ದಯವಿಟ್ಟು ನಿಮ್ಮ ಬಣ್ಣದ ಫ್ಯಾಷನ್ ಕನ್ನಡಕಗಳನ್ನು ಬಿಚ್ಚಿ ಕೆಳಗಿಡಿ
ಸಿ ಪಿ ರವಿಕುಮಾರ್ ನೆನ್ನೆ ಪ್ರೊ। ಕಲಬುರ್ಗಿ ಅವರ ಮೇಲೆ ಮಾರಣಾಂತಕ ಹತ್ಯೆ ನಡೆದಿದ್ದು ಕೇಳಿ ಆಘಾತವಾಯಿತು. ಪ್ರೊ। ಕಲಬುರ್ಗಿ ಅವರ ಭಾಷಣವನ್ನು ಕೇಳುವ ಅವಕಾಶ ಕೆಲವು ವರ್ಷಗಳ ಹಿಂದೆ ಒದಗಿ ಬಂದಿತ್ತು. ಜಯನಗರ ನ್ಯಾಷನಲ್ ಕಾಲೇಜಿನಲ್ಲಿ ನಡೆದ "ಸಂವಾದ" ಕಾರ್ಯಕ್ರಮದಲ್ಲಿ ಅವರು ಮಾತಾಡಿದ್ದು ಕನ್ನಡವನ್ನು ಸರಿಯಾಗಿ ಕಲಿಸುವ ವಿಷಯ. ಹಳೆಗನ್ನಡ ಕಾವ್ಯ ಕಲಿಸುವಾಗ ಹೇಗೆ ಸರಿಯಾಗಿ ಓದಿದರೆ ವಿದ್ಯಾರ್ಥಿಗಳಿಗೆ ಅರ್ಥವಾಗುತ್ತದೆ ಎಂದು ವಿವರಿಸಿದರು. ಶಾಲೆ-ಕಾಲೇಜುಗಳಲ್ಲಿ ಕನ್ನಡ ಕಲಿಸುತ್ತಿರುವವರಿಗೇ ಹಳೆಗನ್ನಡ ಅರ್ಥವಾಗದೆ ನೋಟ್ಸ್ ಇಟ್ಟುಕೊಂಡು ಪಾಠ ಮಾಡುವುದು ರೂಢಿಯಾಗಿದೆ! ಹಿಂದೆ ಶೇಕ್ಸ್ ಪಿಯರ್ ಕಾವ್ಯಕ್ಕೆ ಒದಗಿದ ನೋಟ್ಸ್ ಕಾಯಿಲೆಯು ಈಗ ರನ್ನ-ಪಂಪ-ಹರಿಹರ-ಲಕ್ಷ್ಮೀಶ-ಕುಮಾರವ್ಯಾಸರ ಕಾವ್ಯಕ್ಕೂ ಒದಗಿದೆ. ಕನ್ನಡ ಕಾವ್ಯ/ನಾಟಕಗಳನ್ನು ಕಲಿಸುವಾಗ ಮಲ್ಟಿಮೀಡಿಯಾ ಪ್ರಯೋಗದ ಬಗ್ಗೆ ಪ್ರೊ। ಕಲಬುರ್ಗಿ ಉತ್ಸುಕರಾಗಿದ್ದರು. ನಾಟಕವನ್ನು ಓದಿ ಪಾಠ ಮಾಡಿದರೆ ಕಳೆ ಕಟ್ಟುವುದಿಲ್ಲ, ರಂಗದ ಮೇಲೆ ನೋಡಿದಾಗಲೇ ಅದನ್ನು ಸರಿಯಾಗಿ ಗ್ರಹಿಸಬಹುದು ಎಂದು ಅವರು ಪ್ರತಿಪಾದಿಸಿದರು. ಪ್ರೇಕ್ಷಕರ ಪ್ರಶ್ನೆಗಳಿಗೆ (ನನ್ನ ಪ್ರಶ್ನೆಯೂ ಸೇರಿ) ಒಳ್ಳೆಯ ಉತ್ತರಗಳನ್ನು ಕೊಟ್ಟರು. ಅವರನ್ನು ಕೇಳಿದಾಗ ಅವರೊಬ್ಬ ಕ್ರಾಂತಿಕಾರಿ ಎಂದು ನನಗಂತೂ ಅನ್ನಿಸಲಿಲ್ಲ. ಇದಾದ ನಂತರ ಅವರು ಎರಡು ಸಲ ವಿವಾದಗಳಲ್ಲಿ ಸಿಲುಕಿದರು - [೧] ಪ್ರೊ। ಅನ...