ದಯವಿಟ್ಟು ನಿಮ್ಮ ಬಣ್ಣದ ಫ್ಯಾಷನ್ ಕನ್ನಡಕಗಳನ್ನು ಬಿಚ್ಚಿ ಕೆಳಗಿಡಿ



ಸಿ ಪಿ ರವಿಕುಮಾರ್

ನೆನ್ನೆ ಪ್ರೊ। ಕಲಬುರ್ಗಿ ಅವರ ಮೇಲೆ ಮಾರಣಾಂತಕ ಹತ್ಯೆ ನಡೆದಿದ್ದು ಕೇಳಿ ಆಘಾತವಾಯಿತು.  ಪ್ರೊ। ಕಲಬುರ್ಗಿ ಅವರ ಭಾಷಣವನ್ನು ಕೇಳುವ ಅವಕಾಶ ಕೆಲವು ವರ್ಷಗಳ ಹಿಂದೆ ಒದಗಿ ಬಂದಿತ್ತು. ಜಯನಗರ ನ್ಯಾಷನಲ್ ಕಾಲೇಜಿನಲ್ಲಿ ನಡೆದ "ಸಂವಾದ" ಕಾರ್ಯಕ್ರಮದಲ್ಲಿ ಅವರು ಮಾತಾಡಿದ್ದು ಕನ್ನಡವನ್ನು ಸರಿಯಾಗಿ ಕಲಿಸುವ ವಿಷಯ. ಹಳೆಗನ್ನಡ ಕಾವ್ಯ ಕಲಿಸುವಾಗ ಹೇಗೆ ಸರಿಯಾಗಿ ಓದಿದರೆ ವಿದ್ಯಾರ್ಥಿಗಳಿಗೆ ಅರ್ಥವಾಗುತ್ತದೆ  ಎಂದು ವಿವರಿಸಿದರು. ಶಾಲೆ-ಕಾಲೇಜುಗಳಲ್ಲಿ ಕನ್ನಡ ಕಲಿಸುತ್ತಿರುವವರಿಗೇ ಹಳೆಗನ್ನಡ ಅರ್ಥವಾಗದೆ ನೋಟ್ಸ್ ಇಟ್ಟುಕೊಂಡು ಪಾಠ ಮಾಡುವುದು ರೂಢಿಯಾಗಿದೆ! ಹಿಂದೆ ಶೇಕ್ಸ್ ಪಿಯರ್ ಕಾವ್ಯಕ್ಕೆ ಒದಗಿದ ನೋಟ್ಸ್ ಕಾಯಿಲೆಯು ಈಗ ರನ್ನ-ಪಂಪ-ಹರಿಹರ-ಲಕ್ಷ್ಮೀಶ-ಕುಮಾರವ್ಯಾಸರ ಕಾವ್ಯಕ್ಕೂ ಒದಗಿದೆ. ಕನ್ನಡ ಕಾವ್ಯ/ನಾಟಕಗಳನ್ನು ಕಲಿಸುವಾಗ ಮಲ್ಟಿಮೀಡಿಯಾ ಪ್ರಯೋಗದ ಬಗ್ಗೆ ಪ್ರೊ। ಕಲಬುರ್ಗಿ  ಉತ್ಸುಕರಾಗಿದ್ದರು. ನಾಟಕವನ್ನು ಓದಿ ಪಾಠ ಮಾಡಿದರೆ ಕಳೆ ಕಟ್ಟುವುದಿಲ್ಲ, ರಂಗದ ಮೇಲೆ ನೋಡಿದಾಗಲೇ ಅದನ್ನು ಸರಿಯಾಗಿ ಗ್ರಹಿಸಬಹುದು ಎಂದು ಅವರು ಪ್ರತಿಪಾದಿಸಿದರು. ಪ್ರೇಕ್ಷಕರ ಪ್ರಶ್ನೆಗಳಿಗೆ (ನನ್ನ ಪ್ರಶ್ನೆಯೂ ಸೇರಿ) ಒಳ್ಳೆಯ ಉತ್ತರಗಳನ್ನು ಕೊಟ್ಟರು. ಅವರನ್ನು ಕೇಳಿದಾಗ ಅವರೊಬ್ಬ ಕ್ರಾಂತಿಕಾರಿ  ಎಂದು ನನಗಂತೂ ಅನ್ನಿಸಲಿಲ್ಲ.

ಇದಾದ ನಂತರ ಅವರು ಎರಡು ಸಲ ವಿವಾದಗಳಲ್ಲಿ ಸಿಲುಕಿದರು - [೧] ಪ್ರೊ। ಅನಂತಮೂರ್ತಿ ಅವರಿಗೆ ಬಸವಪ್ರಶಸ್ತಿ ಕೊಟ್ಟಾಗ ಅದಕ್ಕೆ ಪ್ರೊ। ಕಲಬುರ್ಗಿ ಪ್ರತಿಭಟಿಸಿ ಪತ್ರ ಬರೆದರು. ಅವರು ಅನಂತಮೂರ್ತಿ ಅವರ ಹಳೆಯ ಇಂಗ್ಲಿಷ್ ಪ್ರಬಂಧದಿಂದ ಒಂದು ಸಾಲನ್ನು ಉದ್ಧರಿಸಿ ಅನಂತಮೂರ್ತಿ ಅವರಿಗೆ ಬಸವಣ್ಣನವರ ಬಗ್ಗೆ ಅಭಿಮಾನವೇ ಇರಲಿಲ್ಲ ಎಂದು ಬರೆದರು. ಆದರೆ ಈ ಇಂಗ್ಲಿಷ್ ವಾಕ್ಯದಲ್ಲಿ ಮುದ್ರಾರಾಕ್ಷಸನ/ಸಂಪಾದಕನ ದೋಷದಿಂದ ಅಪಾರ್ಥ ಬರುತ್ತಿದೆ ಎಂಬ ಸಮಜಾಯಿಷಿ ಕೊಡಲಾಯಿತು. ಆ ಸಂದರ್ಭದಲ್ಲಿ ಪ್ರಶಸ್ತಿಗಳ ಬಗ್ಗೆ ಜನರು ಮತ್ತೊಮ್ಮೆ ಯೋಚಿಸುವಂತಾಯಿತು.  ಮುಂದೆ ಅವರು ಅನಂತಮೂರ್ತಿ  ಹೆಸರಿನಲ್ಲಿ  ಇನ್ನೊಂದು ವಿವಾದಕ್ಕೆ ಕಾರಣರಾದರು. ಅನಂತಮೂರ್ತಿ ತಾವು ಚಿಕ್ಕವರಾಗಿದ್ದಾಗ ಇಂಥ ಮರದ ಕೆಳಗೆ ಮೂತ್ರ ವಿಸರ್ಜನೆ ಮಾಡಿದರೆ ಭೂತ ಹಿಡಿದುಕೊಳ್ಳುತ್ತದೆ ಎಂದು ನಂಬಿದ್ದನ್ನೂ ಅನಂತರ ಆ ನಂಬಿಕೆಯನ್ನು ಮುರಿಯಲು ಅದೇ ಮರದ ಕೆಳಗೆ ಮೂತ್ರ ವಿಸರ್ಜಿಸಿದ್ದನ್ನು ಬರೆದುಕೊಂಡಿದ್ದಾರೆ. ಇದನ್ನು ಕುರಿತು ಕಲಬುರ್ಗಿ ಅವರು ಭಾಷಣದಲ್ಲಿ ಪ್ರಸ್ತಾಪ ಮಾಡಿದ್ದನ್ನು ಮೀಡಿಯಾ ಸಾಕಷ್ಟು ತಿರುಚಿ ಬರೆಯಿತು. ಇದರಿಂದ ಅವರಿಗೆ ಸಾಕಷ್ಟು ಅಪಖ್ಯಾತಿ/ಅಪಪ್ರಚಾರ ದೊರೆಯಿತು.   [೨] ಜೈನ-ವೀರಶೈವ ವಿವಾದ ಕುರಿತು ಅವರ ಮತ್ತು ಹಂಪನಾ ನಡುವೆ ಪತ್ರಗಳ ಮೂಲಕ ವಿವಾದ ನಡೆಯಿತು.  ಈ ವಿವಾದಗಳಲ್ಲೂ ಅವರು ಪ್ರಜಾವಾಣಿಗೆ ಬರೆದ ಪತ್ರಗಳನ್ನು ಓದಿದರೆ ಅವರು ನೇರ ಮಾತಿನ ವಿದ್ವಾಂಸರಂತೆ ಕಾಣುತ್ತಾರೆಯೇ ಹೊರತು ಹುರುಳಿಲ್ಲದೆ ಮಾತಾಡುವ ವಿಧ್ವಂಸಕರಂತಲ್ಲ. ಹೀಗಾಗಿ "ಕ್ರಾಂತಿಕಾರಿ" ಎಂಬ ಕೆಂಪು ಅಕ್ಷರಗಳ ಲೇಬಲ್ ಅವರಿಗೆ ಅಂಟಿಸುವುದು ಸಾಧುವಲ್ಲ ಎನ್ನುವುದು ನನ್ನ ಭಾವನೆ.

ಅವರಿಗೆ "ಕ್ರಾಂತಿಕಾರಿ" ಎಂಬ ಪಟ್ಟವನ್ನು ಕೊಟ್ಟದ್ದು ಮೀಡಿಯಾ ಎಂದು ನನ್ನ ಅನ್ನಿಸಿಕೆ.  ಇಲ್ಲಿ ಮೀಡಿಯಾ ಎಂದರೆ ಪ್ರಿಂಟ್ ಮೀಡಿಯಾ ಮಾತ್ರವಲ್ಲ, ನಾವೆಲ್ಲಾ ಭಾಗವಹಿಸುವ ಸೋಷಿಯಲ್ ಮೀಡಿಯಾ ಕೂಡಾ ಸೇರಿದೆ.  ದುರದೃಷ್ಟವಶಾತ್  ಮೀಡಿಯಾದಲ್ಲಿ ಪ್ರಕಟವಾದದ್ದನ್ನೆಲ್ಲಾ ನಿಜವೆಂದು ನಂಬುವವರು ಇನ್ನೂ ಇದ್ದಾರೆ. ಟಿವಿ ಕಾರ್ಯಕ್ರಮಗಳಲ್ಲಿ ತೋರಿಸುವುದು ನಿಜವಲ್ಲ ಎಂದು ಗೊತ್ತಿದ್ದರೂ ಅದನ್ನು ನೋಡುವವರ ಸಂಖ್ಯೆ ಏರುತ್ತಲೇ ಇದೆ!  ಭಾಷಣಕಾರ ಹೇಳಿದ್ದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಅವರಿಗೆ ತಮ್ಮದೇ ಬಣ್ಣ ಬಳಿದು ವಿಕೃತವಾಗಿ ಚಿತ್ರಿಸುವ ಮೀಡಿಯಾಗೂ ನೆನ್ನೆ ನಡೆದ ದುರಂತದ ಹೊಣೆಗಾರಿಕೆಯ ಒಂದು ಪಾಲಿದೆ ಎಂದು ನನಗೆ ಅನ್ನಿಸುತ್ತಿದೆ. ಸಾಮಾಜಿಕ ತಾಣಗಳಲ್ಲಿ ತೊಡಗಿಕೊಂಡಿರುವವರಲ್ಲೂ ಇದನ್ನು ಕಾಣುತ್ತಿದ್ದೇವೆ. ಇಲ್ಲಿ ಹಲವರಿಗೆ ತಮ್ಮದೇ ಅಜೆಂಡಾ ಇದೆ. ತಮ್ಮ ಧೋರಣೆಗಳಿವೆ. ಯಾವುದೇ ಘಟನೆ ನಡೆದರೂ, ಯಾರೇ ಏನೇ ಹೇಳಿದರೂ ಅವರು ಅದನ್ನು ತಮ್ಮ ಧೋರಣೆಯ ಬಣ್ಣದ ಕನ್ನಡಕದ ಮೂಲಕವೇ ನೋಡುವುದರಿಂದ ಅವರಿಗೆ ಅಲ್ಲಿ ತಮಗೆ ಇಷ್ಟವಾದ ಬಣ್ಣಗಳೇ ಕಾಣುತ್ತವೆ!

ದಯವಿಟ್ಟು ನಿಮ್ಮ ಬಣ್ಣದ ಫ್ಯಾಷನ್ ಕನ್ನಡಕಗಳನ್ನು ಬಿಚ್ಚಿ ಕೆಳಗಿಡಿ.


ಕಾಮೆಂಟ್‌ಗಳು

  1. ಗೆಳೆಯ ಸೀತಾರಾಂ ಇ-ಮೇಲ್ ಮೂಲಕ ಕಳಿಸಿದ ಪ್ರತಿಕ್ರಿಯೆ -

    "ಫ಼್ಯಾಶನ್ ಕನ್ನಡಕಗಳನ್ನು ಬಿಚ್ಚಿ ಕೆಳಗಿಡಿ" ಲೇಖನವು, ಪ್ರೊ. ಕಲಬುರ್ಗಿಯವರ ಕೊಲೆಯ ಬಗ್ಗೆ "ಫ಼್ಯಾಶನ್ ಕನ್ನಡಕ" ತೊಡದವರ ಮನಸ್ಸನ್ನು ಮುಟ್ಟುವಂತಿದೆ. ಈ ನಿಟ್ಟಿನಲ್ಲಿ ಮೀಡಿಯಾ ಕುರಿತ ನಿಮ್ಮ ಅಭಿಪ್ರಾಯದ ಬಗ್ಗೆ ಎರಡು ಮಾತಿಲ್ಲ. Social media ಕುರಿತಂತೆಯಂತೂ ನಿಮ್ಮ observation ತಲೆಯ ಮೇಲೆ ಹೊಡೆದಂತಿದೆ. ಈಚಿನ ದಿನಗಳಲ್ಲಿ radicalization, polarization, sensationalization ಎಲ್ಲವೂ ಅತಿಯಾಗುತ್ತಿವೆ ಎಂಬುದನ್ನು ಯಾವುದೇ ನಿಷ್ಪಕ್ಷಪಾತಿ ಕಾಣಬಲ್ಲ. ಆದರೆ, ಇವಕ್ಕೆ ಪರಿಹಾರವೇನೆಂಬುದು ಮಾತ್ರ ಕಾಣದಾಗಿದೆ.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)