ಅಂಗೈಮೇಲೆ ಮುಳ್ಳಿನಗಿಡ ಬೆಳೆಸಿಕೊಳ್ಳುವ ಮೊದಲು


ಮೂಲ ಹಿಂದಿ ಗಜಲ್ - ಅಭಿನವ್ ಅರುಣ್ 
ಕನ್ನಡಕ್ಕೆ - ಸಿ ಪಿ ರವಿಕುಮಾರ್ 





ಅಂಗೈಮೇಲೆ ಮುಳ್ಳಿನಗಿಡ ಬೆಳೆಸಿಕೊಳ್ಳುವ ಮೊದಲು
ಸ್ವಲ್ಪ ಯೋಚಿಸು ಸಿಡಿಮಿಡಿಗೊಳ್ಳುವ ಮೊದಲು

ಗೊತ್ತಿಲ್ಲದೇ ಏನು ಪ್ರೇಮಪಾಶದ ಪರಿಣಾಮ?
ಎಚ್ಚೆತ್ತುಕೋ ಜಾರಿ ಪೆಟ್ಟಾಗುವ ಮೊದಲು

ಹತ್ತಿಕೊಂಡಿದೆ ಎಲ್ಲರಿಗೂ ರಾಜಕಾರಣದ ರಂಗು
ತಬ್ಬಿಕೊಳ್ಳುವರು ಹೃದಯಗಳ ಮಿಲನಕ್ಕೂ ಮೊದಲು

ನಿನ್ನ ಆತ್ಮದೊಳಕ್ಕೆ ನೀನೇ ಹಾಕೊಮ್ಮೆ ಇಣುಕು
ಮಿತ್ರನನ್ನು ಒರೆಗೆ ಹಚ್ಚಿ ನೋಡುವ ಮೊದಲು

ಬೀಸುಗಾಳಿಯ ಹರಿವು ಯಾವ ಕಡೆಗಿದೆ ಎಂದು 
ನೋಡಿಕೊಳ್ಳುವುದೊಳಿತು ಗಾಳಿಪಟದಾಟಕ್ಕೆ ಮೊದಲು

ಎಸೆದು ಬಿಡು ಮನೆಯೊಳಗಿನ ಪಂಜರಗಳನ್ನು
ಹಕ್ಕಿಗಳಿಗೆ ಕಾಳು ಹಾಕುವ ಮೊದಲು

ತಿಳಿಯಬೇಕಾಗಿಲ್ಲ ಆಕಾಶದ ಎತ್ತರ
ರೆಕ್ಕೆಗಳು ಇನ್ನೂ ಬಲಿಯುವ ಮೊದಲು

ಹೇಳಿಕೊಡು ನೀತಿಪಾಠದ ಒಂದೆರಡು ಕತೆಗಳು
ಹಲಗೆ ಬಳಪ ಹಿಡಿದು ಅಕ್ಷರ ತಿದ್ದಿಸುವ ಮೊದಲು


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)