ಥಟ್ ಅಂತ ಒಂದು ಕ್ವಿಜ್ ಕಾರ್ಯಕ್ರಮ!



- ಸಿ ಪಿ ರವಿಕುಮಾರ್

ಡಾ. ನಾ. ಸೋಮೇಶ್ವರ ಅವರನ್ನು ನಮ್ಮ ಕಚೇರಿಯಲ್ಲಿ ನಡೆಸಿದ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿದಾಗ ಅವರು ಯಾವ ಶರತ್ತುಗಳೂ ಇಲ್ಲದೆ ಸಂತೋಷವಾಗಿ ಒಪ್ಪಿಗೆ ಕೊಟ್ಟರು.  "ಥಟ್ ಅಂತ ಹೇಳಿ" ಕಾರ್ಯಕ್ರಮವನ್ನು 14 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಡಾ. ಸೋಮೇಶ್ವರ ಅವರು ಈಗಾಗಲೇ ಲಿಮ್ಕಾ ದಾಖಲೆಯಲ್ಲಿ ಸ್ಥಾನ ಕಂಡುಕೊಂಡಿದ್ದಾರೆ. ಇದುವರೆಗೂ "ಥಟ್ ಅಂತ ಹೇಳಿ" ಕಾರ್ಯಕ್ರಮದ 2902 ಕಂತುಗಳು ಪ್ರಸಾರವಾಗಿವೆ ಎಂದು ಅವರೇ ನಮಗೆ ತಿಳಿಸಿದರು. ವಿಕಿಪೀಡಿಯಾದಲ್ಲಿರುವ  ಮಾಹಿತಿ ಹಳತಾಗಿದೆ! ಈ ಕಾರ್ಯಕ್ರಮ 3000 ಮುಟ್ಟಿದಾಗ ಗಿನ್ನೆಸ್ ದಾಖಲೆಯನ್ನೇ ಮುರಿಯುತ್ತದೆ.

ಡಾ. ಸೋಮೇಶ್ವರ ಅವರಿಂದ ನಾವು ಭಾಷಣವನ್ನು ಅಪೇಕ್ಷಿಸಿದ್ದು ತಪ್ಪು! ಅವರು ಪ್ರಶ್ನೆಗಳನ್ನು ಕೇಳಲು ಸಿದ್ಧರಾಗಿ ಬಂದಿದ್ದರು - ತಾವೇ ಸಂಪಾದಿಸಿದ ಪುಸ್ತಕಮಾಲೆಯಿಂದ ಕೆಲವು ಕನ್ನಡ ಪುಸ್ತಕಗಳನ್ನು  ಬಹುಮಾನವಾಗಿ ಕೊಡಲು ಕೈಯಲ್ಲಿ ಹಿಡಿದೇ ಬಂದರು. ನಮ್ಮ ಕಚೇರಿಯ ಅಂಗಳದಲ್ಲಿ ಕನ್ನಡ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದ್ದುದನ್ನು ಕಂಡು ಸಂತೋಷ ಪಟ್ಟರು. ಕೆಲವು ಹೊಸ ಪುಸ್ತಕಗಳನ್ನು ತಿರುವಿ ಹಾಕಿ ಅವುಗಳ ಬಗ್ಗೆ ಮಾಹಿತಿ ಪಡೆದುಕೊಂಡರು.  ಅವರು ಅಂದು ಮೈಕ್ ಮುಂದೆ ನಿಂತು ಮಾತಾಡಿದ್ದು ಸುಮಾರು 40 ನಿಮಿಷ. ಅಷ್ಟರಲ್ಲಿಯೇ ಅದೆಷ್ಟು ಹೊಸ ಮಾಹಿತಿಗಳನ್ನು ನಮ್ಮ ಜೊತೆ ಹಂಚಿಕೊಂಡರು!

ಬೆಂಗಳೂರಿಗೆ ಹೆಸರು ಬಂದಿದ್ದು ಯಾವ ಮರದಿಂದ?  ಈ ಪ್ರಶ್ನೆ ಕೇಳಿ ಕೆಲವರು ತಬ್ಬಿಬ್ಬಾದರು. ಅವರೇಕಾಯಿ ಮರದ ಮೇಲೆ ಬಿಡುವುದಿಲ್ಲ ಎಂದು ತಿಳಿದೂ ಕೆಲವರು "ಅವರೇಕಾಯಿ" ಎಂದು ಕೂಗಿದರು. ಕೊನೆಗೆ ಸೋಮೇಶ್ವರ ಅವರೇ ಉತ್ತರ ಹೇಳಬೇಕಾಗಿ ಬಂತು.  ಬೆಂಗೆ ಅಥವಾ ರಕ್ತಚಂದನ ಎಂಬ ಮರಗಳು ಹಿಂದೊಮ್ಮೆ ಬೆಂಗಳೂರಿನ ಪ್ರದೇಶವನ್ನು ಆವರಿಸಿದ್ದರಿಂದ ಅದನ್ನು ಬೆಂಗಳೂರು ಎಂದು ಕರೆಯಲಾಯಿತಂತೆ.  ಬೆಂದಕಾಳೂರು ಇತ್ಯಾದಿ ಕಥೆಗಳು ಅದು ಹೇಗೆ ಹುಟ್ಟಿಕೊಂಡವೋ ಮತ್ತು ಈ ಊಹಾಪೋಹಗಳ ಬೇಳೆಕಾಳು ಅದು ಹೇಗೆ ಬೆಂದಿತೋ! ಬೆಂಗೆ ಮರದ ಬಗ್ಗೆ ಇನ್ನೊಂದು ಕಥೆ ಅವರು ಹೇಳಿದರು. ತಿರುಪತಿಯಲ್ಲಿರುವ ಮೂರ್ತಿ ಯಾವ ದೇವರದ್ದು - ವಿಷ್ಣುವಿನದೋ, ಶಿವನದ್ದೋ, ಶಕ್ತಿಯದೋ - ಹೀಗೆ ಗೊಂದಲವಿತ್ತಂತೆ. ಈ ಗೊಂದಲವನ್ನು ಶ್ರೀ ರಾಮಾನುಜಾಚಾರ್ಯರು ಬಗೆಹರಿಸಿದರಂತೆ. "ಇದು ವಿಷ್ಣುವಿನ ಮೂರ್ತಿ, ಇದನ್ನು  ವೇಂಕಟೇಶ್ವರ ಎಂದು ಪೂಜಿಸಬೇಕು" ಎಂದು ರಾಮಾನುಜಾಚಾರ್ಯರು ತಿಳಿಸಿದರಂತೆ. ವೆಂಕಟೇಶ್ವರ ಎನ್ನುವಾಗ "ವೆಂಕಟ" ಎನ್ನುವ ಪದ "ಬೆಂಗೆ" ಎಂಬ ಪದದಿಂದಲೇ ಬಂದಿದೆ ಎನ್ನುವುದು ನಿಮಗೆ ಗೊತ್ತಿತ್ತೇ? ಅದಿರಲಿ, ವೇಂಕಟೇಶ್ವರನ ಮೂರ್ತಿ ಇದೇ ಬೆಂಗೆ ಮರದಿಂದ ಮಾಡಿದ್ದು ಎಂದು ಗೊತ್ತಿತ್ತೇ? ಮೂರ್ತಿಯನ್ನು ಕಲ್ಲಿನಿಂದಲೇ ಮಾಡಿದ್ದು ಎಂಬ ನಮ್ಮ ನಂಬಿಕೆ ಸುಳ್ಳಾಯಿತು! ವಾರಕ್ಕೊಮ್ಮೆ ಮರದ ಮೂರ್ತಿಗೆ ವಿಶೇಷ ತೈಲದ ಲೇಪನ ಮಾಡಿ ಮೂರ್ತಿ ಹಾಳಾಗದಂತೆ ರಕ್ಷಿಸಲಾಗುತ್ತದೆ ಎಂದು ಡಾ. ಸೋಮೇಶ್ವರ ತಿಳಿಸಿಕೊಟ್ಟರು.


ಕನ್ನಡದ ಬಗ್ಗೆ ಅವರು ಅನೇಕ ಸ್ವಾರಸ್ಯಕರ ಮಾಹಿತಿಗಳನ್ನು ತಿಳಿಸಿದರು. ಗ್ರೀಕ್ ದೇಶಕ್ಕೂ ಕನ್ನಡಕ್ಕೂ ಎತ್ತಣಿಂದೆತ್ತ ಸಂಬಂಧವಯ್ಯಾ ಎಂಬ ಅವರ ಪ್ರಶ್ನೆಗೆ ನಾವು ತಲೆ ಕೆರೆದುಕೊಂಡೆವು. ಯವನಿಕಾ ಎಂಬ ಪದ ಹೊಳೆಯಿತು. ಯವನರು (ಗ್ರೀಕರು) ಹಡಗುಗಳಲ್ಲಿ ಕೇರಳಕ್ಕೆ ಬರುತ್ತಿದ್ದರು ಎಂಬುದು ಗೊತ್ತು. ಇದನ್ನು ಕುರಿತು ಒಂದು ಒಳ್ಳೆಯ ನಾಟಕವನ್ನು  ಕೂಡಾ ಓದಿದ್ದು ನೆನಪಿದೆ (ಇದನ್ನು ಬರೆದವರು ಆಲ್ ಇಂಡಿಯಾ ರೇಡಿಯೋ ಬೆಂಗಳೂರಿನ ಒಬ್ಬ ನಾಟಕಕಾರರು, ಥಟ್ ಅಂತ ಹೇಳಲು ಅವರ ಹೆಸರು ನೆನಪಿಗೆ ಬರುತ್ತಿಲ್ಲ.)  ಯವನಿಕೆ ಎಂದರೆ ನಾಟಕದ ಪರದೆ; ಈ ಪದದಲ್ಲಿ ಯವನರಿದ್ದಾರೆ.  ಆದರೆ ಸೋಮೇಶ್ವರ ಅವರು ಇನ್ನೊಂದು ಸ್ವಾರಸ್ಯ ತಿಳಿಸಿದರು. ಚಾರಿಟಿಯನ್ ಮೈಮ್ ಎಂಬ ಒಂದು ಗ್ರೀಕ್ ನಾಟಕವಿದೆಯಂತೆ - ಇದರ ಬಗ್ಗೆ ಹುಡುಕಿದಾಗ ನನಗೆ ವಿಕಿಪೀಡಿಯಾದಲ್ಲಿ ಮಾಹಿತಿ ಸಿಕ್ಕಿತು.  ತುಂಬಾ ಹಳೆಯದಾದ ಈ ಗ್ರೀಕ್ ನಾಟಕದಲ್ಲಿ ಕಥೆ ಹೀಗಿದೆ. ಚಾರಿಟನ್ ಎಂಬ ಗ್ರೀಕ್ ಸುಂದರಿಯನ್ನು ಒಬ್ಬ ಕನ್ನಡದೇಶದ ರಾಜ ಹಾರಿಸಿಕೊಂಡು ಬರುತ್ತಾನೆ (ಕೊಂಡು ಅಥವಾ ಕದ್ದು). ಅವಳನ್ನು ಅವನು ಒಂದು ದೇವಾಲಯದಲ್ಲಿ ಪೂಜಾರಿಣಿಯಾಗಿ ನೇಮಿಸುತ್ತಾನೆ. ಮುಂದೆ ಅವಳನ್ನು ರಕ್ಷಿಸಿ ಗ್ರೀಸ್ ದೇಶಕ್ಕೆ ಕರೆದೊಯ್ಯಲು ಆಕೆಯ ಅಣ್ಣ ಬಂದಾಗ ಆಕೆ ಹೋಗಲೋ ಬೇಡವೋ ಎಂಬ ಸಂದಿಗ್ಧಕ್ಕೆ ಬೀಳುತ್ತಾಳೆ. ಇಲ್ಲಿ ಕಥೆ ಮುಖ್ಯವಲ್ಲ. ಮುಖ್ಯವೆಂದರೆ ಈ ಗ್ರೀಕ್ ನಾಟಕದಲ್ಲಿ ಕೆಲವು ಸಂಭಾಷಣೆಗಳು ಕನ್ನಡ ಭಾಷೆಯಲ್ಲಿವೆ.  ಹೀಗೆ ಕನ್ನಡಭಾಷೆ ಎಷ್ಟು ಹಳೆಯದು ಎಂಬುದಕ್ಕೆ ದಾಖಲೆ ಇದೆ. ಅಂದಹಾಗೆ ಕನ್ನಡದ ಮೊದಲ ಪದ "ಇಸಿಲ" (ಒಂದು ಸ್ಥಳದ ಹೆಸರು) ಎಂಬುದನ್ನು  ಕೂಡಾ ಡಾ. ಸೋಮೇಶ್ವರ ಅವರೇ ನಮಗೆ ತಿಳಿಸಿಕೊಟ್ಟರು.

ಕಾರ್ಯಕ್ರಮ ಪ್ರಾರಂಭವಾಗುವ ಮುನ್ನ ಅವರೊಂದಿಗೆ ಒಂದಷ್ಟು ಹೊತ್ತು ಹರಟೆ ಹೊಡೆಯುವ ಅವಕಾಶ ನಮಗೆ ಸಿಕ್ಕಿತು. ತಮ್ಮ ಜನಪ್ರಿಯ ಕ್ವಿಜ್ ಕಾರ್ಯಕ್ರಮದ ಬಗ್ಗೆ ನಮಗೆ ಅನೇಕ ತಿಳುವಳಿಕೆಗಳನ್ನು ನಮಗೆ ಕೊಟ್ಟರು. ಅವರು ಕೊನೆಯಲ್ಲಿ ಹೇಳಿದ ಮಾತು ಯಾರನ್ನಾದರೂ ಚುಚ್ಚುವಂಥದ್ದು. ಮನುಷ್ಯನಿಗೆ ನಾಲ್ಕು ಬಗೆಯ ಋಣಗಳಿವೆಯಂತೆ. ಇವುಗಳಲ್ಲಿ ಪಿತ್ರಋಣ ಒಂದು. ಇದನ್ನು ತೀರಿಸುವುದು ಹೇಗೆಂದರೆ ನಮ್ಮ ತಂದೆ ನಮ್ಮನ್ನು ಬೆಳೆಸಿದ್ದಕ್ಕಿಂತಲೂ ಹೆಚ್ಚು ಚೆನ್ನಾಗಿ ನಮ್ಮ ಮಕ್ಕಳನ್ನು ಬೆಳೆಸುವುದು. ಹಾಗೇ "ಆಚಾರ್ಯಋಣ" - ಇದನ್ನು ತೀರಿಸುವುದು ಹೇಗೆಂದರೆ ನಮಗೆ ಗುರುಗಳು ಪಾಠ ಹೇಳಿದ್ದನ್ನು ಮತ್ತು ತದನಂತರ ನಾವು ಕಲಿತದ್ದನ್ನು ಹತ್ತಾರು ಜನರಿಗೆ ಹೇಳಿಕೊಡುವುದು.  ಇದರ ಹಾಗೇ ನಮಗೆ ನಮ್ಮ ನಾಡಿನ ಋಣವೂ ಇರುತ್ತದೆ. ನಾಡಿನ ಮಣ್ಣು-ಗಾಳಿ-ನೀರು ಇವುಗಳನ್ನು ಅನುಭವಿಸಿದ್ದರಿಂದ ಹುಟ್ಟಿದ ಋಣ. ಇದನ್ನು ತೀರಿಸುವುದು ಹೇಗೆ? "ಕನ್ನಡನಾಡಿನ ಋಣ ತೀರಿಸಲು ನಾವು ಕನಿಷ್ಠವಾಗಿ ಮಾಡಬೇಕ್ದಾದ್ದು ಕನ್ನಡ ಭಾಷೆಯನ್ನು ಸರಿಯಾಗಿ ಮಾತಾಡುವುದು ಮತ್ತು ಕಾಗುಣಿತ ದೋಷಗಳಿಲ್ಲದೇ ಬರೆಯುವುದು," ಎಂಬ ಡಾ. ಸೋಮೇಶ್ವರ ಅವರ ಮಾತು ಮನಃಸ್ಪರ್ಶಿಯಾಗಿತ್ತು.  ಇದನ್ನು ನಮ್ಮಲ್ಲಿ ಎಷ್ಟು ಜನ ಮಾಡುತ್ತಿದ್ದೇವೆಂದರೆ ಥಟ್ ಅಂತ ಹೇಳುವುದು ಕಷ್ಟವಾಗುತ್ತಿದೆ.


ಅಂದಹಾಗೆ ಡಾ. ನಾ. ಸೋಮೇಶ್ವರ ಅವರಿಂದ ನಾನೂ ಒಂದು ಬಹುಮಾನ ಗೆದ್ದಿದ್ದೇನೆ! ಅವರು ಕೇಳಿದ ಪ್ರಶ್ನೆ ಹೀಗಿತ್ತು. ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಪುರಸ್ಕೃತರಾದವರಲ್ಲಿ ಮೂರು ಜನ ತಂದೆ-ಮಕ್ಕಳ ಜೋಡಿಗಳಿರುವುದು (ಅರ್ಥಾತ್ ಇಬ್ಬರಿಗೂ ಪ್ರಶಸ್ತಿ ಬಂದಿರುವ ಹೆಗ್ಗಳಿಕೆ) ಕನ್ನಡದಲ್ಲಿ ಮಾತ್ರ. ಈ ಮೂವರು ಜೋಡಿಗಳನ್ನು ಹೆಸರಿಸಿ. ಥಟ್ ಅಂತ ಹೇಳಿದರೆ ಮಾತ್ರ ನಿಮಗೆ ಬಹುಮಾನ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)