ಈಸ್ಟ್ ಇಂಡಿಯಾ ಕಂಪನಿ - ಪ್ರಪ್ರಥಮ ಕಾರ್ಪೊರೇಟ್ ದಾಳಿಕೋರರು - 1

ಮೂಲ ಲೇಖನ - ವಿಲಿಯಂ ಡ್ಯಾಲ್ ರಿಂಪಲ್ 
ಕನ್ನಡಕ್ಕೆ - ಸಿ ಪಿ ರವಿಕುಮಾರ್  
ಭಾಗ 1 

"ಲೂಟ್" ಎಂಬ ಪದ ಹಿಂದೂಸ್ತಾನಿ ಭಾಷೆಗಳಿಂದ  ಇಂಗ್ಲಿಷ್ ಭಾಷೆಗೆ ಬಂದ ಮೊದಲ ಪದಗಳಲ್ಲಿ ಒಂದು. ಹದಿನೆಂಟನೇ ಶತಮಾನದ ಕೊನೆಯವರೆಗೂ ಉತ್ತರಭಾರತದ ಸಮತಟ್ಟು ಪ್ರದೇಶಗಳನ್ನು ಬಿಟ್ಟರೆ ಬೇರೆಲ್ಲೂ ಬಳಕೆಯಾಗದ ಈ ಪದ ಒಮ್ಮೆಲೇ ಬ್ರಿಟನ್ನಿನಲ್ಲಿ ಜನಪ್ರಿಯವಾಗಿ ಹೋಯಿತು. ಈ ಪದ ಅಷ್ಟು ದೂರ ಹೋಗಿ ನೆಲೆಸಿ ಅಲ್ಲಿ ಮನೆಮಾತಾದದ್ದು ಹೇಗೆ ಎಂಬುದನ್ನು ಅರಿಯಲು ಪೋವಿಸ್ ಅರಮನೆಗೆ ಒಮ್ಮೆ ಭೇಟಿ ಕೊಟ್ಟರೆ ಸಾಕು. 
ಆನುವಂಶಿಕವಾಗಿ ವೇಲ್ಸ್ ನ ಕೊನೆಯ ರಾಜಕುಮಾರನಾಗಿದ್ದ ಒವೇನ್ ಗ್ರುಫ್ಫಿಡ್ಡ್ ಅಪ್ ಗ್ವೆನ್ವಿನ್ವಿನ್ ಎಂಬುವನು ಹದಿಮೂರನೇ ಶತಮಾನದಲ್ಲಿ ಕಟ್ಟಿಸಿದ "ಪೋವಿಸ್ ಅರಮನೆ" ಮೊದಲು ಒಂದು ಅಂಕುಡೊಂಕಾದ ಕೋಟೆಯಾಗಿತ್ತು. ಇಂಗ್ಲಿಷ್ ದೊರೆಗಳ ಸ್ವಾಮ್ಯವನ್ನು ಒಪ್ಪಿಕೊಂಡು ವೇಲ್ಸ್ ಆಧಿಪತ್ಯವನ್ನು ಬಿಟ್ಟುಕೊಟ್ಟಿದ್ದಕ್ಕೆ ತನಗೆ ಉಡುಗೊರೆಯ ರೂಪದಲ್ಲಿ ಸಿಕ್ಕ ಭೂಮಿಯಲ್ಲಿ ಅವನು ಈ ಕೋಟೆಯನ್ನು ಕಟ್ಟಿಸಿದ. ಆದರೆ ಈಗ ಅಲ್ಲಿರುವ ಅತ್ಯಂತ ಬೆಲೆ ಬಾಳುವ ವಸ್ತುಗಳ ಆಗಮನವಾಗಿದ್ದು  ಸಾಕಷ್ಟು ವರ್ಷಗಳ ನಂತರ. ಈಸ್ಟ್ ಇಂಡಿಯಾ ಕಂಪನಿ ಭಾರತದಿಂದ ಲೂಟಿ ಮಾಡಿ ತಂದ ವಸ್ತುವಿಶೇಷಗಳಿಂದ ಈ ಅರಮನೆಯ ಕೋಣೆಗಳು ತುಂಬಿಹೋಗಿವೆ.  ಹದಿನೆಂಟನೇ ಶತಮಾನದಲ್ಲಿ ಕಂಪನಿಯಿಂದ ಈ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು.  
ವೇಲ್ಸ್ ಹಳ್ಳಿಗಾಡು ಪ್ರದೇಶದಲ್ಲಿರುವ ಈ ಖಾಸಗೀ ಭವನದಲ್ಲಿರುವಷ್ಟು ಬೆಲೆಬಾಳುವ ವಸ್ತುಗಳು ಒಂದೇ ಸ್ಥಳದಲ್ಲಿ ನಮಗೆ ಇನ್ನೆಲ್ಲೂ ಕಾಣಸಿಕ್ಕುವುದಿಲ್ಲ. ದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲೂ ಕೂಡಾ.  ಬಂಗಾರದಲ್ಲಿ ತಯಾರಿಸಿದ  ಕಪ್ಪುದಂತದ ಕುಸುರಿ ಕೆಲಸವಿರುವ ಹುಕ್ಕಾ.  ಬೆಲೆಬಾಳುವ ಕಲ್ಲುಗಳಿಂದ ಅಲಂಕೃತವಾದ ಕಠಾರಿಗಳು.  ಪಾರಿವಾಳದ ನೆತ್ತರಿನ ಬಣ್ಣದ ಹೊಳೆಹೊಳೆಯುವ ಕೆಂಪು ಕಲ್ಲುಗಳು.  ಪಚ್ಚೆ ಕಲ್ಲುಗಳು. ಪುಷ್ಯರಾಗಗದ ಕಲ್ಲುಗಳಿಂದ ಅಲಂಕೃತವಾದ ಕತ್ತಿಗಳು.  ದಂತ ಮತ್ತು ಪಚ್ಚೆಕಲ್ಲುಗಳಿಂದ ತಯಾರಿಸಿದ ಆಭರಣಗಳು. ರೇಷ್ಮೆ ವಸ್ತ್ರಗಳ ಪರದೆಗಳು. ಹಿಂದೂ ದೇವತೆಗಳ ಮೂರ್ತಿಗಳು. ಆನೆಯ ಲಾಂಛನವುಳ್ಳ ಗುರಾಣಿಗಳು. 
ಈ ಸಂಪತ್ತಿನ ಆಕರ್ಷಣೆ  ಹೇಗಿದೆ ಅಂದರೆ ಕಳೆದ ಬೇಸಗೆಯ ದಿನಗಳಲ್ಲಿ ನಾನು ಭೇಟಿ ಕೊಟ್ಟಾಗ ಅಲ್ಲಿ ತೂಗು ಹಾಕಿದ ಒಂದು ಕ್ಯಾನ್ವಾಸ್ ಚಿತ್ರವನ್ನು ನಾನು ಮೊದಲು ಗಮನಿಸಲೇ ಇಲ್ಲ.  ಈ ವಸ್ತುಗಳು ಇಲ್ಲಿಗೆ ಹೇಗೆ ಬಂದು ಸೇರಿದವು ಎಂಬ ಕತೆಯನ್ನು ಈ ಚಿತ್ರ ಹೇಳುತ್ತದೆ. ಓಕ್ ಮರದ ಮೆಟ್ಟಿಲುಗಳ ಅರೆಗತ್ತಲು ಮರೆಯಲ್ಲಿ ಈ ಚಿತ್ರವನ್ನು ತೂಗುಹಾಕಿದ್ದಾರೆ.  ಅಂಥ ಮಹಾನ್ ಕಲಾಕೃತಿಯೇನಲ್ಲ. ಆದರೆ ಕೂಲಂಕಷ ಅಧ್ಯಯನಕ್ಕೆ ಯೋಗ್ಯವಾದದ್ದು.  ಬಂಗಾರದ ಎಳೆಗಳಿಂದ ನೇದ  ಬಟ್ಟೆ ತೊಟ್ಟ ಕೃಶಾಂಗನಾದ  ಒಬ್ಬ ಭಾರತೀಯ ರಾಜಕುಮಾರ ಎತ್ತರದ ಸಿಂಹಾಸನದ ಮೇಲೆ ಶ್ವೇತಛತ್ರದ ಕೆಳಗೆ ಕುಳಿತಿದ್ದಾನೆ.  ಅವನ ಬಲಕ್ಕೆ ಬೆಳ್ಳಗೆ ಪೌಡರ್ ಬಳಿದುಕೊಂಡಂತೆ ಕಾಣುವ ವಿಗ್ ಧರಿಸಿದ ಜಾರ್ಜ್ ದೊರೆಯ ಸೇವಕರು.  ಸ್ವಲ್ಪ ಸ್ಥೂಲಕಾಯನೆನ್ನಬಹುದಾದ ಕೆಂಪು ಫ್ರಾಕ್ ಕೋಟ್ ತೊಟ್ಟ ಒಬ್ಬ ಅಧಿಕಾರಿಯ ಕೈಗೆ ರಾಜಕುಮಾರ ಆತುರದಿಂದ ಒಂದು ಪತ್ರವನ್ನು ನೀಡುತ್ತಿದ್ದಾನೆ.  
ಈ ಚಿತ್ರದಲ್ಲಿರುವ ಘಟನೆ ನಡೆದದ್ದು 1765ನೇ ಆಗಸ್ಟ್ ತಿಂಗಳಲ್ಲಿ. ಚಿತ್ರಸ್ಥನಾದವನು  ಷಾ ಆಲಂ ಎಂಬ ತರುಣ ಮುಘಲ್ ಚಕ್ರವರ್ತಿ. ಈಸ್ಟ್ ಇಂಡಿಯಾ ಕಂಪನಿಯಿಂದ ಯುದ್ಧದಲ್ಲಿ ಸೋತು ದೆಹಲಿಯಿಂದ ಹೊರದೂಡಲ್ಪಟ್ಟವನು. ಅವನ ಕೈಯಲ್ಲಿರುವುದು ಒಂದು ಆಜ್ಞಾಪತ್ರ. ಬಂಗಾಳ, ಬಿಹಾರ ಮತ್ತು ಒರಿಸ್ಸಾ ಪ್ರದೇಶಗಳಲ್ಲಿ ಕಂದಾಯ ವಸೂಲಿ ಮಾಡುತ್ತಿದ್ದ  ಮುಘಲ್  ಕಂದಾಯ ಅಧಿಕಾರಿಗಳನ್ನು ವಜಾ ಮಾಡಲಾಗಿದೆ ಎಂಬ ಆಜ್ಞೆ ಆ ಪತ್ರದಲ್ಲಿದೆ.  ಅವರಿಗೆ ಬದಲಾಗಿ ಬಂಗಾಳದ ಹೊಸ ಗವರ್ನರ್ ಸಾಹೇಬನಾದ ರಾಬರ್ಟ್ ಕ್ಲೈವ್ ಮತ್ತು ಈಸ್ಟ್ ಇಂಡಿಯಾ ಕಂಪನಿಯ ನಿರ್ದೇಶಕರು ಸೇರಿಕೊಂಡು  ನಿಯುಕ್ತಗೊಳಿಸಿದ ಆಂಗ್ಲ ವ್ಯಾಪಾರಿಗಳನ್ನು ಆ ಕೆಲಸಕ್ಕೆ ನಿಯೋಜಿಸಲಾಗಿದೆ.  ಈಸ್ಟ್ ಇಂಡಿಯಾ ಕಂಪನಿಯ ಪದಾಧಿಕಾರಿಗಳನ್ನು ಈ ಆಜ್ಞಾಪತ್ರ "ಇಂಗ್ಲಿಷ್ ಕಂಪನಿಯ ಮಹಾನ್ ವ್ಯಕ್ತಿಗಳು, ಅಪಾರ ಶಕ್ತಿವಂತರು, ಘನವೆತ್ತ ವ್ಯಕ್ತಿಗಳಲ್ಲಿ ಘನವೆತ್ತವರು, ಯೋಧರಲ್ಲಿ ಪರಮಯೋಧರು, ನಮ್ಮ ನೆಚ್ಚಿನ ಸೇವಕರು, ನಮ್ಮ ಹಿತೈಷಿಗಳು, ನಮ್ಮ ರಾಜಮರ್ಯಾದೆಗಳಿಗೆ ತಕ್ಕವರು" ಎಂದು ವರ್ಣಿಸುತ್ತದೆ.  ಹೀಗೆ ಮುಘಲ್ ರಾಜ್ಯದ ಕಂದಾಯ ವಸೂಲಿ ಮಾಡುವ ಕೆಲಸವನ್ನು ಬಲವಂತದಿಂದ ಬಲಾಢ್ಯ ಬಹುರಾಷ್ಟ್ರೀಯ ಕಂಪನಿಯೊಂದಕ್ಕೆ "ಸಬ್ ಕಾಂಟ್ರಾಕ್ಟ್" ಮಾಡಲಾಯಿತು.  ಕಂದಾಯ ವಸೂಲಿ ಮಾಡುವ ಇಂಗ್ಲಿಷ್ ಕಂಪನಿಯ ಅಧಿಕಾರಿಗಳಿಗೆ ಅದೇ ಕಂಪನಿಯ ಸೈನ್ಯದ ರಕ್ಷಣೆ ಇತ್ತು. 
ಆ ಕ್ಷಣದಲ್ಲಿ ಈಸ್ಟ್ ಇಂಡಿಯಾ ಕಂಪನಿ  ಜವಳಿ ಮತ್ತು ಸಾಂಬಾರ ಪದಾರ್ಥಗಳ ವ್ಯಾಪಾರ ಮಾಡುತ್ತಿದ್ದ ಸಂಸ್ಥೆಯಿಂದ  ಒಂದು ಅಸಾಮಾನ್ಯ ಸಂಸ್ಥೆಯಾಗಿ ಮಾರ್ಪಟ್ಟಿತು. ಕೆಲವೇ ವರ್ಷಗಳಲ್ಲಿ ಕಂಪನಿಯ 250 ಗುಮಾಸ್ತರು  ಭಾರತದವರೇ ಆದ 20000 ಸೈನಿಕರ ಬೆಂಬಲದಿಂದ ಬಂಗಾಳದ ಅನಭಿಷಿಕ್ತ ದೊರೆಗಳಾಗಿ ಮಾರ್ಪಟ್ಟರು. ಒಂದು ಅಂತರರಾಷ್ಟ್ರೀಯ ಸಂಸ್ಥೆ ಕ್ರಮೇಣ ಒಂದು ಆಕ್ರಮಣಕಾರೀ ಶಕ್ತಿಯಾಗಿ ತನ್ನನ್ನು ರೂಪಿಸಿಕೊಳ್ಳತೊಡಗಿತು. 
1803ನೇ ವರ್ಷದವರೆಗೆ ಕಂಪನಿಯ ಸೈನ್ಯ 260,000 ಸೈನಿಕರಿಂದ ಕೂಡಿತ್ತು.  ಈ ಸೇನಾಬಲದಿಂದ ಕಂಪನಿ ಇಡೀ ಭರತಖಂಡವನ್ನು ಆಕ್ರಮಿಸಿಕೊಂಡಿತು. ಈ ಆಕ್ರಮಣಕ್ಕೆ ಹಿಡಿದ ಸಮಯ ಐವತ್ತು ವರ್ಷಗಳಿಗಿಂತ ಕಡಿಮೆ! ವಿಜಯದ ಪತಾಕೆ ಮೊದಲು ಹಾರಾಡಿದ್ದು ಬಂಗಾಳದಲ್ಲಿ, 1756ನೇ ಇಸವಿಯಲ್ಲಿ. ಇದಾದ 47 ವರ್ಷಗಳ ನಂತರ ಕಂಪನಿಯ ಸಾಮ್ರಾಜ್ಯ  ಉತ್ತರದಲ್ಲಿದ್ದ ದೆಹಲಿಯಲ್ಲಿದ್ದ ಮುಘಲ್ ರಾಜಧಾನಿಯವರೆಗೂ ತಲುಪಿತು.  ದೆಹಲಿಯ ದಕ್ಷಿಣಕ್ಕೆ ಹರಡಿದ್ದ ಭಾರತದ ವೈಶಾಲ್ಯವನ್ನು ಲಂಡನ್ ನಗರದಲ್ಲಿದ್ದ ತನ್ನ ಬೋರ್ಡ್ ರೂಮಿನಿಂದ ಕಂಪನಿ ಆಳುತ್ತಿತ್ತು.  1765ರಲ್ಲಿ ನಾರಾಯಣ ಸಿಂಗ್ ಎಂಬ ಮುಘಲ್ ಕಾರಕೂನ ಹೀಗೆ ಹೇಳಿದನೆಂದು ದಾಖಲೆಯಾಗಿದೆ - " ಇನ್ನೂ ತಮ್ಮ ಹಿಂಭಾಗವನ್ನು ತೊಳೆಯಲು ಕಲಿಯದ ಕೆಲವು ವ್ಯಾಪಾರಿಗಳು ಹೇಳಿದ ಕೆಲಸ ಮಾಡಿಕೊಂಡಿರಬೇಕು ಅಂದಮೇಲೆ ನಮಗೆ ಏನು ಮರ್ಯಾದೆ ಉಳಿಯಿತು, ಹೇಳಿ!"

ಮುಂದಿನ ಭಾಗ ಇಲ್ಲಿ ಓದಿ 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)