ಬೇಕಾಗಿದೆ - ಸಾಹಿತ್ಯದ ಪುನರಾವಲೋಕನ

ಸಿ ಪಿ ರವಿಕುಮಾರ್ 



ನನ್ನ ಮಿತ್ರರೊಬ್ಬರು ಇಂದು ಹಂಚಿಕೊಂಡ ಬ್ಲಾಗ್ ಬರಹವನ್ನು ಓದಿದ ನಂತರ ಇದನ್ನು ಬರೆಯಬೇಕು ಎನ್ನಿಸುತ್ತಿದೆ. ಬರೆಯುವ ಮುನ್ನ ಈ ಬರಹದ ಲೇಖಕ (ರೋಹಿತ್ ಚಕ್ರತೀರ್ಥ) ಅವರು ನನಗೆ ಪರಿಚಿತರಲ್ಲ ಎಂದು ಮೊದಲೇ ಹೇಳಿಬಿಡುತ್ತೇನೆ.   ಅವರ ಲೇಖನವನ್ನು ನಾನು ಪೂರ್ವಾಗ್ರಹವಿಲ್ಲದೆ ಓದಿದ್ದೇನೆ. "ಬುದ್ಧಿಜೀವಿ"ಗಳ ಬಗ್ಗೆ ಅವರ ಸಿಟ್ಟು ನನಗೆ ಅರ್ಥವಾಗುತ್ತದೆ. ಅವರ ಸಿಟ್ಟನ್ನು ನಾವು ಇನ್ನೊಂದು ಬಗೆಯಲ್ಲಿ ಅರ್ಥ ಮಾಡಿಕೊಳ್ಳಬಹುದು - ಈಚಿನ ದಿನಗಳಲ್ಲಿ ಯಾವ ಮೂಲಾಧಾರವೂ ಇಲ್ಲದೇ ಏನನ್ನು ಬೇಕಾದರೂ ಮಾರಬಹುದು ಎಂಬ ಕಲ್ಪನೆ ಗಟ್ಟಿಯಾಗಿಹೋಗಿದೆ. ಜೋರಾಗಿ ಕಿರುಚಾಡಿದರೆ ನಂಬದವನ ಮನಸ್ಸಿನಲ್ಲೂ ಸಂಶಯ ಬಿತ್ತಬಹುದೆಂಬುದರ ಮೇಲೆ ಮಾರ್ಕೆಟಿಂಗ್ ಸಂಸ್ಕೃತಿ ನಿಂತಿದೆ. ಇದನ್ನು ಬ್ರೇನ್ ವಾಷಿಂಗ್ ಎಂದು ಕೂಡಾ ಕರೆಯುತ್ತಾರೆ. ಪ್ರತಿದಿನವೂ ನಮ್ಮ ಮಸ್ತಿಷ್ಕವನ್ನು ತೊಳೆಯುವ ಪ್ರಯತ್ನಗಳು ನಡೆಯುತ್ತಲೇ ಇವೆ. ಆಧಾರವಿಲ್ಲದೆ ಸಮಾಜದಲ್ಲಿ ಒಂದು ಜನಾಂಗದ ಮೇಲೆ ಗೂಬೆ ಕೂಡಿಸುವ  ಪ್ರಯತ್ನಗಳು ಇತಿಹಾಸದ ಉದ್ದಕ್ಕೂ ನಡೆದಿವೆ ಮತ್ತು ಇಂದಿಗೂ ನಡೆಯುತ್ತಿವೆ.  ಸಾಮಾಜಿಕ ತಾಣಗಳಲ್ಲಿ ಒಂದು ರಾಜಕೀಯ ಪಕ್ಷದವರು ಇನ್ನೊಂದನ್ನು ಕೀಳಾಗಿ ತೋರಿಸಲು ಅದೆಷ್ಟು ಬಗೆಯ ಮೀಮ್ ಗಳನ್ನು ಪ್ರತಿನಿತ್ಯ ತೇಲಿ ಬಿಡುತ್ತಾರೆ!  ಅದೆಷ್ಟು ಟ್ವೀಟ್ ಗಳು, ಅದೆಷ್ಟು ಕಾಮೆಂಟುಗಳು! ಜನಾಂಗೀಯ ದ್ವೇಷಗಳು ಒಂದೇ ಎರಡೇ? ಉತ್ತರ-ದಕ್ಷಿಣ ಭಾರತೀಯರ ನಡುವೆ, ಹಿಂದಿ-ಕನ್ನಡ ಮಾತಾಡುವವರ ನಡುವೆ, ತಮಿಳು-ಕನ್ನಡ ಮಾತಾಡುವವರ ನಡುವೆ, ವಿವಿಧ ಧರ್ಮೀಯರ ನಡುವೆ ದ್ವೇಷ ಹೊಗೆಯಾಡುತ್ತಲೇ ಇರುತ್ತದೆ.

ರೋಹಿತ್ ಅವರು ಸೂಚಿಸಿರುವ ಅನೇಕ ಅಂಶಗಳು ಖಂಡಿತ ಸಂಶೋಧನೆಗೆ ಅರ್ಹವೆಂದು ನನಗೆ ಅನ್ನಿಸುತ್ತದೆ. ಸಾಹಿತ್ಯದ ಗಂಭೀರ ವಿದ್ಯಾರ್ಥಿಗಳಲ್ಲಿ ಕೆಲವರು ಈ ಬಗೆಯ ಸಂಶೋಧನೆಯಲ್ಲಿ ತೊಡಗಿಕೊಳ್ಳುವುದು ಒಳ್ಳೆಯದೆಂದು ನಾನು ಭಾವಿಸುತ್ತೇನೆ.


  1. ದಲಿತರ ದಮನಕ್ಕೆ ಬ್ರಾಹ್ಮಣರನ್ನು (ಮಾತ್ರ) ದೂಷಿಸುವುದು ಕನ್ನಡಕ್ಕೆ ಮಾತ್ರ ಸಲ್ಲುವ ಮಾತೇ? ಹಿಂದಿ, ಮರಾಠಿ, ತೆಲುಗು, ತಮಿಳು, ಮಲಯಾಳಂ ಮೊದಲಾದ ಭಾಷೆಗಳಲ್ಲಿ ಬಂದ ಸಾಹಿತ್ಯ ಪರಂಪರೆಯಲ್ಲೂ ಇದನ್ನು ಕಾಣಬಹುದೇ? ಈ ಸಂಶೋಧನೆ ಮಾಡುವಾಗ ಕನ್ನಡಕ್ಕೆ ಅಥವಾ ಇಂಗ್ಲಿಷ್ ಭಾಷೆಗೆ ಅನುವಾದಿತವಾದ ಕೆಲವು ಕಥೆಗಳ ಮೇಲೆ ಮಾತ್ರ ನಾವು ಅವಲಂಬಿಸಬಾರದು. ಏಕೆಂದರೆ ಸಂಪಾದಕರು/ಅನುವಾದಕರ ಆಯ್ಕೆಯ ಬಯಾಸ್ ಸಂಶೋಧನೆಯ ಮೇಲೂ ಪ್ರಭಾವ ಬೀರುತ್ತದೆ.   
  2.  ಕನ್ನಡದಲ್ಲಿ ನಾವು ಕಾಣುವ ನಿಲುವು ದಕ್ಷಿಣಭಾಷೆಗಳಲ್ಲಿ ಹೆಚ್ಚು ಕಾಣುತ್ತವೆಯೇ? ತಮಿಳುನಾಡಿನಲ್ಲಿ ಬ್ರಾಹ್ಮಣರು ಎದುರಿಸಬೇಕಾಗಿ ಬಂದ ವಿರೋಧದ ಬಗ್ಗೆ ನಾವೆಲ್ಲರೂ ಕೇಳಿದ್ದೇವೆ. ಇದು ಕನ್ನಡನಾಡಿನ ಮೇಲೂ ಪ್ರಭಾವ ಬೀರಿರಬಹುದೇ? ಇಂದಿಗೂ ಕನ್ನಡಿಗರೂ ತಮಿಳರನ್ನು ಎಷ್ಟೋ ವಿಧಗಳಲ್ಲಿ ಅನುಕರಿಸುವುದನ್ನು ನೋಡುತ್ತೇವೆ - ಉದಾಹರಣೆಗೆ ಸಿನಿಮಾ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ತಮಿಳುನಾಡಿನ ಛಾಯೆ ಎದ್ದು ಕಾಣುತ್ತದೆ.  
  3. ಕನ್ನಡದಲ್ಲಿ ಯಾವಾಗಿನಿಂದ ಬ್ರಾಹ್ಮಣ ವಿರೋಧಿ ನಿಲುವು ಪ್ರಾರಂಭವಾಯಿತು? ಇದು ಹಠಾತ್ತಾಗಿ ಉಂಟಾದ  ಬೆಳವಣಿಗೆಯೇ ಅಥವಾ ನಮ್ಮ ಇತಿಹಾಸದ ಉದ್ದಕ್ಕೂ ಈ ನಿಲುವನ್ನು ಕಾಣುತ್ತೇವೆಯೇ? 
ನನ್ನ ಮಟ್ಟಿಗೆ ಹೇಳುವುದಾದರೆ ಬೆಂಗಳೂರಿನಲ್ಲಿ ಬೆಳೆದ ನನಗೂ ರೋಹಿತ್ ಅವರಂತೆ ದಲಿತರ ಬಗ್ಗೆ ಬ್ರಾಹ್ಮಣರಿಗಾಗಲೇ ಬ್ರಾಹ್ಮಣರ ಬಗ್ಗೆ ದಲಿತರಿಗಾಗಲೀ ವಿಶೇಷವಾದ ಯಾವುದೇ ರೋಷ-ದ್ವೇಷಗಳು ಕಂಡ ನೆನಪಿಲ್ಲ. ಶಾಲೆಗಳಲ್ಲಿ ಜಾತಿಯ ಬಗ್ಗೆ ಅಥವಾ ಧರ್ಮದ ಬಗ್ಗೆ ನಾವು ಯಾರೂ ಮಾತಾಡುತ್ತಿರಲಿಲ್ಲ.  ಸ್ನೇಹಿತರನ್ನು ಬೊಮ್ಮನ್, ಎಚ್‌ಎಮ್‌ಟಿ  ಇತ್ಯಾದಿಯಾಗಿ ಕೆಲವರು ಹಾಸ್ಯಕ್ಕಾಗಿ ಕರೆಯುತ್ತಿದ್ದರು ಎಂಬುದು ನೆನಪಿದೆ.  "ಮೋಚಿ" ಎಂಬ ಕಥೆ ನಮ್ಮ ಪಠ್ಯದಲ್ಲಿತ್ತು - ಇದನ್ನು ಓದಿದಾಗ ನಮಗೆಲ್ಲರಿಗೂ ಕಣ್ಣು ತೇವವಾಗಿತ್ತು.   ಇದೇ ರೀತಿ "ನಾನು ಕೊಂದ ಹುಡುಗಿ" ಎಂಬ ಕಥೆ ಕೂಡಾ ನಮ್ಮ ಮನಸ್ಸನ್ನು ಕಲಕಿತು.  "ಬೊಮ್ಮನಹಳ್ಳಿಯ ಕಿಂದರಿಜೋಗಿ" ಪದ್ಯವನ್ನು ಓದುವಾಗ ಅಲ್ಲಿ ಬ್ರಾಹ್ಮಣರಿಗೆ ಅವಮಾನ ಮಾಡಿದ್ದಾರೆ ಅಂತ ನಮಗೆ ಅನ್ನಿಸಲಿಲ್ಲ.  ಈ ಕವಿತೆಯಲ್ಲಿ ಬರುವ ಸುಬ್ಬಾಭಟ್ಟ ಅಥವಾ ಫಣಿವೇಣಿ ಪಾಪದ ಪ್ರಾಣಿಗಳಂತೆ ಕಾಣುತ್ತಾರೆಯೇ ಹೊರತು ಶೋಷಿಸುವ ದುರ್ಜನರಂತಲ್ಲ.  ನಿಜವೆಂದರೆ ಆಗ ದಲಿತ ಎಂಬ ಪದವೇ ನಮಗೆ ಗೊತ್ತಿರಲಿಲ್ಲ! ಈ ಪದ ಚಾಲ್ತಿಯಲ್ಲಿ ಬಂದಿದ್ದೇ ಎಂಬತ್ತರ ದಶಕದಲ್ಲಿ ಎಂದು ನನ್ನ ಊಹೆ. ಕನ್ನಡದಲ್ಲಿ ಕೆಲವು ಪದಗಳು ಒಮ್ಮೆಲೇ ಫ್ಯಾಶನ್ ಆಗುವುದನ್ನು ನಾವು ನೋಡುತ್ತೇವೆ. ಎಪ್ಪತ್ತರ ದಶಕದಲ್ಲಿ "ಸ್ವೋಪಜ್ಞತೆ, ಸೃಷ್ಟಿಶೀಲತೆ" ಇತ್ಯಾದಿ ಪದಗಳು ವಿಮರ್ಶೆಯಲ್ಲಿ ಫ್ಯಾಶನ್ ಆಗಿದ್ದವು. ಈಗ "ಅಸ್ಮಿತೆ" ಎನ್ನುವ ಪದ ಫ್ಯಾಶನ್ ಆಗಿದೆ!  ಕುವೆಂಪು ಅವರ "ಕರಿಸಿದ್ದ" ಅನ್ನುವ ಕವಿತೆ ನಮಗೆ ಪಾಠದಲ್ಲಿತ್ತು. ಇದೊಂದು ಕಥನಕವನ. ಕರಿಸಿದ್ದ ಎಂಬ ಒಬ್ಬ (ದಲಿತ) ಆಳಿನ ಮಗ ಅಕಸ್ಮಾತ್ ಕಾಲುಜಾರಿ ಹೊಳೆಯ ಪಾಲಾಗುತ್ತಾನೆ. ಕರಿಸಿದ್ದನ ದುಃಖದಲ್ಲಿ ಯಾರೂ ಪಾಲಾಗುವುದಿಲ್ಲವೆಂದು (ಯುವಕವಿ) ಕುವೆಂಪು ಅವರ ಅಳಲು. ಅವರಿಗೆ ಯಾಕೋ ಒಮ್ಮೆಲೇ ಹಿಂದಿನ ಸಾಹಿತಿಗಳೆಲ್ಲರ ಮೇಲೆ ಸಿಟ್ಟು ಬರುತ್ತದೆ - ಎಲ್ಲರೂ ಬರೆಯುವುದು ರಾಮಾಯಣ/ಮಹಾಭಾರತಗಳನ್ನೇ, ಎಲ್ಲರೂ ಬಣ್ಣಿಸುವುದು ರಾಜಮಹಾರಾಜರನ್ನೇ ಎಂದು ಸಿಟ್ಟಾಗುತ್ತಾರೆ! ಕರಿಸಿದ್ದನ ಮೇಲೆ ತಾವು ಬರೆಯುತ್ತಿರುವ ಕವನಕ್ಕೆ ಸಮಜಾಯಿಷಿ ಕೊಡುತ್ತಿರುವಂತೆ ಅವರ ಮಾತು ತೋರುತ್ತದೆ.  "ಸರ್, ಅವರೇ ಮುಂದೆ ರಾಮಾಯಣದರ್ಶನಂ ಬರೆದರಲ್ಲ, ಕರಿಸಿದ್ದದರ್ಶನ ಯಾಕೆ ಬರೆಯಲಿಲ್ಲ?" ಅಂತ ನಾನು ಪ್ರಶ್ನೆ ಕೇಳಿದ್ದು ನನಗೆ ಇನ್ನೂ ನೆನಪಿದೆ!  (ಅಂದಹಾಗೆ ಕುವೆಂಪು ನನ್ನ ನೆಚ್ಚಿನ ಕವಿಗಳಲ್ಲಿ ಒಬ್ಬರು ಎನ್ನುವುದನ್ನು ಈಗಲೇ ಹೇಳುವುದು ಒಳ್ಳೆಯದು!)

ಕಾರಂತರ ಚೋಮನದುಡಿ ಕಾದಂಬರಿ ತೆರೆಗೆ ಬಂದಾಗ ಚೋಮನಿಗೆ ಭೂಮಿ ಕೊಡಬೇಡವೆಂದು ಬೋಧಿಸುವ ಬ್ರಾಹ್ಮಣ ವಿಧವೆ  ಎಲ್ಲರಿಗೂ ಕರಾಳವಾಗಿ ಕಾಣಿಸಿದಳು. ಆದರೆ ಚೋಮನನ್ನು ಮತ್ತು ಅವನ ಮಕ್ಕಳನ್ನು ಶೋಷಣೆ ಮಾಡಿದ್ದು ಕೇವಲ ಅವನ (ಬ್ರಾಹ್ಮಣ) ದಣಿ ಮಾತ್ರವೇ?  ಇದೇ ಬಗೆಯ ಪ್ರಶ್ನೆ ನಮಗೆ ಪ್ರೇಮಚಂದರ ಗೋದಾನ್ ಓದುವಾಗಲೂ ಮೂಡುತ್ತದೆ. ಗೋದಾನ್ ಕಥೆಯ (ದಲಿತ) ರೈತನನ್ನು ಶೋಷಿಸುವುದು ಇಡೀ ಸಮಾಜ. ಈ ಕತೆಯಲ್ಲೂ ಒಬ್ಬ ಬ್ರಾಹ್ಮಣ ವೈದ್ಯನ ಪಾತ್ರ ಬರುತ್ತದೆ; ಅವನು ಕೂಡಾ ಶೋಷಣೆಯಲ್ಲಿ ಪಾತ್ರ ವಹಿಸುತ್ತಾನೆ ಎನ್ನುವುದರಲ್ಲಿ ಎರಡು ಮಾತಿಲ್ಲವಾದರೂ ಅವನದೇನಿದ್ದರೂ ಪೋಷಕ ಪಾತ್ರ.  ಸಾಹಿತ್ಯವು ಸಮಾಜಕ್ಕೆ ಹಿಡಿದ ಕನ್ನಡಿ ಎನ್ನುವುದೇ ಆದರೆ ನಾವು ಸಾಹಿತ್ಯವನ್ನು ಅಭ್ಯಾಸ ಮಾಡಿ ನಾನು ಮೇಲೆ ಕೇಳಿದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬಹುದು. ಬ್ರಾಹ್ಮಣರಲ್ಲದ ಕನಕದಾಸರು ಮಾತ್ರವಲ್ಲದೆ ಬ್ರಾಹ್ಮಣರೇ ಆದ ಪುರಂದರದಾಸರೂ ಬ್ರಾಹ್ಮಣರನ್ನು ಗೇಲಿ ಮಾಡಿದ್ದಾರೆ. ಆದರೆ ಅವರು ಗೇಲಿ ಮಾಡಿದ್ದು ಬ್ರಾಹ್ಮಣರ ಆಚಾರವನ್ನು, ಮಡಿವಂತಿಕೆಯನ್ನು (ಉದಾರವೈರಾಗ್ಯವಿದು, ತನುವ ನೀರೊಳಗದ್ದಿ ಫಲವೇನು, ...).  ಇದಕ್ಕೆ ವಿರುದ್ಧವಾಗಿ ಅವರು ಗಂಭೀರವಾಗಿ ದೂಷಣೆ ಮಾಡಿದ್ದು ಆಳುವ ವರ್ಗವನ್ನು ಎಂದು ನನ್ನ ನಂಬಿಕೆ (ಉತ್ತಮ ಪ್ರಭುತ್ವ ಲೊಳಲೊಟ್ಟೆ, ಸತ್ಯವಂತರಿಗಿದು ಕಾಲವಲ್ಲ, ...).  ವಿಶೇಷವೆಂದರೆ ಇದೇ ಬಗೆಯ ಲೇವಡಿಯನ್ನು ವಚನಕಾರರು ಕೂಡಾ ಮಾಡಿದ್ದಾರೆ (ಅಂಗದ ಮೇಲೆ ಲಿಂಗ ಸ್ವಾಯತವಾದಡೇನು, ಭಕ್ತನಾಗಬಲ್ಲನೆ? - ಅಲ್ಲಮಪ್ರಭು).  ಆದರೆ ರೋಹಿತ್ ಅವರ ಸಾಫ್ಟ್ ಟಾರ್ಗೆಟ್  ಥಿಯರಿಯ ಪ್ರಬಾವವೋ ಏನೋ ಬ್ರಾಹ್ಮಣರನ್ನು ಕುರಿತ ಟೀಕೆ-ಟಿಪ್ಪಣಿಗಳಿಗೆ ಹೆಚ್ಚು ಕೋರಸ್ ಸೇರಿಕೊಂಡಿತು. 


ಹಳ್ಳಿಯ ಚಿತ್ರಗಳನ್ನು ಕಟ್ಟಿಕೊಡುವ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಬರಹಗಳನ್ನು ನಾವು ನೈಜ ಚಿತ್ರಣಗಳೆಂದು ಸ್ವೀಕರಿಸುವುದೇ ಆದರೆ ಅಲ್ಲಿ ಎಲ್ಲಿವೆ ದಲಿತರ ಮೇಲಿನ ದಬ್ಬಾಳಿಕೆಯ ಚಿತ್ರಗಳು?  ಕೈಲಾಸಂ ಅವರ ನಾಟಕಗಳಲ್ಲಿ ಎಲ್ಲಿವೆ? ಬೇಂದ್ರೆ ಅವರ ಕಾವ್ಯದಲ್ಲಿ ಎಲ್ಲಿದೆ? ಮಾಸ್ತಿ ಕಥೆಗಳಲ್ಲಿ ಎಲ್ಲಿದೆ? ಅಡಿಗರ ಕವಿತೆಗಳಲ್ಲಿ ಎಲ್ಲಿದೆ?  ಇವರೆಲ್ಲರೂ ಬ್ರಾಹ್ಮಣರೇ ಆದ್ದರಿಂದ ದಬ್ಬಾಳಿಕೆಯನ್ನು ಕಂಡೂ ಅವರು ಟೀಕಿಸಲಿಲ್ಲವೆಂದು ನನಗಂತೂ ಅನ್ನಿಸುವುದಿಲ್ಲ. ಏಕೆಂದರೆ ಬ್ರಾಹ್ಮಣರ  ಆಚಾರಗಳನ್ನು ಆವರು ಮುಲಾಜಿಲ್ಲದೆ ಟೀಕಿಸಿದ್ದಾರೆ (ಪೋಲಿಕಿಟ್ಟಿ, ಬಾಲವಿಧವೆ, ಸನ್ಯಾಸವಲ್ಲದ ಸನ್ಯಾಸ, ರಾಮನವಮಿಯ ದಿವಸ, ಇತ್ಯಾದಿ). "ಮರಳಿ ಮಣ್ಣಿಗೆ" ಓದಿದಾಗ ಅಲ್ಲಿ ಬ್ರಾಹ್ಮಣ ಕೃಷಿ ಸಮುದಾಯದವರು ಹೊಲಗಳಲ್ಲಿ ದುಡಿಯುತ್ತಿದ್ದ  ಚಿತ್ರಣ ಓದಿ ನನಗೆ ಖಂಡಿತ ಆಶ್ಚರ್ಯವಾಗಿದೆ.  ಚೋಮನದುಡಿಯಲ್ಲಿ ಬರುವ ದಣಿಯ ಪಾತ್ರಕ್ಕೂ ಮರಳಿಮಣ್ಣಿಗೆ ಕಾದಂಬರಿಯಲ್ಲಿ ಬರುವ ಬ್ರಾಹ್ಮಣರೈತನ ಪಾತ್ರಕ್ಕೂ ಅಜಗಜಾಂತರವಿದೆ.   ಪ್ರಗತಿಪರ ಲೇಖಕರಾದ ನಿರಂಜನ, ಅನಕೃ, ಬೀಚಿ ಮೊದಲಾದವರ ಬರಹಗಳನ್ನೂ ನಾವು ಅಧ್ಯಯನ ಮಾಡಬೇಕು. ಇವರು ಕಮ್ಯೂನಿಸ್ಟ್ ಆಲೋಚನೆಯಿಂದ ಪ್ರಭಾವಿತರಾಗಿದ್ದವರು.  ಈ ಬರಹಗಾರರನ್ನು ನಾನು ಹೆಚ್ಚು ಓದಿಲ್ಲ - ಹೀಗಾಗಿ ನಾನು ಹೆಚ್ಚಾಗಿ ಏನೂ ಹೇಳಲಾರೆ. 

ಕಾದಂಬರಿ ಕ್ಷೇತ್ರದಲ್ಲಿ ಬ್ರಾಹ್ಮಣರನ್ನು ಕ್ಯಾರಿಕೇಚರ್ ಮಾದರಿಯಲ್ಲಿ  ಚಿತ್ರಿಸುವುದರಲ್ಲಿ ಅನಂತಮೂರ್ತಿ ಅವರ ಪಾತ್ರ ದೊಡ್ಡದು ಎಂದು ನಾನು ಭಾವಿಸುತ್ತೇನೆ. ಗಾಳಿ ಯಾವಕಡೆಗೆ ಬೀಸುತ್ತಿದೆ ಎಂದು ಅರಿತಿದ್ದ ಅನಂತಮೂರ್ತಿ ಸುಲಭದ ದಾರಿ ಹಿಡಿದರು.  ವಿಚಿತ್ರವೆಂದರೆ ಅವರು ತಮ್ಮ ಕೊನೆಯ ದಿನಗಳಲ್ಲಿ ಮಂತ್ರಗಳನ್ನು ಹೇಳಿಕೊಳ್ಳುತ್ತಿದ್ದರು, ದಾಸರ ಪದಗಳನ್ನು ಹಾಡಿಕೊಳ್ಳುತ್ತಿದ್ದರು ಇತ್ಯಾದಿ ವರದಿಗಳು ಬಂದವು!  ಅವರ 'ಸಂಸ್ಕಾರ' ಕಾದಂಬರಿಯಲ್ಲಿ ನಟಿಸಿದ ಕಾರ್ನಾಡ್ ಅವರೇ ಭೈರಪ್ಪನವರ "ತಬ್ಬಲಿಯು ನೀನಾದೆ ಮಗನೆ" ಕಾದಂಬರಿಯನ್ನೂ ತೆರೆಗೆ ತಂದು ಇತ್ತೀಚೆಗೆ ಗೋಮಾಂಸ ನಿಷೇಧದ ವಿರುದ್ಧ ಪ್ರತಿಭಟನೆಗೆ ನಿಂತಿದ್ದು  ಕಾರ್ನಾಡರಲ್ಲಿರುವ ದ್ವಂದ್ವಗಳಿಗೆ ಸಾಕ್ಷಿ.  

ನಾನು ನನಗೆ ಪರಿಚಿತವಾದ ಸಾಹಿತ್ಯ ಕೃತಿಗಳನ್ನು ಮಾತ್ರ ಇಟ್ಟುಕೊಂಡು ಯಾವ ನಿರ್ಧಾರಕ್ಕೂ ಬರುವುದು ಸಾಧುವಲ್ಲ ಎನ್ನುವುದು ನನಗೆ ತಿಳಿದಿದೆ. ನಮ್ಮ ನವೋದಯ, ಪ್ರಗತಿಪರ, ನವ್ಯ ಸಾಹಿತ್ಯಪ್ರಕಾರಗಳೇ ಆಗಲಿ, ನಮ್ಮ ನಡುಗನ್ನಡ/ಹಳೆಗನ್ನಡ ಕಾವ್ಯಗಳೇ ಆಗಲಿ ಯಾಕೆ "ಬ್ರಾಹ್ಮಣರ ದಬ್ಬಾಳಿಕೆಯ" ಚಿತ್ರವನ್ನು ಕಟ್ಟಿಕೊಡಲಿಲ್ಲ?  ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣ ಎಂದು ಎಲ್ಲದಕ್ಕೂ ಬ್ರಾಹ್ಮಣರನ್ನೇ ದೂಷಿಸುವುದು ಎಷ್ಟು ಸರಿ?  ಯಾವ ಬಯಾಸ್ ಇಲ್ಲದೇ ನಾವು ನಮ್ಮ ಇಡೀ ಕನ್ನಡ ಸಾಹಿತ್ಯವನ್ನು ಜಾಲಾಡಿ ನಿಜವನ್ನು ಕಂಡುಕೊಳ್ಳಬೇಕಾಗಿದೆ.   ವಸ್ತುನಿಷ್ಠ ವಿಮರ್ಶೆಯೇ ಇಲ್ಲದ ಇಂದಿನ ದಿನಗಳಲ್ಲಿ ಇದನ್ನು ನಿರೀಕ್ಷಿಸುವುದೇ ತಪ್ಪೇನೋ!

ಕಾಮೆಂಟ್‌ಗಳು

  1. ನಿಮ್ಮ ಬರಹ ತುಂಬಾ ಚೆನ್ನಾಗಿದೆ. ಈ ವಿಚಾರದ ಸತ್ಯಶೋದನೆಗೆ ಒಳ್ಳೆಯ ಸಮತೂಕದ ಮಾರ್ಗವನ್ನು ಸೂಚಿಸಿದ್ದೀರಿ. (ಸರಕಾರದ ಸತ್ಯಶೋಧನೆ ಸಮಿತಿಗಳನ್ನು ಉಲ್ಲೇಖಿಸುತ್ತಿಲ್ಲ)
    ನನ್ನನ್ನು ಯಾವತ್ತೂ ಕಾಡುತ್ತಿದ್ದ ಪ್ರಶ್ನೆಗಳು ಕೇವಲ ೨-೩% ಇರುವ ಬಡ ಬ್ರಾಹ್ಮಣರು ಅದು ಹೇಗೆ ಅಷ್ಟೊಂದು ದಬ್ಬಾಳಿಕೆಯನ್ನು ಮಾಡಿದರು? ಬುದ್ಧಿಜೀವಿಗಳು ಹೇಳುವಂತೆ ಸುಮಾರು ೨೦೦೦ ವರ್ಷಗಳಿಗೂ ಅಧಿಕ ಕಾಲ ಈ ದಬ್ಬಾಳಿಕೆ ನಡೆದು ಬಂದಿದ್ದರೆ ಯಾಕೆ ಎಲ್ಲೂ ದೊಡ್ಡ ಮಟ್ಟಿನ ಪ್ರತಿಭಟನೆ ಆಗಲಿಲ್ಲ?
    ದಕ್ಷಿಣ ಕನ್ನಡ ಜಿಲ್ಲೆಯ ಸಣ್ಣ ಊರಲ್ಲಿ ಹುಟ್ಟಿ ಬೆಳೆದವನು ನಾನು. ದಕ್ಷಿಣ ಕನ್ನಡದಲ್ಲಿರುವ ಹಳ್ಳಿಗಳಲ್ಲಿ ಅಜ್ಜಿ ಮನೆ, ಮಾವನ ಮನೆ ಅಂತ ಬೇಕಾದಷ್ಟು ದಿನಗಳನ್ನು ಕಳೆದಿದ್ದೇನೆ. ಎಲ್ಲೂ ನಾನು ದಬ್ಬಾಳಿಕೆಯನ್ನು ಕಂಡಿಲ್ಲ. ಹೆಚ್ಚೇಕೆ ನಾನು ಕಂಡಂತೆ ಹೆಚ್ಚಿನವರೆಲ್ಲರೂ ಬಡ ಬ್ರಾಹ್ಮಣರು.

    ಆರ್ಥಿಕ ಬಲ, ರಾಜಕೀಯ ಬಲ ಹಾಗೂ ದೈಹಿಕ ಬಲವಿದ್ದ ಕ್ಷತ್ರಿಯರು, ಆರ್ಥಿಕ ಬಲ ಹಾಗೂ ರಾಜಕೀಯ ಬಲವಿದ್ದ ವೈಶ್ಯರು ಹಾಗೂ ರಾಜಕೀಯ ಬಲವಿದ್ದ ಬ್ರಾಹ್ಮಣರು ಜೊತೆಯಾಗಿ ದಬ್ಬಾಳಿಕೆ ನಡೆಸಿದರು ಎಂಬ ವಾದ ಮಂಡಿಸಿದರೆ ಒಪ್ಪಬಹುದೋ ಏನೋ. ಎಲ್ಲಾ ತಪ್ಪನ್ನು ಬ್ರಾಹ್ಮಣ ಮೇಲೆ ಕಟ್ಟುವುದು ಸಮಂಜಸ ಅಲ್ಲ ಎನಿಸುತ್ತದೆ.

    ನಮ್ಮ ದೇಶದಲ್ಲಿ ನಾವು ನೋಡಿರುವಂತಹ ಸೈದ್ಧಾಂತಿಕ ಬಿನ್ನಾಭಿಪ್ರಾಯಗಳನ್ನು ದಬ್ಬಾಳಿಕೆಯ ವಿರುದ್ಧ ಕೂಗು ಎಂದು ಒಪ್ಪುವುದಕ್ಕಾಗುವುದಿಲ್ಲ. ಅಷ್ಟಕ್ಕೂ ಪ್ರಬಲ ಸಿದ್ಧಾಂತಗಳಾಗಿ ಮೂಡಿ ಬಂದ ಬೌಧ, ಜೈನ, ಬಸವ ಮುಂತಾದ ತತ್ತ್ವಗಳು ಸೈದ್ಧಾಂತಿಕ ಹಾಗು ತಾತ್ವಿಕ ನೆಲೆಯಲ್ಲಿ ಭಿನ್ನವಾಗಿ ಕಂಡರೂ ಇವೆಲ್ಲವೂ ಸನಾತನ ಧರ್ಮದ ತಳಹದಿಯ ಮೇಲೆ ನಿಂತಿವೆ ಎಂಬುದು ಸ್ಪಷ್ಟ.

    ನನ್ನಲ್ಲಿದ್ದ ಪ್ರಶ್ನೆಗಳಿಗೆ ಒಂದಷ್ಟು ಸಮಾಧಾನ ಸಿಕ್ಕಿದ್ದು ಶತಾವಧಾನಿ ಡಾ ರಾ ಗಣೇಶರ ಒಂದು ಭಾಷಣದಲ್ಲಿ. ಅವರು ಬ್ರಾಹ್ಮಣರ ದಬ್ಬಾಳಿಕೆ ಎಂಬುದೊಂದು ಮಿಥ್ಯ ಅದನ್ನು ಮೊದಲು ಪ್ರತಿಪಾದಿಸಿದವರು ಆಂಗ್ಲರು ಎಂದು ಕೆಲ ಪುರಾವೆಗಳ ಸಹಿತ ವಿವರಿಸುತ್ತಾರೆ. ತಮಿಳುನಾಡಿನಲ್ಲಿ ನಡೆದ ಮತಾಂತರ ಪ್ರಯತ್ನಗಳ ಉದಾಹರಣೆ ನೀಡುತ್ತಾ ಹೀಗೆ ವಿವರಿಸುತ್ತಾರೆ - ಮತಾಂತರ ಮಾಡಲು ಆಂಗ್ಲ ಧರ್ಮ ಪ್ರಚಾರಕರು ಮೊದಲು ಅನುಸರಿಸಿದ ಮಾರ್ಗ ಬ್ರಾಹ್ಮಣರ ಓಲೈಕೆ ಮತ್ತು ತನ್ಮೂಲಕ ಬ್ರಾಹ್ಮಣರ ಮತಾಂತರ. ಬ್ರಾಹ್ಮಣರಿಗೆ ಸಮಾಜದಲ್ಲಿ ತುಂಬಾ ಗೌರವ ಇದ್ದುದರಿಂದ ಬ್ರಾಹ್ಮಣರು ಮತಾಂತರ ಆದಂತೆ ಭಾರತೀಯರೆಲ್ಲರೂ ಸಾಮೂಹಿಕ ಮತಾಂತರ ಆಗುತ್ತಾರೆ ಎಂಬುದು ಅವರ ಯೋಜನೆಯಾಗಿತ್ತು. ಇದಕ್ಕೋಸ್ಕರ ಕ್ರಿಶ್ಚಿಯನ್ ಧರ್ಮ ಪ್ರಚಾರಕರು ಜನಿವಾರ ಧರಿಸಿಕೊಂದು ಅದಕ್ಕೆ ಶಿಲುಬೆ (ಕ್ರಾಸ್) ಕಟ್ಟಿಕೊಳ್ಳುತ್ತಿದ್ದರು ಎಂಬ ಪುರಾವೆ ನೀಡುತ್ತಾರೆ. ಯಾವಾಗ ಈ ಯೋಜನೆ ಸಫಲವಾಗಲಿಲ್ಲವೋ ಆವಾಗ ಭೇದವನ್ನು ತಮ್ಮ ತಂತ್ರವನ್ನಾಗಿ ಬ್ರಾಹ್ಮಣರು ಶತಮಾನಗಳಿಂದ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂಬ ಕಥೆ ಸೃಷ್ಟಿಸಿ ಸಮಾಜವನ್ನು ಬ್ರಾಹ್ಮಣರ ಎದುರು ಎತ್ತಿ ಕಟ್ಟಿದರು ಎಂದು ವಿವರಿಸಿದರು.

    ಬಹುಶಃ ಮುಂದೆ ಈ ತಂತ್ರವನ್ನು ಆಂಗ್ಲರು ಇತರೆ ರಾಜ್ಯಗಳಲ್ಲಿ ಅನುಸರಿಸಿದ್ದಾರೆ. ಹೊಸ ತಲೆಮಾರುಗಳು ಬಂದಂತೆಲ್ಲಾ ಈ ದ್ವೇಶ ಬಲವಾಗುತ್ತಾ ಸಾಗಿದೆ. ಸುಳ್ಳನ್ನು ಸಾವಿರ ಸಲ ಹೇಳಿದರೆ ಸತ್ಯವಾಗುತ್ತದೆ ಎಂಬ ಸಿದ್ಧಾಂತವನ್ನು ಮಾರ್ಕೆಟಿಂಗ್‍ನಲ್ಲಿ ಅನುಸರಿಸಿದಂತೆ ಬಹುಶಃ ಈ ದ್ವೇಶ ಒಂದು ವರ್ಗದ ಜನರ ನಿರಂತರ ಕೂಗಿನಿಂದ ದೊಡ್ಡದಾಗಿ ಬೆಳೆದಿದೆ ಮತ್ತು ದೊಡ್ಡ ಕಂದಕ ನಿರ್ಮಾಣವಾಗಿದೆ ಎಂಬುದು ನನ್ನ ಅನಿಸಿಕೆ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಸಮೀರ ಅವರೇ, ನಿಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು. ಒಂದು ಕಾಲದಲ್ಲಿ ಅಚ್ಚಾದ ಮಾಹಿತಿ ಎಂದರೆ ಅದು ನಿಜವೇ ಇರಬೇಕು ಎಂದು ಜನ ನಂಬುತ್ತಿದ್ದರು. ಆಗ ಇಂಥ ಸುಳ್ಳುಗಳನ್ನು ಹಬ್ಬಿಸುವುದು ಸುಲಭವಾಗಿತ್ತು.

      ಅಳಿಸಿ
  2. At Institutional level to come up with Truth and to fight against Anti brahmin propaganda ..Right from Supreme court against hatred to University school syllabus ...One of the developmental tool for India to clean it's root and make progresz

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)