಂಪನಿ - ಪ್ರಪ್ರಥಮ ಕಾರ್ಪೊರೇಟ್ ದಾಳಿಕೋರರು -7

ಮೂಲ : ವಿಲಿಯಂ ಡ್ಯಾಲ್ ರಿಂಪಲ್
ಕನ್ನಡಕ್ಕೆ: ಸಿ. ಪಿ. ರವಿಕುಮಾರ್  
ಇಂದು ಪರಿಸ್ಥಿತಿ ಪುನರಾವರ್ತನೆಗೊಂಡು ಸರ್ ಥಾಮಸ್ ರೋ ಅವರ ಕಾಲದಂತಾಗಿದೆ.  ರೋಮನ್ನರ ಕಾಲದಿಂದ ಈಸ್ಟ್ ಇಂಡಿಯಾ ಕಂಪನಿಯ ಕಾಲದವರೆಗೆ ಹರಿಯುತ್ತಿದ್ದಂತೆ ಹಣವು ಮತ್ತೆ ಪಶ್ಚಿಮದಿಂದ  ಪೂರ್ವದಿಕ್ಕಿಗೆ ಹರಿಯುತ್ತಿದೆ.  ಇಂದು ಬ್ರಿಟನ್ನಿನ ಪ್ರಧಾನಮಂತ್ರಿಯೋ ಫ್ರಾನ್ಸಿನ ಅಧ್ಯಕ್ಷರೋ ಭಾರತಕ್ಕೆ ಭೇಟಿ ಕೊಟ್ಟಾಗ ಅವರು ರಾಬರ್ಟ್ ಕ್ಲೈವ್ ಬಂದಂತೆ  ತಮ್ಮ ನಿರ್ಧಾರಗಳನ್ನು ಹೇರಲು ಬರುವುದಿಲ್ಲ.  ಯಾವುದೇ ಬಗೆಯ ಒಪ್ಪಂದಗಳೂ ಈ ಭೇಟಿಗಳ ಉದ್ದೇಶವಾಗಿರುವುದಿಲ್ಲ. ಅವರು ಬರುವುದು ಸರ್ ಥಾಮಸ್ ರೋ ಹಾಗೆ, ವ್ಯಾಪಾರಕ್ಕಾಗಿ ಯಾಚನೆ ಮಾಡುವ ಸಲುವಾಗಿ. ಅವರೊಂದಿಗೆ ಬರುವವರು  ದೇಶದ ಅತಿದೊಡ್ಡ ಕಾರ್ಪೊರೇಷನ್ ಗಳ ಮುಖ್ಯಾಧಿಕಾರಿಗಳು. 
ಯೂರೋಪ್ ದೇಶಗಳು ಕಾಲೋನಿಗಳನ್ನು ಸ್ಥಾಪಿಸಲು ಹೊರಟಾಗಲೇ ಕಾರ್ಪೊರೇಷನ್ ಎಂಬ ವ್ಯವಸ್ಥೆ ಜಾರಿಗೆ ಬಂದಿದ್ದು.  ಯೂರೋಪಿಗೆ ವ್ಯಾಪಾರದಲ್ಲಿ ಸ್ಪರ್ಧಿಸುವ ಹುಮ್ಮಸ್ಸನ್ನು ತಂದುಕೊಟ್ಟಿದ್ದೇ ಕಾರ್ಪೊರೇಷನ್ ಗಳು. ಯೂರೋಪಿನ ರಾಜಾಧಿಕಾರಗಳು ಉರುಳಿದರೂ ಕಾರ್ಪೊರೇಷನ್ ಗಳು ಇನ್ನೂ ಉಳಿದುಕೊಂಡಿವೆ. ಭಾರತಕ್ಕೆ ಬ್ರಿಟಿಷರ ಬಳುವಳಿ ಏನೆಂದು ಚರಿತ್ರಕಾರರು ಬರೆಯುವಾಗ ಪ್ರಜಾಪ್ರಭುತ್ವ, ನ್ಯಾಯಬದ್ಧ ಆಳ್ವಿಕೆ, ರೈಲ್ವೆ, ಚಹಾ ಮತ್ತು ಕ್ರಿಕೆಟ್ ಗಳನ್ನು ಹೆಸರಿಸುತ್ತಾರೆ. ಆದರೆ ಅನೇಕ ಹೂಡಿಕೆದಾರರು ಒಟ್ಟಾಗಿ ನಡೆಸಬಲ್ಲ ಕಂಪನಿಯ ಕಲ್ಪನೆಯನ್ನು ಭಾರತಕ್ಕೆ ತಂದವರು ಬ್ರಿಟಿಷರೇ.  ದಕ್ಷಿಣ ಏಷ್ಯಾ ಖಂಡದ ಮೇಲೆ ಭಾರೀ ಪರಿಣಾಮ ಬೀರುವುದರಲ್ಲಿ - ಅದು ಒಳ್ಳೆಯದಾಗಿರಲಿ ಕೆಟ್ಟದಾಗಿರಲಿ - ಈ ಕಲ್ಪನೆ ಯಶಸ್ವಿಯಾಗಿದೆ. ಕಮ್ಯೂನಿಸಂ, ಪ್ರಾಟೆಸ್ಟೆಂಟ್ ಕ್ರೈಸ್ತ ಧರ್ಮ ಮತ್ತು ಪ್ರಜಾಪ್ರಭುತ್ವ - ಈ ಮೂರೂ ಆಲೋಚನಾ ಕ್ರಮಗಳಿಗೂ ಹೆಚ್ಚಿನ ಪ್ರಭಾವವನ್ನು ಕಾರ್ಪೊರೇಷನ್ ಎಂಬ ಕಲ್ಪನೆ ಬೀರಿದೆ ಎಂದರೆ ಅತಿಶಯೋಕ್ತಿಯಾಗಲಾರದು.  
ಕಂಪನಿಗಳು ಮತ್ತು ಕಾರ್ಪೊರೇಷನ್ ಗಳು ಇಂದು ಭಾರತೀಯ ಜನಮನದಲ್ಲಿ ಅವರ ಕುಟುಂಬದ ನಂತರದ ಸ್ಥಾನ ಪಡೆದುಕೊಂಡಿವೆ.  ಹಾರ್ವರ್ಡ್ ವಿಶ್ವವಿದ್ಯಾಲಯದ  ಸೆಂಟರ್ ಫಾರ್ ಬಿಸಿನೆಸ್ ಅಂಡ್ ಗವರ್ನಮೆಂಟ್ ನ ಮಾಜಿ ನಿರ್ದೇಶಕಿ ಇರಾ ಜ್ಯಾಕ್ಸನ್  ಹೀಗೆ ಹೇಳಿದ್ದಾರೆ: "ನಮ್ಮ ವ್ಯವಸ್ಥೆಯಲ್ಲಿ ಮಹಾ ಅರ್ಚಕರ ಸ್ಥಾನ ಇಂದು ರಾಜಕೀಯ ಮತ್ತು ರಾಜಕೀಯ ಮುಂದಾಳುಗಳಿಂದ  ಕಾರ್ಪೊರೇಷನ್ ಗಳು ಮತ್ತು ಅವುಗಳ ಮುಂದಾಳುಗಳಿಗೆ ಸ್ಥಳಾಂತರಗೊಂಡಿದೆ."  ಕಂಪನಿಗಳು ಗುಪ್ತವಾಗಿ ಮನುಷ್ಯಜಾತಿಯ ಬಹುದೊಡ್ಡ ಭಾಗವನ್ನು ನಿಯಂತ್ರಿಸುತ್ತಿವೆ. 
ಬಹುರಾಷ್ಟ್ರೀಯ ಕಂಪನಿಗಳ ಅಗಾಧ ಶಕ್ತಿ ಮತ್ತು ಅವುಗಳ ಅಪಾಯಗಳನ್ನು ಹೇಗೆ ಎದರಿಸಬೇಕೆಂಬುದು ಮುನ್ನೂರು ವರ್ಷಗಳಷ್ಟು ಹಳೆಯ ಪ್ರಶ್ನೆ. ಅದಕ್ಕೆ ಇನ್ನೂ ಸ್ಪಷ್ಟವಾದ ಉತ್ತರ ಸಿಕ್ಕಿಲ್ಲ. ಒಂದು ದೇಶ ತನ್ನನ್ನು ಮತ್ತು ತನ್ನ ನಾಗರೀಕರನ್ನು ಇಂಥ ಕಂಪನಿಗಳ ಅತಿರೇಕಗಳಿಂದ ಹೇಗೆ ರಕ್ಷಿಸಿಕೊಳ್ಳಲು ಸಾಧ್ಯ ಎಂಬುದಕ್ಕೆ ನೇರವಾದ ಉತ್ತರವಿಲ್ಲ.  2007-2009ರ ಅವಧಿಯಲ್ಲಿ ಸಬ್ ಪ್ರೈಮ್ ಕುಸಿತ ಮತ್ತು ಅದರೊಂದಿಗೆ ಬ್ಯಾಂಕ್ ಗಳು ದಿವಾಳಿಯಾದದ್ದನ್ನು ಗಮನಿಸಿದಾಗ ಕಂಪನಿಗಳು ತಮ್ಮ ದೇಶದ ಆರ್ಥಿಕ ಸ್ಥಿತಿಯನ್ನು ರೂಪಿಸಲೂ ಬಲ್ಲವು, ನಾಶಮಾಡಲೂ ಬಲ್ಲವು ಎಂಬುದು ವಿದಿತವಾಗುತ್ತದೆ. ಜನವರಿ 2007ರಿಂದ ಸೆಪ್ಟೆಂಬರ್ 2009ರ ವರೆಗೆ ಅಮೆರಿಕಾ ಸಂಸ್ಥಾನ ಮತ್ತು ಯೂರೋಪಿನ ಬ್ಯಾಂಕ್ ಗಳು ಕಳೆದುಕೊಂಡದ್ದು ಒಂದು ಟ್ರಿಲಿಯನ್ ಡಾಲರ್ ಗಳ ಮೊತ್ತ. ಈಸ್ಟ್ ಇಂಡಿಯಾ ಕಂಪನಿಯಿಂದ ಉಂಟಾಗಬಲ್ಲ ಅವನತಿಯನ್ನು ಬರ್ಕ್ 1772ರಲ್ಲಿ ಊಹಿಸಿದ್ದನಲ್ಲ, ಅದು ಐಸ್ ಲ್ಯಾಂಡ್  ದೇಶದಲ್ಲಿ 2008-2011 ಅವಧಿಯಲ್ಲಿ ನಿಜವಾಯಿತು. ಆ ದೇಶದ ಮೂರೂ ಬ್ಯಾಕ್ ಗಳು ವ್ಯವಸ್ಥಿತ ರೂಪದಲ್ಲಿ ಕೆಳಗುರುಳಿ ದೇಶವು ಸಂಪೂರ್ಣ ಭಿಕಾರಿ ಸ್ಥಿತಿಗೆ ಬಂದು ನಿಂತಿತು. ಬಲಾಢ್ಯವಾದ ಒಂದು ಕಂಪನಿ ಒಂದು ದೇಶದ ಸತ್ತೆಯನ್ನು ಅಲುಗಾಡಿಸಬಲ್ಲದು - ಈಸ್ಟ್ ಇಂಡಿಯಾ ಕಂಪನಿ ಬಂಗಾಳದಲ್ಲಿ 1765ರಲ್ಲಿ ಮಾಡಿದಹಾಗೆ.


 ಕಂಪನಿಗಳಿಗಿರುವ ಧನಬಲ, ಅಧಿಕಾರಬಲ ಮತ್ತು ಬೇಜವಾಬ್ದಾರಿತನದೊಂದಿಗೆ ಪರಿಣಾಮಕಾರಿಯಾದ ನಿಯಂತ್ರಣವೂ ಸಾಧಿಸಲಾರದ ದುರ್ಬಲವಾದ ಸರಕಾರಗಳು ಆಳುತ್ತಿರುವ ಸಂದರ್ಭದಲ್ಲಿ, ಸರಕಾರದ ಕೊಳ್ಳುವ ಶಕ್ತಿಯನ್ನು ಮೀರಿಸುವ ಧನಬಲವನ್ನು ಒಂದು ದೊಡ್ಡ ಕಂಪನಿ ಹೊಂದಿದ ಸಂದರ್ಭದಲ್ಲಿ, ಕಾರ್ಪೊರೇಟ್ ಪ್ರಭಾವ ಇನ್ನಷ್ಟು ಅಪಾಯಕಾರಿಯಾಗಬಲ್ಲುದು. 2014ರ ವರೆಗೆ ಭಾರತವನ್ನು ಆಳಿದ ಕಾಂಗ್ರೆಸ್ ಸರಕಾರದ ಸಂದರ್ಭದಲ್ಲಿ ಆಗಿದ್ದು ಇದೇ. ಇಷ್ಟಾದರೂ ಲಂಡನ್ನಿನಲ್ಲಿ ಮಾಧ್ಯಮ ಸಂಸ್ಥೆಗಳು ಎಚ್‌ಎಸ್‌ಬಿ‌ಸಿಯಂಥ ಕಾರ್ಪೊರೇಷನ್ ಗಳ ಪ್ರಭಾವಕ್ಕೆ ಬಗ್ಗುವುದನ್ನು ನೋಡುತ್ತೇವೆ. ಸರ್ ಮಾಲ್ಕಮ್ ರಿಫ್ಕಿಂಡ್  ಅವರು ಚೈನಾ ದೇಶದ ಕಂಪನಿಗಳಿಗಾಗಿ ನಾವು ಬ್ರಿಟಿಷ್ ರಾಯಭಾರಿ ಕಚೇರಿಗಳನ್ನೇ ತೆರೆಯುತ್ತೇವೆ ಎಂದು ಬಡಾಯಿ ಕೊಚ್ಚುವುದನ್ನು ನೋಡಿದಾಗ ವ್ಯಾಪಾರ ಮತ್ತು ರಾಜಕಾರಣಗಳ ನಡುವೆ ಅಕ್ರಮ ಸಂಬಂಧ ಹಿಂದೆ ಇದ್ದಷ್ಟೇ ಇಂದೂ ಗಾಢವಾಗಿದೆ ಎಂದು ನಮಗೆ ತಿಳಿಯುತ್ತದೆ.

ಇಂದು ಈಸ್ಟ್ ಇಂಡಿಯಾ ಕಂಪನಿ ಉಳಿದಿಲ್ಲ. ಸುದೈವದಿಂದ ಇಂದು ಅಂಥ ಕಂಪನಿ ಯಾವುದೂ ಇಲ್ಲ. ವಹಿವಾಟಿನಲ್ಲಿ ಅತ್ಯಂತ ದೊಡ್ಡ ಸಂಸ್ಥೆ ಎಂಬ ಅಗ್ಗಳಿಕೆ ಹೊಂದಿದ ವಾಲ್ ಮಾರ್ಟ್ ಕಂಪನಿಯ ಬಳಿ ನ್ಯೂಕ್ಲಿಯರ್ ಸಬ್ ಮರೀನ್ ಗಳ ಸಂಗ್ರಹವಿಲ್ಲ. ಫೇಸ್ ಬುಕ್ ಅಥವಾ ಶೆಲ್ ಕಂಪನಿಗಳು ಸೇನೆಗಳನ್ನು ಇಟ್ಟುಕೊಂಡಿಲ್ಲ.  ಆದರೆ ಜಗತ್ತಿನ ಪ್ರಪ್ರಥಮ ಕಾರ್ಪೊರೇಟ್ ಸಂಸ್ಥೆಯೂ ಮತ್ತು ಅಡ್ಡಹಾದಿ ಹಿಡಿದ ಖ್ಯಾತಿ ಉಳ್ಳ ಕಂಪನಿಯೂ ಆದ ಈಸ್ಟ್ ಇಂಡಿಯಾ ಕಂಪನಿಯೇ ಇಂದಿನ ಎಲ್ಲಾ ಷೇರುದಾರ ಕಂಪನಿಗಳಿಗೂ ಮಾದರಿ ಎಂಬುದನ್ನು ಮರೆಯಲಾಗದು. ಇವುಗಳಲ್ಲಿ ಅತ್ಯಂತ ಪ್ರಭಾವಶಾಲಿಯಾದ ಕಂಪನಿಗಳಿಗೆ ತಮ್ಮದೇ ಸ್ವಂತ ಸೈನ್ಯ ಬೇಕಾಗಿಲ್ಲ. ಅಗತ್ಯ ಬಿದ್ದಾಗ ಅವು ಸರಕಾರಗಳ ಮೊರೆ ಹೋಗಿ ತಮ್ಮ ಕೆಲಸ ಸಾಧಿಸಿಕೊಳ್ಳುತ್ತವೆ.  ಷೇರುದಾರರ ವೈಯಕ್ತಿಕ ಹಿತಾಸಕ್ತಿ ಸತ್ತೆಯ ಹಿತಾಸಕ್ತಿಗೂ ದೊಡ್ಡದಾಗಬಲ್ಲದು ಎಂಭ ಭಯಾನಕ ಸತ್ಯಕ್ಕೆ  ಈಸ್ಟ್ ಇಂಡಿಯಾ ಕಂಪನಿಗಿಂತ ಬೇರೆ ಉದಾಹರಣೆ ಬೇಡ. ಅದು ಸ್ಥಾಪಿತವಾಗಿ ಮುನ್ನೂರಾ ಹದಿನೈದು ವರ್ಷಗಳು ಉರುಳಿದರೂ ಅದರ ಕಥೆ ಇಂದಿಗೂ ಪ್ರಸಕ್ತವಾಗಿದೆ. 
 (ಮುಗಿಯಿತು)

ಕಾಮೆಂಟ್‌ಗಳು

  1. ತುಂಬ ಚೆನ್ನಾಗಿ ಮೂಡಿ ಬಂತು. ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  2. ಆನಂದ್, ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  3. CP. Very enlightening. The perspective we all have growing up is the history we learnt! Hisorians' view of India being divided, French & the English empires fighting a proxy war thru their respective trading companies to gain dominance on the eastern front etc ..... a very different perspective here. Thank you

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)