ಭಯ (ಅನುವಾದಿತ ಕವಿತೆ)

 ಭಯ

ಮೂಲ: ಖಲೀಲ್ ಗಿಬ್ರಾನ್

ಕನ್ನಡ ಅನುವಾದ: ಸಿ. ಪಿ. ರವಿಕುಮಾರ್



ಭಯದಿಂದ ಕಂಪಿಸುವುದಂತೆ ನದಿ

ಸಮುದ್ರವನ್ನು ಪ್ರವೇಶಿಸುವ ಮೊದಲು.


ತಾನು ಸಾಗಿ ಬಂದ ಹಾದಿಯತ್ತ

ಹಾಯಿಸುತ್ತದೆ ಹೊರಳುನೋಟ

ಪರ್ವತ ಶಿಖರಗಳಿಂದ ಧುಮುಕಿ

ಸುತ್ತುತ್ತ ಕಾಡುಮೇಡುಗಳಲ್ಲಿ

ಅದೆಷ್ಟು ಹಳ್ಳಿಗಳನ್ನು ದಾಟಿ 


ಈಗ ನೋಡುತ್ತದೆ ತನ್ನೆದುರು

ಆದಿ ಅಂತ್ಯವೇ ಗೋಚರಿಸದ ಸಿಂಧು

ಪ್ರವೇಶಿಸಿದರೆ ಈ ಮಹಾಜಲಧಿಯನ್ನು

ಅನಂತ ಕಾಲಕ್ಕೂ ಕಳೆದುಹೋಗುವ ಭೀತಿ


ಆದರೆ ಬೇರಾವ ಮಾರ್ಗವೂ ಇಲ್ಲ

ಹಾಕಲಾರದು ನದಿ ಹಿನ್ನಡೆ.


ಹಿಂದಿರುಗಲಾರರು ಯಾರೂ.

ಅಸ್ತಿತ್ವದಲ್ಲಿ ಹಿನ್ನಡೆ ಅಸಾಧ್ಯ.


ನದಿಯು ಎದುರಿಸಲೇ ಬೇಕು

ಸಾಗರವನ್ನು ಸೇರುವ ಅಪಾಯ:

ಏಕೆಂದರೆ ಆಗಲೇ ಬಿಡುವುದು ಭಯ

ಏಕೆಂದರೆ ಆಗಲೇ ನದಿಗೆ ಹೊಳೆಯುವುದು

ಸಮುದ್ರದಲ್ಲಿ ತಾನು ಕಳೆದುಹೋಗಿಲ್ಲ

ತಾನೇ ಸಮುದ್ರವಾಗಿರುವೆನೆಂಬ ತಿಳಿವು.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)