ಅಗೋ ಕಳೆಯಿತು ದಿವಸ, ಅಗೋ ರಾತ್ರಿ (ಅನುವಾದಿತ ಕವಿತೆ}

 


ಸೂರ್ಯನು ಸೇರಿ ಪಶ್ಚಿಮ ದಡಮುಳುಗಿದನು
ಸಂಧ್ಯೆಯ ಮುಸುಕನ್ನು ತೊಟ್ಟಿತು ಧಾತ್ರಿ
ನೂರು ಸಂಜೆಗಳಂತೆಯೇ ಆ ಸಂಜೆಯೂ ಇತ್ತು
ಮತ್ತೆ ಎದ್ದೇಳುವಾಗ ನನಗೇಕೆ ಅನ್ನಿಸಿತ್ತು
ದಿನದಲ್ಲಿ ನಡೆವುದು ಏನಾದರೂ ಹೊಸತು?
ಅಗೋ ಕಳೆಯಿತು ದಿವಸ, ಅಗೋ ರಾತ್ರಿ 

ಮೆಲ್ಲಮೆಲ್ಲನೆ ಹೊರಬಂದವು ತಾರಗೆ
ಮಿನುಗತೊಡಗಿತು ಬಿಚ್ಚಿಟ್ಟ ಬಾನ್ ಛತ್ರಿ
ನೂರು ಇರುಳುಗಳಂತೆ ಆ ಇರುಳೂ ಇತ್ತು
ಮತ್ತೆ ಸಂಜೆಯಾದಾಗ ಹೀಗೇಕೆ ಅನ್ನಿಸಿತ್ತು
ತರುವುದೇನಾದರೂ ನಿಶೆ ಹೊಸದನ್ನು ಹೊತ್ತು?
ಅಗೋ ಕಳೆಯಿತು ದಿವಸ, ಅಗೋ ರಾತ್ರಿ

ಹಕ್ಕಿಗಳು ಉಲಿದವು, ಬಿರಿದವು ಮೊಗ್ಗು
ಮತ್ತೆ ಬೆಸೆಯಿತು ಕಮಲ ಸೂರ್ಯನ ಮೈತ್ರಿ
ಎಂದಿನಂತೆಯೇ ಇತ್ತು ಆ ದಿನದ ಬೆಳಗು
ಮತ್ತೇಕೆ ನಿದ್ರೆಯಲ್ಲಿ ಉಲಿಯುತ್ತಿತ್ತು ನನ್ನೊಳಗು
ನಸುಕು ನಾವೀನ್ಯವನ್ನು ತಂದೀತು ಎಂದು?
ಅಗೋ ಕಳೆಯಿತು ದಿವಸ, ಅಗೋ ರಾತ್ರಿ


ಮೂಲ: ಹರಿವಂಶ ರಾಯ್ ಬಚ್ಚನ್
ಕನ್ನಡಕ್ಕೆ: ಸಿ. ಪಿ. ರವಿಕುಮಾರ್


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)