ನಾಳೆಯೋ ಇಂದಿಗೋ ಕುಸಿವ ಗೋಡೆ

ಮೂಲ ಗಜಲ್ - ಮಜರೂಹ್ ಸುಲ್ತಾನ್ ಪುರಿ
ಕನ್ನಡಕ್ಕೆ - ಸಿ ಪಿ ರವಿಕುಮಾರ್

File:Doura Europos collapsed city wall.jpg
ಈ ಗಜಲ್  "ಮಮತಾ" ಎಂಬ ಹಿಂದಿ ಚಿತ್ರಕ್ಕಾಗಿ ಕವಿ ಮಜರೂಹ್ ಸುಲ್ತಾನ್ ಪುರಿ ಬರೆದಿದ್ದು. ರೋಶನ್ ಅವರ ಸಂಗೀತ ನಿರ್ದೇಶನದಲ್ಲಿ ಇದನ್ನು ಲತಾ ಮಂಗೇಶ್ಕರ್ ಅಮೋಘವಾಗಿ ಹಾಡಿದ್ದಾರೆ. ಈ ಹಾಡಿನಲ್ಲಿ ಒಬ್ಬ ಹೆಣ್ಣಿನ ನೋವಿದೆ. ಒಮ್ಮೆ ಅವಳನ್ನು ಪ್ರೇಮಿಸಿದವನು ವಿದೇಶಕ್ಕೆ ತೆರಳಿದ ಮೇಲೆ ಅವರ ನಡುವೆ ಸಂಪರ್ಕ ಕಡಿದುಹೋಗುತ್ತದೆ.  ಬಡತನ ತಾಳಲಾರದೆ ಅವಳ ಅಪ್ಪ ಅವಳನ್ನು ಬೇರೆ ಯಾರಿಗೋ ಮದುವೆ ಮಾಡಿ ತನ್ನ ಜವಾಬ್ದಾರಿ ತೊಳೆದುಕೊಂಡಿದ್ದಾನೆ. ಆದರೆ ಇವಳನ್ನು ಮದುವೆಯಾದವನು ಮದ್ಯವ್ಯಸನ ಉಳ್ಳ ಸಮಾಜಘಾತಕ. ಇವನ ಕಾಟ ತಡೆಯಲಾರದೆ ಅವಳು ಓಡಿಹೋಗುತ್ತಾಳೆ.  ಕೊನೆಗೆ ಅವಳು ವೇಶ್ಯೆಯಾಗಿ ಬದುಕಬೇಕಾಗುತ್ತದೆ. ಅವಳನ್ನು ಅರಸುತ್ತಾ ಹಿಂದಿರುಗಿದ ಅವಳ ಪ್ರಿಯಕರನಿಗೆ ಅವಳ ಪಾಡು ಹೀಗಾಗಿದೆ ಎಂದು ಗೊತ್ತಿಲ್ಲ. ಇಂಥ ಸಂದರ್ಭದಲ್ಲಿ ಬಳಸಿಕೊಂಡ ಈ ಹಾಡನ್ನು ತೆರೆಯ ಮೇಲೆ ಹಾಡಿ ಅಭಿನಯಿಸಿದವರು ಸುಚಿತ್ರಾ ಸೇನ್. ಹಾಡನ್ನು ನೀವು ಇಲ್ಲಿ ಕೇಳಬಹುದು.  "ನಾಗರಹಾವು" ಚಿತ್ರದ ಒಂದು ಹಾಡು ನಿಮಗೆ ನೆನಪಾಗಬಹುದು.

ಜೀವಿಸುತ್ತಿದ್ದೆವೋ ನಾವು ಯಾರ ಹೃದಯದಲ್ಲಿ ಜೀವಕ್ಕೂ ಹೆಚ್ಚು ಪ್ರಿಯರಂತೆ ಒಮ್ಮೆ 
ಇಂದು ಕುಳಿತಿದ್ದೇವೆ ಅವರದ್ದೇ ಓಣಿಗಳಲ್ಲಿ  ಅಪರಾಧ ಯಾವುದೋ ಮಾಡಿದವರಂತೆ 

ನಿನ್ನ ನೋವಿನ ಮೇಲೆ ಅರ್ಧ ಅಧಿಕಾರವಿದೆ ಎಂದವರು,ಮಾತಾಡಿಸಲಿಲ್ಲ ಒಮ್ಮೆಯೂ ಬಂದು  
ಆಹ್ವಾನಿಸಿದ್ದಾರೆ ಆರತಕ್ಷತೆಗೆ ನಮ್ಮನ್ನು ನೋಡುತ್ತಾ ನಗಬೇಕೆಂದು ನಿಶ್ಚಯಿಸಿ ಶಿಕ್ಷೆ  

ಎಷ್ಟು ವರ್ಷಗಳಿಂದ ಹೊತ್ತು ಉರಿಯುವ ಎದೆಗೆ ಅಶ್ರುಗಳೂ ತರಲಿಲ್ಲ ಯಾವ ತಂಪು 
ಕುದಿವ ಹೃದಯದ ಗಾಯ ಮತ್ತಷ್ಟು ಉರಿಯುತ್ತಿದೆ ಕಂಬನಿಯು ಬಿದ್ದಾಗ ಕೆಂಡದಂತೆ 

ನೂರು ರೂಪವ ಧರಿಸಿ ಹಾಳು ಜೀವನಕ್ಕಾಗಿ, ವಿಷವ ಕುಡಿದೆವು ಎಷ್ಟೋ ಸಾವಿರ ಸಲ 
ತಳ್ಳದಿರಿ ನಮ್ಮನ್ನು ನಾವು ಶಿಥಿಲವಾಗಿದ್ದೇವೆ, ನಾಳೆಯೋ ಇಂದಿಗೋ ಕುಸಿವ ಗೋಡೆ 

ಕಾಮೆಂಟ್‌ಗಳು

  1. रहते थे कभी जिनके दिल में, हम जान से भी प्यारों की तरह
    बैठे हैं उन्ही के कूंचे में हम, आज गुनहगारों की तरह

    दावा था जिन्हें हमदर्दी का, खुद आ के ना पूछा हाल कभी
    महफ़िल में बुलाया हैं हमपे हसने को सितमगारों की तरह

    बरसों के सुलगते तम मन पर, अश्कों के तो छिंटे दे ना सके
    तपते हुये दिल के जख्मोंपर, बरसे भी तो अंगारों की तरह

    सौ रूप भरे जीने के लिये, बैठे हैं हजारो ज़हर पिये
    ठोकर ना लगाना हम खुद हैं गिरती हुयी दीवारों की तरह

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)