ಮೌಂಟನ್ ಹೋಂ ಎಂಬ ದೂರದ ಗ್ರಾಮದಲ್ಲಿ
ಮೌಂಟನ್ ಹೋಮಿನಲ್ಲಿ ಸಮಯ ಕಳೆಯುವುದು ಕಷ್ಟವಾಗಿತ್ತು. ಶನಿವಾರ ಮತ್ತು ಭಾನುವಾರ ಎಲ್ಲೂ ಹೋಗುವ ಕಾರ್ಯಕ್ರಮವಿಲ್ಲದಿದ್ದರೆ ಮನೆಯಲ್ಲಿ ನಮಗಿದ್ದ ಒಂದೇ ಮನರಂಜನೆ ಎಂದರೆ ಟಿವಿ. ನಾನು ಪತ್ರಗಳನ್ನು ಬರೆಯುವ ಹವ್ಯಾಸ ಇಟ್ಟುಕೊಂಡಿದ್ದೆ. ಸ್ಥಳೀಯ ಲೈಬ್ರರಿಯಲ್ಲಿ ಪುಸ್ತಕ ಎರವಲು ಪಡೆಯಲು ಶನಿವಾರ ಹೋಗುತ್ತಿದ್ದೆವು. ನಮ್ಮ ಆಫೀಸ್ ಸಹೋದ್ಯೋಗಿಗಳು ಗುರುವಾರದಿಂದಲೇ ವೀಕೆಂಡ್ ಕಾರ್ಯಕ್ರಮವನ್ನು ಕುರಿತು ಮಾತಾಡಿಕೊಳ್ಳುತ್ತಿದ್ದರು. ಸೋಮವಾರ ತಮ್ಮ ವೀಕೆಂಡ್ ಹೇಗಿತ್ತು ಎಂದು ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರು.
ಆಗ ಅಮೆರಿಕನ್ ಟಿವಿ ಈಗಿನಂತೆ ಕೆಟ್ಟುಹೋಗಿರಲಿಲ್ಲ. ಒಳ್ಳೆಯ ಕಾರ್ಯಕ್ರಮಗಳು ಬರುತ್ತಿದ್ದವು. ಎನ್.ಬಿ.ಸಿ, ಎ.ಬಿ.ಸಿ., ಪಿ.ಬಿ.ಎಸ್. ಇವು ಒಳ್ಳೆಯ ಕಾರ್ಯಕ್ರಮಗಳನ್ನು ತಯಾರಿಸುತ್ತಿದ್ದವು. ಸಿಕ್ಸ್ಟಿ ಮಿನಿಟ್ಸ್, ವಿಷನ್ 20/20 ಮುಂತಾದ ಕಾರ್ಯಕ್ರಮಗಳು ಬಹಳ ಚೆನ್ನಾಗಿದ್ದವು. ಜಾನಿ ಕಾರ್ಸನ್ ಶೋ ಆಗ ಹೊಸತು. ಸ್ಯಾಟರ್ಡೆ ನೈಟ್ ಲೈವ್ ಕೂಡಾ. ಮರ್ಡರ್ ಶೀ ರೋಟ್, ನೈಟ್ ರೈಡರ್, ಸ್ಟಾರ್ ಟ್ರೆಕ್, ಮಿಷನ್ ಇಂಪಾಸಿಬಲ್ ಮುಂತಾದ ಕಾರ್ಯಕ್ರಮಗಳು ಆಗ ಎಲ್ಲರ ಕುತೂಹಲವನ್ನು ಕೆರಳಿಸುತ್ತಿದ್ದವು. ನೈಟ್ ರೈಡರ್ ಅಪಾರ ಜನಪ್ರಿಯತೆ ಪಡೆದುಕೊಂಡಿತ್ತು. ಅದರಲ್ಲಿ ಕಿಟ್ ಎಂಬ ಒಂದು ಕಾರಿನ ಪಾತ್ರವಿದೆ. ಇದು ಅತ್ಯುನ್ನತ ತಂತ್ರಜ್ಞಾನ ಹೊಂದಿದ ಅದ್ಭುತ ಕಾರ್. ಇದೇ ರೀತಿ ಮಿಷನ್ ಇಂಪಾಸಿಬಲ್ ಸರಣಿ ಕೂಡಾ ಬಹಳ ಕುತೂಹಲಕರವಾಗಿತ್ತು. ಈಗ ಅದನ್ನು ಚಲಚ್ಚಿತ್ರ ಮಾಧ್ಯಮಕ್ಕೂ ಹೊಂದಿಸಿಕೊಂಡಿದ್ದಾರೆ. ಡಾಕ್ಟರ್ ಹೂ ಎಂಬ ವಿಚಿತ್ರ ಸೀರೀಸ್ ಒಂದಿತ್ತು. ಅದನ್ನು ನಾನು ಅಷ್ಟಾಗಿ ಇಷ್ಟ ಪಡಲಿಲ್ಲ. ಆದರೆ ಕೆಲವರು ಅದನ್ನು ಬಹಳ ಕುತೂಹಲದಿಂದ ನೋಡುತ್ತಿದ್ದರು. ಸಿಟ್ಕಾಂಗಳಲ್ಲಿ ಆಗ ಗಿಲಿಗನ್ಸ್ ಐಲೆಂಡ್, ತ್ರೀ ಈಸ್ ಕಂಪನಿ ಜನಪ್ರಿಯವಾಗಿದ್ದವು.
ಶನಿವಾರ ಒಂದು ಗಂಟೆಯ ಭಾರತೀಯ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ನ್ಯೂಯಾರ್ಕಿನಿಂದ ಇದು ಪ್ರಸಾರವಾಗುತ್ತಿತ್ತು. ಕೆಲವು ಹಿಂದಿ ಹಾಡುಗಳನ್ನು ಪ್ರಸಾರ ಮಾಡುತ್ತಿದ್ದರು. ಇದನ್ನೇ ನಾವು ಕಾದು ನೋಡುತ್ತಿದ್ದೆವು. ಅಮೆರಿಕಾದ ಕಾರ್ಯಕ್ರಮಗಳ ನಡುವೆ ಬರುವ ಜಾಹೀರಾತುಗಳೂ ಆಗ ಬಹಳ ಜನಪ್ರಿಯವಾಗಿದ್ದವು. ಕೆಲವರು ಜಾಹೀರಾತುಗಳೇ ಹೆಚ್ಚು ಚೆನ್ನ ಎನ್ನುತ್ತಿದ್ದರು. ಒಂದು ಕಂಪನಿಯವರು ಇನ್ನೊಂದು ಕಂಪನಿಯ ಉತ್ಪಾದನೆಯನ್ನು ಹಂಗಿಸಿ ತಮ್ಮ ಉತ್ಪಾದನೆಯೇ ಹೆಚ್ಚು ಶ್ರೇಷ್ಠವೆಂದು ಹೇಳಿಕೊಳ್ಳುವ ಜಾಹೀರಾತುಗಳೂ ಬರುತ್ತಿದ್ದವು. ಕೋಕಾಕೋಲಾ ಮತ್ತು ಪೆಪ್ಸಿ ನಡುವೆ ಪೈಪೋಟಿ ಆಗ ಜೋರಾಗಿತ್ತು. ಜಾಹೀರಾತುಗಳಲ್ಲಿ ಅದ್ಭುತವಾದ ದಾವೆಗಳನ್ನು ಮಾಡಲಾಗುತ್ತಿತ್ತು. ಉದಾಹರಣೆಗೆ ಪಾತ್ರೆ ತೊಳೆಯುವ ಸೋಪ್ ಕಂಪನಿಯೊಂದು ಹೀಗೆ ಜಾಹೀರಾತು ತಯಾರಿಸಿತು. ಗಾಜಿನ ದೀಪ ಅಥವಾ ಚಾಂಡೆಲಿಯರನ್ನು ದೋಸೆ ಹಿಟ್ಟಿನಲ್ಲಿ ಅದ್ದಿ ಅದು ಒಣಗಿದ ಮೇಲೆ ಅದನ್ನು ಸೋಪ್ ದ್ರಾವಣದಲ್ಲಿ ತೊಳೆದಾಗ ದೀಪಗಳು ಮತ್ತೆ ಹೊಳೆಯುತ್ತವೆ. ಇಂಥ ಜಾಹೀರಾತುಗಳ ದಾವೆ ನಿಜವೇ ಸುಳ್ಳೇ ಎಂದು ಪರೀಕ್ಷಿಸುವ ಒಂದು ಕಾರ್ಯಕ್ರಮ ಬರುತ್ತಿತ್ತು. ಅವರು ಅದೇ ಪ್ರಯೋಗವನ್ನು ಮಾಡಿ ಪರಿಣಾಮವನ್ನು ತೋರಿಸುತ್ತಿದ್ದರು. ಮೇಲೆ ಹೇಳಿದ ಸೋಪ್ ಈ ಪರೀಕ್ಷೆಯಲ್ಲಿ ಗೆದ್ದಿತು!
ಮ್ಯೂಸಿಕ್ ವಿಡಿಯೋ ಆಗ ಬಹುಶಃ ಅಮೆರಿಕನ್ನರಿಗೂ ಹೊಸ ಪ್ರಯೋಗ. ಹೊಸ ಮ್ಯೂಸಿಕ್ ಆಲ್ಬಂಗಳನ್ನು ವಿಡಿಯೋ ರೂಪದಲ್ಲಿ ಬಿಡುಗಡೆ ಮಾಡಿ ಜನಪ್ರಿಯತೆ ಹೆಚ್ಚಿಸಿಕೊಳ್ಳುವ ಈ ಪ್ರಯತ್ನ ಬಹಳ ಯಶಸ್ವಿಯಾಯಿತು. ಮೈಕಲ್ ಜಾಕ್ಸನ್ ತಯಾರಿಸಿದ ವಿಡಿಯೋಗಳು ಅಪಾರ ಜನಪ್ರಿಯತೆ ಪಡೆದುಕೊಂಡಿದ್ದವು. ಇದೇ ರೀತಿ ಕಂಟ್ರಿ ಮ್ಯೂಸಿಕ್ ವಿಡಿಯೋಗಳೂ ಆ ಪ್ರದೇಶದಲ್ಲಿ ಜನಪ್ರಿಯವಾಗಿದ್ದವು. ರೇಡಿಯೋದಲ್ಲೂ ಇವುಗಳದ್ದೇ ರಾಜ್ಯ. ಕೇಸಿ ಕೇಸನ್ ಎಂಬಾತ ನಮ್ಮ ಅಮೀನ್ ಸಯಾನಿಯ ಹಾಗೆ ಹೊಸ ವಿಡಿಯೋಗಳ ಜನಪ್ರಿಯತೆಯನ್ನು ಅಳೆದು ಅವುಗಳನ್ನು ಪ್ರಸಾರ ಮಾಡುತ್ತಿದ್ದ. ರೇಡಿಯೋದಲ್ಲಿ ಲ್ಯಾರಿ ಕಿಂಗ್ ಲೈವ್ ಜನಪ್ರಿಯವಾಗಿತ್ತು. ಅಮೆರಿಕಾ ಹೈವೇಗಳ ಮೇಲೆ ಗಂಟೆಗಟ್ಟಲೆ ಕಾರಿನಲ್ಲಿ ಹೋಗುವಾಗ ಮ್ಯೂಸಿಕ್ ಜನರಿಗೆ ಬೇಕೇ ಬೇಕು. ಕೆಲವರು ಲ್ಯಾರಿ ಕಿಂಗ್ ಲೈವ್ ಮಾದರಿಯ ರಾಜಕೀಯ ಕುರಿತಾದ ಕಾರ್ಯಕ್ರಮಗಳನ್ನು ಕೇಳುತ್ತಿದ್ದರು.
ನ್ಯೂಸ್ ಮಾಧ್ಯಮಗಳು ಆಗ ಕುಲಗೆಟ್ಟುಹೋಗಿರಲಿಲ್ಲ. ನ್ಯೂಸ್ ಎಂದರೆ ನ್ಯೂಸ್ ಆಗಿರುತ್ತಿತ್ತು. ಕೆಲವೊಮ್ಮೆ ಯಾರೋ ಒಬ್ಬ ವಿಶೇಷ ತಜ್ಞರನ್ನು ಕರೆದು ಘಟನೆಗಳನ್ನು ವಿಶ್ಲೇಷಿಸಲು ಕೇಳಲಾಗುತ್ತಿತ್ತು. ಡಿಬೇಟ್ಸ್ ಇದ್ದರೂ ಎಲ್ಲವೂ ಸಭ್ಯತೆಯ ಚೌಕಟ್ಟಿನಲ್ಲಿರುತ್ತಿದ್ದವು. ಭಾರತದ ಬಗ್ಗೆ ಏನೇನೂ ಸುದ್ದಿಗಳು ಬರುತ್ತಿರಲಿಲ್ಲ. ಇಂದಿರಾಗಾಂಧಿ ಅವರ ಕೊಲೆಯಾದಾಗ ಒಂದೆರಡು ದಿನ ಭಾರತದ ಬಗ್ಗೆ ಚರ್ಚೆಯಾಯಿತು. ಕೆನಡಾದಲ್ಲಿ ಸಿಖ್ಖರು ಆಗ ಆನಂದೋತ್ಸವ ನಡೆಸಿದ್ದನ್ನು ತೋರಿಸಿದರು. ಆದರೆ ಬೇರೇನೂ ಕವರೇಜ್ ಬರಲಿಲ್ಲ.
ಭಾನುವಾರ ಬಂದರೆ ಎಲ್ಲರಿಗೂ ಒಮ್ಮೆಲೇ ಜೀಸಸ್ ನೆನಪಿಗೆ ಬರುತ್ತಿದ್ದ. ಎಲ್ಲ ಚಾನೆಲ್ಲುಗಳಲ್ಲೂ ವಿವಿಧ ಸ್ವಾಮೀಜಿಗಳ ಪ್ರಾಯೋಜಿತ ಕಾರ್ಯಕ್ರಮಗಳು. ಇವರಿಗೆ ಟಿವಿ ಇವಾಂಜೆಲಿಸ್ಟ್ ಎನ್ನುತ್ತಾರೆ. ಇವರೆಲ್ಲರೂ ಜನರನ್ನು ಬಯ್ಯುವುದು, ನಿಮ್ಮ ಪಾಪಗಳನ್ನು ತೊಳೆದುಕೊಳ್ಳಿ, ಜೀಸಸ್ ನಿಮ್ಮನ್ನು ಕ್ಷಮಿಸುತ್ತಾನೆ, ಈಗಲೇ ದಾನ ಮಾಡಿ ಎಂದು ಕೇಳಿಕೊಳ್ಳುವುದು. ಇನ್ನು ಕೆಲವು ಕಡೆ ಆಫ್ರಿಕಾ ಮತ್ತು ಭಾರತದಲ್ಲಿ ತಾವು ಮಾಡುತ್ತಿರುವ ದಾನಧರ್ಮಗಳಿಗಾಗಿ ಹಣ ಬೇಡುವ ಕಾರ್ಯಕ್ರಮಗಳು. ಜಿಮ್ಮಿ ಸ್ವಾಗರ್ಟ್ ಎಂಬ ಒಬ್ಬ ಇವಾಂಜೆಲಿಸ್ಟ್ ಅದೇನು ನಟನೆ ಮಾಡುತ್ತಿದ್ದ! ನಿಮ್ಮ ಪಾಪಗಳಿಗಾಗಿ ನಾನು ಅಳುತ್ತೇನೆ ಎಂದು ಕಣ್ಣೀರು ಸುರಿಸುತ್ತಿದ್ದ. ಮುಂದೆ ಇವನು ಮಾಡಿದ ಅತ್ಯಾಚಾರಗಳಿಗಾಗಿ ಇವನನ್ನು ಬಂಧಿಸಿ ವಿಚಾರಣೆ ನಡೆಸಿದರು.
ಭಾನುವಾರ ಮಧ್ಯಾಹ್ನವಾದರೆ ಅರ್ಕನ್ಸಾದ ಎಲ್ಲ ಚಾನೆಲ್ಲುಗಳಲ್ಲೂ ಮೀನು ಹಿಡಿಯುವ ಬಗ್ಗೆ ಕಾರ್ಯಕ್ರಮಗಳು ಪ್ರಸಾರವಾಗುತ್ತಿದ್ದವು. ಕೆಲವು ಚಾನೆಲ್ಲುಗಳಲ್ಲಿ ಅಡುಗೆ ಕಾರ್ಯಕ್ರಮಗಳು. ಇವು ಯಾವುದೂ ನಮಗೆ ರುಚಿಸುತ್ತಿರಲಿಲ್ಲ. ಕೇಬಲ್ ಕನೆಕ್ಷನ್ ಬಂದ ಮೇಲೆ ಒಂದಿಷ್ಟು ಚಲನಚಿತ್ರಗಳನ್ನು ನೋಡುವ ಅವಕಾಶ ಸಿಕ್ಕಿತು. ಆದರೆ ಭಾನುವಾರ ಚೈನಾದ ಮಾರ್ಷಲ್ ಆರ್ಟ್ಸ್ ಹಿನ್ನೆಲೆಯ ಚಿತ್ರಗಳೇ ಬರುತ್ತಿದ್ದವು. ಮಕ್ಕಳ ಕಾರ್ಟೂನ್ ಚಿತ್ರಗಳನ್ನು ನೋಡಿ ತೃಪ್ತಿ ಪಟ್ಟ ದಿನಗಳೂ ಇದ್ದವು. ಆಗ ಜನಪ್ರಿಯವಾಗಿದ್ದ ಸ್ಮರ್ಫ್ಸ್ ಎಂಬ ಕಾರ್ಟೂನ್ ಸರಣಿಯ ಪಾತ್ರಗಳು ನನಗೆ ಚಿರಪರಿಚಿತ!!
ಮುಂದೆ ನಾವು ಒಂದು ಕ್ಯಾಸೆಟ್ ಪ್ಲೇಯರ್ ಕೊಂಡುಕೊಂಡೆವು. ಅದರ ಮೇಲೆ ಭಾರತೀಯ ಚಿತ್ರಗೀತೆಗಳನ್ನು ಹಾಕಿ ಟಿವಿಯಲ್ಲಿ ಅಮೆರಿಕನ್ ಮ್ಯೂಸಿಕ್ ವಿಡಿಯೋಗಳನ್ನು ವಾಲ್ಯೂಮ್ ಇಲ್ಲದೆ ನೋಡುತ್ತಿದ್ದೆವು. ಇದು ಸಾಕಷ್ಟು ಹಾಸ್ಯ ಸಾಮಾಗ್ರಿ ಒದಗಿಸುತ್ತಿತ್ತು.
ಈಗ ಟಿವಿ ಎಲ್ಲಾಕಡೆಗೂ ದುಸ್ಥಿತಿಗೆ ಬಂದಿದೆ. ಅಮೆರಿಕಾದಲ್ಲಂತೂ ತೀರಾ ಹದಗೆಟ್ಟಿದೆ. ನಾನು 2019ರ ನಂತರ ಹೋಗಿಲ್ಲದಿದ್ದರೂ ಅದಕ್ಕೆ ಮುಂಚೆ ಅಲ್ಲಿಗೆ ಪ್ರಯಾಣ ಮಾಡಿದಾಗ ಅಲ್ಲಿಯ ಕಾರ್ಯಕ್ರಮಗಳನ್ನು ಗಮನಿಸಿದ್ದೇನೆ. ಜನರನ್ನು ತಪ್ಪುದಾರಿಗೆ ಎಳೆಯುವ, ಜನರ ಮೇಲೆ ಋಣಾತ್ಮಕ ಪ್ರಭಾವ ಬೀರುವ ಕಾರ್ಯಕ್ರಮಗಳೇ ಈಗ ಹೆಚ್ಚಾಗಿವೆ. ಎಂಬತ್ತರ ದಶಕದಲ್ಲೇ ಮಕ್ಕಳ ಜೊತೆ ಟಿವಿ ನೋಡಲು ಜನ ಹೆದರುತ್ತಿದ್ದರು. ಈಗಂತೂ ಮಕ್ಕಳನ್ನು ಋಣಾತ್ಮಕತೆಯಿಂದ ಕಾಪಾಡುವುದೇ ಪೋಷಕರಿಗೆ ಒಂದು ಕಾಯಕವಾಗಿದೆ.
#ನೆನಪುಗಳು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ