ನೆನಪುಗಳ ಹಕ್ಕುಸ್ವಾಮ್ಯ


- ಸಿ ಪಿ ರವಿಕುಮಾರ್ 

ಈಚೆಗೆ ಒಂದು ಕನ್ನಡ ಲೇಖನವನ್ನು ಯಾರೋ ಓದಲು ಕಳಿಸಿದರು. ಅದನ್ನು ಬರೆದ ಲೇಖಕರ ಬಗ್ಗೆ ನನಗೆ ಗೌರವವಿದೆ. ಅವರನ್ನು X ಎಂದು ಕರೆಯೋಣ. ಲೇಖನ ಓದುವಾಗ ಒಂದು ವಿಷಯ ನೆನಪಿಗೆ ಬಂತು. ಗೋಪಾಲಕೃಷ್ಣ ಅಡಿಗರ ಜನ್ಮದಿವಸದ ಸಂದರ್ಭದಲ್ಲಿ ಈ ಲೇಖಕರು ಒಂದು ಲೇಖನ ಬರೆದರು.  ಇದರಲ್ಲಿ ಅವರು ಅಡಿಗರು ಕನ್ನಡದ ಇನ್ನೊಬ್ಬ ಹೆಸರಾಂತ ಕವಿಗಳಾದ ನರಸಿಂಹಸ್ವಾಮಿ ಅವರ ಬಗ್ಗೆ ತಮಗೆ ಸ್ವಂತವಾಗಿ ಹೇಳಿದ್ದನ್ನು ಕುರಿತಾಗಿ ಬರೆದಿದ್ದರು.  ಲೇಖಕ X ಮಾಡಿದ್ದು ತಪ್ಪು ಎಂದೇ ನನ್ನ ಅನ್ನಿಸಿಕೆ.  ಅವರ ಲೇಖನದಲ್ಲಿರುವ ವಿಷಯ ತಿಳಿದುಕೊಂಡು ನಾವು ಯಾರೂ ಶ್ರೀಮಂತರಾಗಲಿಲ್ಲ, ತಿಳಿಯದಿದ್ದರೆ ನಾವು ಬಡವರೂ ಆಗುತ್ತಿರಲಿಲ್ಲ.  ಅಡಿಗರು ಬಹಿರಂಗವಾಗಿ ಹೇಳಬೇಕಾದ ವಿಷಯಗಳನ್ನು ಕುರಿತು ಬರೆದೇ ಇದ್ದಾರೆ. ಅವರ "ಪುಷ್ಪಕವಿಯ ಪರಾಕು" ಕವನವೇ ಇದೆ.  ಒಬ್ಬ ಕವಿಯ ಮನಸ್ಸಿನಲ್ಲಿ ನೂರಾರು ಭಾವನೆಗಳು ಏಳಬಹುದು. ಅವನ್ನೆಲ್ಲಾ ಅವನು ಬರೆದಿಡುವುದಿಲ್ಲ. ಹಾಗೆ ಅನಿಸಿದ್ದನ್ನೆಲ್ಲಾ ಬರೆದರೆ ಅವನು ಲೇಖಕನಾಗುವುದೂ ಇಲ್ಲ.  ಅವನ ಮನಸ್ಸಿನಲ್ಲಿದ್ದ ಒಂದು ಅಪಕ್ವ ಭಾವನೆ ಸಂಭಾಷಣೆಯಲ್ಲಿ  ತುಳುಕಿದರೆ ಅದನ್ನು ನೆನಪಿಟ್ಟುಕೊಂಡು ಜಗತ್ತಿಗೆ ಜಾಹೀರು ಮಾಡುವುದು ಕೂಡಾ ಸರಿಯಲ್ಲ.  ಲೇಖಕ X ಬೇರೆ ಯಾರಲ್ಲೂ ತಮ್ಮ ಮಾತನ್ನು ಪುನರಾವರ್ತಿಸುವುದಿಲ್ಲ ಎಂಬ ನಂಬಿಕೆ ಅಡಿಗರಿಗೆ ಇದ್ದರೆ ಅದು ಸುಳ್ಳಾಯಿತು. ತಮ್ಮ ನಿಲುಮೆಯನ್ನು ಸಮರ್ಥಿಸಿಕೊಳ್ಳಲು ಅಡಿಗರು ಬದುಕಿಲ್ಲ.  ಅಡಿಗರು ಹಾಗೆ ಹೇಳಿದರು ಎಂಬುದಕ್ಕೆ ಪುರಾವೆಯನ್ನು ಕೂಡಾ ಯಾರೂ ಒದಗಿಸಲಾರರು.   ಒಬ್ಬ ಪ್ರಸಿದ್ಧ ನಟ ಬೆಳಬೆಳಗ್ಗೆ ಯಾವ ಮೇಕಪ್ ಇಲ್ಲದೆ ಓಡಾಡುವಾಗ ಅವನ ಫೋಟೋ ತೆಗೆದು ಎಲ್ಲರೊಂದಿಗೆ ಹಂಚಿಕೊಂಡರೆ ಅದಕ್ಕೆ ಸಹಸ್ರಾರು ಲೈಕುಗಳು ಖಂಡಿತಾ ಬರುತ್ತದೆ.  ಆದರೆ ಅದರಿಂದ ನಟನಿಗೆ ಏನು ಸಿಕ್ಕಿತು? ಸ್ಟೀವ್ ಜಾಬ್ಸ್ ತನ್ನ ಕೊನೆಯ ದಿನಗಳನ್ನು ಕಳೆಯುತ್ತಿದ್ದಾಗ ತೆಗೆದ ಒಂದು ಫೋಟೋ ಈಗ ಹರಿದಾಡುತ್ತಿದೆ. ಇದು ಕೂಡಾ ವಾಯರಿಸಂನ ಒಂದು ಬಗೆ, ಅಷ್ಟೇ.

ಕನ್ನಡದ ಇನ್ನೊಬ್ಬ ಲೇಖಕರ ಆತ್ಮಕಥೆಯಲ್ಲಿ ಈ ಸಂದರ್ಭ ಬರುತ್ತದೆ. ಇದನ್ನು ನೆನಪಿನಿಂದ ಬರೆಯುತ್ತಿದ್ದೇನೆ. ಈ ಲೇಖಕರನ್ನು  Y ಎಂದು ಕರೆಯೋಣ.  ಅವರು ಅಮೆರಿಕಾಗೆ ಹೋದಾಗ ಅಲ್ಲಿಯ ಪ್ರಸಿದ್ಧ ಕವಿಯೊಬ್ಬನ (ಸ್ವಂತ) ಬರಹಗಳನ್ನು  ವೀಕ್ಷಿಸಲು ಅನುಮತಿ ಪಡೆದುಕೊಳ್ಳುತ್ತಾರೆ. ಈ ಬರಹಗಳನ್ನು ಓದಲು ಸಾರ್ವಜನಿಕರಿಗೆ ಅನುಮತಿ ಇಲ್ಲ. ಆದರೆ Y ಅವರ ವಿಶೇಷ ಆಸಕ್ತಿಯನ್ನು ಗಮನಿಸಿ ಅವರಿಗೆ ಅನುಮತಿ ನೀಡಲಾಗುತ್ತದೆ. Y ಅವುಗಳಲ್ಲಿ ಕೆಲವು ಭಾಗಗಳನ್ನು ಕಾಪಿ ಮಾಡಿಕೊಳ್ಳುತ್ತಾರೆ.  ಮುಂದೆ ಎರಡು ಘಟನೆಗಳು ನಡೆಯುತ್ತವೆ - (1) "ನಿಮಗೆ ನಾವು ಕಾಪಿ ಮಾಡಲು ಅನುಮತಿ ನೀಡಬಾರದಾಗಿತ್ತು, ದಯವಿಟ್ಟು ನಿಮ್ಮ ಪ್ರತಿಯನ್ನು ಯಾವುದಕ್ಕೂ ಬಳಸಬೇಡಿ" ಎಂಬ ಪತ್ರ Y ಅವರಿಗೆ ಬರುತ್ತದೆ. (2) ಲೇಖಕ Y ತಮ್ಮ ಬಳಿ ಇದ್ದ ಕಾಪಿಯನ್ನು  ತಮ್ಮ ಪರಿಚಯದ ಕೆಲವರೊಂದಿಗೆ  "ಇದನ್ನು ಯಾರಿಗೂ ಹಂಚಬೇಡಿ," ಎಂಬ ಎಚ್ಚರಿಕೆಯ ನುಡಿ ಹೇಳಿ ಹಂಚಿಕೊಳ್ಳುತ್ತಾರೆ.  ತಮಗೆ ಇಲ್ಲದ ಹಕ್ಕನ್ನು ಲೇಖಕ Y ಚಲಾಯಿಸಿರುವುದು ಕಾಣುತ್ತದೆ.

ಇತಿಹಾಸದಲ್ಲಿ ಎಷ್ಟೋ ಘಟನೆಗಳು, ಸ್ಮೃತಿಗಳು ಸಿಕ್ಕಿಹಾಕಿಕೊಂಡಿರುತ್ತವೆ.  ಅವುಗಳ ಹಕ್ಕುಸ್ವಾಮ್ಯ ಯಾರಿಗೆ ಸೇರಿದ್ದು?  ನಮಗೆ ಆ ವಿಷಯಗಳು ತಿಳಿದ ಮಾತ್ರಕ್ಕೆ ಕಾಪಿ ಮಾಡುವ ಹಕ್ಕು ನಮಗೆ ಸಿಕ್ಕುವುದಿಲ್ಲ.   ಸತ್ತುಹೋದವರು ತಾವು ಬಹಿರಂಗಗೊಳಿಸದ ಅಥವಾ ಬಹಿರಂಗಗೊಳಿಸಲು ಇಚ್ಛಿಸದ ವಿಷಯಗಳನ್ನು "ಓ, ಇದು ನನಗೆ ಗೊತ್ತು!" ಎಂದು ಹಂಚಿಕೊಂಡು ಖ್ಯಾತಿಗೆ ಆಸೆ ಪಡುವುವಾಗ ಸತ್ತವರಿಗೆ ದ್ರೋಹವಾಗುತ್ತಿದೆ ಎಂದೇ ನನ್ನ ಅನ್ನಿಸಿಕೆ.  


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)