ಮೌಂಟನ್ ಹೋಂ ಜೀವನ (ನೆನಪು)

 ಕೋಬಾಲ್ ಪ್ರೋಗ್ರಾಮಿಂಗ್ ನಾನು ಕಲಿತ ಮೊದಲ ಕಂಪ್ಯೂಟರ್ ಕೌಶಲ್ಯ. ಆಗ ಫೋರ್ಟ್ರಾನ್, ಬೇಸಿಕ್ ಮತ್ತು ಕೋಬಾಲ್ ಎಂಬ ಮೂರು ಪ್ರೋಗ್ರಾಮಿಂಗ್ ಭಾಷೆಗಳದ್ದೇ ರಾಜ್ಯ. ವೈಜ್ಞಾನಿಕ ಸಮಸ್ಯೆಗಳಿಗೆ ಫೋರ್ಟ್ರಾನ್, ಗೇಮಿಂಗ್ ಮುಂತಾದ ಹವ್ಯಾಸಗಳಿಗೆ ಬೇಸಿಕ್, ಮತ್ತು ಬಿಸಿನೆಸ್ ಸಂಬಂಧಿಸಿದ ಸಮಸ್ಯೆಗಳಿಗೆ ಕೋಬಾಲ್. ಕೋಬಾಲ್ ಭಾಷೆಯನ್ನು ಅಭಿವೃದ್ಧಿ ಪಡಿಸಿದ ಶ್ರೇಯಸ್ಸು ಗ್ರೇಸ್ ಹಾಪರ್ ಎಂಬ ಮಹಿಳೆಗೆ ಸಲ್ಲುತ್ತದೆ. ಆಕೆ ಅಮೆರಿಕದ ರಕ್ಷಣಾ ವಿಭಾಗದಲ್ಲಿ ಕೆಲಸ ಮಾಡುವಾಗ ಫ್ಲೋಮ್ಯಾಟಿಕ್ ಎಂಬ ಪ್ರೋಗ್ರಾಮಿಂಗ್ ಭಾಷೆಯನ್ನು ಅಭಿವೃದ್ಧಿ ಪಡಿಸಿದರಂತೆ. ಅದು ಕೋಬಾಲ್ ಭಾಷೆಗೆ ಪ್ರೇರಣೆ. ಪ್ರೋಗ್ರಾಮಿಂಗ್ ಕಲಿಯಲು ಇದು ಖಂಡಿತಾ ಸೂಕ್ತ ಭಾಷೆಯಲ್ಲ. ಆದರೆ ನಮಗೆ ಇದನ್ನು ಕಲಿಯದೆ ಬೇರೆ ದಾರಿಯಿರಲಿಲ್ಲ.  ಆಗ ನಾವು ಕೆಲಸ ಮಾಡುತ್ತಿದ್ದುದು ಒಂದು ಮಿನಿ ಕಂಪ್ಯೂಟರ್ ಮೇಲೆ. ಡೇಟಾ ಜೆನೆರಲ್ ಎಂಬ ಕಂಪನಿ ಅಭಿವೃದ್ಧಿ ಪಡಿಸಿದ ಎಂವಿ 10000 ಎಂಬ ಕಂಪ್ಯೂಟರ್. ಆಗ ಕಂಪ್ಯೂಟರ್ ಕ್ಷೇತ್ರದಲ್ಲಿ ಐಬಿಎಂ ಮುಂಚೂಣಿಯಲ್ಲಿತ್ತು. ಡಿಜಿಟಲ್ ಎಕ್ವಿಪ್ಮೆಂಟ್ ಕಾರ್ಪೊರೇಷನ್ ಎಂಬ ಕಂಪನಿ ಐಬಿಎಂಗೆ ಪ್ರತಿಸ್ಪರ್ಧಿ. ಈ ಸಂದರ್ಭದಲ್ಲಿ ಡೇಟಾ ಜೆನೆರಲ್ ಎಂಬ ಕಂಪನಿ ಈ ಕ್ಷೇತ್ರವನ್ನು ಪ್ರವೇಶಿಸಿ ಸಾಕಷ್ಟು ಕ್ರಾಂತಿಕಾರಕ ಸಾಧನೆಗಳನ್ನು ಮಾಡಿತು. ದ ಸೋಲ್ ಆಫ್ ಎ ನ್ಯೂ ಮೆಷೀನ್ ಎಂಬ ಪುಸ್ತಕದಲ್ಲಿ ಡೇಟಾ ಜೆನೆರಲ್ ಕಂಪನಿಯಲ್ಲಿ ಕಂಪ್ಯೂಟರ್ ಅಭಿವೃದ್ಧಿ ಪಡಿಸಿದ ಕಥೆ ಇದೆ. ಆಗ ಕಂಪ್ಯೂಟರ್ ಕಂಪನಿಗಳು ಯಂತ್ರದೊಂದಿಗೆ ತಂತ್ರಾಂಶವನ್ನೂ ಅಭಿವೃದ್ಧಿ ಪಡಿಸಿ ನೀಡುತ್ತಿದ್ದವು. ಡೇಟಾ ಜೆನೆರಲ್ ಕಂಪನಿಯ ತಂತ್ರಾಂಶಗಳು ಉತ್ಕೃಷ್ಟವಾಗಿದ್ದವು. ನೆನೆಸಿಕೊಂಡಾಗ ಈ ತಂತ್ರಾಂಶಗಳು ಅಂದಿನ ಕಾಲಕ್ಕೆ ಎಷ್ಟು ಮುಂದಿದ್ದವು ಎನ್ನಿಸುತ್ತದೆ.  


ಕಂಪ್ಯೂಟರ್ ಪ್ರೋಗ್ರಾಮಿಂಗ್ ಸರಿಯಾಗಿ ಕಲಿಸಲು ಆಗ ಒಳ್ಳೆಯ ಪುಸ್ತಕಗಳೂ ಇರಲಿಲ್ಲ. ಇದ್ದ ಕೆಲವು ಪುಸ್ತಕಗಳು ನೀರಸವಾಗಿದ್ದವು. ಆಗ ಲೇಖಕರು ಪಠ್ಯಪುಸ್ತಕಗಳನ್ನು ನೀರಸವಾಗಿಯೇ ಬರೆಯಬೇಕೆಂಬ ಹಠ ತೊಟ್ಟಂತಿತ್ತು. ನಾನು ಬಿಇ ಓದುವಾಗ ಓದಿದ ಪಠ್ಯಪುಸ್ತಕಗಳನ್ನು ನೆನೆಸಿಕೊಂಡರೆ ಇದು ಖಂಡಿತಾ ಸತ್ಯ.  ಮ್ಯಾಲ್ವಿನೋ, ಟಾಚ್ಚಿ, ಹೇಯ್ಟ್ ಮುಂತಾದ ಲೇಖಕರು ಈ ನಿಯಮವನ್ನು ಮೀರಿ ಬರೆದರು. ಆದರೆ ಕೋಬಾಲ್ ಪ್ರೋಗ್ರಾಮಿಂಗ್ ವಿಷಯದಲ್ಲಿ ಇಂಥ ಯಾವ ಪುಸ್ತಕಗಳೂ ಇರಲಿಲ್ಲ.  ಕೋಬಾಲ್ ಭಾಷೆಯಲ್ಲಿ ಪ್ರೋಗ್ರಾಮಿಂಗ್ ಮಾಡುವವರನ್ನು ಪ್ರೊ. ಡೈಕ್ಸ್ಟ್ರಾ ತಮ್ಮ ಕ್ಲಾಸಿನಿಂದ ಹೊರಗೆ ಕಳಿಸುತ್ತಿದ್ದರಂತೆ.  ಏಕೆಂದರೆ ಅವರಿಗೆ ಒಂದೇ ಬಗೆಯಲ್ಲಿ ಪ್ರೋಗ್ರಾಮಿಂಗ್ ಮಾಡಿ ಭಿನ್ನರೀತಿಯಲ್ಲಿ ಯೋಚಿಸುವ ಸಾಮರ್ಥ್ಯವನ್ನೇ ಕಳೆದುಕೊಂಡಿರುತ್ತಾರೆ! ಸಿ ಪ್ರೋಗ್ರಾಮಿಂಗ್ ಕಲಿಯುವಾಗ ಇದನ್ನು ಕೋಬಾಲ್ ಭಾಷೆಯಲ್ಲಿ ಹೀಗೆ ಮಾಡಬಹುದು ಎಂದು ವಾದಿಸುತ್ತಾರೆ!


ನಮಗೆ ಬೇರೆಯವರು ಬರೆದ ಪ್ರೋಗ್ರಾಮನ್ನು ತಿದ್ದುವ ಕೆಲಸ ಹೆಚ್ಚು ಸಿಕ್ಕುತ್ತಿತ್ತು. ಸ್ವಂತ ಪ್ರೋಗ್ರಾಮ್ ಬರೆಯುವ ಅವಕಾಶ ಕಡಿಮೆ!  ಯಾರೋ ಬರೆದ ಪ್ರೋಗ್ರಾಮನ್ನು ಅರ್ಥ ಮಾಡಿಕೊಂಡು ತಿದ್ದುವುದು ಬಹಳ ರೇಜಿಗೆ ಕೆಲಸ.  

ಕಂಪನಿಯಲ್ಲಿ ನಾವು ಕೆಲಸ ಮಾಡುವಾಗ ಹಿನ್ನೆಲೆ ಸಂಗೀತ ಇರುತ್ತಿತ್ತು. ಸದಾ ಕಾಲ ಕಂಟ್ರಿ ಮ್ಯೂಸಿಕ್ ಕೇಳುತ್ತಿತ್ತು. .ಕೇಳಿದ ಹಾಡುಗಳೇ ಪುನಃ ಪುನಃ ಪುನರಾವರ್ತನೆ! ಈಸ್ ಇಟ್ ರೇನಿಂಗ್ ವಿತ್ ಯೂ, ಹನಿ ವೋoಟ್ ಯೂ ಓಪನ್ ದಟ್ ಡೋರ್, ಸಿಂಗಿಂಗ್ ಸ್ವೀಟ್ ಕಂಟ್ರಿ ಮ್ಯೂಸಿಕ್ ... ಡೇಟಾ ಎಂಟ್ರಿ ಮುಂತಾದ ಕೆಲಸಗಾರರಿಗೆ ಮತ್ತು ಫ್ಯಾಕ್ಟರಿ ಕೆಲಸಗಾರರಿಗೆ ಇದು ಸಹಕಾರಿಯಂತೆ. ಅವರ ಕಾರ್ಯದಕ್ಷತೆ ಹೆಚ್ಚುತ್ತದಂತೆ. ನಮಗೆ ತದ್ವಿರುದ್ಧ. ಕೊನೆಗೆ ಒಂದು ದಿನ ನಾನು ಮೇಜಿನ ಮೇಲೆ ಹತ್ತಿ ಸಂಗೀತದ ವಾಲ್ಯೂಮನ್ನು ಸೊನ್ನೆ ಮಾಡಿದೆ!


ಕೋಬಾಲ್ ಜೊತೆಯಲ್ಲಿ ನಮಗೆ  ಆಪರೇಟಿಂಗ್ ಸಿಸ್ಟಮ್ ಬಗ್ಗೆಯೂ ಒಂದಿಷ್ಟು ಜ್ಞಾನಾರ್ಜನೆಯಾಯಿತು.  ಆಗೆಲ್ಲ ಈಗಿನಂತೆ ಟ್ರೇನಿಂಗ್ ಇರಲಿಲ್ಲ. ಎಲ್ಲವನ್ನೂ ಕೆಲಸ ಮಾಡುವಾಗಲೇ ಕಲಿಯಬೇಕಾಗಿತ್ತು.  ನಾನು ಪ್ರಾರಂಭಿಕ ದಿನಗಳಲ್ಲಿ ಬರೆದ ಒಂದು ಪ್ರೋಗ್ರಾಮ್ ಅನೇಕ ತಿಂಗಳುಗಳ ಕಾಲ ಕಾರ್ಯ ನಿರ್ವಹಿಸಿ ನಂತರ ಒಂದು ದಿನ ವಿಚಿತ್ರವಾದ ವರ್ತನೆ ತೋರಿಸಲು ಪ್ರಾರಂಭಿಸಿತು ಎಂದು ನನ್ನ ಸಹೋದ್ಯೋಗಿ ನನಗೆ ಹೇಳಿದ. ಅದು ಪದೇ ಪದೇ ಖಾಲಿ ಪುಟಗಳನ್ನು ಪ್ರಿಂಟ್ ಮಾಡಲು ಪ್ರಾರಂಭಿಸಿತಂತೆ! ಪಾಪ ನನ್ನ ಪ್ರೋಗ್ರಾಮನ್ನು ತಿದ್ದಲು ಕುಳಿತ ಮಹಾನುಭಾವನ ಬಗ್ಗೆ ನನಗೆ ಕನಿಕರ ಹುಟ್ಟಿತು. ಮುಂದೆ ಪ್ಯಾಸ್ಕಲ್, ಸಿ ಭಾಷೆಗಳನ್ನು ಕಲಿತಾಗ  ನನ್ನ ಪ್ರೋಗ್ರಾಮಿಂಗ್ ಕೌಶಲ್ಯ ಸುಧಾರಿಸಿತು. ಪ್ಯಾಸ್ಕಲ್ ಭಾಷೆ ಪ್ರಾರಂಭಿಕ ಪ್ರೋಗ್ರಾಮರುಗಳಿಗೆ ಅತ್ಯಂತ ಸೂಕ್ತ. ದುರದೃಷ್ಟವಶಾತ್ ಸಿ ಜನಪ್ರಿಯತೆಯಿಂದ ಪ್ಯಾಸ್ಕಲ್ ಹಿಂದೆ ಸರಿಯಿತು. ಸಿ ಕೂಡಾ ಪ್ರಾರಂಭಿಕ ಪ್ರೋಗ್ರಾಮಿಂಗ್ ಮಾಡಲು ಸೂಕ್ತ ಭಾಷೆಯಲ್ಲ. ಆದರೆ ಇಂದು ಸಿ ಭಾಷೆಯನ್ನು ಹೈಸ್ಕೂಲುಗಳಲ್ಲಿ ಮಕ್ಕಳಿಗೆ ಹೇಳಿಕೊಡುತ್ತಿರುವುದು ದುರದೃಷ್ಟಕರ.   ಈ ಅನುಭವದ ನಂತರ ಎಷ್ಟೋ ಮಕ್ಕಳು ಪ್ರೋಗ್ರಾಮಿಂಗ್ ಕುರಿತು ಭಯ ಪಟ್ಟುಕೊಂಡರೂ ಆಶ್ಚರ್ಯವಿಲ್ಲ!


ನಮ್ಮ ಇನ್ನೊಬ್ಬ ಡೈರೆಕ್ಟರ್ ಆದ ರಾಘವನ್ ಕೆಲವು ತಿಂಗಳ ನಂತರ ನಮ್ಮ ಟೀಮಿಗೆ ಬಂದು ಸೇರಿಕೊಂಡರು. ಅವರು ಬಹಳ ಸ್ನೇಹಜೀವಿ. ಎಲ್ಲರೊಂದಿಗೆ ಬೆರೆತು ತಮಾಷೆಯಾಗಿರುತ್ತಿದ್ದರು. ತಮ್ಮ ಮನೆಗೆ ಆಗಾಗ ಊಟಕ್ಕೆ ಎಲ್ಲರನ್ನೂ ಕರೆಯುತ್ತಿದ್ದರು. ಅವರ ಹೆಂಡತಿ ಜಮುನಾ ಕೂಡಾ ಬಹಳ ವಾಚಾಳಿ. ಬೆಂಗಳೂರಿನಲ್ಲಿ ಮಕ್ಕಳನ್ನು ಬಿಟ್ಟು ಬಂದಿದ್ದರು. ಮನೆಯಲ್ಲಿ ಅವರಿಗೆ ಹೊತ್ತು ಹೋಗುತ್ತಿರಲಿಲ್ಲ. ಒಂದು ದಿನ ನಮಗೆ ಶನಿವಾರ ಕೆಲಸವಿತ್ತೆಂದು ರಾಘವನ್ ನಮ್ಮ ಜೊತೆ ಬಂದರು. ಜಮುನಾ ತಮಗೆ ಮನೆಯಲ್ಲಿ ಬೋರ್ ಆಗುತ್ತದೆ ಎಂದು ತಾವೂ ಬಂದರು. ನಾನು ನನ್ನ ಕೆಲಸ ಮುಗಿಸಿ ಒಂದು ಪುಸ್ತಕ ಓದುತ್ತಿದ್ದೆ. ಮೌಂಟನ್ ಹೋಮಿನ ಪಬ್ಲಿಕ್ ಲೈಬ್ರರಿಯಿಂದ ಎರವಲು ಪಡೆದ ಅಗಾಥಾ ಕ್ರಿಸ್ಟಿಯ ಒಂದು ಕಾದಂಬರಿ ಎಂದು ನೆನಪು. 


ಜಮುನಾ ನನ್ನ ಆಫೀಸ್ ಬಳಿ ಬಂದು "ಏನು ಪುಸ್ತಕ ಅಷ್ಟೊಂದು ಚೆನ್ನಾಗಿದೆಯಾ?" ಎಂದರು. 


ನಾನು "ಹೂಂ, ನಿಮಗೆ ಓದಲು ಬೇಕಾ?" ಎಂದೆ.


ಅವರು "ಇಲ್ಲ, ನನಗೆ ಮಾತಾಡಲು ಯಾರಾದರೂ ಬೇಕು" ಎಂದರು.


ನಾನು ಪುಸ್ತಕ ಕೆಳಗಿಡಬೇಕಾಯಿತು! ಅವರೊಂದಿಗೆ ಆಫೀಸ್ ಹೊರಗೆ ಸುತ್ತಾಡಲು ಹೊರಟೆ. ಅವರು ತಮ್ಮ ಮಕ್ಕಳ ಬಗ್ಗೆ, ರಾಘವನ್ ಬಗ್ಗೆ, ತಮ್ಮ ಬಗ್ಗೆ ಮಾತಾಡೇ ಆಡಿದರು! ಕೇಳಿಸಿಕೊಂಡಿದ್ದಕ್ಕೆ ಕೃತಜ್ಞತೆಗಳನ್ನೂ ತಿಳಿಸಿದರು!


#ನೆನಪುಗಳು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)