ಮೌಂಟನ್ ಹೋಂ ನಿರ್ಗಮನ

 ಮೌಂಟನ್ ಹೋಮ್ ಬಿಟ್ಟು ಹೊರಡುವ ಸಮಯ ಬಂತು. ಯೋಜನೆಯ ಪ್ರಕಾರ ನಾನು ಅಲ್ಲಿ ಒಂದು ವರ್ಷ ಪೂರ್ತಿ ಕಳೆಯಬೇಕಾಗಿತ್ತು.  ಆದರೆ  ಫ್ಲಾರಿಡಾದಲ್ಲಿ ನಡೆಯುತ್ತಿದ್ದ ಬೇರೊಂದು ಪ್ರಾಜೆಕ್ಟಿನಲ್ಲಿ ಜನ ಬೇಕಾಗಿದ್ದರು. ಹೀಗಾಗಿ ನನ್ನನ್ನು ಸ್ಥಳಾಂತರ ಮಾಡಲು ಕಂಪನಿಯ ಮ್ಯಾನೇಜ್ಮೆಂಟ್ ನಿರ್ಧರಿಸಿತು. ನನಗೆ ಮತ್ತು ನಮ್ಮ ಇಡೀ ತಂಡಕ್ಕೆ ಫ್ಯಾಕ್ಟರಿಯ ಪರವಾಗಿ ಒಂದು ಶರ್ಟ್ ಉಡುಗೊರೆ ಕೊಡಲು ಸ್ಥಳೀಯ ಕಂಪನಿಯವರು ನಿರ್ಧರಿಸಿದರು. ವಿಶೇಷವೆಂದರೆ ಆದು ಫ್ಯಾಕ್ಟರಿಯಲ್ಲಿ ತಯಾರಾದ ಶರ್ಟ್ ಅಲ್ಲ, ನಮ್ಮ ಅಳತೆಗೆ ವಿಶೇಷವಾಗಿ ತಯಾರಿಸಿದ್ದು. ಇದಕ್ಕಾಗಿ ಒಬ್ಬ ಟೇಲರ್ ಬಂದು ನಮ್ಮ ಅಳತೆ ತೆಗೆದುಕೊಂಡ. ಬಟ್ಟೆಯ ವಿನ್ಯಾಸವನ್ನು ಅವರೇ ನಿರ್ಧರಿಸಿ ಎಲ್ಲರಿಗೂ ಒಂದೆರಡು ವಾರದಲ್ಲಿ ಉಡುಗೊರೆಗಳನ್ನು ವಿತರಿಸಿದರು.  ನನಗೆ ತೆಳು ನೀಲಿ ಬಣ್ಣದ ಶರ್ಟ್ ಕೊಟ್ಟರು. ಈ ಶರ್ಟ್ ನನಗೆ ಬಹಳ ಒಪ್ಪುತ್ತದೆ ಎಂದು ರಾಫವನ್ ಹೊಗಳಿದರು. ನಾನು ಹೊರಡುತ್ತೇನೆಂದು ತಿಳಿದ ಜೀನ್ ನನಗೆ ತಾವು ಮಾಡಿದ ಪುಟ್ಟ ಸ್ಟೇನ್ ಗ್ಲಾಸ್ ಹಕ್ಕಿಯನ್ನೂ ಮತ್ತು  ಒಂದು ಕಪ್ಪುಬಣ್ಣದ ಸ್ಯಾಟಿನಿ ಟೈ ಕೊಟ್ಟರು. ನನ್ನನ್ನು ತಮ್ಮ ಎಂದಿನ.ಶೈಲಿಯಲ್ಲಿ ಬಿಗಿಯಾಗಿ ಅಪ್ಪಿಕೊಂಡು ""ನಿನ್ನ ಈ ಅಮ್ಮನನ್ನು ಮರೆತು ಬಿಡಬೇಡ" ಎಂದರು. ತಮ್ಮನ್ನು ಅವರು ನಮ್ಮ ಅದರ್ ಮದರ್ ಎಂದೇ ಹೇಳಿಕೊಳ್ಳುತ್ತಿದ್ದರು. 


ನಾನು ಫ್ಲಾರಿಡಾಗೆ ಹೊರಟೆ. ಮತ್ತೊಮ್ಮೆ ಹೆಲಿಕಾಪ್ಟರಿನಲ್ಲಿ ಕೂತು ಜಾರ್ಜಿಯಾದ ಅಟ್ಲಾಂಟಾ ವಿಮಾನ ನಿಲ್ದಾಣಕ್ಕೆ ಹೋಗಿ ಅಲ್ಲಿಂದ ಫ್ಲಾರಿಡಾದ ಕ್ಲಿಯರ್ ವಾಟರ್ ಎಂಬ ನಗರಕ್ಕೆ ಪ್ರಯಾಣ ಮಾಡಿದೆ. ಅಲ್ಲಿ ಈಗಾಗಲೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರವಿಚಂದ್ರನ್ ಎಂಬ ಹುಡುಗ ನನ್ನನ್ನು ಕರೆದೊಯ್ಯಲು ವಿಮಾನನಿಲ್ದಾಣಕ್ಕೆ ಬಂದಿದ್ದ. ಅವನ ಜೊತೆಗೆ ಹೋಮಿ ಎಂಬ ಹೆಸರಿನ ಸಹೋದ್ಯೋಗಿಯೂ ಬಂದಿದ್ದರು. ಹೋಮಿ ಇತ್ತೀಚೆಗೆ ಭಾರತದಿಂದ ಹೆಂಡತಿ ಮತ್ತು ಒಬ್ಬ ಮಗನ ಜೊತೆಗೆ ವಲಸೆ ಬಂದಿದ್ದರು. ಅವರು ಮುಂದಿನ ಮೂರು ತಿಂಗಳು ನನ್ನ ಪ್ರಾಜೆಕ್ಟ್ ಸೂಪರ್ವೈಸರ್ ಆಗಿದ್ದರು. ಇಬ್ಬರೂ ಬಹಳ ಸಜ್ಜನ ಸ್ವಭಾವದವರು. ರವಿಚಂದ್ರನ್ ಆಗತಾನೇ ಒಂದು ಹೊಸ ಅಪಾರ್ಟ್ಮೆಂಟಿಗೆ ಬಂದು ಇಳಿದುಕೊಂಡಿದ್ದ. ಅವನ ಅಪಾರ್ಟ್ಮೆಟಿನಲ್ಲೇ ಒಂದು ಕೋಣೆಯನ್ನು ನಾನು ಆಕ್ರಮಿಸಿಕೊಂಡೆ. ಹಳ್ಳಿಯಿಂದ ಕೊನೆಗೂ ನಾನು ನಗರ ಪರಿಸರಕ್ಕೆ ಬಂದೆ!  ಅಷ್ಟೇ ಅಲ್ಲ, ಕಡಲಿನ ತೀರವುಳ್ಳ ಸ್ಥಳಕ್ಕೆ ಮೊದಲಸಲ ಬಂದಿದ್ದೆ! ನನಗೆ ನೆನಪಿರುವ ಒಂದು ಘಟನೆ ಹೀಗೆ.  ಮೌಂಟನ್ ಹೋಮಿನಲ್ಲಿ ನಾನು ಕೊಂಡಿದ್ದ ಟೆಲಿಫೋನ್ ಮತ್ತು ಟಿವಿಯನ್ನು ನನ್ನ ಜೊತೆ ಕೊಂಡೊಯ್ಯಲು ನಿರ್ಧರಿಸಿದೆ. ಅದೊಂದು 14 ಇಂಚ್ ಕಲರ್ ಟಿವಿ. ಅದನ್ನು ಪ್ಯಾಕ್ ಮಾಡಿ ಕ್ಲಿಯರ್ ವಾಟರಿನ ವಿಳಾಸಕ್ಕೆ ಕಳಿಸಿದ್ದಾಯಿತು. ಟೆಲಿಫೋನನ್ನು ನಾನು ನನ್ನ ಜೊತೆಗೇ ತೆಗೆದುಕೊಂಡು ಹೋದೆ! ನಾನು ಏರ್ಪೋರ್ಟ್ ಸೆಕ್ಯೂರಿಟಿಗೆ ಹೋದಾಗ "ಓ! ಎ ಟೆಲಿಫೋನ್!" ಎಂದು ಅಲ್ಲಿದ್ದ ಅಧಿಕಾರಿಣಿ ಆಶ್ಚರ್ಯ ವ್ಯಕ್ತಪಡಿಸಿದಳು! ಆಗ ಏರ್ರ್ಪೋರ್ಟ್  ಸೆಕ್ಯೂರಿಟಿ ಬಹಳ ಸರಳವಾಗಿತ್ತು. ಹೆಚ್ಚು ಜನಸಂಚಾರವೂ ಇರುತ್ತಿರಲಿಲ್ಲ.  ಏರ್ಪೋರ್ಟ್ ಕಟ್ಟಡಗಳಲ್ಲಿ ಈಗಿನಂತೆ ಜನದಟ್ಟಣೆಯಾಗಲಿ ಎಲ್ಲೆಂದರಲ್ಲಿ ಅಂಗಡಿ ಮುಗ್ಗಟ್ಟುಗಳಾಗಲಿ ಇರುತ್ತಿರಲಿಲ್ಲ. 


ನಮ್ಮ ಅಪಾರ್ಟ್ಮೆಂಟಿನಲ್ಲಿದ್ದ ಬಹುತೇಕರು ನಿವೃತ್ತಿ ಹೊಂದಿದ ವೃದ್ಧರು.  ಅಲ್ಲಿ ಎಲ್ಲರೂ ಪ್ರಶಾಂತ ವಾತಾವರಣ ಬಯಸುತ್ತಿದ್ದರು. ಹೀಗಿರುವಾಗ ನಮ್ಮ ಅತಿಥಿಯಾಗಿ ರವಿಚಂದ್ರನ್ ಮತ್ತು ನನ್ನ  ಮಿತ್ರರು ಕೆಲವರು ಬಂದರು. ಅವರು ಡಿಸ್ನಿವರ್ಲ್ಡ್ ಮುಂತಾದ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಬಂದಿದ್ದರು.  ಅವರು ಇದ್ದ ಮೂರು ನಾಲ್ಕು ದಿನ ಮನೆಯಲ್ಲಿ ಗದ್ದಲವಿತ್ತು. ಯಾರೋ ನಮ್ಮ ಬಗ್ಗೆ ದೂರು ನೀಡಿದರು. ನಮ್ಮ ಅಪಾರ್ಟ್ಮೆಂಟ್ ಮ್ಯಾನೇಜರ್ ನಮ್ಮನ್ನು ಸಂಪರ್ಕಿಸಿದರು. ನಾವು ಕ್ಷಮೆ ಬೇಡಿ ಒಂದು ಪತ್ರ ಕೊಟ್ಟೆವು. ಮ್ಯಾನೇಜರ್ ಇದರಿಂದ ತುಂಬಾ ಸಂತುಷ್ಟಳಾದಳು.


ವಾಲ್ಟ್ ಡಿಸ್ನಿ ವರ್ಲ್ಡ್,.ಸೀ ವರ್ಲ್ಡ್, ಮತ್ತು ಎಪ್ಕಾಟ್ ಸೆಂಟರ್ ಇವೆಲ್ಲ ಅಲ್ಲಿಯ ಪ್ರೇಕ್ಷಣೀಯ ಸ್ಥಳಗಳು. ಇವು ಆರ್ಲಾಂಡೋ ಎಂಬ ನಗರದಲ್ಲಿವೆ. ನಾನೂ ನಮ್ಮ ಅತಿಥಿಗಳ ಜೊತೆ ಇವುಗಳನ್ನು ನೋಡಿದೆ. ಇವೆಲ್ಲ ಮಾಂತ್ರಿಕ ಲೋಕವನ್ನು ತೆರೆದಿಡುವ ಅನುಭವಗಳು..


#ನೆನಪುಗಳು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)