ಒಂದು ಗಾಯನ ಕಚೇರಿ
ಸಿ ಪಿ ರವಿಕುಮಾರ್
ಇವತ್ತು ಬೆಳಗ್ಗೆ ಒಂದು ಬಹಳ ಒಳ್ಳೆಯ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ದೊರೆಯಿತು. ಇದಕ್ಕೆ ನನ್ನನ್ನು ಆಹ್ವಾನಿಸಿದವರು ನಮ್ಮ ಮೇಷ್ಟ್ರು ಕ.ನಂ. ನಾಗರಾಜು. ತಮ್ಮ ಮನೆಯಲ್ಲಿ ಈ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದ್ದರು. ನನ್ನ ಮೇಲೆ ಅವರು ಇಟ್ಟುಕೊಂಡಿರುವ ವಿಶ್ವಾಸಕ್ಕೆ ನಾನು ಋಣಿ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಗಂಧವೇ ಇಲ್ಲದ ನಾನು ಕಾರ್ಯಕ್ರಮಕ್ಕೆ ಹೋದಾಗ ಹೆಚ್ಚಿನ ಅಪೇಕ್ಷೆಗಳನ್ನು ಇಟ್ಟುಕೊಂಡಿರಲಿಲ್ಲ. ಗಾಯಕರಾದ ಪಂಡಿತ ವೆಂಕಟೇಶಕುಮಾರ್ ಅವರು ತಮ್ಮ ಮೊದಲ ಪ್ರಸ್ತುತಿಯಲ್ಲೇ ನನ್ನಂಥ ಪಾಮರರ ಮನಸ್ಸನ್ನೂ ಸೆಳೆದರು. ಮೊದಲ ಎರಡು ಪ್ರಸ್ತುತಿಗಳು ಹಿಂದಿ ಭಾಷೆಯಲ್ಲಿದ್ದವು; ಅನಂತರ ಅವರು ವಚನ ಮತ್ತು ದಾಸರ ಪದಗಳನ್ನು ಹಾಡಿದರು.
ಅವರು ಹಾಡಿದ ರಾಗ/ತಾಳ ಇವುಗಳ ವಿಷಯದಲ್ಲಿ ನನಗೆ ಇರುವ ಜ್ಞಾನ ಶೂನ್ಯ. ಆದರೆ ಅವರು ಹಾಡಿದ ರೀತಿ ಮನಸ್ಸನ್ನು ಸೆಳೆಯಿತು. ಮೊದಲ ಪ್ರಸ್ತುತಿ ದೇವರಲ್ಲಿ ಆತ್ಮ ನಿವೇದನೆ. ಹಿಂದೆ ಕೆಲವು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಚೇರಿಗಳಿಗೆ ಹೋದಾಗ ಅಲ್ಲಿ ಆಲಾಪಗಳೇ ಹೆಚ್ಚಾಗಿ ಇದ್ದಿದ್ದರಿಂದ ನನಗೆ ಅಷ್ಟೇನೂ ಅರ್ಥವಾಗಿರಲಿಲ್ಲ. ಎಲ್ಲೋ ಕೊನೆಯಲ್ಲಿ ಸಾಹಿತ್ಯ ಬಂದು ಹೋಯಿತು ಎನ್ನುವಹಾಗಿತ್ತು. ಆದರೆ ಪಂಡಿತ ವೆಂಕಟೇಶಕುಮಾರ್ ಅವರ ಗಾಯನದಲ್ಲಿ ಸಾಹಿತ್ಯಕ್ಕೆ ಸಂಗೀತದಷ್ಟೇ ಪಾಲು. ಸಾಹಿತ್ಯವನ್ನು ಮನಸಾರ ಅನುಭವಿಸಿ ಅವರು ಹಾಡುತ್ತಿದ್ದದ್ದು ಕಾಣುತ್ತಿತ್ತು. ಎರಡನೇ ಪ್ರಸ್ತುತಿ ಒಂದು ವಿರಹಗೀತೆ. "ಇಡೀ ರಾತ್ರಿ ನಿನ್ನಿಂದಾಗಿ ನಿದ್ರಿಸಲಿಲ್ಲ" ಎಂದು ಒಬ್ಬ ನಾಯಿಕೆ ದೂರುತ್ತಿದ್ದಾಳೆ. ಈ ಗಾಯನವೂ ಪೂರ್ವಾಲಾಪವಿಲ್ಲದೆ ಪ್ರಾರಂಭವಾಯಿತು. ಗಾಯನದ ನಡುವೆ ಆಲಾಪಗಳು ಬಂದವು. ಸಾಹಿತ್ಯದ ಅರ್ಥವನ್ನು ಮತ್ತಷ್ಟು ಹಿಗ್ಗಿಸಲು ಈ ಆಲಾಪಗಳು ಸಹಾಯಕಾರಿಯಾದವು.
ಮುಂದೆ ಹಾಡಿದ "ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ" ಎಂಬ ವಚನದಲ್ಲಿ "ಕೂಡಲಸಂಗಮದೇವಾ" ಎಂಬ ಅಂಕಿತ ಬಂದಿದ್ದರಿಂದ ಅದನ್ನು ಬಸವಣ್ಣನವರು ಬರೆದದ್ದು ಎಂದು ಗೊತ್ತಾಯಿತು. ಹುಡುಕಿದಾಗ ವಚನಸಂಚಯದಲ್ಲಿ (ಆನ್ಲೈನ್ ವಚನಸಂಗ್ರಹ) ಈ ವಚನದ ಪೂರ್ಣಪಾಠ ಸಿಕ್ಕಿತು.
ಈ ವಚನದಲ್ಲಿ ಬಸವಣ್ಣನವರು "ಕುಲ" ಎನ್ನುವುದು ಒಬ್ಬನ ಕೆಲಸದ ಮೇಲೆ ನಿರ್ಧಾರವಾಗುತ್ತದೆ ಎಂದು ಪ್ರತಿಪಾದಿಸುತ್ತಾರೆ. ಯಾರು ಕಬ್ಬಿಣ ಕಾಸುತ್ತಾನೋ ಅವನು ಕಮ್ಮಾರ. ಯಾರು ಬಟ್ಟೆಯನ್ನು ಬೀಸಿ ಕಲ್ಲಿನ ಮೇಲೆ ಒಗೆಯುತ್ತಾನೋ ಅವನು ಮಡಿವಾಳ. ವೇದಗಳನ್ನು ಓದುವವನು ಹಾರುವ (ಬ್ರಾಹ್ಮಣ). ಸಂಸ್ಕೃತದಲ್ಲಿರುವ ಎರಡು ಸಾಲುಗಳ ಅರ್ಥ "ಎಲ್ಲಾ ಪಿಂಡಗಳೂ ಸಪ್ತಧಾತುಗಳಿಂದ ಕೂಡಿವೆ, ಎಲ್ಲರೂ ಸಮವಾಗಿ ಯೋನಿಯಲ್ಲಿಯೇ ಜನಿಸುತ್ತಾರೆ, ಹೀಗಿರುವಾಗ ವರ್ಣಗಳ ಪ್ರಯೋಜನವೇನು?". ಸಂಸ್ಕೃತದ ಈ ನುಡಿಯಿಂದ ವಚನ ಪ್ರಭಾವಿತವಾಗಿದೆ. ಎಲ್ಲರೂ ಹುಟ್ಟುವುದು ಕಾಮದಲ್ಲೇ ಅಥವಾ ಹೊಲೆಯಲ್ಲೇ, ಯಾರೂ "ಪರಿಶುದ್ಧರಾಗಿ" ಕಿವಿಯಿಂದ ಜನಿಸುವುದಿಲ್ಲ, ಆದ್ದರಿಂದ ಹುಟ್ಟಿನಲ್ಲಿ ಎಲ್ಲರೂ ಒಂದೇ ಎಂದು ಬಸವಣ್ಣ ವಿಷದಪಡಿಸುತ್ತಾರೆ.
ಈ ವಚನವನ್ನು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಪಂಡಿತ ವೆಂಕಟೇಶಕುಮಾರ್ ಅವರು ಹಾಡಿದ್ದು ವಿಶಿಷ್ಟವಾಗಿತ್ತು. ಅವರು ವಚನದ ಉತ್ತರಾರ್ಧವನ್ನು ಮಾತ್ರ ಹಾಡಿದರೂ ವಚನದ ಅರ್ಥ ಸ್ಫುಟವಾಯಿತು. ಇದಲ್ಲದೆ ಅವರು ಕನಕದಾಸರ "ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ?" ಎಂಬ ಪದವನ್ನು ಹಾಡಿದರು. ಸಮರ್ಪಣಭಾವದ ಈ ಗೀತೆ ಮನಸ್ಸನ್ನು ಮುಟ್ಟುವಂತಿತ್ತು. ಕೊನೆಗೆ ಅವರು ಮಧ್ವಾಚಾರ್ಯರನ್ನು ಕುರಿತ ಒಂದು ಭಕ್ತಿಗಾನದಿಂದ ಕಾರ್ಯಕ್ರಮವನ್ನು ಮುಗಿಸಿದರು.
ಕಾರ್ಯಕ್ರಮದ ನಡುವೆ ಅವರು "ನಾನು ವರ್ಷಕ್ಕೆ ಸುಮಾರು ನೂರು ಕಾರ್ಯಕ್ರಮ ಮಾಡುತ್ತೇನೆ. ಆದರೆ ಇವತ್ತು ಹಾಡಿದ ಹಾಗೆ ಮೂರು-ನಾಲ್ಕು ವರ್ಷಗಳಿಗೆ ಒಮ್ಮೆ ಹಾಡಲು ಸಾಧ್ಯವಾಗುತ್ತದೆ" ಎಂದರು. ಕಲಾವಿದರೆಲ್ಲರಿಗೂ ಪಾಠ ಹೇಳುವ ಗುರುಗಳಿಗೂ ಇದು ಪರಿಚಿತವಾದ ಭಾವವೇ. ಕೆಲವೊಮ್ಮೆ ಎದುರು ಕುಳಿತಿರುವ ಸಹೃದಯರ ಕಾರಣದಿಂದಲೋ, ಪಕ್ಕವಾದ್ಯದವರ ಸಂಪೂರ್ಣ ಸಹಕಾರದಿಂದಲೋ ಅಥವಾ ಮತ್ತಾವುದೋ ಕಾರಣಕ್ಕೋ ನುರಿತ ಕಲಾವಿದನ ಕಲೆ ಸಂಪೂರ್ಣವಾಗಿ ಅರಳುತ್ತದೆ. ಇದೇ ರೀತಿ ಗುರುವಿನ ಪಾಠಕ್ಕೆ ಕೆಲವೊಮ್ಮೆ ಅನನ್ಯವಾದ ಕಳೆ ಏರುತ್ತದೆ. ಆಕ್ಟೇವಿಯೋ ಪಾಜ್ ಎಂಬ (ನೊಬೆಲ್ ಪಾರಿತೋಷಕದಿಂದ ಸಮ್ಮಾನಿತನಾದ) ಲೇಖಕ ಭಾರತದಲ್ಲಿ ರಾಯಭಾರಿಯಾಗಿ ಅನೇಕ ವರ್ಷಗಳು ಕಳೆದಿದ್ದ. ಅವನೊಮ್ಮೆ ಒಂದು ಸಿತಾರ್ ವಾದನ ಕಚೇರಿಯನ್ನು ಕೇಳಿದಾಗ ತನಗಾದ ಅಪೂರ್ವವಾದ ಅನುಭವವನ್ನು ಪದ್ಯರೂಪದಲ್ಲಿ ಬರೆದಿದ್ದಾನೆ. ಇದನ್ನು ಉದ್ಧರಿಸಿ ಈ ಬರಹವನ್ನು ಮುಗಿಸುತ್ತೇನೆ.
(ಪಂಡಿತ ವೆಂಕಟೇಶಕುಮಾರ್ ಅವರ ಒಂದು ಸಂಗೀತ ಕಚೇರಿಯನ್ನು ನೀವು ಇಲ್ಲಿ ಕೇಳಬಹುದು.)

ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ
ಜಲ-ಬಿಂದುವಿನ ವ್ಯವಹಾರ ಒಂದೇ,
ಆಶೆಯಾಮಿಷರೋಷಹರುಷ ವಿಷಯಾದಿಗಳೆಲ್ಲಾ ಒಂದೇ.
ಏನನೋದಿ, ಏನ ಕೇಳಿ, ಏನು ಫಲಕುಲಜನೆಂಬುದಕ್ಕೆ ಆವುದು
ದೃಷ್ಟಸಪ್ತಧಾತುಸಮಂ ಪಿಂಡಂ ಸಮಯೋನಿಸಮದ್ಭವಂ
ಆತ್ಮಜೀವಸಮಾಯುಕ್ತಂ ವರ್ಣಾನಾಂ ಕಿಂ ಪ್ರಯೋಜನಂ ಎಂದುದಾಗಿ,
ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ,
ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ.
ಕರ್ಣದಲ್ಲಿ ಜನಿಸಿದರುಂಟೆ ಜಗದೊಳಗೆ
ಇದು ಕಾರಣ ಕೂಡಲಸಂಗಮದೇವಾ,
ಲಿಂಗಸ್ಥಲವನರಿದವನೆ ಕುಲಜನು.
ಈ ವಚನದಲ್ಲಿ ಬಸವಣ್ಣನವರು "ಕುಲ" ಎನ್ನುವುದು ಒಬ್ಬನ ಕೆಲಸದ ಮೇಲೆ ನಿರ್ಧಾರವಾಗುತ್ತದೆ ಎಂದು ಪ್ರತಿಪಾದಿಸುತ್ತಾರೆ. ಯಾರು ಕಬ್ಬಿಣ ಕಾಸುತ್ತಾನೋ ಅವನು ಕಮ್ಮಾರ. ಯಾರು ಬಟ್ಟೆಯನ್ನು ಬೀಸಿ ಕಲ್ಲಿನ ಮೇಲೆ ಒಗೆಯುತ್ತಾನೋ ಅವನು ಮಡಿವಾಳ. ವೇದಗಳನ್ನು ಓದುವವನು ಹಾರುವ (ಬ್ರಾಹ್ಮಣ). ಸಂಸ್ಕೃತದಲ್ಲಿರುವ ಎರಡು ಸಾಲುಗಳ ಅರ್ಥ "ಎಲ್ಲಾ ಪಿಂಡಗಳೂ ಸಪ್ತಧಾತುಗಳಿಂದ ಕೂಡಿವೆ, ಎಲ್ಲರೂ ಸಮವಾಗಿ ಯೋನಿಯಲ್ಲಿಯೇ ಜನಿಸುತ್ತಾರೆ, ಹೀಗಿರುವಾಗ ವರ್ಣಗಳ ಪ್ರಯೋಜನವೇನು?". ಸಂಸ್ಕೃತದ ಈ ನುಡಿಯಿಂದ ವಚನ ಪ್ರಭಾವಿತವಾಗಿದೆ. ಎಲ್ಲರೂ ಹುಟ್ಟುವುದು ಕಾಮದಲ್ಲೇ ಅಥವಾ ಹೊಲೆಯಲ್ಲೇ, ಯಾರೂ "ಪರಿಶುದ್ಧರಾಗಿ" ಕಿವಿಯಿಂದ ಜನಿಸುವುದಿಲ್ಲ, ಆದ್ದರಿಂದ ಹುಟ್ಟಿನಲ್ಲಿ ಎಲ್ಲರೂ ಒಂದೇ ಎಂದು ಬಸವಣ್ಣ ವಿಷದಪಡಿಸುತ್ತಾರೆ.
ಈ ವಚನವನ್ನು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಪಂಡಿತ ವೆಂಕಟೇಶಕುಮಾರ್ ಅವರು ಹಾಡಿದ್ದು ವಿಶಿಷ್ಟವಾಗಿತ್ತು. ಅವರು ವಚನದ ಉತ್ತರಾರ್ಧವನ್ನು ಮಾತ್ರ ಹಾಡಿದರೂ ವಚನದ ಅರ್ಥ ಸ್ಫುಟವಾಯಿತು. ಇದಲ್ಲದೆ ಅವರು ಕನಕದಾಸರ "ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ?" ಎಂಬ ಪದವನ್ನು ಹಾಡಿದರು. ಸಮರ್ಪಣಭಾವದ ಈ ಗೀತೆ ಮನಸ್ಸನ್ನು ಮುಟ್ಟುವಂತಿತ್ತು. ಕೊನೆಗೆ ಅವರು ಮಧ್ವಾಚಾರ್ಯರನ್ನು ಕುರಿತ ಒಂದು ಭಕ್ತಿಗಾನದಿಂದ ಕಾರ್ಯಕ್ರಮವನ್ನು ಮುಗಿಸಿದರು.
ಕಾರ್ಯಕ್ರಮದ ನಡುವೆ ಅವರು "ನಾನು ವರ್ಷಕ್ಕೆ ಸುಮಾರು ನೂರು ಕಾರ್ಯಕ್ರಮ ಮಾಡುತ್ತೇನೆ. ಆದರೆ ಇವತ್ತು ಹಾಡಿದ ಹಾಗೆ ಮೂರು-ನಾಲ್ಕು ವರ್ಷಗಳಿಗೆ ಒಮ್ಮೆ ಹಾಡಲು ಸಾಧ್ಯವಾಗುತ್ತದೆ" ಎಂದರು. ಕಲಾವಿದರೆಲ್ಲರಿಗೂ ಪಾಠ ಹೇಳುವ ಗುರುಗಳಿಗೂ ಇದು ಪರಿಚಿತವಾದ ಭಾವವೇ. ಕೆಲವೊಮ್ಮೆ ಎದುರು ಕುಳಿತಿರುವ ಸಹೃದಯರ ಕಾರಣದಿಂದಲೋ, ಪಕ್ಕವಾದ್ಯದವರ ಸಂಪೂರ್ಣ ಸಹಕಾರದಿಂದಲೋ ಅಥವಾ ಮತ್ತಾವುದೋ ಕಾರಣಕ್ಕೋ ನುರಿತ ಕಲಾವಿದನ ಕಲೆ ಸಂಪೂರ್ಣವಾಗಿ ಅರಳುತ್ತದೆ. ಇದೇ ರೀತಿ ಗುರುವಿನ ಪಾಠಕ್ಕೆ ಕೆಲವೊಮ್ಮೆ ಅನನ್ಯವಾದ ಕಳೆ ಏರುತ್ತದೆ. ಆಕ್ಟೇವಿಯೋ ಪಾಜ್ ಎಂಬ (ನೊಬೆಲ್ ಪಾರಿತೋಷಕದಿಂದ ಸಮ್ಮಾನಿತನಾದ) ಲೇಖಕ ಭಾರತದಲ್ಲಿ ರಾಯಭಾರಿಯಾಗಿ ಅನೇಕ ವರ್ಷಗಳು ಕಳೆದಿದ್ದ. ಅವನೊಮ್ಮೆ ಒಂದು ಸಿತಾರ್ ವಾದನ ಕಚೇರಿಯನ್ನು ಕೇಳಿದಾಗ ತನಗಾದ ಅಪೂರ್ವವಾದ ಅನುಭವವನ್ನು ಪದ್ಯರೂಪದಲ್ಲಿ ಬರೆದಿದ್ದಾನೆ. ಇದನ್ನು ಉದ್ಧರಿಸಿ ಈ ಬರಹವನ್ನು ಮುಗಿಸುತ್ತೇನೆ.
It rained.
The hour is an enormous eye.
Inside it, we come and go like reflections.
The river of music enters my blood.
If I say body, it answers wind.
If I say earth, it answers where?
The world, a double blossom, opens:sadness of having come,joy of being here.
I walk lost in my own center.
-Octavio Paz
(ಪಂಡಿತ ವೆಂಕಟೇಶಕುಮಾರ್ ಅವರ ಒಂದು ಸಂಗೀತ ಕಚೇರಿಯನ್ನು ನೀವು ಇಲ್ಲಿ ಕೇಳಬಹುದು.)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ