ಪಾನ್ ಗೋಡೆ
ಪಾನ್ ಗೋಡೆ ಈಗ ಹೇಗಿದೆಯೋ ಗೊತ್ತಿಲ್ಲ. ನಾನು ಐಐಟಿ ದೆಹಲಿ ಸೇರಿದಾಗ ನನಗೆ ಬಹಳ ಶಾಕ್ ಆಗಿದ್ದು ಆ ಗೋಡೆಯನ್ನು ನೋಡಿ. ವಿವಿಧ ಡಿಪಾರ್ಟ್ಮೆಂಟ್ ಕಚೇರಿಗಳು ಇರುವ ಕಟ್ಟಡಕ್ಕೂ ಮತ್ತು ಆಡಳಿತ ವರ್ಗದವರು ಕೂಡುವ ಕಟ್ಟಡಕ್ಕೂ ನಡುವೆ ಒಂದು ಒಳದಾರಿ ಇತ್ತು. ಮೊದಲನೇ ಮಹಡಿಯಲ್ಲಿದ್ದ ನಮ್ಮ ಡಿಪಾರ್ಟ್ಮೆಂಟ್ನಿಂದ ಈ ದಾರಿ ಬಳಸಿಕೊಂಡು ಹೋಗುವಾಗ ಡೀನ್ ಮುಂತಾದವರ ಕಚೇರಿಗಳು ಮೊದಲು ಸಿಕ್ಕುತ್ತಿದ್ದವು. ಅನಂತರ ಒಂದು ಓಣಿಯಂತಹ ದಾರಿ ಸಿಕ್ಕುತ್ತಿತ್ತು. ಈ ಓಣಿಯನ್ನು ನಾನು ಮೊದಲ ಸಲ ನೋಡಿದಾಗ ನನಗೆ ಆಘಾತವೇ ಆಗಿತ್ತು. ಅಕ್ಕಪಕ್ಕದ ಗೋಡೆಗಳ ಮೇಲೆಲ್ಲಾ ಕೆಂಪು ಗುರುತುಗಳು. ಇವು ಪಾನ್ ಜಗಿದು ಉಗಿದ ಗುರುತುಗಳು ಎಂದು ನಂತರ ತಿಳಿಯಿತು. ಪಾನ್ ಕಲೆಯ ಓಣಿಯನ್ನು ದಾಟಿ ಹೋದರೆ ಕಾರಕೂನರು ಕುಳಿತುಕೊಳ್ಳುವ ಕೋಣೆ ಸಿಕ್ಕುತ್ತಿತ್ತು. ಇಲ್ಲಿ ಹೋಗಬೇಕಾಗಿ ಬರುವ ಸಂದರ್ಭಗಳನ್ನು ನಾನು ದ್ವೇಷಿಸುತ್ತಿದ್ದೆ. ನಾನು ಹೋದಾಗ ನಮ್ಮ ಡಿಪಾರ್ಟ್ಮೆಂಟ್ ಕೆಲಸಗಳಿಗೆ ನಿಯುಕ್ತನಾಗಿದ್ದ ಕಾರಕೂನ ಬಹುತೇಕ ಸೀಟಿನ ಮೇಲೆ ಇರುತ್ತಲೇ ಇರಲಿಲ್ಲ. ಎಲ್ಲಿ ಎಂದರೆ ಚಾಯ್ ಪೇ ಗಯೇನ್ ಹೈನ್ ಜೀ ಎಂಬ ನಿರಾಳ ಉತ್ತರ ಸಿಕ್ಕುತ್ತಿತ್ತು. ನಾನು ಕಬ್ ಆಯೇಂಗೇ ಎಂದು ಮರುಪ್ರಶ್ನೆ ಕೇಳಿದೆನೋ ನನ್ನನ್ನು ಕೆಕ್ಕರಿಸಿ ನೋಡಿ ಅಬ್ ಚಾಯ್ ಪೇ ಗಯೇನ್ ಹೈನ್ ಆತೇ ಹೋಂಗೆ ಎಂಬ ಪ್ರತ್ಯುತ್ತರ ಸಿಕ್ಕುತ್ತಿತ್ತು. ಈ ಕಾರಕೂನರಿಗೆ ಟೀಚಿಂಗ್ ಸ್ಟಾಫ್ ಎಂದರೆ ಅಸಹನೆ ಇತ್ತು. ಏನ...