ಮೌಂಟನ್ ಹೋಮಿನಲ್ಲಿ ನಳಪಾಕ

 ನಾವು ಭಾರತೀಯರು ಮೌಂಟನ್ ಹೋಮಿನಂಥ ಗ್ರಾಮಕ್ಕೆ ಹೋದಾಗ ಊಟ ತಿಂಡಿಗೆ ಸಹಜವಾಗಿ ಕಷ್ಟ ಪಡಲೇಬೇಕು. ಅದರಲ್ಲೂ ಸಸ್ಯಾಹಾರಿಗಳಾದರೆ ಅವರಿಗೆ ಇನ್ನೂ ಹೆಚ್ಚು ತೊಂದರೆ. ಹೆಲಿಕಾಪ್ಟರಿನಲ್ಲಿ ಬಂದಿಳಿದ ನಮ್ಮನ್ನು ಎದುರುಗೊಳ್ಳಲು ರಾನ್ ಎಂಬ ಅಧಿಕಾರಿ ಇನ್ನೂ ಕೆಲವರು ಸಹೋದ್ಯೋಗಿಗಳೊಂದಿಗೆ ಬಂದಿದ್ದ.  ಅವರು ತಮ್ಮ ಕಾರುಗಳಲ್ಲಿ ನಮ್ಮನ್ನು ಹಿಲ್ ಕ್ರೆಸ್ಟ್ ಗಾರ್ಡನ್ ಅಪಾರ್ಟ್ಮೆಂಟ್ಸ್ ಎಂಬಲ್ಲಿಗೆ ಕರೆದೊಯ್ದರು. ಅಲ್ಲಿ ಕೆಳಗಿನ ಅಪಾರ್ಟ್ಮೆಂಟಿನಲ್ಲಿ ನಮ್ಮ ಡೈರೆಕ್ಟರ್ ಮತ್ತು ಮೇಲಿನ ಅಪಾರ್ಟ್ಮೆಂಟಿನಲ್ಲಿ ನಾವು ಇಂಜಿನಿಯರ್ಸ್ ತಂಗುವುದು ಎಂಬ ನಿರ್ಧಾರವಾಗಿತ್ತು. ಅಪಾರ್ಟ್ಮೆಂಟ್ ಹೊಸದು. ಬಹುಶಃ ನಾವೇ ಅದರ ಮೊದಲ ವಾಸಿಗಳು. ಮೊದಲೇ ಫರ್ನಿಚರ್ ಎಲ್ಲವನ್ನೂ ಸಜ್ಜುಗೊಳಿಸಿದ್ದರು.  ಫ್ರಿಜ್ ಕೂಡಾ ಇತ್ತು. ಆಗ ಬೆಂಗಳೂರಿನಲ್ಲಿ ಫ್ರಿಜ್ ಬಳಸುವ ರೂಢಿಯೇ ಇರಲಿಲ್ಲ. ಹೀಗಾಗಿ ನಮಗೆ ಇದು ಹೊಸ ಅನುಭವ. 


ಅದೇ ಸಂಜೆ ನಮ್ಮನ್ನು ಊಟಕ್ಕೆ ಕರೆದೊಯ್ಯಲು ರಾನ್ ಮತ್ತಿತರ ಅಧಿಕಾರಿಗಳು ಬಂದರು. ಹಾಲಿಡೇ ಇನ್ ರೆಸ್ಟೋರಾಂದಲ್ಲಿ ನಮಗೆ ಆತಿಥ್ಯವಿತ್ತು. ಎಲ್ಲರೂ ತಮ್ಮ ಹೆಂಡತಿಯರನ್ನೂ ಕರೆದುಕೊಂಡು ಬಂದಿದ್ದರು. ಹೀಗಾಗಿ ನಮಗಾಗಿ ದೊಡ್ಡ ಮೇಜುಗಳನ್ನು ಜೋಡಿಸಿ ಸುತ್ತಲೂ ಕೂಡುವ  ವ್ಯವಸ್ಥೆ ಇತ್ತು. ವೇಟ್ರೆಸ್ ನಮಗೆ ಕುಡಿಯಲು ಏನು ಬೇಕೆಂದು ಕೇಳಿದಳು. ನನಗೆ ಆಲ್ಲಿಯವರೆಗೂ ಒಗ್ಗಿದ ಏಕಮಾತ್ರ ಪೇಯವೆಂದರೆ ಆರೆಂಜ್ ಜೂಸ್.  ಬೇರೆಯವರು ವೈನ್ ಇತ್ಯಾದಿ ಕೇಳಿದಾಗ ನಮ್ಮ ಆರೆಂಜ್ ಜೂಸ್ ಆಯ್ಕೆ ಅವಳಿಗೆ ವಿಚಿತ್ರವಾಗಿ ತೋರಿರಬಹುದು. 


ಊಟದ ಆಯ್ಕೆಯಂತೂ ಇನ್ನಷ್ಟು ಕಠಿಣವಾಯಿತು. ಮೆನ್ಯುವಿನಲ್ಲಿರುವ ಯಾವುದೂ ಸಸ್ಯಾಹಾರಿಯಲ್ಲ ನಾನು ಮತ್ತು ಮೂರ್ತಿ ಮಾತ್ರ ಸಸ್ಯಾಹಾರಿಗಳು. ನಮ್ಮ ಬಳಿ ಕುಳಿತಿದ್ದ ರಾನ್ ನಮಗೆ ಏನೇನೋ ತರಿಸಿದ.  ಸ್ಪೆಗೆಟಿ ವಿತೌಟ್ ಮೀಟ್ ಬಾಲ್ಸ್ ತರಿಸಿದ. ಅದನ್ನು ಹೇಗೆ ತಿನ್ನುವುದೋ ನನಗಂತೂ ತಿಳಿಯಲಿಲ್ಲ. ಕಾಟೇಜ್ ಚೀಸ್ ವಿತ್ ಫ್ರೂಟ್ಸ್ ಬಂತು. ಅದರಲ್ಲಿರುವ ಕಾಟೇಜ್ ಚೀಸ್ ನನಗೆ ಹೊಸತು. ಅನುಮಾನದಿಂದ ಅದನ್ನು ತಿನ್ನಲಿಲ್ಲ. ಮೂರ್ತಿ ಫ್ರೆಂಚ್ ಫ್ರೈಸ್ ಬಗ್ಗೆ ತಿಳಿದುಕೊಂಡಿದ್ದ.  ಅದನ್ನು ನೋಡಿ ನನಗೂ ಅದೇ ಬೇಕು ಎಂದು ಕೇಳಿದೆ. ರಾನ್  "ಇಲ್ಲಿ ತುಂಬಾ ಚಳಿ ಇರುತ್ತೆ. ಸರಿಯಾಗಿ ತಿನ್ನದೇ ಇದ್ದರೆ ರಾತ್ರಿ ಹಸಿವಾದರೆ ಏನು ಮಾಡುತ್ತೀ!" ಎಂದು ಕಾಳಜಿ ವ್ಯಕ್ತಪಡಿಸಿದ. ಮರುದಿನ ನಮ್ಮನ್ನು ಗ್ರಾಸರಿ ಶಾಪಿಂಗ್ ಮಾಡಲು ಕರೆದೊಯ್ಯುವುದಾಗಿ ನಮ್ಮ ಡೈರೆಕ್ಟರ್ ಅವನಿಗೆ ಆಶ್ವಾಸನೆ ಕೊಟ್ಟರು. ಮರುದಿನ ಬೆಳಗ್ಗಿನ ಉಪಾಹಾರವೂ ಹಾಲಿಡೇ ಇನ್ ರೆಸ್ಟೋರಾಂದಲ್ಲಿ  ನಡೆಯಿತು. 


ಆಗ ವಿಮಾನ ಪ್ರಯಾಣದಲ್ಲಿ ಅಮೆರಿಕಾಗೆ ಒಂದು ಸೂಟ್ ಕೇಸ್ ಮಾತ್ರ ಕೊಂಡೊಯ್ಯಬಹುದು ಎಂಬ ನಿಯಮವಿತ್ತು. ಬಟ್ಟೆಬರೆಯ ಜೊತೆ ಮನೆಯಿಂದ ಸಾರಿನ ಪುಡಿ ಇತ್ಯಾದಿಯನ್ನೂ ಒಂದೇ ಸೂಟ್ ಕೇಸಿನಲ್ಲಿ ಹೇಗೋ ತೆಗೆದುಕೊಂಡು ಹೋಗಿದ್ದೆ.  ಮೌಂಟನ್ ಹೋಮಿನ ಕಿರಾಣಿ ಅಂಗಡಿಯಲ್ಲಿ ನಮಗೆ ಕಂಡಿದ್ದು ಎಲ್ಲವೂ ಹೊಸತು.  ನಮ್ಮ ಕಂಪನಿಯ ಡೈರೆಕ್ಟರ್ ನಮ್ಮನ್ನು ಸಾಮಾನು ಖರೀದಿಗೆ ಕರೆದುಕೊಂಡು ಹೋದರು. ಅವರು ತಮಗೆ ಬೇಕಾದ್ದನ್ನು ಬೇಗ ಬೇಗ ಖರೀದಿಸಿ ಮುಗಿಸಿದರು. ನಮಗೋ ಎಲ್ಲಿ ಏನಿದೆ ಎಂದು ತಿಳಿಯದು. ಏನು ಖರೀದಿಸಬೇಕು ಎಂಬುದೂ ಸರಿಯಾಗಿ ಗೊತ್ತಿಲ್ಲ. ಅವಸರದಲ್ಲಿ ಬ್ರೆಡ್, ಅಕ್ಕಿ, ತರಕಾರಿ ಇಂಥವನ್ನು ಸಂಗ್ರಹಿಸಿಕೊಂಡೆವು. ಅಲ್ಲಿ ಬ್ರೆಡ್ ಒಂದು ಹತ್ತು ರೀತಿಯದು ಸಿಕ್ಕುತ್ತದೆ. ನಮಗೆ ಆಗ ಇವೆಲ್ಲ ಗೊತ್ತಿಲ್ಲ. ಏನೋ ಕಣ್ಣಿಗೆ ಕಂಡಿದ್ದನ್ನೇ ತಳ್ಳುಗಾಡಿಯಲ್ಲಿ ಹಾಕಿಕೊಂಡೆವು. ಇಲ್ಲಿ ತರಕಾರಿಯನ್ನು ಅಂಗಡಿಯವನು ತೂಗಿ ಕೊಡುವುದು ರೂಢಿ. ಅಲ್ಲಿ ನಾವೇ ಪ್ಲಾಸ್ಟಿಕ್ ಚೀಲಕ್ಕೆ ಹಾಕಿಕೊಂಡು ತೂಗಿಕೊಳ್ಳಬೇಕು. ಬೇಳೆಯಂಥದ್ದು ಏನಾದರೂ ಕಣ್ಣಿಗೆ ಬಿತ್ತಾ ಎಂದು ಪರಸ್ಪರರನ್ನು ಕೇಳಿಕೊಂಡೆವು. ನಮ್ಮ ಡೈರೆಕ್ಟರ್ ನಮಗೆ "ಇಲ್ಲಿ ಬೇಳೆ ಸಿಕ್ಕುವುದಿಲ್ಲ. ಸ್ಪ್ಲಿಟ್ ಪೀಸ್ ಸಿಕ್ಕುತ್ತೆ" ಎಂದು ತೋರಿಸಿದರು. ಬಟಾಣಿಯನ್ನು ಒಣಗಿಸಿ ಎರಡು ಭಾಗ ಸೀಳಿರುತ್ತಾರೆ. ಅದರಿಂದ ಸಾರು, ಹುಳಿ ಮಾಡುವುದನ್ನು ನಾವು ಕಲಿತೆವು. ಅಡುಗೆ ಮಾಡಲು ಪಾತ್ರೆಗಳನ್ನೂ ಅಲ್ಲೇ ಕೊಳ್ಳಬೇಕಾಗಿತ್ತು! ಎಲ್ಲವೂ ಒಂದೇ ಅಂಗಡಿಯಲ್ಲಿ ಸಿಕ್ಕುವುದು ನಮಗೆ ವಿಚಿತ್ರ ಎನ್ನಿಸಿತು. 


ಮಾರನೇ ದಿನ  ಒಂದು ವಿಲಕ್ಷಣ ಘಟನೆ ನಡೆಯಿತು. ನಾವು ಕೊಂಡ ಗ್ರಾಸರಿ ಸಾಮಾನುಗಳನ್ನು ಫ್ರಿಜ್ ಒಳಗೆ ತುಂಬಿಸಿದೆವು. ಮರುದಿನ ಬೆಳಗ್ಗೆ ಟೋಸ್ಟ್  ಉಪಾಹಾರ ಮಾಡಿ ಆಫೀಸಿಗೆ ಹೋದೆವು.  ಆಫೀಸಿನಲ್ಲಿ ಒಂದು ಕೆಫೆಟೇರಿಯಾ ಇತ್ತು. ಮಧ್ಯಾಹ್ನದ ಊಟಕ್ಕೆ ಎಲ್ಲರೂ ಅಲ್ಲಿಗೆ ಹೋದೆವು. ಅಲ್ಲಿ ಯಥಾಪ್ರಕಾರ ಸಸ್ಯಾಹಾರದ ಸಮಸ್ಯೆ. ಫ್ರೆಂಚ್ ಫ್ರೈಸ್ ಮತ್ತು ಐಸ್ ಕ್ರೀಮ್ ತಿಂದು ಹೊಟ್ಟೆ ತುಂಬಿಸಿಕೊಂಡೆ. ಸಂಜೆ ಮನೆಗೆ ಬರುವ ಹೊತ್ತಿಗೆ ಎಲ್ಲರಿಗೂ ಹಸಿವು. ನಾನು ಫ್ರಿಜ್ ಬಳಿ ಹೋಗಿ ಅದರ ಬಾಗಿಲು ತೆಗೆದೆ. ಏನೋ ಸರಿಯಿಲ್ಲ ಎನ್ನಿಸಿತು. ಏನದು? ಕೊನೆಗೂ ಹೊಳೆಯಿತು. ಬೆಳಗ್ಗೆ ಹೊರಟಾಗ ಫ್ರಿಜ್ ಬಾಗಿಲು ಎಡದಿಂದ ತೆಗೆದುಕೊಳ್ಳುತ್ತಿತ್ತು. ಈಗ ಅದು ಬಲದಿಂದ ತೆಗೆದುಕೊಳ್ಳುತ್ತಿದೆ! ನನಗೆ ಒಂದು ಕ್ಷಣ ಏನೂ ತೋಚಲಿಲ್ಲ. ಇದೇನು ಭೂತಚೇಷ್ಟೆಯೋ ಎಂದುಕೊಳ್ಳಲು ಆಗ ನಾನು ಅಮೆರಿಕನ್ ಸಿನಿಮಾಗಳನ್ನು ನೋಡಿರಲಿಲ್ಲ. ನಾನು ನನ್ನ ಅಪಾರ್ಟ್ಮೆಂಟ್ ಮೇಟನ್ನು ಕರೆದು ತೋರಿಸಿದೆ. ಅವನಿಗೂ ಏನೂ ತೋರಲಿಲ್ಲ. ಇಬ್ಬರೂ ಬೆರಗಾಗಿ ನೋಡುತ್ತಾ ನಿಂತೆವು. ಫ್ರಿಜ್ ತೆರೆದು ನೋಡಿದೆವು. ನಾವು ಇಟ್ಟ ಸರಕುಗಳೆಲ್ಲ ಹಾಗೇ ಇದ್ದವು! 


ನಮ್ಮ ಅಪಾರ್ಟ್ಮೆಂಟ್ ಕರೆಗಂಟೆ ಬಾರಿಸಿತು. ಬಂದವರು ಕೆಳಗಿನ ಅಪಾರ್ಟ್ಮೆಂಟಿನಲ್ಲಿದ್ದಾಕೆ. "ಇವತ್ತು ಅಪಾರ್ಟ್ಮೆಂಟ್ ಓನರ್ ಬಂದಿದ್ದರು. ನಿಮಗೆ ಇದನ್ನು ಕೊಡಲು ಹೇಳಿದರು" ಎಂದು ಚೀಟಿ ಕೊಟ್ಟಳು. ಓನರ್ "ನಿಮ್ಮ ಫ್ರಿಜ್ ಸರಿಯಿರಲಿಲ್ಲ ಎಂದು ಅದನ್ನು ಬದಲಾಯಿಸಿದ್ದೇವೆ. ನಿಮಗೆ ತೊಂದರೆಯಾಗಿದ್ದಕ್ಕೆ ಕ್ಷಮಿಸಿ" ಎಂದು ಬರೆದಿದ್ದರು. ನಾವು ಆಫೀಸಿಗೆ ಹೋದಾಗ ಫ್ರಿಜ್ ಬದಲಾಯಿಸಿ ಸಾಮಾನುಗಳನ್ನು ಮತ್ತೆ ಜೋಡಿಸಿಟ್ಟಿದ್ದರು! ನಮಗೆ ಫ್ರಿಜ್ ಉಪಯೋಗ ಗೊತ್ತಿರಲಿಲ್ಲ. ಬಾಳೆಹಣ್ಣನ್ನು ಫ್ರಿಜ್ ಒಳಗೆ ಇಡಬಾರದು ಅಂತ ತಿಳಿದಿರಲಿಲ್ಲ. ಬ್ರೆಡ್ ಫ್ರೀಜರಿನಲ್ಲಿಟ್ಟು ಅದು ಕಲ್ಲಿನಂತೆ ಆಗಿಹೋಗಿತ್ತು! ಫ್ರಿಜ್ ಬದಲಾಯಿಸಿದರು ನಮ್ಮ ವ್ಯವಸ್ಥೆ ನೋಡಿ ಕಕ್ಕಾಬಿಕ್ಕಿಯಾಗಿದ್ದರೂ ಆಶ್ಚರ್ಯವಿಲ್ಲ!


ಕೆಫೆಟೇರಿಯಾದಲ್ಲಿ ನನಗೆ ಸರಿಯಾದ ಊಟ ಸಿಕ್ಕದ ಕಾರಣ ನಾನು ಮನೆಯಿಂದಲೇ ಊಟ ತೆಗೆದುಕೊಂಡು ಹೋಗುವ ರೂಢಿ ಮಾಡಿಕೊಂಡೆ. ಬೆಳಗ್ಗೆ ಬೇಗ ಎದ್ದು ಅಡಿಗೆ ಮಾಡಿಕೊಳ್ಳುವ ರೂಢಿಯಾಯಿತು.  ನಾವು ನಾಲ್ಕು ಜನ ಇಂಜಿನಿಯರುಗಳು ಸೇರಿ ಒಂದು ಕಾರ್ ಖರೀದಿಸಿದೆವು. ಅದಕ್ಕೆ 600 ಡಾಲರ್ ಆಯಿತು, ಅಷ್ಟೇ. ಹಳೆಯ ಪಾಂಟಿಯಾಕ್ ಕಾರು.   ಅದಕ್ಕೆ ನಂತರ ರಿಪೇರಿಗಳು ಬೇಕಾದವು.  ಬೆಳಗ್ಗೆ ಎದ್ದಾಗ ಅದರ ಗಾಜಿಮ ಮೇಲೆ  ಮಂಜು ಗಟ್ಟಿಯಾಗಿರುತ್ತಿತ್ತು. ನಾನು ಮೇಲೆ ಬಿಸಿನೀರನ್ನು ಹಾಕಿ ಅದನ್ನು ತೂಳೆದು ರೆಡಿ ಮಾಡುತ್ತಿದ್ದೆ. 


ಒಮ್ಮೆ ನಾವು ಜೀನ್ ಮತ್ತು ಫ್ರಾಂಕ್ ಇಬ್ಬರನ್ನೂ ಊಟಕ್ಕೆ ಕರೆದೆವು. ನಾನು ಮಾಡಿದ ಅಡುಗೆಯನ್ನು ಅವರು ರುಚಿ ನೋಡಿದರು ಎಂದು ನೆನಪು. ಕೋಕಾ ಕೋಲಾ ಮತ್ತು.ಚಿಪ್ಸ್ ಇದ್ದರೆ ಯಾರಾದರೂ ಆತಿಥ್ಯ ಮಾಡಬಹುದು!  ದೀಪಾವಳಿ ಬಂದಾಗ ನಮ್ಮ ಡೈರೆಕ್ಟರ್ ತಮ್ಮ  ಮನೆಯಲ್ಲಿ ಪಾರ್ಟಿ ಮಾಡಿದರು. ಅದು ಪಾಟ್ ಲಕ್. ನಾವೂ ಏನಾದರೂ ತರಬೇಕಾಗಿತ್ತು. ನನಗೆ ಬೋಂಡಾ ತೊಗೊಂಡು ಹೋಗುವ ಮನಸ್ಸಾಯಿತು.  ಗ್ರಾಸರಿ ಸ್ಟೋರಿನಲ್ಲಿ ಸಿಕ್ಕ ಪೊಟೇಟೋ  ಫ್ಲೇಕ್ಸ್ ಬಳಸಿ ಆಲೂಗಡ್ಡೆ ಪಲ್ಯ ಮಾಡಿದ್ದಾಯಿತು. ಅಲ್ಲಿ ದೊರಕುವ ಆಲ್ ಪರ್ಪಸ್ ಫ್ಲೋರ್ ಬಳಸಿ ಬೋಂಡಾ ತಯಾರಾಯಿತು. ಅದಕ್ಕೆ ನನಗೆ ಎಲ್ಲರಿಂದ ವಿಪರೀತ ಹೋಗಳಿಕೆಯೂ ಸಿಕ್ಕಿತು! ಜೀನ್ ಕೂಡಾ ನೀನು ಇದನ್ನು ಹೇಗೆ ಮಾಡಿದೆ ಎಂದು ಕೇಳಿದರು!


#ನೆನಪುಗಳು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)