ನೆನಪುಗಳು : ಮೌಂಟನ್ ಹೋಂ ವಾಸ

 ಮೌಂಟನ್ ಹೋಮ್ ಎಂಬ ಕುಗ್ರಾಮದಲ್ಲಿ ಇರಬೇಕಾಗಬಹುದು ಎಂದು ನಾನು ಎಂದೂ ಯೋಚಿಸಿರಲಿಲ್ಲ. ನ್ಯೂಯಾರ್ಕಿನಲ್ಲಿ ಒಂದು ವಾರ ಕಳೆದ ಮೇಲೆ ನಮ್ಮ ಪ್ರಾಜೆಕ್ಟ್ ಇದ್ದ ಮೌಂಟನ್ ಹೋಮ್ ಎಂಬ ಗ್ರಾಮಕ್ಕೆ ಕಂಪನಿಯು ಕಳಿಸಿತು. ಈ ಗ್ರಾಮ ಇರುವುದು ಅರ್ಕನ್ಸಾ(ಸ್) ಎಂಬ ರಾಜ್ಯದಲ್ಲಿ. ಇಂಟರ್ನೆಟ್ ಇಲ್ಲದ ಆ ದಿನಗಳಲ್ಲಿ ಈ ರಾಜ್ಯ ಎಲ್ಲಿದೆ ಮತ್ತು ಅಲ್ಲಿಯ ಜನಜೀವನದ ಬಗ್ಗೆ ತಿಳಿದುಕೊಳ್ಳುವ ಸಾಧನಗಳಿರಲಿಲ್ಲ. ಆಗ ಅಮೆರಿಕಾಗೆ ಹೋಗುತ್ತಿದ್ದವರು ಬಹಳ ಕಡಿಮೆ ಜನ. ನನ್ನ ನ್ಯಾಷನಲ್ ಕಾಲೇಜ್ ಟೀಚರ್ ಪದ್ಮಾವತಮ್ಮ ಅವರ ತಮ್ಮ ಅಮೆರಿಕಾದಲ್ಲಿದ್ದರು. ಅವರು ಭಾರತಕ್ಕೆ ಬಂದಿದ್ದರೆಂದು ತಿಳಿದು ಅವರನ್ನು ಭೇಟಿ ಮಾಡಿ ಅಲ್ಲಿಯ ಜೀವನ ಹೇಗೆ ಎಂದು ವಿಚಾರಿಸಿದೆ. ಅವರು ತಮಗೆ ತಿಳಿದ ಕೆಲವು ಸಲಹೆಗಳನ್ನು ಹೇಳಿದರು. ಇಂಥ ಸಲಹೆಗಳನ್ನು ಕೇಳುವುದು ಮತ್ತು ಅವುಗಳನ್ನು ನೀಡುವುದೂ ಅಷ್ಟು ಉಪಯುಕ್ತವಲ್ಲ ಎಂದು ನನಗೆ ನಂತರ ತಿಳಿಯಿತು. ಅಮೆರಿಕಾ ಬಹಳ ದೊಡ್ಡ ದೇಶ. ಅಲ್ಲಿ ಒಂದು ರಾಜ್ಯ ಇದ್ದಂತೆ ಇನ್ನೊಂದಿಲ್ಲ. ನ್ಯೂಯಾರ್ಕ್ ನಗರದಲ್ಲಿರುವವರನ್ನು ಅರ್ಕನ್ಸಾ ಬಗ್ಗೆ ಕೇಳಿದರೆ ಬಾಂಬೆಯಲ್ಲಿರುವವರನ್ನು ಬೊಮ್ಮನಹಳ್ಳಿಯ ಬಗ್ಗೆ ಕೇಳಿ ಸಲಹೆ ಪಡೆದಷ್ಟೇ ಉಪಯುಕ್ತ. 


ನ್ಯೂಯಾರ್ಕ್ ನಗರದಿಂದ ಅಟ್ಲಾಂಟಾಗೆ (ಜಾರ್ಜಿಯಾ) ಹೋಗಿ ಅಲ್ಲಿಂದ ಚಾರ್ಟರ್ಡ್ ಹೆಲಿಕಾಪ್ಟರಿನಲ್ಲಿ ನಾವು ಮೌಂಟನ್ ಹೋಮಿಗೆ ಹೋದೆವು. ಇವೆಲ್ಲ ನಮಗೆ ಹೊಸತು.  ಹೆಲಿಕಾಪ್ಟರಿನ ಚಾಲಕ ಏನೋ ಮಾತಾಡುತ್ತಿದ್ದ. ಅದು ನಮಗೆ ಸರಿಯಾಗಿ ಕೇಳಿಸುತ್ತಿರಲಿಲ್ಲ. ಕೇಳಿಸಿದರೂ ಅವರು ಆಡುವ ಮಾತು ಅರ್ಥ ಮಾರಿಕೊಳ್ಳುವುದೂ ಕಷ್ಟವಾಗುತ್ತಿತ್ತು. ನಾವು ಕೆಲಸ ಮಾಡಬೇಕಾಗಿದ್ದದ್ದು ಒಂದು ದೊಡ್ಡ ಉಡುಪಿನ ಫ್ಯಾಕ್ಟರಿಯಲ್ಲಿ. ಅವರಿಗೆ ನೂತನ ಕಂಪ್ಯೂಟರ್ ನತ್ತು ಡೇಟಾ ಪ್ರಾಸೆಸಿಂಗ್ ತಂತ್ರಾಂಶ ವ್ಯವಸ್ಥೆ ಮಾಡಿಕೊಡುವುದು ನಮ್ಮ ಕೆಲಸ. ಅಲ್ಲಿ ಎರಡು ಬಗೆಯ ಜನ ಕೆಲಸಕ್ಕಿದ್ದರು. ಡೇಟಾ ಪ್ರಾಸೆಸಿಂಗ್ ವಿಭಾಗದಲ್ಲಿದ್ದ ವೈಟ್ ಕಾಲರ್ ಮಂದಿ. ಮತ್ತು ಫ್ಯಾಕ್ಟರಿಯಲ್ಲಿ ದುಡಿಯುವ ಬ್ಲೂ ಕಾಲರ್ ಮಂದಿ. ನಮಗೆ ವೈಟ್ ಕಾಲರ್ ಉದ್ಯೋಗಿಗಳ ಜೊತೆ ಕೆಲಸ. ನಾವು ಫ್ಯಾಕ್ಟರಿಗೆ ಹೋಗಿದ್ದು ಒಂದೇ ಸಲ. ಅಲ್ಲಿ ಯಾರೂ ನಮ್ಮ ಕಡೆಗೆ ನೋಡಲೇ ಇಲ್ಲ. ಎಲ್ಲರೂ ತಮ್ಮ ತಮ್ಮ ಕೆಲಸ ಮಾಡುತ್ತಿದ್ದರು. ಏಕೆಂದರೆ ಅವರಿಗೆ ಪೂರೈಸಿದ ಕೆಲಸಕ್ಕೆ ಮಾತ್ರ ಸಂಬಳ ಸಿಕ್ಕುತ್ತಿತ್ತು. ನಮ್ಮ ಜೊತೆ ಹರಟೆ ಹೊಡೆಯಲು ಅವರಿಗೆ ಸುತರಾಂ ಇಷ್ಟವಿರಲಿಲ್ಲ. ಅಕಸ್ಮಾತ್ ಯಾರಾದರೂ ಅಜಾಗರೂಕತೆಯಿಂದ ಕೆಲಸ ಕೆಡಿಸಿದರೆ ನಷ್ಟವನ್ನು ಅವರ ವಾರದ ಸಂಬಳದಿಂದ ಹಿಡಿಯುತ್ತಿದ್ದರು.  


ಒಮ್ಮೆ ಮಾತ್ರ ನನಗೆ ಒಬ್ಬ ಬ್ಲೂ ಕಾಲರ್ ಉದ್ಯೋಗಿಯ ಜೊತೆ ಮಾತಾಡುವ ಅವಕಾಶ ಸಿಕ್ಕಿತು. ನಾನು ಒಮ್ಮೆ ಶನಿವಾರ ಕೆಲಸಕ್ಕೆ ಹೋದೆ.  ಇಡೀ ಫ್ಯಾಕ್ಟರಿ ಬಿಕೋ ಎನ್ನುತ್ತಿತ್ತು. ಊಟದ ಸಮಯದಲ್ಲಿ ನಾನು ಕೆಫೆಟೇರಿಯಾಗೆ ಹೋದೆ. ಅದೂ ಇಂದು ಶಾಂತವಾಗಿತ್ತು. ರೇಡಿಯೋ ಆದರೂ ಕಂಟ್ರಿ ಮ್ಯೂಸಿಕ್ ಹಾಡುತ್ತಿತ್ತು. ನನಗೆ ಅಲ್ಲಿ ವೆಂಡಿಂಗ್ ಯಂತ್ರದಲ್ಲಿ ದೊರೆಯುತ್ತಿದ್ದ ಐಸ್ ಕ್ರೀಮ್ ಸ್ಯಾಂಡ್ವಿಚ್ ಬಹಳ ಇಷ್ಟವಾಗುತ್ತಿತ್ತು. ತಿನ್ನುತ್ತಿದ್ದಾಗ ಅಜಾನುಬಾಹುವೊಬ್ಬ ಬಂದ. ಕಡಿದರೆ ನಾಲ್ಕು ಆಳು ಎಂಬಂತಿದ್ದ. ಅವನು ಅಲ್ಲಿಯ ಸೆಕ್ಯೂರಿಟಿ ಗಾರ್ಡ್. ನನ್ನನ್ನು ನೋಡಿ ನಕ್ಕ. ಅವನಿಗೆ ಮಾತಾಡುವ ಇಚ್ಛೆ ಇದ್ದಂತೆ ತೋರಿತು. ಆ ರಾಜ್ಯದ ಜನರ ಇಂಗ್ಲಿಷ್ ಮಾತಾಡುವ ಧಾಟಿ ನನಗೆ ಅರ್ಥ ಮಾಡಿಕೊಳ್ಳಲು ಸಮಯ ಬೇಕಾಗುತ್ತಿತ್ತು. ವೈಟ್ ಕಾಲರ್ ಉದ್ಯೋಗಿಗಳ ಜೊತೆ ಈ ಸಮಸ್ಯೆ ಅಷ್ಟಾಗಿ ಇರಲಿಲ್ಲ. ಸೆಕ್ಯೂರಿಟಿ ಗಾರ್ಡ್ ಏನೇನೋ ಹರಟೆ ಹೊಡೆದ.ಅಲ್ಲಿಯ ಜನರಿಗೆ ಮೀನು ಹಿಡಿಯುವ ಹುಚ್ಚು.  ಅವನು ಟ್ರೌಟ್ ಮೀನು ಹಿಡಿಯುವ ಬಗ್ಗೆ ಏನೋ ಹೇಳುತ್ತಿದ್ದ. ಅವನು ನಕ್ಕಾಗ ಓ ಇವನು ಏನೋ ಜೋಕ್ ಹೇಳುತ್ತಿದ್ದಾನೆ ಎಂದು ನಾನೂ ನಗುತ್ತಿದ್ದೆ. 


ಮಿತ್ರ ಮೂರ್ತಿಗೆ ಆದ ಅನುಭವ ಇನ್ನೂ ಸ್ವಾರಸ್ಯಕರ.  ಮನೆಗೆ ಹೋಗುವ ದಾರಿಯಲ್ಲಿದ್ದ 7/11 ಸ್ಟೋರಿನಲ್ಲಿ ಏನೋ ಕೊಳ್ಳಬೇಕು ಎಂದು ಅವನು ಕಾರ್ ನಿಲ್ಲಿಸಲು ಹೇಳಿದ. ಅವನಿಗೆ ಬೆಣ್ಣೆ ಖರೀದಿಸಬೇಕಾಗಿತ್ತು. ಅದನ್ನು ಎಲ್ಲಿ ಇಟ್ಟಿರುತ್ತಾರೋ ಅವನಿಗೆ ತಿಳಿಯದು. ಕೌಂಟರಿನಲ್ಲಿದ್ದ ಯುವತಿಯನ್ನು ಬಟರ್ ಎಲ್ಲಿ ಸಿಕ್ಕುತ್ತದೆ ಎಂದು ಕೇಳಿದ.


ಐ ಆಮ್ ಸಾರಿ, ಹ್ವಾಟ್ ಡಿಡ್ ಯೂ ಸೇ? ಎಂದು ಅವಳು ರಾಗವಾಗಿ ಕೇಳಿದಳು.


ಅವನು ಮತ್ತೆ ಅದೇ ಪ್ರಶ್ನೆ ಕೇಳಿದ.  ಉಹೂಂ, ಅರ್ಥವಾಗದೆ ಅವಳು ಕಣ್ಣು ಪಿಳುಕಿಸಿ ಐ ಆಮ್ ಸಾರಿ, ಕ್ಯಾನ್ ಯೂ ಸೇ ದಟ್ ಅಗೇನ್ ಎಂದಳು. ಇದು ನಾಲ್ಕಾರು ಸಲ ಆಯಿತು. ಮೂರ್ತಿ ತಾಳ್ಮೆ ಕಳೆದುಕೊಂಡು ಬಿ ಯು ಟಿ ಟಿ ಈ ಆರ್ ಬಟರ್ ಎಂದ.


ಓ ಬಡರ್! ಎಂದು ರಾಗವಾಗಿ ಹೇಳಿ ಹಿಂದಿದ್ದ ರೆಫ್ರಿಜಿರೇಟರ್ ಕಡೆಗೆ ಬೆರಳು ಮಾಡಿದಳು. 


ಇಂಡಿಯನ್ಸ್ ಬಂದಿದ್ದಾರೆ ಎನ್ನುವುದು ಆ ಕುಗ್ರಾಮದಲ್ಲಿ ದೊಡ್ಡ ಸುದ್ದಿಯೇ ಆಗಿಹೋಯಿತು. ನಾವು ಇಡೀ ಊರಿನಲ್ಲಿ ಪ್ರಸಿದ್ಧರಾಗಿಬಿಟ್ಟೆವು. ಓ ನೀವು ಇಂಡಿಯನ್ಸ್ ಇರಬೇಕು ಎಂದೇ ನಮಗೆ ಸ್ವಾಗತ ಕೋರುತ್ತಿದ್ದರು. ಆ ಊರಿನವರು ಬಿಳಿ ಅಮೆರಿಕನ್ನರನ್ನು ಬಿಟ್ಟು ಯಾರನ್ನೂ ನೋಡೇ ಇರಲಿಲ್ಲ. ಅವರಿಗೆ ಇಂಡಿಯನ್ಸ್ ಎಂದರೆ ರೆಡ್ ಇಂಡಿಯನ್ಸ್ ಎಂಬ ಕಲ್ಪನೆ ಇತ್ತು. ಎಷ್ಟೋ ಜನರಿಗೆ ಭಾರತದ ಬಗ್ಗೆ ಏನೇನೂ ಗೊತ್ತಿರಲಿಲ್ಲ.


ಡೇಟಾ ಪ್ರಾಸೆಸಿಂಗ್ ವಿಭಾಗದಲ್ಲಿ ನಮಗೆ ಕೆಲವರು ಗುರುತಾದರು. ಅಲ್ಲಿ ಬಹಳ ಜನ ತಮ್ಮ ಪಾಡಿಗೆ ತಾವಿರುತ್ತಿದ್ದರು. ಕೆಲವರು ಮಾತ್ರ ಮುಗುಳ್ನಕ್ಕು ಮಾತಾಡಿಸುತ್ತಿದ್ದರು. ಎಷ್ಟೋ ಜನ ನಮ್ಮ ವಯಸ್ಸಿನವರು. ಇಪ್ಪತ್ತೆರಡು ಇಪ್ಪತ್ಮೂರು ವರ್ಷದವರು. ಅವರಿಗೆ ಮದುವೆಯಾಗಿ ಮಕ್ಕಳಿದ್ದರು! ಅವರಿಗೆ ತಮ್ಮದೇ ಭೀತಿಗಳಿದ್ದವು. ಎಡ್ ಎಂಬ ಮ್ಯಾನೇಜರ್ ನಮ್ಮೊಂದಿಗೆ ಕೆಲಸ ಮಾಡುತ್ತಿದ್ದ. ಅವನಿಗೆ ಹೊಸ ಕಂಪ್ಯೂಟರ್ ವ್ಯವಸ್ಥೆ ತಿಳಿದುಕೊಳ್ಳಲು ಹೆಚ್ಚು ಸಮಯ ಆಫೀಸಿನಲ್ಲಿ ಕಳೆಯಬೇಕಾಗಿತ್ತು. ಅವನ ಹೆಂಡತಿಗೆ ಇದರಿಂದ ಕೋಪ. ತನ್ನ ಹೆಂಡತಿ ತಾನು ಹೀಗೆ ಮುಂದುವರೆದರೆ ತನ್ನನ್ನು ಬಿಟ್ಟುಬಿಡುವೆನೆಂದು ಹೇಳಿದ್ದಾಳೆ ಎಂದು ಅವನು ನಮಗೆ ಹೇಳಿದಾಗ ನಮಗೆ ಏನು ಹೇಳಬೇಕೆಂದೇ ತೋಚಲಿಲ್ಲ.


#ನೆನಪುಗಳು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)