ಕರ್ನಾಟಕ ಸಾಹಿತ್ಯ ಅಕಾಡೆಮಿಯ ವೆಬ್ ತಾಣ - ಒಂದು ವಿಮರ್ಶಾತ್ಮಕ ನೋಟ

ಒಂದು ತಿಂಗಳ ಹಿಂದೆ ಕರ್ನಾಟಕ ಸಾಹಿತ್ಯ ಅಕಾಡೆಮಿ ವೆಬ್ ತಾಣವನ್ನು ಒಂದಷ್ಟು ಸೂಕ್ಷ್ಮವಾಗಿ ಪರಿಶೀಲಿಸಿ ಒಂದು ವಿಮರ್ಶೆ ಬರೆದು ಅದರಲ್ಲಿರುವ ಲೋಪಗಳನ್ನು ಪಟ್ಟಿ ಮಾಡಿ ಪತ್ರ ಬರೆದೆ. ಒಂದು ತಿಂಗಳಿನ ನಂತರವೂ ಅಕಾಡೆಮಿಯಿಂದ ಉತ್ತರ ಬಂದಿಲ್ಲ. ವೆಬ್ ತಾಣ ಇನ್ನೂ ಹಾಗೇ ಇದೆ.  ನನ್ನ ಪತ್ರದ  ಉದ್ದೇಶ ಟೀಕೆ ಮಾಡುವುದಲ್ಲ.  

ಆನ್ಲೈನ್  ಪ್ರಕಾಶನಕ್ಕೂ ಪುಸ್ತಕ ಮುದ್ರಣಕ್ಕೂ ಒಂದು ಮುಖ್ಯ ವ್ಯತ್ಯಾಸವೆಂದರೆ ಆನ್ಲೈನ್  ಕಡತಗಳನ್ನು ಯಾವಾಗ ಬೇಕಾದರೂ ಸುಲಭವಾಗಿ ತಿದ್ದಬಹುದು.  ಹೀಗಾಗಿ ಲೋಪದೋಷಗಳನ್ನು ಸುಲಭವಾಗಿ ಸರಿಪಡಿಸಿಕೊಳ್ಳಬಹುದು, ದೈನಂದಿನ ಆಗುಹೋಗುಗಳಿಗೆ ಬೇಗ ಪ್ರತಿಕ್ರಯಿಸಬಹುದು.  ಇದಕ್ಕಾಗಿ ಅವರು ಒಂದು ಪ್ರತ್ಯೇಕ ತಂಡವನ್ನು ಮೀಸಲಾಗಿಡಬೇಕು. ಕರ್ನಾಟಕ ಸಾಹಿತ್ಯ ಅಕಾಡೆಮಿಯಾಗಲಿ ಕನ್ನಡ ಸಾಹಿತ್ಯ ಪರಿಷತ್ತಾಗಲಿ ತಮ್ಮ ವೆಬ್ ತಾಣವನ್ನು ಈ ದೃಷ್ಟಿಯಿಂದ ನೋಡುತ್ತಿಲ್ಲ. ಪುಸ್ತಕದ ಒಂದು ಮುದ್ರಣವಾದ ನಂತರ  ಹೇಗೆ ಮರುಮುದ್ರಣವಾಗುವವರೆಗೆ ಅದರಲ್ಲಿ ತಿದ್ದುಪಡಿ ಮಾಡುವುದಿಲ್ಲವೋ ಈ ಸಂಸ್ಥೆಗಳು ತಮ್ಮ ವೆಬ್ ತಾಣಗಳನ್ನೂ ಹಾಗೇ ಪರಿಗಣಿಸುತ್ತಿವೆ. ನನ್ನ ವಿಮರ್ಶೆಯ ಉದ್ದೇಶ ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ಸಲಹೆ ನೀಡುವುದೇ ಆಗಿದೆ. ನನ್ನ ಪತ್ರವನ್ನು ಅವರು ತಿಂಗಳಾದರೂ ಪ್ರತಿಕ್ರಯಿಸಿಲ್ಲ. ಹೀಗಾಗಿ ನನ್ನ ವಿಮರ್ಶೆಯನ್ನು ಸಾರ್ವಜನಿಕವಾಗಿ ಪ್ರಕಟಿಸುತ್ತಿದ್ದೇನೆ.  

ಡಾ. ಸಿ ಪಿ ರವಿಕುಮಾರ್


ಸಂಕ್ಷೇಪ 

ಸೆಪ್ಟೆಂಬರ್ ೨೦೧೫ ಕರ್ನಾಟಕ ಸಾಹಿತ್ಯ ಅಕಾಡೆಮಿ ೨೦೧೩ ನೇ  ಸಾಲಿನ ಪ್ರಶಸ್ತಿ ಪ್ರಕಟಿಸಿದಾಗ ಅನೇಕ ವಿವಾದಗಳು ಹುಟ್ಟಿಕೊಂಡವು, ಬಹುಶಃ ಹಿಂದೆಂದೂ ಇಂಥ ವಿವಾದ ಉಂಟಾಗಿರಲಿಲ್ಲವೆಂದು ತೋರುತ್ತದೆ. ಪ್ರಸ್ತುತ ಲೇಖನದ ಉದ್ದೇಶ ಈ ವಿವಾದವನ್ನು ಚರ್ಚಿಸುವುದಲ್ಲ. ವಿವಾದ ಉಂಟಾದಾಗ ನಾನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ವೆಬ್ ತಾಣಕ್ಕೆ ಭೇಟಿ ಇತ್ತು ಅಲ್ಲಿಯ ಮಾಹಿತಿಯನ್ನು ಅವಲೋಕಿಸಿದೆ. ಆಗ ವೆಬ್ ತಾಣದಲ್ಲಿ ಅನೇಕ ಲೋಪದೋಷಗಳು ಕಂಡವು. ಇವುಗಳನ್ನು ದಾಖಲಿಸುವ ಪ್ರಯತ್ನ ಇಲ್ಲಿ ಮಾಡಿದ್ದೇನೆ. ನನ್ನ ದೃಷ್ಟಿಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಎಲ್ಲರೂ ಗೌರವಿಸುವ ಸಂಸ್ಥೆ; ಯಾರಾದರೂ ಕನ್ನಡ ಸಾಹಿತ್ಯದ ಬಗ್ಗೆ ತಿಳಿದುಕೊಳ್ಳಬೇಕಾದರೆ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ವೆಬ್ ತಾಣದಿಂದಲೇ ಪ್ರಾರಂಭಿಸುವುದು ಸಹಜ. ಕನ್ನಡೇತರರು ಕೂಡಾ ಕನ್ನಡ ಸಾಹಿತ್ಯದ ಬಗ್ಗೆ ತಿಳಿದುಕೊಳ್ಳಲು ಈ ವೆಬ್ ತಾಣಕ್ಕೆ ಭೇಟಿ ನೀಡಬಹುದು. ಎಷ್ಟು ಜನ ವೆಬ್ ತಾಣಕ್ಕೆ ಭೇಟಿ ನೀಡಿದರು, ಅವರ ಅನ್ನಿಸಿಕೆಗಳೇನು ಮೊದಲಾದವುಗಳನ್ನು ತಿಳಿದುಕೊಳ್ಳಲು ಅಕಾಡೆಮಿ ವೆಬ್ ತಾಣದಲ್ಲಿ ಸೂಕ್ತ ಅವಕಾಶ ಕಲ್ಪಿಸಬೇಕು. ಈ ಲೇಖನದಲ್ಲಿ ವೆಬ್ ತಾಣವನ್ನು ಸುಧಾರಿಸಲು ಇನ್ನೂ ಹಲವಾರು ಸಲಹೆಗಳಿವೆ. ಲೇಖನದ ಉದ್ದೇಶ ನಕಾರಾತ್ಮಕ ಟೀಕೆಯಲ್ಲ, ಸಕಾರಾತ್ಮಕವಾದ ಸಲಹೆ ಎನ್ನುವುದನ್ನು ಸ್ಪಷ್ಟ ಪಡಿಸುತ್ತೇನೆ.


ಧ್ಯೇಯೋದ್ದೇಶಗಳು 

ಯಾವುದೇ ಸಂಸ್ಥೆಯ ವೆಬ್ ತಾಣಕ್ಕೆ ಹೋದಾಗ ಆ ಸಂಸ್ಥೆಯ ಧ್ಯೇಯೋದ್ದೇಶಗಳೇನು ಮತ್ತು ಇತಿಹಾಸವೇನು ಎಂಬುದನ್ನು ವಿವರಿಸುವ ಒಂದು ಲಿಂಕ್ ಇರುತ್ತದೆ. ಇದನ್ನು ಅತ್ಯಂತ ಕಾಳಜಿಯಿಂದ ಮತ್ತು ಓದುಗರಲ್ಲಿ ಅಭಿಮಾನ ಮೂಡಿಸುವ ರೀತಿಯಲ್ಲಿ ತಯಾರು ಮಾಡುವ ಅಗತ್ಯವಿದೆ. ಆದರೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ತನ್ನ ಧ್ಯೇಯೋದ್ದೇಶಗಳನ್ನು ಪ್ರಕಟಿಸುವುದರಲ್ಲೇ ಎಡವಿದೆ. (ಇಲ್ಲಿ ನೋಡಿ). ಕರ್ನಾಟಕದಲ್ಲಿ ಕನ್ನಡವಲ್ಲದೆ ತುಳು ಭಾಷೆ ಕೂಡಾ ಇದೆ. ಕೊಂಕಣಿಯಲ್ಲಿ ಮಾತಾಡುವವರೂ ಇದ್ದಾರೆ.  ಅಕಾಡೆಮಿಯ ಧ್ಯೇಯೋದ್ದೇಶಗಳಲ್ಲಿ ಕೇವಲ "ಸಾಹಿತ್ಯ" ಎನ್ನುವ ಪದ ಬಳಕೆಯಾಗಿದೆ. ಯಾವ ಯಾವ ಭಾಷೆಗಳ ಸಾಹಿತ್ಯ ಎಂಬುದನ್ನು ವಿವರಿಸಬೇಕಾದದ್ದು ಅಗತ್ಯ. ವಿಷನ್ ಮತ್ತು ಮಿಷನ್ ಎಂಬ ಎರಡು ಪದಗಳನ್ನು ಸಂಸ್ಥೆಗಳು ಬಳಸುತ್ತವೆ. ಅಕಾಡೆಮಿ ತನ್ನ ಧ್ಯೇಯೋದ್ದೇಶಗಳೇನು ಮತ್ತು ಅದಕ್ಕಾಗಿ ತಾನು ಮಾಡುವ ಕೆಲಸಗಳೇನು ಎಂಬುದನ್ನು ಪ್ರತ್ಯೇಕವಾಗಿ ನಿರ್ಧರಿಸಬೇಕು.  ದೇಣಿಗೆಗಳ ಮೂಲಕ ಹಣ ಸಂಗ್ರಹಿಸುವುದನ್ನು ಧ್ಯೇಯೋದ್ದೇಶದಲ್ಲಿ ತೋರಿಸುವುದು ಸರಿಯಲ್ಲ. ಅನೇಕ ಚಟುವಟಿಕೆಗಳ ಬಗ್ಗೆ ಬರೆದ ನಂತರ "ತನ್ನ ಧ್ಯೇಯೋದ್ದೇಶಗಳನ್ನು ಸಾಧಿಸಲು ಅಗತ್ಯವಿರುವ ಎಲ್ಲ ಕಾರ್ಯಕ್ರಮಗಳನ್ನು ಕೈಗೊಳ್ಳುವುದು" ಎಂಬ ಇನ್ನೊಂದು ರಕ್ಷಣಾಕವಚ ವಿಚಿತ್ರವಾಗಿ ಕಾಣುತ್ತದೆ. ಖಂಡಿತ ಈ ಪುಟದ ಮರುಸೃಷ್ಟಿ ಅಗತ್ಯ. ಇದನ್ನು ಮಾಡುವಾಗ ಅಕಾಡೆಮಿ ತನ್ನ ಚಟುವಟಿಕೆಗಳನ್ನು ವಿಮರ್ಶಿಸಿ ಯಾವ ಚಟುವಟಿಕೆಗಳು ಇಂದಿನ ಅಗತ್ಯ ಎನ್ನುವುದನ್ನು ತನ್ನನ್ನು ತಾನೇ ಪ್ರಶ್ನಿಸಿಕೊಳ್ಳಬೇಕು. 

ಇಂದು ಸಾಹಿತ್ಯ ಎನ್ನುವುದು ಕೇವಲ ಬಾಯಲ್ಲಿ ಅಥವಾ ಕಾಗದದ ಮೇಲೆ ಉಳಿದಿಲ್ಲ - ಕಂಪ್ಯೂಟರ್ ಮತ್ತು ಅಂತರಜಾಲಗಳ ಪ್ರವೇಶವಾದ ಮೇಲೆ ಸಾಹಿತ್ಯಕ್ಷೇತ್ರವು ಹೆಚ್ಚುಹೆಚ್ಚಾಗಿ ಎಲೆಕ್ಟ್ರಾನಿಕ್ ಮಾಧ್ಯಮವನ್ನು ಬಳಸಿಕೊಳ್ಳುತ್ತಿದೆ. ಜಗತ್ತಿನ ಅನೇಕ ಭಾಷೆಗಳ ಮುಖ್ಯ ಲೇಖಕರ ಬರವಣಿಗೆಗಳು ಈಗ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಲಭ್ಯವಾಗಿವೆ. ಅಕಾಡೆಮಿ ಕನ್ನಡ ಸಾಹಿತ್ಯದ ಪ್ರಚಾರಕ್ಕಾಗಿ ಕನ್ನಡ ಭಾಷೆಯ ಸಾಹಿತ್ಯವನ್ನು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ತರುವ ಕೆಲಸದಲ್ಲಿ ಮುತುವರ್ಜಿ ವಹಿಸಿದಂತೆ ಕಾಣುವುದಿಲ್ಲ. ಹಿಂದೆ ಪತ್ರಿಕೆ ಮತ್ತು ಪುಸ್ತಕಗಳ ಮೂಲಕ ಮಾತ್ರ ಪ್ರಸಾರವಾಗುತ್ತಿದ್ದ ಸಾಹಿತ್ಯ ಇಂದು ಸಾಮಾಜಿಕ ತಾಣಗಳೆಂಬ ಮಾಧ್ಯಮಗಳಲ್ಲೂ ಲಭ್ಯವಾಗಿವೆ. ಇವುಗಳನ್ನು ಪರಿಗಣಿಸುವ ಗೋಜಿಗೇ ಅಕಾಡೆಮಿ ಹೋಗಿಲ್ಲ. ಇದರಿಂದ ಅಕಾಡೆಮಿ ಬಹುಮುಖ್ಯ ವಾಹಿನಿಯೊಂದರಿಂದ ಅಕಾಡೆಮಿ ತನ್ನನ್ನು ತಾನೇ ದೂರ ಮಾಡಿಕೊಂಡಿದೆ. ನನಗೆ ತಿಳಿದಂತೆ ಅಕಾಡೆಮಿ ಫೇಸ್ ಬುಕ್, ಬ್ಲಾಗ್ ಇತ್ಯಾದಿ ಮಾಧ್ಯಮಗಳನ್ನು ಬಳಸುತ್ತಲೇ ಇಲ್ಲ. 


ಪುಸ್ತಕ ಪ್ರಕಟಣೆಗಳು 

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಕಟಣೆಗಳನ್ನು ಕುರಿತು ಅಕಾಡೆಮಿಯ ವೆಬ್ ತಾಣದಲ್ಲಿ ಇರುವ ಮಾಹಿತಿಯನ್ನು ಪರಿಶೀಲಿಸಿದಾಗ ನನಗೆ ಕಂಡ ಲೋಪ ದೋಷಗಳನ್ನು ಇಲ್ಲಿ ದಾಖಲಿಸಿದ್ದೇನೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಕರ್ನಾಟಕ ಸರಕಾರದ ಅನುದಾನದಿಂದ ನಡೆಯುವ ಸಂಸ್ಥೆ.  ಅಕಾಡೆಮಿಯ ವೆಬ್ ತಾಣ ಮತ್ತು ಅದರ ಚಟುವಟಿಕೆಗಳನ್ನು ಗಮನಿಸಿದರೆ ಅವರಿಗೆ ಸಾಕಷ್ಟು ಅನುದಾನ ಇಲ್ಲವೋ ಅಥವಾ ಸಾಕಷ್ಟು ಸಿಬ್ಬಂದಿ ಇಲ್ಲವೋ ಎನ್ನುವ ಅನುಮಾನ ಬರುತ್ತದೆ. ಒಬ್ಬರು ಬರೆದು ಕೊಟ್ಟ/ಟೈಪ್ ಮಾಡಿಕೊಟ್ಟ ಮಾಹಿತಿ ವೆಬ್ ತಾಣದಲ್ಲಿ ಬರುವವರೆಗೆ ಅನೇಕ ಲೋಪದೋಷಗಳು ನುಸುಳುವ ಸಂಭವವಿರುತ್ತದೆ. ವೆಬ್ ತಾಣ ಸಿದ್ಧವಾದ ಮೇಲೆ ಅದನ್ನು ಪರಿಶೀಲಿಸುವ ಅಗತ್ಯವಿರುತ್ತದೆ. ಅಕಾಡೆಮಿ ಈ ಕೆಲಸ ಮಾಡುತ್ತಿಲ್ಲ.  ಕಾಗುಣಿತದ ತಪ್ಪುಗಳು, ಅರೆಬರೆ ಮಾಹಿತಿ ಇವು ಅಕಾಡೆಮಿಯ ವೆಬ್ ತಾಣದಲ್ಲಿ ಇರಬಾರದು. ವೆಬ್ ತಾಣವನ್ನು ಪರಿಶೀಲಿಸುವ ಜವಾಬ್ದಾರಿ ಅಕಾಡೆಮಿಯದೇ. ಹಿಂದೆ ಟೈಪ್ ಮಾಡಿಸಿದಾಗ ಹೇಗೆ ಅದರಲ್ಲಿ ದೋಷಗಳನ್ನು ಹುಡುಕಿ ಸರಿಪಡಿಸಿಕೊಳ್ಳುತ್ತಿದ್ದೆವೋ ಹಾಗೇ ಇಂದು ವೆಬ್ ತಾಣವನ್ನೂ ತಪ್ಪಿಲ್ಲದೆ ಇಟ್ಟುಕೊಳ್ಳುವ ಹೊಣೆ ವೆಬ್ ತಾಣವನ್ನು  ಸೃಷ್ಟಿಸಿದ ಸಂಸ್ಥೆಯದೇ.  ಆಗಾಗ ವೆಬ್ ತಾಣದಲ್ಲಿರುವ ಮಾಹಿತಿಯನ್ನು ಪುನರ್ ಪರಿಶೀಲಿಸಿ ಹಳೆಯ ಮಾಹಿತಿಯನ್ನು ತೊಡೆದುಹಾಕುವ/ತಿದ್ದುವ ಕೆಲಸವೂ ನಡೆಯಬೇಕು. ಅಕಾಡೆಮಿಯವರು ಸ್ವತಃ ತಮ್ಮ ವೆಬ್ ತಾಣವನ್ನು ನೋಡಿದಂತೆ ಕಾಣುತ್ತಿಲ್ಲ! ಉದಾಹರಣೆಗೆ ವಾರ್ತಾ ಪ್ರಕಟಣೆಗಳಲ್ಲಿ 2014ರ ಕಾವ್ಯ ಸಪ್ತಾಹದ ಮಾಹಿತಿ ಇದೆ - ಇದು ಕೂಡಾ ಅಪೂರ್ಣವಾಗಿದೆ (ಇಲ್ಲಿ ನೋಡಿ).

ಕಾಗುಣಿತ  ಮೊದಲಾದ ದೋಷಗಳು 

ನನಗೆ ಕಂಡ ಕೆಲವು ಕಾಗುಣಿತದ/ವ್ಯಾಕರಣದ ತಪ್ಪುಗಳನ್ನು ಇಲ್ಲಿ ಕೊಡುತ್ತಿದ್ದೇನೆ -

  1. ಸಂಸ್ಕ್ರತಿ [ಇದು ಇಲ್ಲಿದೆ -  ಸಂಸ್ಕೃತಿ ಎಂದಿರಬೇಕು] 
  2. ಸಂಸ್ಕøತಿ [ಇದು ಇಲ್ಲಿದೆ]
  3. ಉಪಹಾರ [ಇದು ಇಲ್ಲಿದೆ - ಉಪಾಹಾರ ಎಂದಿರಬೇಕು]
  4.  ಪತ್ರಿಕೆ [ಇದು ಅನೇಕ ಕಡೆ ಇದೆ - ಉದಾಹರಣೆಗೆ ಇಲ್ಲಿ. ಆಹ್ವಾನಪತ್ರಿಕೆ ಎಂದಿರಬೇಕು]
  5. ನೆಲದ ಮರೆಯ ನಿಧಾನ - ಇದು ಇಲ್ಲಿದೆ ಮತ್ತು ಇಲ್ಲಿದೆ - ನನಗೆ ತಿಳಿದಂತೆ ಇದು ನೆಲದ ಮರೆಯ ನಿದಾನ ಎಂದಿರಬೇಕು]
  6. ಪ್ರಕಟಣೆ ಎನ್ನುವ ಪದವನ್ನು "ನೋಟೀಸ್" ಎಂಬ ಅರ್ಥದಲ್ಲಿ ಬಳಸಲಾಗಿದೆ. ಇದು ಗೊಂದಲ ಸೃಷ್ಟಿಸುತ್ತಿದೆ. ಪ್ರಕಟಣೆ ಎಂದರೆ ಪುಸ್ತಕದ ಪ್ರಕಟಣೆ ಎನ್ನುವ ಅರ್ಥ ಹೊಮ್ಮಬಹುದು. "ವಾರ್ತಾ ಪ್ರಕಟಣೆ" ಅಥವಾ "ಸುತ್ತೋಲೆ" ಎನ್ನುವುದು ಸೂಕ್ತ. 
  7. ವೀಡಿಯೋ (ಅನೇಕ ಕಡೆ ಇದೆ - ಇದು ವಿಡಿಯೋ ಎಂದಿರಬೇಕು.)
  8. ರಜಾಜಿ  (ಇದು ರಾಜಾಜಿ ಇರಬಹುದೇ? ಇಲ್ಲಿ ನೋಡಿ.)
  9. ಅಕಾಸೆಮಿ (ಇಲ್ಲಿ ನೋಡಿ)
  10. ಕ್ಲಕ್ಕಿಸಿದರೆ (ಇಲ್ಲಿ ನೋಡಿ)

ಇನ್ನಿತರ ದೋಷಗಳು 

  1. ಕವಿಗಳ ಸ್ವಂತ ಕವನಗಳ ವಾಚನವನ್ನು ಧ್ವನಿಮುದ್ರಿಸಿ ವೆಬ್ ತಾಣದಲ್ಲಿ ಹಾಕಲಾಗಿದೆ. ಇದು ಒಳ್ಳೆಯ ಕೆಲಸವೇನೋ ನಿಜ. ಆದರೆ ಇಲ್ಲಿ ಕವಿಗಳನ್ನು ಆಯ್ಕೆ ಮಾಡಿದ್ದು ಹೇಗೆ ಎನ್ನುವ ಬಗ್ಗೆ, ಕವಿಗಳ ಬಗ್ಗೆ ಸ್ವಲ್ಪವೂ ಮಾಹಿತಿ ಇಲ್ಲ.  ಯಾರಾದರೂ ಈ ವೆಬ್ ತಾಣವನ್ನು ನೋಡಿದರೆ ಕನ್ನದಲ್ಲಿ ಇವರು ಮಾತ್ರ ಮುಖ್ಯ ಕವಿಗಳು ಎನ್ನುವ ಅನುಮಾನ ಬರುತ್ತದೆ. ರಾಜರತ್ನಂ, ಮಾಸ್ತಿ, ಕಾರಂತ, ವಿ.ಸೀ., ಡಿವಿಜಿ, ... ಇವರು ಯಾರೂ ಇಲ್ಲಿಲ್ಲ. 
  2. ಪಟ್ಟಿ ತಯಾರಿಸುವಾಗ ಯಾವ ರೀತಿ ಜೋಡಿಸಲಾಗಿದೆ? ಕವಿಗಳ  ವಯಸ್ಸಿಗೆ ಅನುಗುಣವಾಗಿಯೇ? ಇದನ್ನು ಸ್ಪಷ್ಟ ಪಡಿಸಬೇಕು. ಅಕಾರಾದಿಯಾಗಿ ಜೋಡಿಸುವುದು ಸೂಕ್ತ. 
  3. ಈಗ ನಮ್ಮೊಡನೆ ಇಲ್ಲದವರ ಹೆಸರಿನ ಮುಂದೆ "ದಿವಂಗತ" ಎಂದು ಜೋಡಿಸಬೇಕು. 
  4. ಜಿ.ಎಸ್.ಎಸ್. ಈಗ ರಾಷ್ಟ್ರಕವಿಗಳಲ್ಲ.
  5.   ಪ್ರಶಸ್ತಿ ಎಂಬ ಪುಟದಲ್ಲಿ ಅಕಾಡೆಮಿ ಕೊಡುವ ಪ್ರಶಸ್ತಿ ಮುಖ್ಯ - ಜ್ಞಾನಪೀಠ ಇತ್ಯಾದಿ ಪ್ರಶಸ್ತಿಗಳ ಮಾಹಿತಿಯನ್ನು ಆ ಪ್ರಶಸ್ತಿ ನೀಡುವವರು ತಮ್ಮ ವೆಬ್ ತಾಣದಲ್ಲಿ ಹಾಕಿರುತ್ತಾರೆ. .ಬೇಕೆಂದರೆ ಲಿಂಕ್ ಕೊಡಬಹುದು.
  6. ಸಾಹಿತಿಗಳ ವಿಳಾಸ ಕೊಡುವಾಗ ಯಾವ ಕ್ರಮದಲ್ಲಿ ಸಾಹಿತಿಗಳ ಪಟ್ಟಿಯನ್ನು ಮಾಡಲಾಗಿದೆ? ಅಕಾರಾದಿ ಸೂಕ್ತ. (ಪಟ್ಟಿ ಇಲ್ಲಿದೆ)
  7. ಸಾಹಿತಿಗಳ ಜಿಲ್ಲಾವಾರು ವಿಳಾಸ ಎನ್ನುವ ಕಡೆ ಇರುವುದು ಜಿಲ್ಲೆಗಳ ಎಸ್ ಟಿ ಡಿ ಕೋಡ್. (ಇಲ್ಲಿ ನೋಡಿ)
  8. ಸಾಲುದೀಪಗಳು ಎನ್ನುವ ಲಿಂಕ್ ಇದೆ - ಇದು ಏನು ಎಂದು ಗೊತ್ತಾಗಬೇಕಾದರೆ ಅದನ್ನು ಕ್ಲಿಕ್ ಮಾಡದೇ ದಾರಿಯಿಲ್ಲ. ಅಲ್ಲಿ ಹೋದರೆ ಅನೇಕ ಹಿರಿಯ ಲೇಖಕರ ಪಟ್ಟಿ ಇದೆ. ಅಲ್ಲಿ ಅವರ ಫೋಟೋ ಇದೆ. ಲೇಖನ ಇತ್ಯಾದಿ ಬರಹ ಕಾಣಿಸಿದರೂ ಅಲ್ಲಿ ಲಿಂಕ್ ಇಲ್ಲ - ಉದಾಹರಣೆಗೆ ಇಲ್ಲಿ ನೋಡಿ
  9. ಅಕಾಡೆಮಿ ವಾರ್ತೆಗಳು - ವಾರ್ತೆಗಳಿಗೂ ಪ್ರಕಟನೆಗಳಿಗೂ ಏನು ವ್ಯತ್ಯಾಸ? ವಾರ್ತೆಗಳು ಎಂಬ ಲಿಂಕ್ ಒತ್ತಿದರೆ 2011ರ ಪ್ರಶಸ್ತಿಗಳ ವಿವರ ಸಿಕ್ಕುತ್ತದೆ - ಈ ವೆಬ್ ಪುಟವನ್ನು ಅಪ್ಡೇಟ್ ಮಾಡಿಲ್ಲ! 
  10. ಸಾಹಿತಿಗಳ ವಿಳಾಸ ಬೇರೆ ಕೊಟ್ಟು ಅವರ ಫೋನ್ ಸಂಖ್ಯೆ ಬೇರೆ ಕೊಡುವುದು ಯಾಕೆ? (ಇಲ್ಲಿ ನೋಡಿ)  ಮಾಹಿತಿ ಹುಡುಕುವುದು ಇದರಿಂದ ತೊಡಕಾಗುತ್ತದೆ. 

ಅಕಾಡೆಮಿಯ ಪುಸ್ತಕಗಳು 

ಅಕಾಡೆಮಿ ಈಗಾಗಲೇ ನೂರಾರು ಪುಸ್ತಕಗಳನ್ನು ಪ್ರಕಟಿಸಿದೆ. ಆದರೆ ಈಚೆಗೆ ಪುಸ್ತಕಗಳ ಪ್ರಕಟಣೆ ನಿಂತಂತೆ ತೋರುತ್ತದೆ. ವೆಬ್ ತಾಣದಲ್ಲಿ 1998ರ ನಂತರ ಪುಸ್ತಕ ಪ್ರಕಟಣೆಗಳು ಕಾಣಲಿಲ್ಲ. 

ವಿಶೇಷ ಕೃತಿಗಳು - ಮೊದಲ ಎರಡು ಕೃತಿಗಳ ಲೇಖಕರು/ಸಂಪಾದಕರು ಯಾರು? ಅವು ಇನ್ನೂ ಲಭ್ಯವಾಗಿವೆಯೇ? ರೂ 3/- ಎಂದು ಬೆಲೆ ತೋರಿಸಲಾಗಿದೆ. ಇಂದೂ ಅದೇ ಬೆಲೆಗೆ ಲಭ್ಯವೆ?  "ಎ ಸ್ಟ್ರಿಂಗ್ ಆಫ್ ಪರ್ಲ್ಸ್" - ಇಲ್ಲಿ ಇಂಗ್ಲಿಷ್ ಕಾಗುಣಿತ ದೋಷ ಸರಿಪಡಿಸಿ. ಕೆಲವು ಪುಸ್ತಕಗಳ ಬೆಲೆ ಹಾಕಿಲ್ಲ. ಎಲ್ಲಾ ಪುಸ್ತಕಗಳ ಪ್ರಕಟಣೆಯ ವರ್ಷ ತೋರಿಸಬೇಕು.  ಈ ಕಡತವನ್ನುಯಾವತ್ತು ಸಿದ್ಧ ಪಡಿಸಲಾಯಿತು ಎನ್ನುವುದನ್ನು ನಮೂದಿಸಬೇಕು - ಇದು ಎಲ್ಲಾ ಕಡತಗಳಿಗೂ ಅನ್ವಯವಾಗುವ ಮಾತು.

ವಾರ್ಷಿಕ ಕಥಾ ಸಂಕಲನಗಳು - ಇದು ವಾರ್ಷಿಕ ಕಾರ್ಯಕ್ರಮವಾಗಿದ್ದಂತೆ ತೋರುವುದಿಲ್ಲ. "ಅಚ್ಚಿನಲ್ಲಿ" ಎಂದು ತೋರಿಸಲಾದ ಪುಸ್ತಕಗಳ ವರ್ಷ 1997 ಎಂದಿದೆ! ಇದಾದ ನಂತರ ಕಥಾ ಸಂಕಲನಗಳು ಯಾಕೆ ಬಂದಿಲ್ಲವೆಂದು ಗೊತ್ತಾಗಲಿಲ್ಲ.

ವಾರ್ಷಿಕ ಕವಿತಾ ಸಂಕಲನಗಳು - 1998 ಆದಮೇಲೆ ಕವನ ಸಂಕಲನಗಳು ಯಾಕೆ ಹೊರಬರಲಿಲ್ಲ? 1979 ಸಂಕಲನವನ್ನು ಯಾಕೆ ಕೊನೆಯಲ್ಲಿ ಕೊಟ್ಟಿದೆ? ಮಾಲತಿ ಪಟ್ಟಣಶೆಟ್ಟಿ ಮತ್ತು ಸವಿತಾ ನಾಗಭೂಷಣ ಅವರು ಸಂಪಾದಿಸಿದ ಸಂಕಲನಗಳ ವರ್ಷ ನಮೂದಿಸಿಲ್ಲ.

ವಿನೋದ ಸಾಹಿತ್ಯ - 1997 ಮತ್ತು 1998 ಸಂಕಲನಗಳು ಇನ್ನೂ ಅಚ್ಚಿನಲ್ಲಿರಲು ಸಾಧ್ಯವಿಲ್ಲ. ಇದಾದ ನಂತರ ಸಂಕಲನಗಳು ಬರಲಿಲ್ಲವೇ?

ಮಕ್ಕಳ ಸಾಹಿತ್ಯ - ಮೇಲೆ ಹೇಳಿದ ಎರಡೂ ವಿಷಯಗಳು ಇಲ್ಲೂ ಅನ್ವಯ

ವಿಚಾರ ಸಾಹಿತ್ಯ - 1998 ನಂತರ ಯಾವ ಪ್ರಕಟನೆಯೂ ಇಲ್ಲ. 1998ರ ಪ್ರಕಟಣೆ ಇನ್ನೂ ಅಚ್ಚಿನಲ್ಲಿದೆಯೇ? ವಿಚಾರ ಸಾಹಿತ್ಯದಲ್ಲಿ ಈ ವರ್ಷ ಪ್ರಶಸ್ತಿ ಪಡೆದ ಶ್ರೀ ಭಗವಾನ್ ಅವರ ಯಾವ ಲೇಖನಗಳು ಅಚ್ಚಾಗಿವೆ?


ವಿಚಾರ ಸಂಕಿರಣಗಳ ಸಂಗ್ರಹ - ಇಲ್ಲಿ ಪ್ರಕಟವಾದ ವರ್ಷ ಎಲ್ಲೂ ಕೊಟ್ಟಿಲ್ಲ. ಅನೇಕ ಕೃತಿಗಳಿಗೆ ಸಂಪಾದಕರ ಹೆಸರಿಲ್ಲ - ವಿವಿಧ ಲೇಖಕರು ಎಂದು ತೋರಿಸಿದೆ. ಇದು ತಪ್ಪು. ಅನೇಕ ಲೇಖಕರ ಪ್ರಬಂಧಗಳು ಇದ್ದರೂ ಸಂಪಾದಕರೊಬ್ಬರು ಇರಬೇಕು.

ಸಾಮಾಜಿಕ ಚಿಂತನ - ಈ ಮಾಲೆಯಲ್ಲಿ ಚಿಂತಕರ ಬಗ್ಗೆ ಪುಸ್ತಕಗಳಿವೆ. ಹೀಗಾಗಿ "ಸಾಮಾಜಿಕ ಚಿಂತಕ" ಎನ್ನುವುದು ಮಾಲೆಗೆ ಒಪ್ಪುವ ಹೆಸರು. ಇಲ್ಲೂ ಪ್ರಕಟಣೆಯ ವರ್ಷ ಕೊಟ್ಟಿಲ್ಲ.


ಜ್ಞಾನಪೀಠ ಪ್ರಶಸ್ತಿವಿಜೇತರ ಕುರಿತ ಪುಸ್ತಕಮಾಲೆ - ಗೋಕಾಕ್ ನಂತರ ಯಾರ ಬಗ್ಗೆಯೂ ಪುಸ್ತಕಗಳು ಪ್ರಕಟಿಸಿಲ್ಲ.


ಅಂತರ್-ಶಿಸ್ತೀಯ ಅಧ್ಯಯನ - "ಸಿಸ್ತೀಯ" ಎಂಬ ಕಾಗುಣಿತ ದೋಷ ಸರಿಪಡಿಸಿ. ಪುಸ್ತಕ ಪ್ರಕಟವಾದ ವರ್ಷ ಯಾವುದು ಎಂದು ತಿಳಿಸಿ.  ಇಂಥ ಅಧ್ಯಯನವನ್ನು ಒಮ್ಮೆ ಮಾಡಿ ಮುಗಿಸುವುದು ಸಾಧ್ಯವಿಲ್ಲ.  ಪುಸ್ತಕ ಪ್ರಕಟವಾದ ನಂತರ ಅನೇಕ ಬೆಳವಣಿಗೆಗಳು ನಡೆಯುತ್ತವೆ - ಇವನ್ನು ದಾಖಲಿಸಲು ಇನ್ನಷ್ಟು ಪುಸ್ತಕಗಳನ್ನು ಮಾಲೆಗೆ ಜೋಡಿಸುವ ಅಗತ್ಯವಿದೆ.  ಎಚ್ ವಿ ನಾಗೇಶ್ ಅವರು ಬರೆದ ಪುಸ್ತಕದ ಹೆಸರು "ಸಾಹಿತ್ಯ ಮತ್ತು " ಎಂದಿದೆ.

ಹಳ್ಳಿಯ ಅಧ್ಯಯನ - ಇಲ್ಲಿ ಎರಡೇ ಕೃತಿಗಳಿವೆ. ಇದನ್ನು ಮಾಲೆ ಎನ್ನಲು ಸಂಕೋಚವಾಗುತ್ತದೆ.  ಮಾಲೆಯ ಉದ್ದೇಶವೂ ಸ್ಪಷ್ಟವಾಗಿಲ್ಲ.

ಪ್ರವಾಸ ಸಾಹಿತ್ಯ - ಭಾರತದ ಪ್ರತಿಯೊಂದು ರಾಜ್ಯದ ಬಗ್ಗೆ ಕೂಡಾ ಇಲ್ಲಿ ಪುಸ್ತಕಗಳಿಲ್ಲ.

ಕನ್ನಡ ಸಾಹಿತ್ಯ ಕಾಲು ಶತಮಾನ - ಈ ಮಾಲೆಯ ಉದ್ದೇಶವೂ ಅರ್ಥವಾಗದು. ಕಾಲು ಶತಮಾನ ಅಂದರೆ ಕೇವಲ 25 ವರ್ಷಗಳು. ಇರುವ ಮೂರೇ ಕೃತಿಗಳು ಮಕ್ಕಳ ಸಾಹಿತ್ಯ ಮತ್ತು ಹಾಸ್ಯ ಸಾಹಿತ್ಯಕ್ಕೆ ಸಂಬಂಧ ಪಟ್ಟಿವೆ.


ಮುತ್ತಿನ ಹಾರ - ಈ ಮಾಲೆಯ ಹೆಸರು ಸರಿಯಾಗಿಲ್ಲ. ಇದು ಕನ್ನಡದ ಬರಹಗಾರರನ್ನು ಕುರಿತ ಮಾಲೆ. ಇಲ್ಲಿ ಪುಸ್ತಕಗಳನ್ನು ಅವುಗಳ ಶೀರ್ಷಿಕೆಯ ಅಕಾರಾದಿಯಲ್ಲಿ ತೋರಿಸಿದರೆ ಅನುಕೂಲ.  ಈ ಮಾಲೆಯಲ್ಲಿ ಸಾಕಷ್ಟು ಪುಸ್ತಕಗಳಿವೆ, ಸಂತೋಷದ ವಿಷಯ.

ಕಮ್ಮಟಗಳು - ಕಮ್ಮಟ (ವರ್ಕ್ ಶಾಪ್) ಮತ್ತು ಸಂಕಿರಣ (ಕಾನ್ಫರೆನ್ಸ್) ಇವುಗಳನ್ನು ಬೇರ್ಪಡಿಸುವ ಅಗತ್ಯ ಇದೆಯಾ?  ಈ ಮಾಲೆಯಲ್ಲಿ ಕೆಲವೇ ಪುಸ್ತಕಗಳಿವೆ.

ಮರೆಯಲಾಗದ ಬರಹಗಾರರು - ಈ ಮಾಲೆಯ ಉದ್ದೇಶ ಮತ್ತು "ಮುತ್ತಿನಹಾರ" ಮಾಲೆಯ ಉದ್ದೇಶ ಭಿನ್ನವಲ್ಲ. ಬೇರೆ ಮಾಲೆಯ ಅಗತ್ಯವೇನಿದೆ?

ಪರಿಭಾಷಿಕ - ಇದು "ಪಾರಿಭಾಷಿಕ" ಎಂದಿರಬೇಕಾಗಿತ್ತು ಅಲ್ಲವೇ? ಇಲ್ಲಿ ಕೂಡಾ ಕೆಲವು ಪುಸ್ತಕಗಳನ್ನು ಬರೆಸಿ ಅಲ್ಲಿಗೇ ಮುಕ್ತಾಯ ಹಾಡಲು ಸಾಧ್ಯವಿಲ್ಲ. ಈ ಪುಸ್ತಕಗಳನ್ನು ಅಪ್ ಡೇಟ್ ಮಾಡುವುದು ಅಗತ್ಯ.

ಕನ್ನಡ ಸಾಹಿತ್ಯ ಪುನರ್ ಮೌಲ್ಯೀಕರಣ - ಪುಸ್ತಕದ ಸಂಪಾದಕರ ಹೆಸರಿಲ್ಲ. ಈ ಪುಸ್ತಕಗಳ ಪ್ರಕಟನೆಯ ವರ್ಷ ಇಲ್ಲ. ಪುನರ್ ಮೌಲ್ಯೀಕರಣ ಮತ್ತೆ ಮತ್ತೆ ಆಗಬೇಕು - ಒಮ್ಮೆ ಮಾತ್ರ ಅಲ್ಲ.

ನಿರ್ಣಯಗಳು 

ಅಕಾಡೆಮಿ ವೆಬ್ ತಾಣವನ್ನು ಸರಿಯಾಗಿಟ್ಟುಕೊಳ್ಳಲು ಶ್ರಮಿಸಬೇಕಾದ ಅಗತ್ಯವಿದೆ. ಇಂದು ಬಹಳಷ್ಟು ಜನ ವೆಬ್ ಮೂಲಕವೇ ಮಾಹಿತಿ ಪಡೆಯುತ್ತಾರೆ. ಕಾಗುಣಿತ ದೋಷಗಳನ್ನು ಕೂಡಲೇ ಸರಿಪಡಿಸಬೇಕು. ಉಳಿದ ಲೋಪದೋಷಗಳನ್ನು ಸರಿಪಡಿಸಲು ಒಂದೆರಡು ತಿಂಗಳು ಬೇಕಾಗಬಹುದು. ಈ ಕೆಲಸ ಬೇಗ ಆಗಲೆಂದು ಆಶಿಸುತ್ತೇನೆ.  ಇದಕ್ಕಿಂತ ಹೆಚ್ಚಿನ ಕೆಲಸ ಒಂದಿದೆ. ಅಕಾಡೆಮಿ ಕನ್ನಡ ಸಾಹಿತ್ಯಕ್ಕೆ ಸಂಬಂಧ ಪಟ್ಟ ಅತ್ಯಂತ ದೊಡ್ಡ ಸಂಸ್ಥೆ  - ತಮ್ಮ ವೆಬ್ ಪುಟಕ್ಕೆ ಬಂದವರಿಗೆ ಅವರು ಕನ್ನಡ ಸಾಹಿತ್ಯದ ಬಗ್ಗೆ ಉತ್ಸಾಹ ಮೂಡುವಂತೆ ವಿನ್ಯಾಸ ಮಾಡಬೇಕು, ಮಾಹಿತಿಯನ್ನು ಕಲೆ ಹಾಕಬೇಕು. ಇದೇ ವೆಬ್ ಪುಟವನ್ನು ಇಂಗ್ಲಿಷ್ ಭಾಷೆಯಲ್ಲಿ ಓದುವಂತೆ ಅನುಕೂಲ ಮಾಡಿಕೊಡಬೇಕು - ಆಗ ಕನ್ನಡೇತರರು ಕೂಡಾ ಮಾಹಿತಿ ಪಡೆಯಲು ಸಾಧ್ಯ.


  

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)