"ಇಲ್ಲದಿದ್ದರೆ ನಾನು ಬರುವುದಿಲ್ಲ" ಅಥವಾ ಸಾಹಿತಿಯ ಕರಾರು

ಸಿ ಪಿ ರವಿಕುಮಾರ್

ಒಪ್ಪದಿದ್ದರೆ ನೀನು ನನ್ನೈಡಿಯಾಲಜಿಯ
ನಿಮ್ಮ ಸಮ್ಮೇಳನಕ್ಕೆ ಬರುವುದಿಲ್ಲ

ಇರುವುದೆಲ್ಲೆಡೆ ಎಂದು ಆಕ್ಸಿಜನ್ ಜೊತೆಜೊತೆಗೆ
ಅಸಹನೆ ಎಂಬೊಂದು ಹೊಸ ಅನಿಲವೆಂದು
ನಾನು ಹೇಳುವ ಮಾತು ಒಪ್ಪದಿದ್ದರೆ ನೀನು
ಟೂ! ನಿನ್ನ ಜೊತೆ ಆಟಕ್ಕೆ ಬರುವುದಿಲ್ಲ

ಕಪ್ಪು ತೋರಣ ಕಟ್ಟಿ, ಕಪ್ಪು ಕಾಫಿಯ ಕೊಟ್ಟು
ಕಪ್ಪು ಪೇಪರ್ ಮೇಲೆ ಮಾತ್ರ ಕರೆಯೋಲೆ,
ಎಲ್ಲರೂ ಹೊದ್ದು ಬರಬೇಕು ಕರಿಶಾಲು,
ಇಲ್ಲದಿದ್ದರೆ ನಾನು ಬರುವುದಿಲ್ಲ

ಬಂದವರ ಮುಖವೆಲ್ಲ ಊದಿಕೊಂಡಿರಬೇಕು
ನಗೆ ಯಾಕೆ ಮಂದಸ್ಮಿತವೂ ಇರಕೂಡದು
ಮರಳಿಸಬೇಕು ಒಬ್ಬರಾದರೂ ಪದ್ಮಪ್ರಶಸ್ತಿ,
ಇಲ್ಲದಿದ್ದರೆ ನಾನು ಬರುವುದಿಲ್ಲ

ಕಾರ್ಯಕ್ರಮದ ಮುಂಚೆ ದೀಪ ಆರಿಸಬೇಕು,
ಎಲ್ಲರೂ ಮೌನ ಆಚರಿಸಬೇಕು,
ಮಲ್ಲಿಗೆಯ ಬದಲು ರಕ್ತ ಕಣಿಗಲೆಯೇ ಇರಬೇಕು,
ಇಲ್ಲದಿದ್ದರೆ ನಾನು ಬರುವುದಿಲ್ಲ

ಮುಖ್ಯಭಾಷಣದಲ್ಲಿ ಆಸ್ಫೋಟವಿರಬೇಕು,
ಚಾರಿತ್ರ್ಯವಧೆಯಾಗಬೇಕು ರಾಮನಿಗೆ,
ಗೋಮಾಂಸ ಇರಲೇ ಬೇಕು ಭೋಜನದಲ್ಲಿ
ಇಲ್ಲದಿದ್ದರೆ ನಾನು ಬರುವುದಿಲ್ಲ

ಮೂಢನಂಬಿಕೆ ವಿರುದ್ಧ ಗಾಢನಂಬಿಕೆಯುಳ್ಳ
ಜನರನ್ನೇ ಪ್ಯಾನೆಲ್ ಗೆ ಕರೆಯಬೇಕು,
ಮೀಡಿಯಾದಲ್ಲಿ ಮುರಿವ ಸುದ್ದಿ ಬರಲೇಬೇಕು
ಇಲ್ಲದಿದ್ದರೆ ನಾನು ಬರುವುದಿಲ್ಲ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)